ಕರೋನಾ ನಿರ್ವಹಣೆಯಲ್ಲಿ ಯೋಗಿ ಆದಿತ್ಯನಾಥ್‌ ವಿಫಲ: ಕೇಂದ್ರ ಸಚಿವ, ಬಿಜೆಪಿ ಸಂಸದರಿಂದಲೇ ಅಸಮಾಧಾನ

ಉತ್ತರ ಪ್ರದೇಶ ರಾಜ್ಯ ಸರ್ಕಾರ ಕೋವಿಡ್19‌ ನಿರ್ವಹಣೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಜನತೆ ಆರೋಗ್ಯ ಸೌಕರ್ಯಗಳ ಕೊರತೆಯಿಂದ ಪರಿತಪಿಸುತ್ತಿದ್ದಾರೆಂದು ಸ್ವತಃ ಬಿಜೆಪಿ ಸಂಸದರೇ, ಯೋಗಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಬರೇಲಿ ಕ್ಷೇತ್ರದಿಂದ ಎಂಟು ಬಾರಿ ಸಂಸದರಾಗಿರುವ, ಕೇಂದ್ರ ಸಚಿವ ಸಂತೋಷ್‌ ಗಂಗವಾರ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಿಗೆ ಪತ್ರ ಬರೆದಿದ್ದು, ತನ್ನ ಕ್ಷೇತ್ರದ ಜನತೆ ಕೋವಿಡ್‌ನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.

ಪತ್ರದಲ್ಲಿ ಜಿಲ್ಲೆಯ ಜೊತೆಗೆ ರಾಜ್ಯದ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಕೆಲವು ಕ್ರಮಗಳನ್ನು ಕೂಡಾ ಅವರು ಸೂಚಿಸಿದ್ದಾರೆ.

ಬರೇಲಿ ಜಿಲ್ಲೆಯ ರಾಜ್ಯ ವೈದ್ಯಕೀಯ ವಿಭಾಗದ ಹಿರಿಯ ಅಧಿಕಾರಿಗಳು ರೋಗಿಗಳು ಮತ್ತು ಪರಿಚಾರಕರ ದೂರವಾಣಿ ಕರೆಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಗಂಗವಾರ್‌ ಆರೋಪಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜನರು ತಮ್ಮ ಮನೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸುವ ವಿಷಯವನ್ನೂ ಉಲ್ಲೇಖಿಸಿದ ಅವರು, ಇದು ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ, ಹಾಗೂ ಅನಗತ್ಯವಾಗಿ ಆಮ್ಲಜನಕವನ್ನು ಸಂಗ್ರಹಿಸುವ ಮತ್ತು ಸಿಲಿಂಡರ್‌ಗಳನ್ನು ಕಾಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರನ್ನು ಗುರುತಿಸುವ ತುರ್ತು ಅವಶ್ಯಕತೆಯಿದೆ ಎಂದು ಸರ್ಕಾರಕ್ಕೆ ಸೂಚಿಸಿದ್ದಾರೆ.

ಆಸ್ಪತ್ರೆಗಳಿಗೆ ದಾಖಲಿಸಲು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗ ಓಡುತ್ತಿರಬೇಕಾದ ಪರಿಸ್ಥಿತಿ ಇದೆ. ಆಮ್ಲಜನಕ ಕೊರತೆಯನ್ನು ಪೂರೈಸಲು ಬರೇಲಿಯಲ್ಲಿ ತುರ್ತಾಗಿ ಒಂದು ಆಮ್ಲಜನಕ ಘಟಕ ಪೂರೈಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಕಾಳ ಮಾರುಕಟ್ಟೆಯಲ್ಲಿ ವೈದ್ಯಕೀಯ ಸಾಮಾಗ್ರಿಗಳು ಮಾರಾಟವಾಗುವುದನ್ನು ತಡೆಯಲು ಸರ್ಕಾರ ಅಗತ್ಯ ವೈದ್ಯಕೀಯ ಸಾಮಾಗ್ರಿಗಳ ಬೆಲೆಗಳನ್ನು ನಿಯಂತ್ರಿಸಬೇಕು ಹಾಗೂ ಖಾಸಗಿಯಾಗಿ ನೋಂದಣಿಯಾಗಿರುವ ಆಸ್ಪತ್ರೆಗಳಿಗೆ MSME ಅಡಿಯಲ್ಲಿ ಹಣಕಾಸು ನೆರವು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೇವಲ ಎರಡು ದಿನಗಳ ಹಿಂದೆ, ಕಾನ್ಪುರದ ಬಿಜೆಪಿಯ ಲೋಕಸಭಾ ಸದಸ್ಯ ಸತ್ಯದೇವ್ ಪಚೌರಿ ಉತ್ತರಪ್ರದೇಶ ಸಿಎಂಗೆ ಪತ್ರವೊಂದನ್ನು ಬರೆದಿದ್ದು, ಕೋವಿಡ್ -19 ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿಲ್ಲ. ಕೋವಿಡಡಡ ರೋಗಿಗಳಲ್ಲಿ ಅನೇಕರು ತಮ್ಮ ಮನೆಗಳ ಹೊರಗೆ, ಅಥವಾ ಆಸ್ಪತ್ರೆಗಳ ಹೊರಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಕಾನ್ಪುರದ ಆಂಬ್ಯುಲೆನ್ಸ್‌ಗಳಲ್ಲಿ ಸಾಕಷ್ಟು ಜೀವ ಉಳಿಸುವ ವ್ಯವಸ್ಥೆಯ ಅಗತ್ಯವಿದೆ ಎಂದು ಸೂಚಿಸಿದ್ದರು.

ಮಾರಣಾಂತಿಕ ವೈರಲ್ ಸೋಂಕಿನ ಮೂರನೇ ಅಲೆಯನ್ನು ಎದುರಿಸಲು ಯುಪಿ ಸರ್ಕಾರವು ಈಗ ಸಾಧ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪಚೌರಿ ಸಲಹೆ ನೀಡಿದ್ದರು.

ಇದಕ್ಕೂ ಮುನ್ನ ಲಖನೌ ಜಿಲ್ಲೆಯ ಮೋಹನ್‌ಲಾಲ್‌ಗಂಜ್‌ನ ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರು ಲಕ್ನೋ ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕ, ಜೀವ ಉಳಿಸುವ ಔಷಧಿಗಳು ಮತ್ತು ಇತರ ಅಗತ್ಯ ಆಸ್ಪತ್ರೆ ಉಪಕರಣಗಳ ಕೊರತೆಯ ಬಗ್ಗೆ ಸಿಎಂಗೆ ಪತ್ರ ಬರೆದಿದ್ದರು.

ಒಂದು ಕಡೆ, ತನ್ನದೇ ಪಕ್ಷದ ಸಂಸದರು ಪರೋಕ್ಷವಾಗಿ ತನ್ನ ಆಡಳಿತದ ವೈಫಲ್ಯ ಹಾಗೂ ಕರೋನಾ ನಿರ್ವಹಣೆಯಲ್ಲಿ ತನ್ನ ಅಸಮರ್ಪಕತೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರೂ, ಯೋಗಿ ಆದಿತ್ಯನಾಥ್‌ ತನ್ನ ಮೊಂಡುತನ ಪ್ರದರ್ಶಿಸುತ್ತಿದ್ದಾರೆ.

ಆರೋಗ್ಯ ಕ್ಷೇತ್ರದ ಅಸಮರ್ಪಕತೆಯಿಂದಾಗಿ, ವೈದ್ಯಕೀಯ ಸವಲತ್ತುಗಳ ಕೊರತೆಯಿಂದಾಗಿ ಸಹಸ್ರ ಸಂಖ್ಯೆಯಲ್ಲಿ ನಾಗರಿಕರು ಜೀವ ಕಳೆದುಕೊಳ್ಳುತ್ತಿರುವುದರ ನಡುವೆಯೇ ದನಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ಘೋಷಿಸಿಕೊಂಡಿರುವ ಉತ್ತರಪ್ರದೇಶ ಸರ್ಕಾರಕ್ಕೆ ತನ್ನ ನಾಗರಿಕರ ಜೀವದ ಮೌಲ್ಯ ಅರಿವಾಗದಿರುವುದು ವಿಪರ್ಯಾಸ, ಈ ವಿಷಮ ಪರಿಸ್ಥಿತಿಯಲ್ಲೂ ಭಾವನಾತ್ಮಕವಾಗಿ ʼದನದ ಹೆಸರಿನ ರಾಜಕಾರಣʼ ಮಾಡುತ್ತಿರುವುದು ಯೋಗಿ ಆದಿತ್ಯನಾಥರ ಆದ್ಯತೆಯನ್ನು ವಿವರಿಸುತ್ತದೆ. ಯೋಗಿ ಆಡಳಿತದ ಉತ್ತರ ಪ್ರದೇಶದಲ್ಲಿ ಮನುಷ್ಯರಾಗಿ ಹುಟ್ಟುವುದಕ್ಕಿಂತ ದನವಾಗಿ ಹುಟ್ಟುವುದೇ ಲೇಸು ಅನ್ನುವುದನ್ನು ಉತ್ತರಪ್ರದೇಶದಲ್ಲಿ ಪದೇ ಪದೇ ಸಾಬೀತುಪಡಿಸಲಾಗುತ್ತಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...