ಜನರ ದೃಷ್ಟಿಯಿಂದಲ್ಲ, ದೇಶದ ಜಿಡಿಪಿ ಬೆಳವಣಿಗೆಗಾದರೂ ಅಗತ್ಯವಿದೆ ವಿಶೇಷ ಪ್ಯಾಕೇಜ್!

ಕರೋನಾ ಮೊದಲ ಅಲೆ ಅಪ್ಪಳಿಸುವ ಮುನ್ನವೇ ದೇಶದ ಆರ್ಥಿಕತೆ ಪಾತಾಳಮುಖಿಯಾಗಿತ್ತು.‌ ಕರೋನಾ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು, ವಲಸಿಗರು ಸೇರಿದಂತೆ ಕೆಳ ಮಧ್ಯಮ ವರ್ಗದವರಿಗೆ ನೇರವಾಗಿ ನೆರವಾಗಲು ಹಾಗೂ ಲಾಕ್ಡೌನ್ ಹೊಡೆತಕ್ಕೆ ಸಿಲುಕಿದ್ದ ಕೆಲವು ಕ್ಷೇತ್ರಗಳಿಗೆ ಸಹಾಯ ಮಾಡಲೆಂದು ಬರೊಬ್ಬರಿ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜು ಘೋಷಿಸಲಾಯಿತು. ಅದು ಒಂದು ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜುಮ್ಲಾ ಹೇಳಿಕೆ ‘ಅಚ್ಛೇ ದಿನ್’ ರೀತಿಯಲ್ಲೇ ಚರ್ಚೆಯಾಗಿ ಹಾಗೇ ಜನಮಾನಸದಿಂದ ಮರೆಯಾಗಿತ್ತು. ಈಗ ಕರೋನಾ ಎರಡನೇ ಅಲೆಯ ವೇಳೆ ಕೇಂದ್ರ ಸರ್ಕಾರ ಮತ್ತೊಂದು ಪ್ಯಾಕೇಜ್ ಪ್ರಕಟಿಸುತ್ತದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಎರಡನೇ ಅಲೆ ಕರೋನಾ ವೇಳೆ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿಲ್ಲವಾದರೂ ದೇಶದ ಬಹುಪಾಲು ಆರ್ಥಿಕತೆಗೆ ಹೊಡೆತ ಬಿದ್ದಿದೆ. ತೀವ್ರವಾಗಿ ಪೆಟ್ಟು ತಿಂದಿರುವ ಕ್ಷೇತ್ರಗಳಿಗೆ ಪುನಶ್ಚೇತನ ನೀಡಲು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಡವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಕೇಂದ್ರ ಸರ್ಕಾರ ಹೊಸ ಪ್ಯಾಕೇಜ್ ಪ್ರಕಟಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ‘ಬ್ಲೂಮ್‌ ಬರ್ಗ್’ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ‘ಬ್ಲೂಮ್‌ ಬರ್ಗ್’ ಪ್ರಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ), ಪ್ರವಾಸೋದ್ಯಮ, ವಿಮಾನಯಾನ ಮತ್ತು ಹೊಟೇಲ್ ಉದ್ಯಮಗಳಿಗೆ ಪುನಶ್ಚೇತನ ನೀಡುವಂತಹ ಪ್ಯಾಕೇಜ್ ಪ್ರಕಟಿಸಲು ಕೇಂದ್ರ ಹಣಕಾಸು ಸಚಿವಾಲಯ ತಯಾರಿ ನಡೆಸುತ್ತಿದೆ.

ಕರೋನಾ ಎರಡನೇ ಅಲೆ ವೇಳೆ ಹೆಚ್ಚು ನಷ್ಟ ಅನುಭವಿಸಿರುವ ಕ್ಷೇತ್ರಗಳು ಮತ್ತೆ ಚೇತರಿಸಿಕೊಳ್ಳಲು ಅನುವಾಗುವಂತೆ ಪ್ಯಾಕೇಜ್ ನೀಡಬೇಕು ಎಂಬ ವಿಚಾರ ಇನ್ನೂ ಚರ್ಚೆಗಳ ಹಂತದಲ್ಲಿದೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ ಈಗಾಗಲೇ ಕರೋನಾ ಎರಡನೇ ಅಲೆ ಇಳಿಮುಖ ಆಗುತ್ತಿರುವುದಿಂದ ಕೇಂದ್ರ ಸರ್ಕಾರ ಯಾವಾಗ ‘ಹೊಸ ಪ್ಯಾಕೇಜ್’ ಪ್ರಕಟಿಸುತ್ತದೆ ಎಂಬ ಸಮಯ ಕೂಡ ನಿಗಧಿಯಾಗಿಲ್ಲ.

ಮೇ ತಿಂಗಳ ಆರಂಭದಲ್ಲಿ ಕೈಗಾರಿಕಾ ಚೇಂಬರ್ (PHDCCI) ಕೋವಿಡ್-19ರ ಎರಡನೇ ಅಲೆಯಿಂದ ಹಾನಿಗೊಳಗಾಗಿರುವ ಕ್ಷೇತ್ರಗಳ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು “ಗಣನೀಯವಾದ” ಪ್ರಚೋದಕ ಪ್ಯಾಕೇಜ್ ಒಂದನ್ನು ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿತ್ತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಪಡೆದಿರುವ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸುವುದು ಮತ್ತು ಸಾಲಗಳಿಗೆ ರಿಯಾಯಿತಿ ದರದಲ್ಲಿ ಬಡ್ಡಿದರಗಳನ್ನು ನೀಡುವಂತಹ ರಚನಾತ್ಮಕ ಬೆಂಬಲ ನೀಡಬೇಕು ಎಂಬುದು ಸೇರಿದಂತೆ 17 ಶಿಫಾರಸುಗಳನ್ನು ಒಳಗೊಂಡ ಮನವಿಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ಮಾಡಿತ್ತು.

ಕರೋನಾ ಹಾಗೂ ಲಾಕ್ಡೌನ್ ಗೆ ಹೆದರಿ ಕಾರ್ಮಿಕರು ಹಳ್ಳಿಗಳಿಗೆ ತೆರಳಿದ್ದಾರೆ. ಆ ಕಾರ್ಮಿಕರ ಹಿಮ್ಮುಖ ವಲಸೆಯೂ ಸೇರಿದಂತೆ‌ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರೀ ಸಂಕಷ್ಟಗಳಿಗೆ ಸಿಲುಕಿವೆ. ಎಲ್ಲಾ ರೀತಿಯ ಕೈಗಾರಿಕಾ ಮತ್ತು ವಾಣಿಜ್ಯ ವ್ಯವಹಾರಗಳು ಕುಸಿತವಾಗಿವೆ. ಅಲ್ಲದೆ ಕೋವಿಡ್-19 ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ಹರಡುತ್ತಿದೆ ಮತ್ತು ದೇಶದ ಪ್ರತಿಯೊಂದು ಕುಟುಂಬದ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಇಂಥ ಅತ್ಯಂತ ಕಷ್ಟದ ಸಮಯದಲ್ಲಿ ಆರ್ಥಿಕತೆ, ವ್ಯಾಪಾರ ಮತ್ತು ಉದ್ಯಮವನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಸಮಗ್ರವಾದ ಪ್ರೋತ್ಸಾಹಕ ಪ್ಯಾಕೇಜ್ ರೂಪಿಸಬೇಕೆಂದು ಕೈಗಾರಿಕಾ ಚೇಂಬರ್ ಕೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ 2021-22ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇಕಡಾ 10.5ರಷ್ಟಾಗಬಹುದು ಎಂದು ಅಂದಾಜು ಮಾಡಿತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಈ ವರ್ಷದ ಮಾರ್ಚ್‌ ವೇಳೆಗೆ ಭಾರತದ ಆರ್ಥಿಕತೆಯು ಶೇಕಡಾ 12.5ರಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿತ್ತು. ಕರೋನಾ ಎರಡನೇ ಅಲೆಯಿಂದಾಗಿ ಈಗ ಜುಲೈ ತಿಂಗಳ ವೇಳೆಗೆ ಇಂಥ ಬೆಳವಣಿಗೆ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಬೆಳವಣಿಗೆ ಆಗಬೇಕೆಂದರೆ ಕೇಂದ್ರ ಸರ್ಕಾರ ಪೂರಕವಾದ ಕ್ರಮಗಳನ್ನು ಕೈಗೊಳ್ಳಲೇಬೇಕು. ಪ್ಯಾಕೇಜ್ ಘೋಷಣೆ ಮಾಡಿ ಹಣದ ಹರಿವನ್ನು‌ ಹೆಚ್ಚಿಸದಿದ್ದರೆ ಆರ್ಥಿಕ ಚಟುವಟಿಕೆಗಳು ಗರಿಗೆದರುವುದಿಲ್ಲ. ಆರ್ಥಿಕ ಚಟುವಟಿಕೆಗಳು ಮೊದಲಿನ‌ ಲಯಕ್ಕೆ ಬಾರದಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆ ಇಟ್ಟುಕೊಂಡಿರುವಂತೆ ಜಿಡಿಪಿ ಬೆಳವಣಿಗೆ ಶೇಕಡಾ 10.5ರಷ್ಟು ಪ್ರಗತಿ ಸಾಧಿಸಲು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ನಿರೀಕ್ಷೆ ಮಾಡಿರುವಂತೆ ಶೇಕಡಾ 12.5ರಷ್ಟು ಬೆಳವಣಿಗೆಯಾಗಲು ಸಾಧ್ಯವೇ ಇಲ್ಲ. ಬಡವರ, ಉದ್ಯಮದ ದೃಷ್ಟಿಯಿಂದ ಅಲ್ಲವಾದರೂ ದೇಶದ ಜಿಡಿಪಿ ಬೆಳವಣಿಗೆ ಆಗುವುದಕ್ಕಾದರೂ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಒಂದನ್ನು ಘೋಷಿಸಬೇಕು. ಕೇಂದ್ರ ಸರ್ಕಾರದ ಆಲೋಚನೆ ಏನು ಎಂಬುದನ್ನು ಕಾದುನೋಡಬೇಕಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...