ಲಸಿಕೆಗಳ ಲೆಕ್ಕದಲ್ಲಿ ಗೋಲ್ ಮಾಲ್; ಉತ್ಪಾದಿಸುತ್ತಿರುವ ಮತ್ತು ಜನರಿಗೆ ನೀಡುತ್ತಿರುವ ಲೆಕ್ಕಕ್ಕೆ ಹೋಲಿಕೆಯೇ ಇಲ್ಲ

ದೇಶದಲ್ಲಿ ಈಗ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲು ಕರೋನಾ ಲಸಿಕೆಗಳಿಲ್ಲ. ಆದರೂ ಕೇಂದ್ರ ಸರ್ಕಾರ ವ್ಯವಸ್ಥಿತವಾದ ಯೋಜನೆ ಹಮ್ಮಿಕೊಳ್ಳದೆ 18ರಿಂದ 45 ವರ್ಷದವರಿಗೆ ಲಸಿಕೆ ಕೊಡುವುದಾಗಿ ಘೋಷಿಸಿತು. ಮೇ 1ರಿಂದ ಈ ಕೆಲಸ ಆರಂಭವಾಯಿತು. ಆದರೀಗ ಲಸಿಕೆಗಳ‌ ಕೊರತೆಯಾಗಿದೆ. ಮೂರನೇ ಹಂತದ ಅಭಿಯಾನ ಕುಂಟುತ್ತಾ ಸಾಗಿದೆ. ಇದೂ ಸಾಲದೆಂಬಂತೆ ಕೇಂದ್ರ ಸರ್ಕಾರ ’18ರಿಂದ 45 ವಷರ್ದವರು ನೇರವಾಗಿ ವ್ಯಾಕ್ಸಿನ್ ಸೆಂಟರ್ ಗೆ ಹೋಗಿ ಪಡೆಯಬಹುದು’ ಎಂಬ ಆದೇಶ ಹೊರಡಿಸಿ ಸಮಸ್ಯೆಯ ಜೊತೆಗೆ ಗೊಂದಲವನ್ನೂ ಸೃಷ್ಟಿಸಿದೆ. ಕರೋನಾ ಲಸಿಕೆಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯದ ಬಗ್ಗೆ ಕೆಲವು ರಾಜ್ಯ ಸರ್ಕಾರಗಳು ನಿರಂತರವಾಗಿ ಅಳಲು ತೋಡಿಕೊಳ್ಳುತ್ತಿವೆ. ಫೀಜರ್ ಮತ್ತು ಮಾಡೆರ್ನಾ ವಿದೇಶಿ ಕಂಪನಿಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ಕೊಡುವುದಿಲ್ಲ ಎಂದಿವೆ. ಹೀಗೆ ಲಸಿಕೆಗಳ ಸಮಸ್ಯೆ ಸಂಕೀರ್ಣವಾಗಿದೆ.‌ ಇದೆಲ್ಲದರ ನಡುವೆ ಲಸಿಕೆಗಳ ಉತ್ಪಾದನೆ ಮತ್ತು ವಿತರಣೆ ಬಗ್ಗೆ ಅನುಮಾನಗಳು ಹುಟ್ಟುಕೊಂಡಿವೆ.

ಲಸಿಕೆ ಕೊರತೆ ಸಮಸ್ಯೆ ತಾರಕಕ್ಕೇರಿ, ಕೇಂದ್ರ ಸರ್ಕಾರ ಅನುಸರಿಸುತ್ತಿದ್ದ ತಾರತಮ್ಯ ಮಿತಿ ಮೀರಿದಾಗ ಈ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯ ಸ್ವಯಂ ದೂರು ದಾಖಲಿಸಿಕೊಂಡಿತ್ತು. ಲಸಿಕೆ ವಿತರಣೆಯು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಸಮಿತಿಯೊಂದನ್ನೂ ರಚಿಸಿತ್ತು. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿತ್ತು.‌ ಈ ದೂರಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ‘ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಸೇರಿ ಪ್ರತಿ ತಿಂಗಳು 8ರಿಂದ 8.5 ಕೋಟಿ ಲಸಿಕೆ ಉತ್ಪಾದನೆ ಆಗಲಿದೆ. ಆ ಲಸಿಕೆಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುವುದು’ ಎಂದು ಹೇಳಿತ್ತು.

ಇದಲ್ಲದೆ ಕೋವಿಶೀಲ್ಡ್ ಉತ್ಪಾದಿಸುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಿಂಗಳಿಗೆ 6ರಿಂದ 7 ಕೋಟಿ ಲಸಿಕೆ ಉತ್ಪಾದಿಸುವುದಾಗಿ ಅಧಿಕೃತವಾಗಿ ತಿಳಿಸಿದೆ. ಭಾರತ್ ಬಯೋಟೆಕ್ ಮುಖ್ಯಸ್ಥ ಡಾ. ರಾಚೆಸ್ ಎಲಾ ಅವರು ‘ತಮ್ಮ ಕಂಪನಿ ತಿಂಗಳಿಗೆ 2 ಕೋಟಿ ಕೋವ್ಯಾಕ್ಸಿನ್ ಉತ್ಪಾದಿಸಲಿದೆ’ ಎಂದು ಆನ್ ರೆಕಾರ್ಡ್ ಹೇಳಿದ್ದರು. ಅಂದರೆ ಎರಡೂ ಸಂಸ್ಥೆಗಳಿಂದ ಪ್ರತಿ ತಿಂಗಳು 8ರಿಂದ 8.5 ಕೋಟಿ ಕರೋನಾ ಲಸಿಕೆ ಉತ್ಪಾದನೆ ಆಗಬೇಕು. ಇದಲ್ಲದೆ ಭಾರತವು ರಷ್ಯಾದಿಂದ 30 ಲಕ್ಷ ಸ್ಪುಟ್ನಿಕ್ ವಿ ಲಸಿಕೆಗಳನ್ನು ಆಮದು ಮಾಡಿಕೊಂಡಿದೆ. ಅದನ್ನು ಬಿಟ್ಟು ಹಾಕಿದರೂ ಪ್ರತಿ ದಿನ ಭಾರತದಲ್ಲಿ 27.4 ಲಕ್ಷ ಕೋರೋನಾ ಲಸಿಕೆಗಳ ಉತ್ಪಾದನೆ ಆಗಬೇಕು ಮತ್ತು ಅವುಗಳನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಇದೇ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ಎದುರು 8 ರಿಂದ 8.5 ಕೋಟಿ ಲಸಿಕೆ ಉತ್ಪಾದನೆ ಮತ್ತು ವಿತರಣೆ ಬಗ್ಗೆ’ ಪ್ರಮಾಣ ಪತ್ರ ಸಲ್ಲಿಸಿತ್ತು.

ಆದರೆ ಮೇ ತಿಂಗಳಾಂತ್ಯದವರೆಗೆ ಲಭ್ಯವಾಗುತ್ತಿರುವ ಕರೋನಾ ಲಸಿಕೆಗಳ ಸಂಖ್ಯೆ ಕೇವಲ 5 ಕೋಟಿ. ಕೇಂದ್ರ ಸರ್ಕಾರ ಅಧಿಕೃತವಾಗಿ ಅಭಿವೃದ್ಧಿಪಡಿಸಿರುವ ಕೋವಿನ್ ಆ್ಯಪ್ ಪ್ರಕಾರ ಪ್ರತಿದಿನ ಲಭ್ಯ ಆಗುತ್ತಿರುವುದು ಮತ್ತು ವಿತರಣೆ ಆಗುತ್ತಿರುವುದು 16.2 ಲಕ್ಷ ಕರೋನಾ ಲಸಿಕೆಗಳು ಮಾತ್ರ. ಈ ನಡುವೆ ಮೇ 16ರಿಂದ 22ರವರೆಗೆ ಪ್ರತಿ ದಿನ‌ ಕೇವಲ 13 ಲಕ್ಷ ಲಸಿಕೆಗಳ ರವಾನೆಯಾಗಿದೆ. ಕರೋನಾ ಲಸಿಕೆಗಳ ವಿಷಯದಲ್ಲಿ ಆಗಿರುವ ಈ ‘ಮಿಸ್ ಮ್ಯಾಚ್’ ಕೇಂದ್ರ ಸರ್ಕಾರದ ಮೇಲೆ ಹಲವು ಅನುಮಾನ ಮೂಡುವಂತೆ ಮಾಡುತ್ತದೆ.

ಉತ್ಪಾದಿಸುತ್ತಿರುವ ಮತ್ತು ಜನರಿಗೆ ನೀಡಲಾಗುತ್ತಿರುವ ಕರೋನಾ ಲಸಿಕೆಗಳ ಲೆಕ್ಕಕ್ಕೆ ಹೋಲಿಕೆಯೇ ಇಲ್ಲದಿರುವುದರಿಂದ ನಿಜಕ್ಕೂ ಕೂಡ ದೇಶದಲ್ಲಿ 8ರಿಂದ 8.5 ಕೋಟಿ ಲಸಿಕೆಗಳು ಉತ್ಪಾದನೆ ಆಗುತ್ತಿಲ್ಲವೇ? ಉತ್ಪಾದನೆ ಆಗುತ್ತಿದ್ದರೆ ವ್ಯತ್ಯಾಸ ಕಂಡುಬರುತ್ತಿರುವ ಆ 3.5 ಕೋಟಿ ಲಸಿಕೆಗಳು ಏನಾದವು? ಎಲ್ಲಿಗೆ ಹೋಗುತ್ತಿವೆ? ದೇಶದಲ್ಲೇ ಕೊರತೆ ಇದ್ದರೂ ಕೇಂದ್ರ ಸರ್ಕಾರ ವಿದೇಶಗಳಿಗೆ ಕರೋನಾ ಲಸಿಕೆಗಳನ್ನು ರಫ್ತು ಮಾಡಲಾಗುತ್ತಿದೆಯಾ? ಈ ಬಗ್ಗೆ ಕಂಪನಿಗಳು ಸುಳ್ಳು ಹೇಳುತ್ತಿವೆಯಾ? ಕಂಪನಿಗಳು ಸುಳ್ಳು ಹೇಳಿದರೂ ಕೇಂದ್ರ ಸರ್ಕಾರ ಎಲ್ಲವೂ ಗೊತ್ತಿದ್ದು ಮೌನವಾಗಿರುವುದೇಕೆ? ಎಲ್ಲಕ್ಕಿಂತ ಮಿಗಿಲಾಗಿ ಕೇಂದ್ರ ಸರ್ಕಾರ ಸ್ವತಃ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ. ಜನಕ್ಕೆ ಉತ್ತರದಾಯಿ ಕಂಪನಿಗಳಲ್ಲ, ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಕರೋನಾದಂತಹ ದುರಿತ ಕಾಲದಲ್ಲೂ ಸುಳ್ಳು ಮಾಹಿತಿ ನೀಡಬಾರದು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...