ಲಾಲು ಪುತ್ರ ತೇಜಸ್ವಿಯ ರೋಚಕ ಕ್ರಿಕೆಟ್ ಪ್ರಯಾಣ
ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ಅಖಿಲೇಶ್ ಯಾದವ್ ಅದೃಷ್ಟ ನಿಜಕ್ಕೂ ಖುಲಾಯಿಸಿದೆ. ಕಳೆದ ಬಿಹಾರ ಸಾರ್ವ್ರತಿಕ ಚುನಾವಣೆಯಲ್ಲಿ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರದಿಂದ ವಂಚಿತರಾಗಿದ್ದ ತೇಜಸ್ವಿ ಯಾದವ್, ಈಗ ಡಿಸಿಎಂ ಆಗಿದ್ದಾರೆ. ಅಂದಹಾಗೇ, ಇವರು ತಮ್ಮ ಅದೃಷ್ಟ ಪರೀಕ್ಷೆಯನ್ನು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ನಡೆಸಿಲ್ಲ. ಬದಲಾಗಿ, ಕ್ರಿಕೆಟ್’ನಲ್ಲಿಯೂ ಮಿಂಚಲು ಕೆಲಕಾಲ ಪ್ರಯತ್ನಿಸಿದ ಇವರು ಅದೃಷ್ಟ ಕೈಹಿಡಿಯದೇ ಇದ್ದಾಗ ರಾಜಕೀಯಕ್ಕೆ ಮರಳಿದ್ದರು. ಇವರ ಕ್ರಿಕೆಟ್ ಜೀವನದ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ. ತೇಜಸ್ವಿ ಯಾದವ್ ಅವರ ಮೊದಲ ಆಯ್ಕೆ ರಾಜಕೀಯ ಆಗಿರಲೇ ಇಲ್ಲ. ಕ್ರಿಕೆಟ್’ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಮುಂದುವರೆಸಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ, ಕ್ರಿಕೆಟ್’ನಲ್ಲಿ ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗದೇ ಇದ್ದಾಗ ಅನಿವಾರ್ಯವಾಗಿ ರಾಜಕೀಯದೆಡೆಗೆ ಮುಖ ಮಾಡಬೇಕಾಯಿತು. 2008ರಲ್ಲಿ ತೇಜಸ್ವಿ ಯಾದವ್ ಐಪಿಎಲ್’ನಲ್ಲಿಯೂ ಕಾಣಿಸಿಕೊಂಡಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ನಾಲ್ಕು ವರ್ಷ ಗುರುತಿಸಿಕೊಂಡಿದ್ದರು. ಆದರೆ, 2008 ರಿಂದ 2012ರವರೆಗೆ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಅವರಿಗೆ ಒದಗಿ ಬಂದಿಲ್ಲ. ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಲು ಹತ್ತನೇ ತರಗತಿಯಲ್ಲಿಯೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ದೆಹಲಿಯ ಡೆಲ್ಲಿ ಪಬ್ಲಿಕ್ ಸ್ಕೂಲ್’ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಮಿಡಲ್ ಆರ್ಡರ್ ಬ್ಯಾಟ್ಸ್’ಮನ್ ಆಗಿ ಮಿಂಚಿದ್ದರು. ದೆಹಲಿಯ ಅಂಡರ್ -17 ಮತ್ತು ಅಂಡರ್-19 ತಂಡಗಳಲ್ಲಿಯೂ ಅವರು ಆಡಿದ್ದರು. ಇದೇ ಸಮಯದಲ್ಲಿ ಭಾರತೀಯ ಕ್ರಿಕೆಟ್’ನ ಮಿನುಗು ತಾರೆ ವಿರಾಟ್ ಕೊಹ್ಲಿಯೂ ಅವರ ತಂಡದಲ್ಲಿದ್ದರು. ತೇಜಸ್ವಿ ಅವರಿಗೆ 2009ರಲ್ಲಿ ಜಾರ್ಖಂಡ್ ಪರ ರಣಜಿಯಲ್ಲಿಯೂ ಅವಕಾಶ ದೊರೆಯಿತು. ವಿದರ್ಭಾ ಎದುರಿನ ಪಂದ್ಯದ ಪ್ಲೇಯಿಂಗ್ ಎಲೆವೆನ್’ನಲ್ಲಿ ಸ್ಥಾನ ಪಡೆದ ತೇಜಸ್ವಿ ತಮ್ಮ ರಣಜಿ ಪಾದಾರ್ಪಣಾ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಅಂಡರ್-19 ತಂಡದಲ್ಲಿ ಆಡುತ್ತಿರುವಾಗ, ವಿಶ್ವಕಪ್ ತಂಡಕ್ಕೂ ಆಯ್ಕೆಯಾಗುವುದರಿಂದ ಸ್ವಲ್ಪದರಲ್ಲಿ ವಂಚಿತರಾದರು. ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾದ ತೇಜಸ್ವಿ ಯಾದವ್, ಆಡುವ ಬಳಗದಲ್ಲಿ ಗುರುತಿಸಿಕೊಂಡಿಲ್ಲ. ಐಪಿಎಲ್’ನಲ್ಲಿ ನಾಲ್ಕು ವರ್ಷ ಬೆಂಚ್ ಬಿಸಿ ಮಾಡಿದ ಬಳಿಕ, ಕ್ರಿಕೆಟ್’ನಲ್ಲಿ ಆಸಕ್ತಿ ಕಳೆದುಕೊಂಡ ತೇಜಸ್ವಿ ಯಾದವ್ ನಂತರ ರಾಜಕೀಯದ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಅವರು, ಇಂದು ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
Read moreDetails


























