ವ್ಯಾಕ್ಸಿನೇಷನ್: ಬದ್ಧತೆ ಮರೆತ ಮೋದಿ ಸರ್ಕಾರದ ಮಾನ ಉಳಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ರಾಜ್ಯ ಸರ್ಕಾರ!

ವ್ಯಾಕ್ಸಿನೇಷನ್‌ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ಎಡವಟ್ಟಿಗೆ ರಾಜ್ಯ ಸರ್ಕಾರ ಆರ್ಥಿಕ ಹೊರೆ ಹೊರುವಂತಾಗಿದೆ. ದಿ ಫೈಲ್‌ ಎಂಬ ಕನ್ನಡದ ಆನ್‌ಲೈನ್‌ ಪೋರ್ಟಲ್‌ ಮಾಡಿರುವ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ವ್ಯಾಕ್ಸಿನ್ ಕಂಡು ಹಿಡಿಯುವುದರಿಂದ ಹಿಡಿದು, ತಯಾರಿಕೆ, ವಾಕ್ಸಿನೇಷನ್(ಲಸಿಕೆ ನೀಡುವ)ವರೆಗೆ ಎಲ್ಲಾ ಕ್ರೆಡಿಟನ್ನೂ ತನ್ನ ಹೆಸರಿಗೆ ಪಡೆದುಕೊಂಡ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ನಿಜಾರ್ಥದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಬದ್ಧತೆ ತೋರದೆ ಕೇವಲ ಹೆಸರು ಗಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದೇ ಕರೋನಾ ಲಸಿಕೆ ಸುತ್ತ ಹುಟ್ಟಿಕೊಂಡ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.

ವಾಕ್ಸಿನೇಷನ್‌ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ಪೂರ್ಣಗೊಳಿಸದಿರುವುದರಿಂದ ರಾಜ್ಯದಲ್ಲಿ ಕರೋನಾ ಲಸಿಕೆ ಸುತ್ತ ಹಾಹಾಕಾರ ಹುಟ್ಟಿಕೊಂಡಿದೆ ಎಂದು ದಿ ಫೈಲ್‌ ತನ್ನ ವರದಿಯಲ್ಲಿ ಹೇಳಿದೆ. 45 ವಯಸ್ಸು ಮೇಲ್ಪಟ್ಟವರಿಗೆ ನೀಡಬೇಕಾದ ಎರಡನೇ ಡೋಸ್‌ ಲಸಿಕೆಯನ್ನು ಕೇಂದ್ರ ರಾಜ್ಯಕ್ಕೆ ಸರಬರಾಜು ಮಾಡದೆ ಇರುವುದರಿಂದ, 45 ವರ್ಷದೊಳಗಿನವರಿಗೆ ನೀಡಬೇಕಾದ ಮೊದಲ ಹಂತದ ಲಸಿಕೆಗಳ ಕೊರತೆಗೆ ಕಾರಣವಾಗಿದೆ.

ದಿ ಫೈಲ್‌ ವರದಿ ಪ್ರಕಾರ, ಮೇ 20 ರ ಮೊದಲೇ ರಾಜ್ಯ ಸರ್ಕಾರವು ಸುಮಾರು 28.50 ಕೋಟಿ ರುಪಾಯಿ ಪಾವತಿಸಿ 7.50 ಲಕ್ಷ ಕೋವಿಶೀಲ್ಡ್‌ ಹಾಗೂ 1,44,170 ಕೊವಾಕ್ಸಿನ್‌ ಲಸಿಕೆಯನ್ನು ಖರೀದಿ ಮಾಡಿತ್ತು. ಅಂದರೆ, ಮೇ 20 ರ ಮೊದಲೇ ರಾಜ್ಯದಲ್ಲಿ ಒಟ್ಟು 8.94 ಲಕ್ಷ ಲಸಿಕೆಗಳಿದ್ದವು. ಮೊದಲ ಹಂತದ ಲಸಿಕೆ ಪಡೆದವರಿಗೆ ಎರಡನೇ ಹಂತದ ಲಸಿಕೆಯನ್ನು ಕೇಂದ್ರ ಸರ್ಕಾರ ವಿತರಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಈ ಲಸಿಕೆಗಳನ್ನು 45 ವರ್ಷ ಮೇಲ್ಪಟ್ಟವರ ಎರಡನೇ ಹಂತದ ವ್ಯಾಕ್ಸಿನೇಷನ್‌ ಪ್ರಕ್ರಿಯೆಗೆ ಬಳಸಿಕೊಂಡಿತು ಎಂದು ವರದಿಯಲ್ಲಿ ಹೇಳಲಾಗಿದೆ.

ತನ್ನದೇ ಪಕ್ಷದ ಹಿರಿಯ ಸಂಸದ ಅನಂತಕುಮಾರ್‌ ಹೆಗಡೆ ಕಳೆದ ವರ್ಷ ಮಾಡಿದ ವ್ಯಾಕ್ಸಿನೇಷನ್‌ ವಿರೋಧಿ ಭಾಷಣದ ಬಗ್ಗೆ ಏನೂ ಮಾತನಾಡದೆ, ಲಸಿಕೆ ಕೊರತೆಗೆ ವಿರೋಧ ಪಕ್ಷಗಳು ಕಾರಣವೆನ್ನುತ್ತಿರುವ ಬಿಜೆಪಿ ನಾಯಕರು, ಲಸಿಕೆ ವಿರುದ್ಧ ಕಾಂಗ್ರೆಸ್‌ ಮಾಡಿದ ಅಪಪ್ರಚಾರ ನಂಬಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕಿದ್ದಾರೆಂದು, ಹಾಗಾಗಿ ವಿದೇಶಗಳಿಗೆ ಲಸಿಕೆ ರಫ್ತು ಮಾಡಬೇಕಾಗಿದೆಯೆಂದು ಆರೋಪಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆಯವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ʼಚರ್ಚ್‌ಗಳು ಲಸಿಕೆ ಪಡೆಯದಂತೆʼ ಅಪಪ್ರಚಾರ ನಡೆಸುತ್ತಿದೆಯೆಂದು ಆರೋಪಿಸಿ, ಕೋಮು ಆಯಾಮ ನೀಡಲು, ಆ ಮೂಲಕ ಜನರ ಗಮನ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದ್ದಾರೆ.

ಆದರೆ, ಇವರ್ಯಾರೂ ಲಸಿಕೆಯ ಕುರಿತಂತೆ ತನ್ನ ಬದ್ಧತೆ ಪೂರ್ಣಗೊಳಿಸದ ಕೇಂದ್ರದ ವಿರುದ್ಧ ತುಟಿ ಪಿಟಿಕ್ಕೆನ್ನುವುದಿಲ್ಲ. ಮೊದಲನೇ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಸಿಗದಂತಾಗಲು ಯಾರು ಕಾರಣ ಎಂದು ಬಹಿರಂಗಗೊಳಿಸುತ್ತಿಲ್ಲ.  ರಾಜ್ಯದ ಜನತೆಯ ಹಿತದೃಷ್ಟಿಗಿಂತಲೂ ತಮ್ಮ ಪ್ರಧಾನಿಯ ಇಮೇಜ್‌ ಮುಖ್ಯ ಎಂದೇ ಪರಿಗಣಿಸಿರುವ ಬಿಜೆಪಿ ನಾಯಕರು ರಾಜ್ಯದ ಜನೆತೆಗೆ ಬಗೆಯುತ್ತಿರುವ ದ್ರೋಹ ಕಡಿಮೆ ಪ್ರಮಾಣದ್ದಲ್ಲ.

ಈ ಕುರಿತು ಪ್ರತಿಕ್ರಯಿಸಿರುವ ಹಿರಿಯ ಪತ್ರಕರ್ತ ದಿನೇಶ್‌ ಕುಮಾರ್‌ ಎಸ್‌ಸಿ, “ಮೋದಿ ಸರ್ಕಾರದ ಮಾನ ಮುಚ್ಚಲು ರಾಜ್ಯ ಸರ್ಕಾರವೇ ಕಳಂಕ‌ ಹೊತ್ತುಕೊಂಡಿದೆ. ಜತೆಗೆ ಹಣವನ್ನೂ ಕಳೆದುಕೊಂಡಿದೆ. ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರ ಇದ್ದಿದ್ದರೆ ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುತ್ತಿತ್ತು, ಕಾನೂನು ಹೋರಾಟಕ್ಕೆ ಮುಂದಾಗುತ್ತಿತ್ತು. ಆದರೆ ರಾಜ್ಯದಲ್ಲಿ ಇರುವುದು ಹೈಕಮಾಂಡ್ ಗುಲಾಮಗಿರಿ. ಇವರು ಬಾಯಿ ತೆರೆಯುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿ ಕಾರ್ಯದಲ್ಲಿ ಇನ್ನಷ್ಟು ಪ್ರಗತಿ ಕಾಣುತ್ತದೆಯೆಂದು ಮತಪಡೆದ ಬಿಜೆಪಿಯ ವಾಸ್ತವಾಂಶವಿದು. ಕೇಂದ್ರದ ಮಾನ ಮುಚ್ಚಲೆಂದು ರಾಜ್ಯ ಬಿಜೆಪಿ ನಾಯಕರು ಮೌನವಹಿಸಿ ಕರ್ನಾಟಕಕ್ಕೆ ದ್ರೋಹ ಮಾಡುತ್ತಿದ್ದಾರೆಂಬ ಆರೋಪಕ್ಕೆ ಈ ಪ್ರಕರಣ ಮತ್ತಷ್ಟು ಪುಷ್ಟಿ  ನೀಡಿದೆ. ಜಿಎಸ್‌ಟಿ, ನೆರೆ ಪರಿಹಾರ ಸೇರಿದಂತೆ ಕೇಂದ್ರ ಸರ್ಕಾರದಿಂದ ನ್ಯಾಯಯುತವಾಗಿ ರಾಜ್ಯಕ್ಕೆ ಬರಬೇಕಾದ ಪಾಲನ್ನು ರಾಜ್ಯದ 25 ಸಂಸದರಾಗಲೀ, ʼರಾಜಾಹುಲಿʼ ಎಂಬ ಮುಖ್ಯಮಂತ್ರಿಯಾಗಲೀ ಕೇಳಲು ತೋರುವ ಪುಕ್ಕಲುತನಕ್ಕೆ ರಾಜ್ಯದ ಜನತೆ ಬಹಳಷ್ಟು ನಷ್ಟ ಕಂಡುಕೊಂಡಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಮಹತ್ವ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ಮರೆತಿರುವ ಮೋದಿ ಸರ್ಕಾರ ತನ್ನ ಧೂರ್ತತನದಿಂದ ಅವಗಣಿಸುತ್ತಿದೆ. ಆದರೂ, ಸ್ವಂತ ವರ್ಷಸ್ಸಿನಿಂದ ಗೆಲ್ಲಲಾಗದ, ಉತ್ತರದ ನಾಯಕರಿಗೆ ನಡು ಬಗ್ಗಿಸಿ ಸಲಾಮು ಹೊಡೆಯುತ್ತಿರುವ ರಾಜ್ಯ ನಾಯಕರು ತಮ್ಮ ಗುಲಾಮಿ ಮನಸ್ಥಿತಿಯಿಂದ ಇನ್ನೂ ಹೊರ ಬರುವ ಲಕ್ಷಣಗಳು ಕಾಣುತ್ತಿಲ್ಲ.

ಒಟ್ಟಾರೆ, ಕೇಂದ್ರ ಸರ್ಕಾರಕ್ಕೆ ತೋರುತ್ತಿರುವ ಅತಿ ನಿಷ್ಟೆಯಿಂದ ರಾಜ್ಯ ಸರ್ಕಾರ ಸ್ವತಃ ಕಳಂಕವನ್ನು ಹೊತ್ತುಕೊಂಡಿದೆಯಲ್ಲದೆ, ವ್ಯಾಕ್ಸಿನೇಷನ್‌ ಪ್ರಕ್ರಿಯೆಯಲ್ಲಿ ಕೇಂದ್ರದ ಪಾಲನ್ನು ತಾನು ಭರಿಸಿ ಹೆಚ್ಚುವರಿ 28 ಕೋಟಿಯ ಹೊರೆಯನ್ನೂ ಹೊತ್ತುಕೊಂಡಿದೆ. !

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...