ಕೋವಿಡ್‌ನಿಂದ ಪಾರಾಗಲು ಭಾರತಕ್ಕಿರುವ ದಾರಿ ಯಾವುದು?

ಕೊರೋನಾ ಕೇಂದ್ರ ಸರ್ಕಾರ ರಚಿಸಿರುವ ಸಲಹಾ ಸಮಿತಿಯ (Indian SARS-COV-2 Genomics Consortia )(Insacog)  ಅಧ್ಯಕ್ಷರಾಗಿರುವ ಹಿರಿಯ ವಿಜ್ಞಾನಿ, ವೈರಲಾಜಿಸ್ಟ್ ಡಾ ಶಹೀದ್ ಜಮೀಲ್ ರಾಜೀನಾಮೆ ನೀಡಿದ್ದಾರೆ. ಬಹುತೇಕ ವಿಜ್ಞಾನಿಗಳು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಾರಣಗಳನ್ನು ಬಹಿರಂಗವಾಗಿ ಹೇಳುವುದಿಲ್ಲ. ವೈರಲಾಜಿಸ್ಟ್ ಡಾ ಶಹೀದ್ ಜಮೀಲ್ ಕೂಡಾ ಕಾರಣ ಹೇಳದೇ ಕೇಂದ್ರ ಸರ್ಕಾರ ಮಹತ್ವದ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ದಿನವಿಡೀ ಚರ್ಚೆಯಾಗಬೇಕಾದ ವಿಷಯ. ಆದರೆ ಭಾರತದ ಮಾಧ್ಯಮಗಳು ಏನೂ ಆಗೇ ಇಲ್ಲವೇನೋ ಎಂಬಂತಿದೆ. ಡಾ ಶಹೀದ್ ಜಮೀಲ್ ರಾಜೀನಾಮೆಗೆ ಕಾರಣ ಹೇಳದೇ ಇದ್ದರೂ ಮೂರು ದಿನದ ಹಿಂದೆ ನ್ಯೂಯಾರ್ಕ್ ಟೈಮ್ಸ್ ಗೆ ಸುದೀರ್ಘ ಲೇಖನ ಬರೆದಿದ್ದರು. ಆ ಲೇಖನದ‌ ಕೊನೆಯ ಎರಡು ಪ್ಯಾರ ಎಲ್ಲವನ್ನೂ ಹೇಳುತ್ತದೆ. ಅದರ ಕನ್ನಡ ಅನುವಾದ ಇಲ್ಲಿದೆ.

ಮೇ 11, 2021 ರ ವೇಳೆಗೆ, ಭಾರತದಲ್ಲಿ 23 ದಶಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು  ಮತ್ತು 2,54,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕಳೆದ ವಾರದಲ್ಲಿ ದೇಶವು ದಿನಕ್ಕೆ ಸರಾಸರಿ 3,80,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿರುವುದರಿಂದ ನೈಜ ಸಂಖ್ಯೆಗಳು ಇನ್ನೂ ಹೆಚ್ಚು ಹೆಚ್ಚಿರಬಹುದು.

ನಾನೊಬ್ಬ ವೈರಾಲಜಿಸ್ಟ್ ಆಗಿ, ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಕೊರೋನಾ ಸಂಬಂಧ ಬೆಳವಣಿಗೆಗಳು ಮತ್ತು ಲಸಿಕೆಯ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ವೈರಸ್ ರೂಪಾಂತರಗಳ ಹೊರಹೊಮ್ಮುವಿಕೆ ಮತ್ತು ಪ್ರಸರಣವನ್ನು ಪತ್ತೆಹಚ್ಚಲು ರಾಷ್ಟ್ರೀಯ ಪ್ರಯೋಗಾಲಯಗಳ ಗುಂಪಾಗಿ ಭಾರತ ಸರ್ಕಾರವು ಜನವರಿಯಲ್ಲಿ  INDIAN SARS-CoV2 ಸಮಿತಿಯನ್ನು ರಚಿಸಿತ್ತು. ಈ INDIAN SARS-CoV2ನ ವೈಜ್ಞಾನಿಕ ಸಲಹಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷತೆಯನ್ನು ನಾನು ಹೊಂದಿದ್ದೇನೆ. ನನ್ನ ಅಧ್ಯಯನದಂತೆ ಭಾರತದಲ್ಲಿ ಹೆಚ್ಚು ಕೊರೋನಾ ವೈರಸ್ ರೂಪಾಂತರಗಳು ಹರಡುತ್ತಿವೆ. ಇದನ್ನು ಕೊರೋನಾ ಅಲೆಯನ್ನು  ತಗ್ಗಿಸಲು, ಭಾರತವು ತಕ್ಷಣವೇ ದಿನಂಪ್ರತಿ ಎರಡು ದಶಲಕ್ಷಕ್ಕಿಂತ ಹೆಚ್ಚಿನ ಲಸಿಕೆಗಳನ್ನು ನೀಡಬೇಕು.

ಭಾರತದಲ್ಲಿ 2021 ರ ಹೊಸ ವರ್ಷದಲ್ಲಿ  ಹೆಚ್ಚು ಸಾಂಕ್ರಾಮಿಕ / ಹೆಚ್ಚು ಹರಡುವ ಎರಡನೇ ಅಲೆಯಾಗಿ ಮಾರ್ಪಾಡಾಯಿತು. ಕೊರೋನಾ ಎರಡನೇ ಅಲೆಗೆ ಕೊರೋನಾ ವೈರಸ್‌ನ ಎರಡು ರೂಪಾಂತರಗಳು ಕಾರಣವಾದವು. ಅದರ ಪೈಕಿ ಭಾರತದಲ್ಲಿ ಬಿ .1.617 ಎಂದು ಡಿಸೆಂಬರ್‌ನಲ್ಲಿ ಮೊದಲು ಕಂಡುಬಂತು. ಹಲವು ಬೃಹತ್ ಸಮಾವೇಶಗಳ ಮೂಲಕ ಇದು ಭಾರತದಾದ್ಯಂತ ಹರಡಿತು. ಮತ್ತೊಂದು ರೂಪಾಂತರವನ್ನು ಬಿ.1.1.7  ಎಂದು ಗುರುತಿಸಲಾಗಿದ್ದು, ಅದು ಮೊದಲು ಬ್ರಿಟನ್‌ನಲ್ಲಿ ಪತ್ತೆಯಾಯಿತು.  ಜನವರಿಯಿಂದ ಪ್ರಾರಂಭವಾಗುವ ಅಂತರರಾಷ್ಟ್ರೀಯ ಪ್ರಯಾಣಿಕರೊಂದಿಗೆ ಬ್ರಿಟನ್ನ ಈ ವೈರಸ್ ಭಾರತಕ್ಕೆ ಬಂದು ಹಲವು ಸಮಾವೇಶಗಳ ಮೂಲಕ ದೇಶದಾದ್ಯಂತ ಹರಡಿತು. ಭಾರತದಲ್ಲಿ ಈಗ ಭಾರತದ್ದೇ ಆಗಿರುವ ಬಿ .1.617 ರೂಪಾಂತರಿತ ವೈರಸ್ ಹೆಚ್ಚು ವ್ಯಾಪಿಸಿದೆ.

ಮೇ 10 ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಬಿ .1.617 ಅನ್ನು ರೂಪಾಂತರಿತ ಕೊರೋನಾ ವೈರಸ್ ಎಂದು ದೃಡಪಡಿಸಿದೆ.  ಮೂಲ ಕೊರೊನಾ ವೈರಸ್‌ಗೆ ಹೋಲಿಸಿದರೆ ಭಾರತದ ರೂಪಾಂತರಿತ ಬಿ .1.617 ಹೆಚ್ಚು ಪ್ರಭಾವಶಾಲಿಯಾಗಿ ಮನುಷ್ಯನ ದೇಹದ ಮೇಲೆ  ಮತ್ತು  ಶ್ವಾಸಕೋಶದ ಹೆಚ್ಚು ಹಾನಿಗಳನ್ನು ಉಂಟು ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಲ್ಲಿ ತಿಳಿದು ಬಂತು. ಜಾಗತಿಕ ಅಧ್ಯಯನದ ಪ್ರಕಾರ B.1.617 ವೈರಸ್  ರೂಪಾಂತರವು ಇನ್ನೂ ಮೂರು ಉಪ-ವಂಶಾವಳಿಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಆತಂಕದ ವಿಷಯವೆಂದರೆ ಮೇ 09 ರ ಭಾನುವಾರ ಬ್ರಿಟಿಷ್ ಮತ್ತು ಭಾರತೀಯ ವಿಜ್ಞಾನಿಗಳು ನೀಡಿದ ವರದಿಯ ಪ್ರಕಾರ ದೆಹಲಿ ಆಸ್ಪತ್ರೆಯಲ್ಲಿ B.1.617 ವೈರಸ್ B.1.617.2 ಆಗಿ ರೂಪಾಂತರಗೊಂಡಿದ್ದನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಕೊರೋನಾ ವೈರಸ್‌ನ ಈ ರೂಪಾಂತರಗಳು ಭಾರತದ ಇನ್ನೂ ಹೆಚ್ಚಿನ ಜನಸಂಖ್ಯೆಗೆ ಹರಡುತ್ತಿರುವುದರಿಂದ ಇಲ್ಲಿನ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಎರಡನೇ ಅಲೆ ಯಾವಾಗ ಗರಿಷ್ಠ ಹಂತ ತಲುಪಬಹುದು ಮತ್ತು ಅದು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.

ವಿಜ್ಞಾನಿಗಳು ಮತ್ತು ವೈದ್ಯರು ಮಾಡಿರುವ ಅಂದಾಜುಗಳು ವ್ಯಾಪಕವಾಗಿ ಬದಲಾಗುತ್ತವೆ. ಅದಾಗ್ಯು ಭಾರತ ಸರ್ಕಾರವು ಅಂದಾಜಿಸಿರುವಂತೆ ಮೇ ಮೊದಲ ವಾರದಲ್ಲಿ ದಿನಕ್ಕೆ ಸುಮಾರು 3, 80,000 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.  COVID-19 ಸಂಬಂಧ ರಚಿಸಲಾಗಿರುವ  Indian Scientists Response ಟೀಮ್ ಪ್ರಕಾರ ಮೇ ಮಧ್ಯಭಾಗದಲ್ಲಿ  ಕೋರೋನಾ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪುತ್ತವೆ. ಸುಮಾರು 500,000 ರಿಂದ 600,000 ದೈನಂದಿನ ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಮಿಚಿಗನ್ ವಿಶ್ವವಿದ್ಯಾನಿಲಯದ  COV-IND-19 Study Group ಪ್ರಕಾರ ಮೇ ಮಧ್ಯದ ವೇಳೆಗೆ ಗರಿಷ್ಠ 800,000 ರಿಂದ ಒಂದು ಮಿಲಿಯನ್ ಪ್ರಕರಣಗಳು ದಾಖಲಾಗಬಹುದು ಎಂದು ಹೇಳಲಾಗಿದೆ.

ಭಾರತದಲ್ಲಿ ಕೊರೋನಾ ಎರಡನೇ ಅಲೆಯು ಜುಲೈ ಅಥವಾ ಆಗಸ್ಟ್ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.  ಇದು ಸುಮಾರು 35 ಮಿಲಿಯನ್ ದೃಡೀಕೃತ ಪ್ರಕರಣಗಳು ಮತ್ತು  500 ಮಿಲಿಯನ್ ಅಂದಾಜು ಜನರಿಗೆ ಸೋಂಕು ತಗುಲುವುದರೊಂದಿಗೆ ಕೊನೆಗೊಳ್ಳುತ್ತದೆ.

ಕೊರೋನಾ ಮೂರನೇ ಅಲೆ ಹೇಗಿರುತ್ತೆ ? ಮೂರನೇ ಅಲೆಯ ಭೀಕರತೆ, ಸಮಯ ಮತ್ತು ಪ್ರಮಾಣವು ಲಸಿಕೆ ಹಾಕಿದ ಜನರ ಪ್ರಮಾಣವನ್ನು ಅವಲಂಬಿಸಿರುತ್ತದೆ. ಮೂರನೇ ಅಲೆಯಲ್ಲಿ ವೈರಸ್ ಇನ್ನಾವುದಾದರೂ ಹೊಸ ರೂಪಾಂತರಗಳು ಹೊರಹೊಮ್ಮುತ್ತವೆಯೇ ಎಂಬುದನ್ನು ನೋಡಿ ಅದರ ಪರಿಣಾಮವನ್ನು ನಿರ್ಧರಿಸಬೇಕಿದೆ. ಮುಖ್ಯವಾಗಿ ವಿವಾಹ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಹಬ್ಬಗಳಂತಹ ಹೆಚ್ಚುವರಿ ಸೂಪರ್‌ಸ್ಪ್ರೆಡರ್ ಘಟನೆಗಳನ್ನು ಭಾರತ ತಪ್ಪಿಸಿದರೆ ಮೂರನೇ ಅಲೆಯ ಪರಿಣಾಮಗಳನ್ನು ತಗ್ಗಿಸಬಹುದು.

ನನಗೆ ಚಿಂತೆ ಏನೆಂದರೆ, ಕೊರೋನಾ ವೈರಸ್ ಇನ್ನೂ ಎಷ್ಟು ಜನರಿಗೆ ಅಟ್ಯಾಕ್ ಮಾಡಬಹುದು ಎಂಬ ಗರಿಷ್ಠ ಪ್ರಕರಣಗಳನ್ನು ನಿಖರವಾಗಿ ಅಳೆಯಲು ಸಹ ನಮಗೆ ಇನ್ನೂ ಸಾಧ್ಯವಾಗದಿರುವುದು. ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ರಾಷ್ಟ್ರೀಯ ಸರಾಸರಿ ಪರೀಕ್ಷಾ ಪಾಸಿಟಿವ್ ಪ್ರಮಾಣವು 22 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಹಲವಾರು ರಾಜ್ಯಗಳು  ಆತಂಕಕಾರಿಯಾದ ಪಾಸಿಟಿವ್ ಸರಾಸರಿಯನ್ನು ಹೊಂದಿದೆ. ಉದಾಹರಣೆಗೆ ಗೋವಾ 46.3 ಶೇಕಡಾ ಮತ್ತು ಕುಂಭ ಮೇಳೋತ್ಸವವನ್ನು ಆಯೋಜಿಸಿದ್ದ ಉತ್ತರಾಖಂಡ್ 36.5 ಶೇಕಡಾ ಪಾಸಿಟಿವ್ ದರವನ್ನು ಹೊಂದಿದೆ.  “ಮೇ ಮಧ್ಯಭಾಗದಲ್ಲಿ ಭಾರತವು ಸುಮಾರು 500,000 ದೈನಂದಿನ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ” ಎಂದು ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೊ ಎಂ. ಜಾನ್ ಪ್ರತಿಪಾದಿಸಿದ್ದಾರೆ.

ಸಧ್ಯ ಲಸಿಕೆಗಳು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ.  ವೈರಸ್ ವೇಗ ಮತ್ತು ಹರಡುವಿಕೆಯನ್ನು ವ್ಯಾಕ್ಸಿನೇಷನ್ ನಿಂದ ಗಣನೀಯವಾಗಿ ಕಡಿಮೆ ಮಾಡಬಹುದು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಹಂತ ಹಂತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಉದ್ದೇಶಿಸಿತ್ತು. ಸುಮಾರು 300 ಮಿಲಿಯನ್ ಜನರಿಗೆ ಲಸಿಕೆ ಹಾಕುವ  ಯೋಜನೆಯೊಂದಿಗೆ ಭಾರತವು ಜನವರಿ ಮಧ್ಯದಲ್ಲಿ ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿತು.  ಎರಡು ಭಾರತೀಯ ಕಂಪನಿಗಳಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಈ ಯೋಜ‌ನೆಯನ್ನು ಕಾರ್ಯಗತಗೊಳಿಸಲು ಬಳಸಲಾಯಿತು. ಇಷ್ಟೆಲ್ಲಾ ಯೋಜನೆಯ ಬಳಿಕ ಮಾರ್ಚ್ ಮಧ್ಯದ ವೇಳೆಗೆ ಕೇವಲ 15 ಮಿಲಿಯನ್ ಡೋಸ್‌ಗಳನ್ನು ಮಾತ್ರ ವಿತರಿಸಲಾಯಿತು. ಇದು ಭಾರತದ ಜನಸಂಖ್ಯೆಯ ಕೇವಲ 1 ಪ್ರತಿಶತವನ್ನು ಒಳಗೊಂಡಿದೆ. ವಿಚಿತ್ರವೆಂದರೆ ನಾವು ವೈರಸ್ ಅನ್ನು ಎದುರಿಸುವಲ್ಲಿ ಸಫಲರಾಗಿದ್ದೇವೆ ಎಂದು ಭಾರತದ ನಾಯಕತ್ವ ಹೇಳುತ್ತಿದೆ. ಆಸ್ಟ್ರಾಜೆನೆಕಾ ಲಸಿಕೆಯು ಯೂರೋಪ್ ನಲ್ಲಿ ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಿತ್ತು ಎಂದು ವರದಿಗಳು ಹೇಳಿತ್ತು. ಆದರೆ ಇದೇ ಅಸ್ಟ್ರಾಜೆನೆಕ್ ಲಸಿಕೆಯು ಭಾರತದಲ್ಲಿ ಹೆಚ್ಚು ಬಳಸಲ್ಪಟ್ಟಿದೆ.

ಕೊರೋನಾ ಎರಡನೇ ಅಲೆ ಬಂದಾಗ ಕೇವಲ 33 ದಶಲಕ್ಷ ಜನರು ಅಂದರೆ ಸರಿಸುಮಾರು ಶೇಕಡಾ 2.4 ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. ಏಳು ಮಿಲಿಯನ್ ಜನರು ಎರಡೂ ಡೋಸ್ ಅನ್ನು ಈಗಾಗಲೇ ಪಡೆದಿದ್ದಾರೆ. ಮೇ 1 ರಂದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಲಾಗುವುದು ಎಂದು ಘೋಷಿಸಲಾಯಿತು. ಆದರೆ ಅನೇಕ ರಾಜ್ಯಗಳು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಲಸಿಕೆಯ ಕೊರತೆ ಇದೆ ಎಂದಿದೆ. ಆದ್ದರಿಂದಲೇ ಲಸಿಕಾ ಅಭಿಯಾನ ನಿಧಾನವಾಗಿದೆ. ಇದರಿಂದಾಗಿಯೇ  ಭಾರತದಲ್ಲಿ ಪ್ರಸ್ತುತ ಸೋಂಕು ಮತ್ತು ಸಾವಿನ ಅಲೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ.

ಕೋವಿಡ್ -19 ಲಸಿಕೆಗಳು ರೋಗ ಹರಡುವುದನ್ನು ತಡೆಯುತ್ತದೆ. ಆದರೆ ಅವು ಸೋಂಕನ್ನು ತಡೆಯುವುದಿಲ್ಲ.

ಕೊರೋನಾ ಸಂಬಂಧ ಜನರನ್ನು ಹೆಚ್ಚು ಹೆಚ್ಚು ಪರೀಕ್ಷೆಗೆ ಒಳಪಡಿಸುವುದು ಮತ್ತು ಪಾಸಿಟಿವ್ ಬಂದವರನ್ನು ಪ್ರತ್ಯೇಕಿಸುವ ಮೂಲಕ ಹರಡುವಿಕೆಯನ್ನು ಕಡಿಮೆ ಮಾಡಬಹುದು. ಇದು ತಕ್ಷಣದ ಅಗತ್ಯವಾಗಿರೋದ್ರಿಂದ ಭಾರತದ ಹಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್ ಘೋಷಿಸಿದೆ. ಆದರೆ ಈ ಲಾಕ್ ಡೌನ್  ಕೇವಲ Flatten the Curve ಯಂತೆ ಕೆಲಸ ಮಾಡುತ್ತದೆ. ಸರ್ಕಾರಗಳಿಗ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಈ ಲಾಕ್ ಡೌನ್ ಗಳು ಕಾಲಾವಕಾಶ ಒದಗಿಸುತ್ತದೆ. ಆರೋಗ್ಯ ಇಲಾಖೆಯ ಮೂಲ ಸೌಕರ್ಯವನ್ನು ಹೆಚ್ಚಿಸುವುದರಿಂದ ಜೀವಗಳನ್ನು ಉಳಿಸಬಹುದು.

ಭಾರತವು  ತಾತ್ಕಾಲಿಕ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ಮತ್ತು ಲಭ್ಯವಿರುವ ಆಸ್ಪತ್ರೆಯಲ್ಲಿ  ಹಾಸಿಗೆಗಳನ್ನು ಹೆಚ್ಚಿಸಬೇಕು.  ನಿವೃತ್ತ ವೈದ್ಯರು ಮತ್ತು ದಾದಿಯರನ್ನು ಕೊರೋನಾ ಚಿಕಿತ್ಸಾ ಸೇವೆಗಳಿಗೆ ಬಳಸಬೇಕು. ಹಲವು ಮುಖ್ಯ ಮೆಡಿಸಿನ್ ಗಳು ಮತ್ತು ಆಮ್ಲಜನಕ ಪೂರೈಕೆಗೆ ಸರ್ಕಾರ ಒತ್ತು ನೀಡಬೇಕು. ಹೀಗಾದಾಗ ಮಾತ್ರ ಕೋರೋನಾವನ್ನು ಭಾರತ ಎದುರಿಸಬಹುದು.

ಸಧ್ಯದ ಭಾರತದ ಪರಿಸ್ಥಿತಿಯಲ್ಲಿ ಲಸಿಕಾ ಅಭಿಯಾನದ ವೇಗವನ್ನು ಕಡಿಮೆ ಮಾಡಬಾರದು. ಪ್ರತಿದಿನ 7.5 ಮಿಲಿಯನ್‌ನಿಂದ 10 ಮಿಲಿಯನ್ ಡೋಸ್‌ಗಳನ್ನು ತಲುಪಿಸುವ ಗುರಿಯನ್ನು ಭಾರತ ಹೊಂದಿದೆ. ಇದಕ್ಕಾಗಿ ಲಸಿಕೆ ಸರಬರಾಜುಗಳನ್ನು ಹೆಚ್ಚಿಸುವುದು ಮತ್ತು ವಿತರಣಾ ಕೇಂದ್ರಗಳನ್ನು ದ್ವಿಗುಣಗೊಳಿಸುವ ಅಗತ್ಯವಿರುತ್ತದೆ. ಭಾರತೀಯರು ಇದೀಗ ಲಸಿಕೆಗಳನ್ನು ಪಡೆಯುವ ಸುಮಾರು 50,000 ಸ್ಥಳಗಳಿವೆ. ನಮಗೆ ಇನ್ನೂ ಹಲವು ಲಸಿಕಾ ಪಾಯಿಂಟ್ ಗಳು ಬೇಕು. ಈ ವಿತರಣಾ ಕೇಂದ್ರಗಳಲ್ಲಿ ಕೇವಲ 3 ಪ್ರತಿಶತ ಮಾತ್ರ ಖಾಸಗಿ ವಲಯದಲ್ಲಿರುವುದರಿಂದ, ಇಲ್ಲಿಯೇ ಲಸಿಕಾ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಸಾಮರ್ಥ್ಯ ಹೆಚ್ಚಿಸಬಹುದು.

ಭಾರತದ ಕೊರೋನಾ ನಿಯಂತ್ರಣದ ಎಲ್ಲಾ ಕ್ರಮಗಳಿಗೆ ನನ್ನ ಸಹ ವಿಜ್ಞಾನಿಗಳು ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ ಸಾಕ್ಷಿ ಆಧಾರಿತ ವೈಜ್ಞಾನಿಕ ನೀತಿ ನಿರೂಪನೆಗೆ ಮೊಂಡುತನದ ಪ್ರತಿರೋಧವನ್ನು ಭಾರತೀಯ ವಿಜ್ಞಾನಿಗಳು ಎದುರಿಸುತ್ತಿದ್ದಾರೆ. ಏಪ್ರಿಲ್ 30 ರಂದು 800 ಕ್ಕೂ ಹೆಚ್ಚು ಭಾರತೀಯ ವಿಜ್ಞಾನಿಗಳು ಕೊರೋನಾ ವೈರಸ್ ಅನ್ನು ಮತ್ತಷ್ಟು ಅಧ್ಯಯನ ಮಾಡಲು ಮತ್ತು ನಿಗ್ರಹಿಸಲು ಡಾಟಾಗಳನ್ನು ಒದಗಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿದರು.

ಆದರೆ ಭಾರತದಲ್ಲಿ ಈಗಿರುವ ಡಾಟಾ ಆಧಾರದಲ್ಲೇ ಕೊರೋನಾ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಅತ್ಯಂತ ಘಾತುಕ ನಿಲುವಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣವು ಈಗಾಗಲೇ ನಮ್ಮ ಹತೋಟಿ ತಪ್ಪಿರುವುದರಿಂದ ಕೇವಲ ಡಾಟಾ ಆಧಾರದಲ್ಲೇ ನಿರ್ಧಾರ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ಭಾರತದಲ್ಲಿ ಮನುಷ್ಯರನ್ನು ಕಳೆದುಕೊಳ್ಳುವ ಗಾಯವು ಶಾಶ್ವತವಾಗಿ ಉಳಿಯುತ್ತದೆ.

ಲೇಖಕರು – ಡಾ ಶಹೀದ್ ಜಮೀಲ್, ವೈರಲಾಜಿಸ್ಟ್

ಅನುವಾದ – ನವೀನ್ ಸೂರಿಂಜೆ

                     *****

ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಮತ್ತು ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಡಾ ಶಹೀದ್ ಜಮೀಲ್ ಹಿರಿಯ ವಿಜ್ಞಾನಿಗಳು. ಕೊರೋನಾ ವೈರಸ್ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರು ನ್ಯೂಯಾರ್ಕ್ ಟೈಮ್ಸ್ ಗೆ ಬರೆದ ಲೇಖನ ವೈದ್ಯಕೀಯ ಭಾಷೆಯನ್ನು ಹೊಂದಿದೆ. ಇದ್ದ ಹಾಗೆಯೇ ಅನುವಾದ ಮಾಡಲು ಕಷ್ಟವಾದ ಪದವನ್ನು ಅದರ ಅರ್ಥ ಬರುವಂತೆ ಅನುವಾದಿಸಲಾಗಿದೆ. ಒಟ್ಟಾರ್ಥಕ್ಕೆ ಭಂಗ ತರಲಾಗಿಲ್ಲ – ನವೀನ್ ಸೂರಿಂಜೆ

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...