ಭಾರತದ ಪ್ರಮುಖ ಉಕ್ಕು ತಯಾರಕ ಕಂಪೆನಿಯಾಗಿರುವ ಟಾಟಾ ಸ್ಟೀಲ್ ಮೇ ತಿಂಗಳ ದ್ವಿತೀಯಾರ್ಧದಲ್ಲಿ ರಷ್ಯಾದಿಂದ ಸರಿ ಸುಮಾರು 75,000 ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ. ರಷ್ಯಾದೊಂದಿಗೆ ವ್ಯಾಪಾರವನ್ನು ನಿಲ್ಲಿಸುವುದಾಗಿ ಘೋಷಿಸಿಕೊಂಡ ಬಳಿಕ ಈ ಆಮದು ಪ್ರಕ್ರಿಯೆ ನಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸಿದ ರಷ್ಯಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವ ಸಲುವಾಗಿ, ಕಳೆದ ಎಪ್ರಿಲ್ನಲ್ಲಿ ʼಭಾರತ, ಯುನೈಟೆಡ್ ಕಿಂಗ್ಡಮ್ ಮತ್ತು ನೆದರ್ಲ್ಯಾಂಡ್ನಲ್ಲಿರುವ ತನ್ನ ಎಲ್ಲಾ ಉತ್ಪಾದನಾ ಘಟಕಗಳು ರಷ್ಯಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಕಚ್ಚಾ ವಸ್ತುಗಳ ಪರ್ಯಾಯ ಮೂಲಗಳ ಮೊರೆ ಹೋಗಿದೆʼ ಎಂದು ಟಾಟಾ ಸ್ಟೀಲ್ ತಿಳಿಸಿತ್ತು. ಈ ಘೋಷಣೆಯ ಕೆಲವೇ ವಾರಗಳಲ್ಲಿ ರಷ್ಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿ ಬಳಸಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
. “ರಷ್ಯಾದೊಂದಿಗೆ ವ್ಯಾಪಾರವನ್ನು ಸ್ಥಗಿತಗೊಳಿಸಲು ನೋಡುತ್ತಿದ್ದು, ಪ್ರಜ್ಞಾಪೂರ್ವಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಟಾಟಾ ಸ್ಟೀಲ್ಸ್ ತಿಳಿಸಿತ್ತು. ಅದಾಗ್ಯೂ, ಕಂಪನಿಯು ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವುದಾಗಿ ಘೋಷಿಸುವ ಮೊದಲು ರಷ್ಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಮಾಡಲಾಗಿತ್ತು ಎಂದು ಟಾಟಾ ಸ್ಟೀಲ್ ವಕ್ತಾರರು ತಿಳಿಸಿದ್ದಾರೆ.
ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿದ ಹೊರತಾಗಿಯೂ, ಕಳೆದ ಕೆಲವು ವಾರಗಳಲ್ಲಿ ಭಾರತೀಯ ಉಕ್ಕು ತಯಾರಕ ಕಂಪೆನಿಗಳಿಂದ ರಷ್ಯಾದ ಕಲ್ಲಿದ್ದಲು ಖರೀದಿಗಳು ಹೆಚ್ಚಾಗಿದೆ, ರಷ್ಯಾದ ಕಲ್ಲಿದ್ದಲು ವ್ಯಾಪಾರಿಗಳು 30% ವರೆಗೆ ರಿಯಾಯಿತಿಗಳನ್ನು ನೀಡುತ್ತಿರವುದೇ ಇದಕ್ಕೆ ಕಾರಣ ಎಂದು ಮಾಧಯಗಳು ವರದಿ ಮಾಡಿವೆ.
ಭಾರತೀಯ ಉಕ್ಕು ತಯಾರಕರಿಗೆ ಅಗ್ಗದ ಕಲ್ಲಿದ್ದಲಿನ ಪೂರೈಕೆಯು ಈಗ ಅನಿವಾರ್ಯವಾಗಿದ್ದು, ದೇಶೀಯ ಹಣದುಬ್ಬರವನ್ನು ನಿಗ್ರಹಿಸಲು ಕಳೆದ ತಿಂಗಳು ಭಾರತ ಸರ್ಕಾರವು ವಿಧಿಸಿದ ರಫ್ತು ಸುಂಕಗಳಿಂದ ವಿನಾಯಿತಿ ನೀಡಲಾಗುತ್ತಿರುವ ಹೊರೆಯನ್ನು ತಗ್ಗಿಸಲು ಉಕ್ಕು ತಯಾರಕ ಕಂಪೆನಿಗಳು ರಷ್ಯಾದ ಅಗ್ಗದ ಕಲ್ಲಿದ್ದಲನ್ನು ಬಳಸುತ್ತಿದೆ ಎಂದು ವರದಿಯಾಗಿದೆ.
“ಟಾಟಾ ಸ್ಟೀಲ್ ಪ್ರಕಟಣೆಯ ನಂತರ ರಷ್ಯಾದಿಂದ ಯಾವುದೇ ಪಿಸಿಐ ಕಲ್ಲಿದ್ದಲನ್ನು ಖರೀದಿಸಿಲ್ಲ” ಎಂದು ವಕ್ತಾರರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಮಿಲಿಟರಿ ದಾಳಿ ಮಾಡಿರುವ ರಷ್ಯಾದೊಂದಿಗೆ ರಾಜಕೀಯ ಸಂಬಂಧಗಳನ್ನು ಹೊಂದಿರುವ ಭಾರತ ರಷ್ಯಾವನ್ನು ಖಂಡಿಸುವುದರಿಂದ ಹಾಗೂ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವುದರಿಂದ ದೂರವುಳಿದಿತ್ತು. ಭಾರತವು ತನ್ನ ಪೂರೈಕೆಯನ್ನು ವೈವಿಧ್ಯಮಯಗೊಳಿಸಲು ರಷ್ಯಾದ ಸರಕುಗಳ ಖರೀದಿಯನ್ನು ಸಮರ್ಥಿಸಿಕೊಂಡಿತ್ತು, ಮಾತ್ರವಲ್ಲ, ಕಚ್ಛಾ ವಸ್ತುಗಳ ಹಠಾತ್ ಸ್ಥಗಿತವು ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಲಿದ್ದು, ಅದು ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿತ್ತು.
ಅದಾಗ್ಯೂ, ಟಾಟಾ ಸ್ಟೀಲ್ ಮಾತ್ರ ರಷ್ಯಾದೊಂದಿಗೆ ವ್ಯವಹಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಆದರೆ, ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆ ರಾಯಿಟರ್ಸ್ ಪರಿಶೀಲಿಸಿದ ವ್ಯಾಪಾರದ ದಾಖಲೆಯ ಪ್ರಕಾರ ಇತರೆ ಭಾರತೀಯ ಉಕ್ಕು ತಯಾರಕ ಕಂಪೆನಿಗಳು ಇತ್ತೀಚೆಗೆ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ.
ಮೇ ತಿಂಗಳಲ್ಲಿ, ಟಾಟಾ ಸ್ಟೀಲ್ ಸುಮಾರು 75,000 ಟನ್ಗಳಷ್ಟು ಕಲ್ಲಿದ್ದಲನ್ನು ಉಕ್ಕು ತಯಾರಿಕೆಗೆ ಬಳಸಿತ್ತು. ಅದನ್ನು ರಷ್ಯಾದ ವ್ಯಾನಿನೊ ಬಂದರಿನಿಂದ ತರಿಸಿದ್ದು, ಅದರಲ್ಲಿ 42,000 ಟನ್ಗಳು ಮೇ 18 ರಂದು ಪ್ಯಾರಾಡಿಶಿಯಾ ದ್ವೀಪದ ಬಂದರಿಗೆ ಮತ್ತು 32,500 ಟನ್ಗಳು ಹಲ್ಡಿಯಾ ಬಂದರಿಗೆ ತಲುಪಿದೆ ಎಂದು ವರದಿಯಾಗಿದೆ.