ಕೋವಿಡ್ ಸಾವುಗಳಿಗೆ ಯಾರು ಹೊಣೆ?

~ ಅರುಣ್ ಜೋಳದಕೂಡ್ಲುಗಿ


ಇಡೀ ದೇಶಕ್ಕೆ ಬೆಂಕಿ ಬಿದ್ದ ಹಾಗೆ ಸ್ಮಶಾನದಲ್ಲಿ ಉರಿಯುತ್ತಿರುವ ಶವಗಳ ಚಿತ್ರಣ ಎಂಥವರನ್ನೂ ಮೈನಡುಗಿಸುತ್ತಿದೆ. ಸಾಮಾನ್ಯ ಜನರು ಮೂಢನಂಬಿಕೆಯಂತೆ ಹಣೆಬರಹ ಎಂದು ಮೌನತಾಳಿದರೆ, ಪ್ರಜ್ಞಾವಂತರು ಆಳುವ ಪ್ರಭುತ್ವದ ವ್ಯವಸ್ಥಿತ ಕಗ್ಗೊಲೆಗಳು ಎನ್ನುತ್ತಿದ್ದಾರೆ. ಹಾಗಾಗಿಯೇ ತಾವು ಆರಿಸಿದ ಸರಕಾರವನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಂತಿಮವಾಗಿ ಈ ಸಾವುಗಳ ಹೊಣೆ ಯಾರದು ಎಂದು ಯೋಚಿಸಿದರೆ, ಕೇಂದ್ರ ಸರಕಾರದ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅಂಕೆ ಸಂಖ್ಯೆ ಮತ್ತು ಸಮೀಕ್ಷೆಯ ವರದಿಗಳು ಉತ್ತರಿಸುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ (WTO)ನಡೆಸಿದ 105 ದೇಶಗಳ ಸಮೀಕ್ಷೆಯಲ್ಲಿ ಶೇ 90 ರಷ್ಟು ಕೋವಿದ್ ಸಾಂಕ್ರಾಮಿಕ ತಡೆಯಲು ಕನಿಷ್ಠ ವೈದ್ಯಕೀಯ ಸೇವೆಗಳನ್ನು ಪೂರೈಸಲು ಸೋತಿವೆ ಎಂದು ಡಬ್ಲುಟಿಓ ಮುಖ್ಯಸ್ಥ ಟೆಡ್ರೋಸ್ ಅಧನೊಮ್ ಘೆಬ್ರೆಯೆಸಸ್ ಈಚೆಗೆ ಜಿನೆವಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಹೇಳುವಾಗ `ಒಂದು ವೈರಸ್ ಹೇಗೆ ವಿನಾಶಕಾರಿಯಾಗಬಲ್ಲದು ಎನ್ನುವುದಕ್ಕೆ ಭಾರತವೆ ಸಾಕ್ಷಿಯಾಗಿದೆ’ ಎಂದೂ ಸೇರಿಸಿದ್ದಾರೆ. ಕೊರೊನಾ ಮೊದಲ‌ ಅಲೆ ಅನಿರೀಕ್ಷಿತ, ಅದಕ್ಕೆ ಯಾವುದೇ ದೇಶಗಳು ಸಿದ್ದತೆ ಮಾಡಿಕೊಂಡಿರಲಿಲ್ಲ. ಆದರೆ ಕೊರೋನಾ ಎರಡನೆ ಅಲೆಯ ಹೊತ್ತಿಗೆ ಹಲವು ದೇಶಗಳು ಕೊರೋನ ಎದುರಿಸಲು ಬೇಕಾದ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿವೆ. ಹೀಗಿರುವಾಗ ಭಾರತವು ಕೋವಿದ್ ಸಾಂಕ್ರಾಮಿಕವನ್ನು ತಡೆಗಟ್ಟಲು ಏನೇನು ಸಿದ್ದತೆ ಮಾಡಿಕೊಂಡಿತ್ತು ಎಂದು ಪರಿಶೀಲಿಸಿದರೆ ದೊಡ್ಡ ಶೂನ್ಯವೊಂದು ಎದುರಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಆರೋಗ್ಯದ ಸ್ಥಿತಿ ಹೇಗಿದೆ ಎಂದು ಕೆಲ ಸಂಸ್ಥೆಗಳ ಸಮೀಕ್ಷೆಯ ಅಂಕೆಸಂಖ್ಯೆಗಳನ್ನು ನೋಡಿದರೆ ತಿಳಿಯುತ್ತದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಹದಿನೈದನೆಯ ಹಣಕಾಸು ಆಯೋಗಕ್ಕೆ 5.74 ಲಕ್ಷ ಕೋಟಿಯ ಬೇಡಿಕೆ ಸಲ್ಲಿಸಿತ್ತು. ಇದರಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿಯೇ 5.13 ಲಕ್ಷ ಕೋಟಿಯ ಅಗತ್ಯವಿದೆ ಎಂದು ವಿವರಿಸಿತ್ತು. ಆದರೆ ಹಣಕಾಸು ಆಯೋಗವು ಐದು ವರ್ಷದ ಅವಧಿಗೆ ಹಂಚಿಕೆ ಮಾಡಿದ ಮೊತ್ತ ಕೇವಲ 1.6 ಲಕ್ಷ ಕೋಟಿ. ಇದು ಜಿಡಿಪಿಯ ಕೇವಲ 0.1 ರಷ್ಟಿದೆ ಎನ್ನುವುದನ್ನು ಗಮನಿಸಬೇಕು.
ಆರ್ಗನೈಜೇಷನ್ ಫಾರ್ ಎಕನಾಮಿಕ್ ಕೋಅಪರೇಷನ್ ಅಂಡ್ ಡೆವಲಪ್ ಮೆಂಟ್ (ಓಇಸಿಡಿ) ಸಂಸ್ಥೆಯ ಪ್ರಕಾರ ಭಾರತ ತನ್ನ ಜಿಡಿಪಿಯ ಶೇ 3.6 ರಷ್ಟನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತಿದೆ. ಇದರಲ್ಲಿ ಶೇ 1 ರಷ್ಟನ್ನು ಖರ್ಚು ಮಾಡುತ್ತಿದೆ. ಈ ಪ್ರಮಾಣ ಯುಎಸ್ ನಲ್ಲಿ ಶೇ 16.9 ಮೀಸಲಿಟ್ಟು ಶೇ 8 ರಷ್ಟನ್ನು ಖರ್ಚು ಮಾಡುತ್ತಿದೆ. ಈ ಪ್ರಮಾಣ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ 11.2, ಜಪಾನ್ 10.9, ಸೌಥ್ ಆಫ್ರಿಕಾ 8.5, ಬ್ರಿಜಿಲ್ 9.2, ರಷ್ಯಾ 5.3, ಚೀನಾ 5 ರಷ್ಟಿದೆ.  ಆರೋಗ್ಯಕ್ಕಾಗಿ ಭಾರತದಲ್ಲಿ ಶೇ 70 ರಷ್ಟು ಜನರು ತಮ್ಮ ಸ್ವಂತ ಹಣದಲ್ಲಿ ಖರ್ಚು ಮಾಡುತ್ತಿದ್ದಾರೆ. ಈ ಪ್ರಮಾಣ ಜಗತ್ತಿನಲ್ಲಿಯೇ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಒಂದು ಸಾವಿರ ಜನಕ್ಕೆ ಒಬ್ಬ ವೈದ್ಯರನ್ನೂ, 300 ಜನಕ್ಕೆ ಒಬ್ಬ ದಾದಿಯನ್ನು ಹೊಂದಿರಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ ಭಾರತದಲ್ಲಿ 1511 ಜನರಿಗೆ ಒಬ್ಬ ವೈದ್ಯರಿದ್ದರೆ, 670 ಜನರಿಗೆ ಒಬ್ಬ ದಾದಿ ಇದ್ದಾಳೆ. ಇನ್ನು ಶ್ರೀಲಂಕಾ ಮತ್ತು ಯುಎಸ್ ನಲ್ಲಿ 1000 ಜನಕ್ಕೆ ಸಾರ್ವಜನಿಕ ಆಸ್ಪತ್ರೆಯ 3 ಬೆಡ್ ಗಳಿದ್ದರೆ, ಚೈನಾದಲ್ಲಿ ನಾಲ್ಕು ಬೆಡ್‍ಗಳಿವೆ, ಇದನ್ನು ಹೋಲಿಸಿದರೆ ಭಾರತದಲ್ಲಿ ಒಂದು ಸಾವಿರ ಜನಕ್ಕೆ 1.4 ರಷ್ಟು ಆಸ್ಪತ್ರೆಯ ಬೆಡ್‍ಗಳಿವೆ.
ದೇಶದೊಳಗಿನ ರಾಜ್ಯ ಸರಕಾರಗಳು ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಾಗಿ ಖರ್ಚು ಮಾಡುವ ವೆಚ್ಚವೂ ಕೂಡ ತುಂಬಾ ಕೆಳಮಟ್ಟದಲ್ಲಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವೂ ಇದೆ. ಸ್ಟ್ಯಾಟಿಸ್ಟಾ ವೆಬ್ ತಾಣದ ಸರ್ವೆಯಲ್ಲಿ 2018-19 ರ ಅಂಕಿ ಅಂಶಗಳ ಪ್ರಕಾರ ಒಬ್ಬ ವ್ಯಕ್ತಿಗೆ ಗೋವಾ ಗರಿಷ್ಠ 6,207 ರೂ ಖರ್ಚುಮಾಡಿದರೆ, ಕೇರಳವು 2,048 ರೂ, ಕರ್ನಾಟಕ 1606 ರೂ, ಬಿಹಾರದಲ್ಲಿ 617 ರೂ ಖರ್ಚು ಮಾಡುತ್ತದೆ. ಪರಿಣಾಮವಾಗಿ ಕೇರಳ, ಗೋವಾ, ಕರ್ನಾಟಕದಲ್ಲಿ 1000 ಜನರಿಗೆ ಮೂರರಿಂದ ನಾಲ್ಕು ಆಸ್ಪತ್ರೆಯ ಬೆಡ್‍ಗಳು ಸಿಕ್ಕರೆ, ಬಿಹಾರ್, ಜಾರ್ಖಂಡ್ ಮತ್ತು ಮಧ್ಯಪ್ರದೇಶಗಳಲ್ಲಿ ಒಂದು ಬೆಡ್ ಗಿಂತ ಕಡಿಮೆ ಸೌಲಭ್ಯಗಳಿವೆ.

ಗ್ಲೋಬಲ್ ಬರ್ಡನ್ ಆಫ್ ಡಿಸೀಜಸ್ ಸ್ಟಡಿ 2019 ರ ಪ್ರಕಾರ 1990-2019 ಅವಧಿಯಲ್ಲಿ ಜಾಗತಿಕವಾಗಿ ಸಾರ್ವತ್ರಿಕ ಆರೋಗ್ಯ ಸೇವೆಗಳ ಪರಿಣಾಮಕಾರಿ ಸೂಚ್ಯಾಂಕದಲ್ಲಿ ಭಾರತ 47 ನೇ ಸ್ಥಾನದಲ್ಲಿತ್ತು. ಭೂತಾನ್ 51, ಬಾಂಗ್ಲಾ 54, ಬ್ರಿಜಿಲ್ 65, ಚೀನಾ ಮತ್ತು ಇರಾನ್ 70, ಕ್ಯೂಬಾ 73, ಯುಎಸ್ 82, ಜರ್ಮನಿ 86, ಫ್ರಾನ್ಸ್ 91, ಜಪಾನ್ 96 ನಷ್ಟಿವೆ. ಇದು ಭಾರತಕ್ಕಿಂತ ಕಡಿಮೆ ಆರ್ಥಿಕತೆ ಇರುವ ದೇಶಗಳಲ್ಲಿಯೂ ಅಲ್ಲಿಯ ಆರೋಗ್ಯ ಸೇವೆಗಳ ಸೂಚ್ಯಾಂಕ ಭಾರತಕ್ಕಿಂತ ಉತ್ತಮವಾಗಿದೆ ಎನ್ನುವುದನ್ನು ಗಮನಿಸಬೇಕು. 
ಈ ಅಂಕೆಸಂಖ್ಯೆಗಳು ಭಾರತದಲ್ಲಿ ಎಷ್ಟು ಕಳಪೆಮಟ್ಟದ ಪ್ರಾಥಮಿಕ ಆರೋಗ್ಯದ ಸೌಲಭ್ಯಗಳಿವೆ ಎನ್ನುವುದಕ್ಕೆ ಕನ್ನಡಿಯಾಗಿವೆ. ಅಂತೆಯೇ ಕೋವಿಡ್ ಸಂದರ್ಭದ ಸಾವುಗಳಿಗೂ ಈ ಕನಿಷ್ಠ ಸೌಲಭ್ಯಗಳ ಕೊರತೆಗೂ ನೇರ ಸಂಬಂಧವಿರುವುದು ಗುಟ್ಟಾಗಿರುವ ಸಂಗತಿಯಲ್ಲ. ಹಾಗಾಗಿ ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾದ ಸಾವುಗಳಿಗೆ ಕೇಂದ್ರ ಸರಕಾರವೆ ನೇರ ಹೊಣೆ ಹೊರಬೇಕಾಗುತ್ತದೆ. ಇದನ್ನು ಜನರೂ ಅರ್ಥಮಾಡಿಕೊಳ್ಳಬೇಕಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...