ಕರೋನಾ ಸಂಕಷ್ಟದ ನಡುವೆ ಬಿಜೆಪಿ-ಆರ್ ಎಸ್ಎಸ್ ಪ್ರಮುಖರು ಚರ್ಚಿಸಿದ್ದೇನು ಗೊತ್ತೆ?

ಒಂದು ಕಡೆ ಕರೋನಾ ದೇಶದ ಮನೆಮನೆಯಲ್ಲೂ ಸಾವು, ನೋವುಗಳ ಮೂಲಕ ಆಘಾತ ತಂದಿದೆ. ಗ್ರಾಮೀಣ ಭಾರತವಂತೂ ಕರೋನಾದ ಹೊಡೆತಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ. ಸೋಂಕಿನ ಕುರಿತ ಸರಿಯಾದ ತಿಳಿವಳಿಕೆ, ಮಾರ್ಗದರ್ಶನವಿಲ್ಲದೆ, ಚಿಕಿತ್ಸೆ ಇಲ್ಲದೆ, ವೈದ್ಯಕೀಯ ಸೌಲಭ್ಯಗಳೇ ಇಲ್ಲದೆ ಹಳ್ಳಿಗಾಡಿನ ಜನ ಸಾಕ್ಷಾತ್ ಸಾವಿನ ಎದುರು ಅಕ್ಷರಶಃ ನಿಶಸ್ತ್ರರಾಗಿ ಬರಿಗೈ ಹೋರಾಟ ನಡೆಸುತ್ತಿದ್ದಾರೆ.

ಹಾಸಿಗೆ ಇಲ್ಲದ, ಕನಿಷ್ಟ ವಿದ್ಯುತ್, ಶುದ್ಧ ನೀರಿನ ಸೌಲಭ್ಯ ಕೂಡ ಇಲ್ಲದ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ ಒಬ್ಬರು ವೈದ್ಯರಿರುವುದೇ ದೊಡ್ಡ ಸೌಭಾಗ್ಯ. ಇನ್ನು ಆಮ್ಲಜನಕ,ವೆಂಟಿಲೇಟರುಗಳನ್ನಂತೂ ಕಲ್ಪಿಸಿಕೊಳ್ಳುವಂತೆಯೂ ಇಲ್ಲ. ಕರ್ನಾಟಕದ ಬಹುತೇಕ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರುಗಳಿದ್ದರೂ, ಅವುಗಳನ್ನು ನಿರ್ವಹಿಸುವ ತರಬೇತಾದ ಸಿಬ್ಬಂದಿ ಇಲ್ಲದೆ, ಧೂಳು ತಿನ್ನುತ್ತಿರುವುದು ಮತ್ತು ವೆಂಟಿಲೇಟರು, ಆಮ್ಲಜನಕ ಸಿಗದೆ ಹಳ್ಳಿಗಾಡಿನ ಜನ ಆಸ್ಪತ್ರೆಯ ಮೆಟ್ಟಿಲಲ್ಲೇ ಜೀವ ಬಿಡುತ್ತಿರುವುದು ನಿತ್ಯದ ಸತ್ಯ.

ಈ ಪರಿಸ್ಥಿತಿಗೆ ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಥವಾ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಗಳು ಮಾತ್ರ ಹೊಣೆಯಲ್ಲ. ಬದಲಾಗಿ ಈವರೆಗಿನ ಎಲ್ಲಾ ಸರ್ಕಾರಗಳು ದೇಶದ ಜನರ ಜೀವ ಕಾಯುವ ಆರೋಗ್ಯ ವ್ಯವಸ್ಥೆಯನ್ನು; ಅದರಲ್ಲೂ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಎಷ್ಟು ನಿರ್ಲಕ್ಷಿಸುತ್ತಾ ಬಂದಿವೆ ಮತ್ತು ಆ ಮೂಲಕ ಜನರ ಜೀವಕ್ಕೆ ಅವು ಎಷ್ಟು ಬೆಲೆ ಕೊಟ್ಟಿವೆ ಎಂಬುದಕ್ಕೆ ಈಗಿನ ಈ ದುರವಸ್ಥೆ ಒಂದು ನಿದರ್ಶನ.

ಆದರೆ, ಕಳೆದ ಒಂದೂವರೆ ವರ್ಷದ ಹಿಂದೆಯೇ ದೇಶದಲ್ಲಿ ಕರೋನಾ ಸೋಂಕು ಸೃಷ್ಟಿಸಬಹುದಾದ ಅನಾಹುತದ ಬಗ್ಗೆ ಜಾಗತಿಕ ತಜ್ಞರು ಎಚ್ಚರಿಕೆ ನೀಡಿದ್ದರು. 137 ಕೋಟಿಯಷ್ಟು ಭಾರೀ ಜನಸಂಖ್ಯೆಯ ದೇಶ ಮತ್ತು ಜಾಗತಿಕ ಹೋಲಿಕೆಯಲ್ಲಿ ಅತ್ಯಂತ ಕೆಟ್ಟ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಜನರ ಮಾರಣಹೋಮ ತಡೆಯುವ ನಿಟ್ಟಿನಲ್ಲಿ ಏನೆಲ್ಲಾ ಮಾಡಬೇಕಿದೆ ಎಂಬುದನ್ನು ವಿವರಿಸಲಾಗಿತ್ತು. ಅಲ್ಲದೆ, ಕಳೆದ ನವೆಂಬರಿನಲ್ಲಿ ಈ ಭೀಕರ ಎರಡನೇ ಅಲೆಯ ಬಗ್ಗೆ ಕೂಡ ಸರ್ಕಾರವೇ ರಚಿಸಿದ ತಜ್ಞರ ಸಮಿತಿಯೂ ಸೇರಿದಂತೆ ವಿವಿಧ ವೈಜ್ಞಾನಿಕ ಸಂಸ್ಥೆಗಳು, ತಜ್ಞರು ಎಚ್ಚರಿಕೆ ನೀಡಿದ್ದರು. ಅದರಲ್ಲೂ ಎರಡನೇ ಅಲೆ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಅನಾಹುತ ಸೃಷ್ಟಿಸಲಿದೆ ಎಂದೂ ಹೇಳಲಾಗಿತ್ತು. ಅಂತಹ ಎಲ್ಲಾ ಎಚ್ಚರಿಕೆ, ಸಲಹೆಗಳನ್ನೆಲ್ಲಾ ಬದಿಗೊತ್ತಿ ನಾವು ಕರೋನಾ ವಿರುದ್ಧ ಗೆದ್ದುಬಿಟ್ಟೆವು ಎಂದು ದಾವೋಸ್ ನಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಬೆನ್ನು ನಾವೇ ತಟ್ಟಿಕೊಂಡು, ಈಗ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೆ, ಕನಿಕರಕ್ಕೆ ತುತ್ತಾಗಿದ್ದೇವೆ. ಅಂತಹ ಭೋಳೇತನ, ಪರಮ ನಾಚಿಕೆಗೇಡಿನ ಹೊಣಗೇಡಿತನಕ್ಕಾಗಿ ಈಗ ದೇಶದ ಗ್ರಾಮೀಣ ಜನ ಜೀವ ಬೆಲೆ ತೆರುತ್ತಿದ್ದಾರೆ. ಹಾಗಾಗಿ ಇದರ ಹೊಣೆ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರಗಳದ್ದೇ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಹಳ್ಳಿಯಿಂದ ದಿಲ್ಲಿಯವರೆಗೆ ಈಗ ಕರೋನಾದ ಸಂಕಷ್ಟದ ಜೊತೆಗೇ ಕೇಳಿಬರುತ್ತಿರುವ ಪ್ರಶ್ನೆ, ಜನರ ಜೀವ ಉಳಿಸಲು ಯಾವ ಸರ್ಕಾರವೂ, ಯಾವ ಜನಪ್ರತಿನಿಧಿಗಳು ಇಲ್ಲ. ವಿಶ್ವಗುರುವೂ ಇಲ್ಲ, ರಾಜಾಹುಲಿಯೂ ಇಲ್ಲ. ಜನರ ಜೀವಕ್ಕೆ ಯಾವ ಬೆಲೆಯೂ ಇಲ್ಲದ ವ್ಯವಸ್ಥೆ ಇದು. ಯಾರ ಇಂತಹ ಹೊಣೆಗೇಡಿತನಕ್ಕಾಗಿ ನಾವು ಜೀವ ಬಿಡುತ್ತಿದ್ದೇವೆ ಎಂದು ಜನ ಕೇಳತೊಡಗಿದ್ದಾರೆ. ಬೀದಿಬೀದಿಯಲ್ಲಿ ಬಿದ್ದ ಅಮಾಯಕರ ಹೆಣಗಳು, ಗಂಗೆಯಲ್ಲಿ ತೇಲಿದ ಸಾವಿರಾರು ಶವಗಳು, ಆಸ್ಪತ್ರೆಗಳ ಮುಂದೆ ಹಾಸಿಗೆ ಸಿಗದೆ, ನಡುರಸ್ತೆಯಲ್ಲಿ ಆ್ಯಂಬುಲೆನ್ಸ್ ಸಿಗದೆ, ಆಸ್ಪತ್ರೆಯ ಹಾಸಿಗೆ ಮೇಲೆ ಆಮ್ಲಜನಕ ಸಿಗದೆ ಸತ್ತ ಲಕ್ಷಾಂತರ ಮಂದಿ, ಕೊನೆಗೆ ಶವಸಂಸ್ಕಾರಕ್ಕೂ ಜಾಗವಿರದೆ ಸ್ಮಶಾನದ ಮುಂದೆ ಸರದಿ ಸಾಲುಗಟ್ಟಿದ ಶವಗಳು ಯಾರ ಕಡೆ ತೋರು ಬೆರಳು ಚಾಚಿವೆ ಎಂದು ಜನ ಕೇಳತೊಡಗಿದ್ದಾರೆ.

ಹೀಗೆ ಜನರ ನಡುವಿನಿಂದ ಎದ್ದುಬರುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು, ತಮ್ಮ ಎಂದಿನ ವರಸೆಯಲ್ಲಿ ಜನರ ಗಮನವನ್ನು ಬೇರೆಡೆ ಸೆಳೆದು, ಸದ್ಯದ ಸಾವುನೋವುಗಳ ಸಂಕಷ್ಟದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನದಲ್ಲಿ ತೊಡಗಿದ್ದಾರೆ. ಅಂತಹ ತಂತ್ರಗಾರಿಕೆಯ ಭಾಗವಾಗಿಯೇ, ಬಂಗಾಳದ ಚುನಾವಣೋತ್ತರ ಹಿಂಸಾಚಾರ, ಕಾಂಗ್ರೆಸ್ ಟೂಲ್ ಕಿಟ್ ಎಂಬ ನಕಲೀ ಸಂಗತಿಗಳನ್ನು ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತರುವ ಯತ್ನಗಳನ್ನು ಬಿಜೆಪಿ ಮಾಡುತ್ತಿದೆ. ಆದರೆ, ಅದರದ್ದೇ ಆಡಳಿತ, ದೇಶಕ್ಕೇ ಮಾದರಿ ಎಂದು ಬಿಜೆಪಿ ಬಿಂಬಿಸುತ್ತಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಹೊಣೆಗೇಡಿತನದ ನಿದರ್ಶನವಾಗಿ ಗಂಗೆಯಲ್ಲಿ ತೇಲಿಬಂದ ಸಾವಿರಾರು ಶವಗಳ ಬಗ್ಗೆ ಅದು ಅಪ್ಪಿತಪ್ಪಿಯೂ ಪ್ರಸ್ತಾಪ ಮಾಡುತ್ತಿಲ್ಲ!

“ತನ್ನ ರಾಜಕಾರಣದ ಪ್ರಮುಖ ದಾಳಗಳಾದ ರಾಮಜನ್ಮಭೂಮಿ ಅಯೋಧ್ಯೆ ಮತ್ತು ಹಿಂದುತ್ವದ ಪ್ರತೀಕ ಗಂಗೆ ಇರುವ ಉತ್ತರಪ್ರದೇಶ ದೇಶದ ರಾಜಕಾರಣದಲ್ಲಿ ಇಂದಿಗೂ ಹೊಂದಿರುವ ಪ್ರಾಮುಖ್ಯತೆ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ಬಿಜೆಪಿಯ ಆದರ್ಶ ರಾಮರಾಜ್ಯದ ಮೂರ್ತರೂಪ ಎಂದು ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿ ಕೂಡ ಉತ್ತರಪ್ರದೇಶದ ಕರೋನಾ ಅನಾಹುತಗಳು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಜೊತೆಗೆ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಕೂಡ ಗಂಗೆಯಲ್ಲಿ ಹರಿದುಬಂದ ಸಾಲು ಸಾಲು ಶವಗಳು ಬಿಜೆಪಿಯ ಅಚ್ಛೇದಿನದ ಆಡಳಿತ ಮತ್ತು ಅವತಾರ ಪುರುಷ, ಹಿಂದೂ ರಕ್ಷಕ ಬಿರುದಾಂಕಿತ ಮೋದಿಯ ವರ್ಚಸ್ಸನ್ನೂ ಮಣ್ಣುಪಾಲು ಮಾಡಿವೆ”.

ಹೀಗೆ ಆತಂಕ ವ್ಯಕ್ತಪಡಿಸಿರುವುದು ಬಿಜೆಪಿ ಅಥವಾ ಮೋದಿ ವಿರೋಧಿಗಳಲ್ಲ. ಬದಲಾಗಿ ಸ್ವತಃ ಬಿಜೆಪಿಯ ಮೂಲ ಸಂಘಟನೆ ಆರ್ ಎಸ್ ಎಸ್ ಪ್ರಮುಖರು ಎಂಬುದು ವಿಶೇಷ. ಅದೂ ಕೂಡ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರುಗಳ ನೇತೃತ್ವದಲ್ಲಿ ನಡೆದ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಉನ್ನತಮಟ್ಟದ ಸಭೆಯಲ್ಲಿಯೇ ಈ ಆತಂಕ ವ್ಯಕ್ತವಾಗಿದೆ!

ಉತ್ತರಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರೋನಾ ನಿರ್ವಹಣೆಯ ವೈಫಲ್ಯವೇ ದೊಡ್ಡ ಸವಾಲಾಗಲಿದೆ. ಉತ್ತರಪ್ರದೇಶದ ಬಿಜೆಪಿ ಸರ್ಕಾರ ಮತ್ತು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥರನ್ನು ದೇಶದ ಪಾಲಿಗೆ ಬಿಜೆಪಿಯ ಭವಿಷ್ಯದ ಮಾದರಿ ಎಂದೇ ಈವರೆಗೆ ಬಿಂಬಿಸಲಾಗಿತ್ತು. ಆದರೆ, ಇದೀಗ ಕರೋನಾ ವಿಷಯದಲ್ಲಿ ಅಲ್ಲಿನ ಆಡಳಿತದ ವೈಫಲ್ಯದ ಬಗ್ಗೆ ಸ್ವತಃ ಯೋಗಿ ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಸಂಸದರು ಕೂಡ ಬಹಿರಂಗ ಟೀಕೆ ಮಾಡತೊಡಗಿದ್ದಾರೆ. ರಾಮ, ಗಂಗೆಯಂತಹ ಹಿಂದೂ ಐಕಾನ್ ಗಳನ್ನು ಬಳಸಿಕೊಂಡೇ ರಾಜಕಾರಣ ಮಾಡುವ ಬಿಜೆಪಿಗೆ ಅಂತಹ ಐಕಾನ್ ಗಳ ನೆಲೆಯಲ್ಲೇ ಪಕ್ಷದ ಆಡಳಿತ ಹೀನಾಯವಾಗಿ ಸೋತಿರುವುದು ದೊಡ್ಡ ಮಟ್ಟದ ಹಿನ್ನಡೆ ತರಲಿದೆ.

ಜೊತೆಗೆ,“ಮಹಾನ್ ನಾಯಕ, ಅತಿ ಚಾಣಾಕ್ಷ ಆಡಳಿತಗಾರ, ಹಿಂದೂ ರಕ್ಷಕ, ಭಾರತವನ್ನು ವಿಶ್ವಗುರು ಮಾಡಲಿರುವ ಅವತಾರ ಪುರುಷ ಎಂದು ಬಿಂಬಿಸಿದ ಮೋದಿ, ಕರೋನಾ ಎರಡನೇ ಅಲೆ ನಿರ್ವಹಣೆಯಲ್ಲಿ ಸಂಪೂರ್ಣ ಸೋತಿರುವುದು ಭಾರತದ ಮೂಲೆಮೂಲೆಯಲ್ಲಿ ಜನರು ಬಿಜೆಪಿ ಮತ್ತು ಹಿಂದುತ್ಚ ರಾಜಕಾರಣದ ವಿಷಯದಲ್ಲಿ ಅಸಹ್ಯಪಡುವಂತಾಗಿದೆ. ಮೋದಿಯವರ ವರ್ಚಸ್ಸಿನ ಮೇಲೆಯೇ ಅಧಿಕಾರಕ್ಕೆ ಬಂದ ಪಕ್ಷಕ್ಕೆ ಅವರ ವರ್ಚಸ್ಸು ಹೀಗೆ ಕಳಚಿಬಿದ್ದಿರುವುದು ದೊಡ್ಡ ಪೆಟ್ಟು ಕೊಡಲಿದೆ. ಅಲ್ಲದೆ ಭವಿಷ್ಯದ ನಾಯಕ ಎಂದು ಪ್ರತಿಬಿಂಬಿಸಿದ್ದ ಯೋಗಿ ವರ್ಚಸ್ಸನ್ನು ಕೂಡ ಈ ಕರೋನಾ ಕಳಚಿಬಿಸಾಕಿದೆ. ಹಾಗಾಗಿ, ಈ ಇಬ್ಬರು ನಾಯಕರ ವರ್ಚಸ್ಸಿನ ಜೊತೆ ಪಕ್ಷದ ವರ್ಚಸ್ಸು ಕೂಡ ಮಣ್ಣುಪಾಲಾಗಿದೆ” ಎಂದು ಸಭೆಯಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಆದರೆ, ಹೀಗೆ ತಮ್ಮ ಪಕ್ಷ ಮತ್ತು ಪಕ್ಷದ ನಾಯಕರ ವರ್ಚಸ್ಸಿನ ಬಗ್ಗೆ ಚರ್ಚೆ ನಡೆಸಿದ ಬಿಜೆಪಿ ಮತ್ತುಆರ್ ಎಸ್ ಎಸ್ ನಾಯಕರು, ಮುಂದಿನ ಚುನಾವಣೆಗಳ ಒಳಗಾಗಿ ಪಕ್ಷ ಮತ್ತು ನಾಯಕರ ವರ್ಚಸ್ಸು ವೃದ್ಧಿಯ ಬಗ್ಗೆ ಬಹಳ ಕಾಳಜಿಯಿಂದ ಮಾತನಾಡಿದ್ದಾರೆ. ಕರೋನಾ ನಿರ್ವಹಣೆಯ ವೈಫಲ್ಯಗಳನ್ನು ಮುಚ್ಚಿಹಾಕಿ, ನಾಯಕರ ಕುರಿತ ವ್ಯವಸ್ಥಿತ ಪ್ರಚಾರಕ್ಕೆ ಚಾಲನೆ ನೀಡುವುದು, ಪ್ರತಿಪಕ್ಷಗಳ ವಿರುದ್ದ ಟೂಲ್ ಕಿಟ್ ಆರೋಪದಂತಹ ಅಸ್ತ್ರಗಳನ್ನು ಪ್ರಯೋಗಿಸಿ, ಬಿಜೆಪಿ ಮತ್ತು ಅದರ ನಾಯಕರ ವೈಫಲ್ಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿರುವ ಪ್ರತಿಪಕ್ಷಗಳ ನೈತಿಕ ಬಲ ಕುಗ್ಗಿಸುವುದು, ಕರೋನಾ ವಿಷಯದಲ್ಲಿ ಪಕ್ಷ ಮತ್ತು ಆರ್ ಎಸ್ ಎಸ್ ಸೇರಿದಂತೆ ಅದರ ಸಂಘಪರಿವಾರ ನಡೆಸುತ್ತಿರುವ ಅಷ್ಟಿಷ್ಟು ಕರೋನಾ ಪರಿಹಾರ ಕಾರ್ಯಗಳನ್ನೇ ಬೃಹತ್ತಾಗಿ ಬಿಂಬಿಸಿ, ಸರ್ಕಾರದ ಪರವಾಗಿ ಪಕ್ಷ ಮತ್ತು ಪರಿವಾರ ಜನರ ಜೊತೆ ನಿಂತಿದೆ ಎಂದು ಬಿಂಬಿಸಬೇಕು, ಕರೋನಾ ವಿಷಯದಲ್ಲಿ ನಾಯಕರು ಮತ್ತು ಆಡಳಿತದ ನಿಷ್ಕ್ರಿಯತೆ ಹಿನ್ನೆಲೆಯಲ್ಲಿ ವ್ಯತಿರಿಕ್ತವಾಗಿರುವ ಕೆಲವು ಮಾಧ್ಯಮಗಳನ್ನು ಪಳಗಿಸಿ ಮತ್ತೆ ತಮ್ಮ ಗುಣಗಾನಕ್ಕೆ ಒಗ್ಗಿಸಬೇಕು ಎಂಬುದೂ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ!

ಅಂದರೆ; ಅಂತಿಮವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಶಾ, ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ನಡೆದ ಸಭೆ ಬಿಜೆಪಿ ಪಕ್ಷದ ವರ್ಚಸ್ಸು, ಮೋದಿ ಮತ್ತು ಯೋಗಿ ವರ್ಚಸ್ಸು ಕಳಚಿ ಬೀಳುತ್ತಿರುವ ಬಗ್ಗೆ ಅತೀವ ಆತಂಕ ವ್ಯಕ್ತಪಡಿಸಿದೆ. ಈ ಸಂಗತಿಗಳು ಮುಂದಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗದಂತೆ ಹೇಗೆ ಎಲ್ಲವನ್ನೂ ನಿಭಾಯಿಸಬೇಕು ಎಂಬ ಕುರಿತು ಅತೀವ ಕಾಳಜಿಯಿಂದ ಮುಂದಿನ ತಂತ್ರಗಾರಿಕೆಗಳನ್ನು ಚರ್ಚಿಸಿದೆ! 

ದೇಶದಲ್ಲಿ ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು(ವಾಸ್ತವವಾಗಿ ಈ ಪ್ರಮಾಣ ಹತ್ತು ಪಟ್ಟು ಹೆಚ್ಚಿರಬಹುದು ಎಂದು ಹಲವು ಸಂಸ್ಥೆಗಳು ಹೇಳಿವೆ) ಜನರನ್ನು ಬಲಿತೆಗೆದುಕೊಂಡಿರುವ ಕರೋನಾ ದೇಶದಲ್ಲಿ ಸೃಷ್ಟಿಸಿರುವ ಅನಾಹುತಗಳ ಬಗ್ಗೆಯಾಗಲೀ, ದೇಶದ ಬಡವರು, ಹಳ್ಳಿಗಾಡಿನ ಜನರ ಜೀವ ಉಳಿಸುವ ಬಗ್ಗೆಯಾಗಲೀ ಸಭೆಯಲ್ಲಿ ಯಾವುದೇ ಚರ್ಚೆಯಾದ ಮಾಹಿತಿ ಇಲ್ಲ! ಅಂದರೆ; ಇಡೀ ದೇಶವೇ ಸ್ಮಶಾನದಂತಾಗಿರುವ ಹೊತ್ತಿನಲ್ಲಿ ಕೂಡ ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಪಕ್ಷ ಮತ್ತು ನಾಯಕರ ವರ್ಚಸ್ಸು ಮತ್ತು ಚುನಾವಣಾ ಲಾಭಕ್ಕಿಂತ ಜನರ ಜೀವವಾಗಲೀ, ದೇಶದ ಭವಿಷ್ಯವಾಗಲೀ ಮುಖ್ಯವಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...