ಹಾರಾಡುವ ಶವ ಪೆಟ್ಟಿಗೆ ಎಂಬ ಕುಖ್ಯಾತಿಯನ್ನು ಹೊತ್ತಿರುವ ಮಿಗ್ – 21 ಫೈಟರ್ ಜೆಟ್ ಮೂರು ದಿನಗಳ ಹಿಂದಷ್ಟೆ ಇನ್ನಿಬ್ಬರು ವೀರ ಯೋಧರ ಜೀವವನ್ನು ಬಲಿ ಪಡೆದುಕೊಂಡಿದೆ. ಆತಂಕದ ವಿಚಾರವೆಂದರೆ ಕಳೆದ 20 ತಿಂಗಳುಗಳಲ್ಲಿ ಒಟ್ಟು ಆರು ಮಿಗ್-21 ಅವಘಡಗಳು ಸಂಭವಿಸಿದ್ದು ಈ ದುರ್ಘಟನೆಗಳಲ್ಲಿ ಐವರು ಪೈಲಟ್ ಯೋಧರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಕಳೆದ ವರ್ಷ ಅಂದರೆ 2021ರಲ್ಲಿ ಬರೋಬ್ಬರಿ ಐದು ಮಿಗ್ 21 ಫೈಟರ್ ಜೆಟ್ ಗಳು ಅಪಘಾತಕ್ಕೀಡಾಗಿವೆ ಮತ್ತು ಮೊನ್ನೆತಾನೆ ಜು.28ರ ಗುರುವಾರದಂದು ರಾಜಸ್ಥಾನದ ಬರ್ಮೇರ್ ನಲ್ಲಿ ತರಬೇತು ಸಂದರ್ಭದಲ್ಲಿ ಇನ್ನೊಂದು ಫೈಟರ್ ಜೆಟ್ ನೆಲಕ್ಕಪ್ಪಳಿಸುವುದರೊಂದಿಗೆ ಈ ವರ್ಷದ ಮೊದಲ ಮಿಗ್-21 ಫೈಟರ್ ಜೆಟ್ ದುರಂತ ಸಂಭವಿಸಿತು. ಈ ದುರಂತದಲ್ಲಿ ಈ ಫೈಟರ್ ಜೆಟ್ ನಲ್ಲಿದ್ದ ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಮಿಗ್-21 ಫೈಟರ್ ಜೆಟ್ ನ ಹಿನ್ನಲೆಯತ್ತ ಸ್ವಲ್ಪ ಕಣ್ಣಾಡಿಸೋದಾದ್ರೆ:
ಮಿಗ್-21 ಫೈಟರ್ ಜೆಟ್ ಅಪಘಾತಕ್ಕೀಡಾದುದು ಹೇಗೆ?
ಭಾರತೀಯ ವಾಯು ಸೇನೆ ಸ್ವತಃ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಮೊನ್ನೆ ನಡೆದಿರುವ ಮಿಗ್ 21 ಅಪಘಾತ ತರಬೇತು ಸಮಯದಲ್ಲಿ ನಡೆದಿದ್ದು ಇದು ತರಬೇತಿ
ಈ ಹಿಂದಿನ ಹಲವಾರು ಮಿಗ್ ವಿಮಾನ ದುರಂತಗಳಲ್ಲಿ ತಾಂತ್ರಿಕ ದೋಷಗಳು, ಪೈಲಟ್ ಗಳ ತಪ್ಪುಗಳು ಮತ್ತು ವಿಮಾನಕ್ಕೆ ಹಕ್ಕಿಗಳು ಅಪ್ಪಳಿಸಿರುವ ಕಾರಣದಿಂದಲೂ ಈ ಫೈಟರ್ ಜೆಟ್ ಗಳು ಅಪಘಾತಕ್ಕೀಡಾದ ಉದಾಹರಣೆಗಳಿವೆ. ಇನ್ನು ರಾತ್ರಿ ವೇಳೆಯ ಹಾರಾಟದಲ್ಲಿ ಅಸ್ಪಷ್ಟ ಗೋಚರತೆಯೂ ಬಹಳಷ್ಟು ಅಪಾಯವನ್ನು ತಂದೊಡ್ಡುತ್ತದೆ. ಆದರೆ ಈ ಎಲ್ಲಾ ಸಂಕಷ್ಟಗಳನ್ನು ದಾಟಿ ಯುದ್ಧ ವಿಮಾನಗಳನ್ನು ಯಶಸ್ವಿಯಾಗಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಈ ಯುದ್ಧ ವಿಮಾನಗಳ ಪೈಲಟ್ ಗಳು ತಮ್ಮ ತರಬೇತಿ ಸಂದರ್ಭದಲ್ಲಿ ಕಲಿಯುತ್ತಾರೆ.

ಇತ್ತೀಚಿನ ಕೆಲ ಮಿಗ್ 21 ದುರಂತಗಳು ಹೇಗಾದವು?
ಈ ಮೊದಲೇ ಹೇಳಿದಂತೆ ಕಳೆದ 20 ತಿಂಗಳುಗಳಲ್ಲಿ ಆರು ಮಿಗ್-21 ವಿಮಾನಗಳು ದುರಂತಕ್ಕೀಡಾಗಿವೆ. ಈ ದುರಂತದಲ್ಲಿ ಐದು ಮಂದಿ ಪೈಲಟ್ ಗಳು ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಮೊನ್ನೆ ನಡೆದ ಮಿಗ್ 21 ದುರಂತ ಗಂಬೀರ ಸ್ವರೂಪದ ತರಬೇತು ಯುದ್ಧ ವಿಮಾನದ ದುರಂತ ಎಂದು ಪರಿಗಣಿಸಲಾಗಿದೆ.
ವಾಯುಸೇನೆಯ ಬಳಿ ಎಷ್ಟು ಮಿಗ್ 21 ಯುದ್ಧ ವಿಮಾನಗಳಿವೆ?
ಭಾರತೀಯ ವಾಯುಸೇನೆಯಲ್ಲಿ ಸದ್ಯಕ್ಕೆ ಮಿಗ್-21 ಯುದ್ಧ ವಿಮಾನದ ನಾಲ್ಕು ಸ್ಕ್ಯಾರ್ಡ್ರನ್ ಗಳಿವೆ ಮತ್ತು ಪ್ರತೀ ಸ್ಕ್ವಾರ್ಡ್ರನ್ ನಲ್ಲಿ 16-18 ಮಿಗ್ 21 ವಿಮಾನಗಳಿವೆ, ಇವುಗಳಲ್ಲಿ 2 ತರಬೇತಿಗಾಗಿ ಮೀಸಲಾಗಿರುವ ವರ್ಷನ್ ಗಳೂ ಸೇರಿವೆ. ಈ ಸ್ಕ್ವಾರ್ಡ್ರನ್ ಗಳಲ್ಲಿ ಶ್ರೀನಗರದಲ್ಲಿರುವ ನಂ.51 ಸ್ಕ್ವಾರ್ಡ್ರನ್ ಈ ವರ್ಷದ ಸೆಪ್ಟಂಬರ್ 30ರಂದು ಸೇವಾ ನಿವೃತ್ತಿ ಅಥವಾ ‘ನಂಬರ್ ಪ್ಲೇಟೆಡ್’ಗೊಳ್ಳಲಿದೆ. ಆ ಬಳಿಕ ನಮ್ಮ ವಾಯು ಸೇನೆಯ ಬಳಿ ಮಿಗ್-21ನ ಮೂರು ಸ್ಕ್ಯಾರ್ಡ್ರನ್ ಗಳು ಮಾತ್ರ ಉಳಿದುಕೊಳ್ಳಲಿದೆ. ಈ ಮೂರರಲ್ಲಿ, ಪ್ರತಿ ವರ್ಷ ಒಂದು ಸ್ಕ್ವಾರ್ಡ್ರನ್ ನಂಬರ್ ಪ್ಲೇಟ್ ಪ್ರಕ್ರಿಯೆಗೆ ಅಂದರೆ ನಿವೃತ್ತಿ ಪ್ರಕ್ರಿಯೆಗೆ ಒಳಗಾಗಲಿದೆ. ಈ ಮೂಲಕ 2025ರ ವೇಳೆಗೆ ಭಾರತೀಯ ವಾಯುಸೇನೆಯಲ್ಲಿ ಮಿಗ್-21 ಯುದ್ಧ ವಿಮಾನಗಳ ಯುಗಾಂತ್ಯಗೊಳ್ಳಲಿದೆ!
ಈತನ್ಮಧ್ಯೆ ದೇಶೀಯವಾಗಿ ನಿರ್ಮಾಣಗೊಂಡಿರುವ ಲಘು ಯುದ್ಧ ವಿಮಾನವಾಗಿರುವ ತೇಜಸ್ ಅನ್ನು ಮರಳಿ ಸೇವೆಗೆ ಸೇರಿಸಿಕೊಂಡು ಆ ಮೂಲಕ ಈ ಸ್ಕ್ಯಾರ್ಡ್ರನ್ ನಲ್ಲಿ ಮಿಗ್-21 ಗೆ ಪರ್ಯಾಯವಾಗಿ ತೇಜಸ್ ಅನ್ನು ಸೇರಿಸಿಕೊಳ್ಳಲು ಐ.ಎ.ಎಫ್. ಯೋಚಿಸುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಉಳಿದ ಅತ್ಯಾಧುನಿಕ ಮಾದರಿಯ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಮಿಗ್-21 ಎಷ್ಟು ಹಳೆಯದಾಗಿದೆ?
ಈಗ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಗ್-21 ಲಘು ಯುದ್ಧ ವಿಮಾನಗಳು 1976ರ ಮಿಗ್ ಯುದ್ಧ ವಿಮಾನಗಳ ಸುಧಾರಿತ ಮಾದರಿಗಳಾಗಿವೆ. ಮಿಗ್-21 ಎಫ್.ಎಲ್. ಹಳೆಯ ಮಾದರಿಯ ಯುದ್ಧ ವಿಮಾನವಾಗಿದೆ ಮತ್ತಿದು 1960ರ ಪ್ರಾರಂಭದಲ್ಲಿ ಭಾರತೀಯ ವಾಯುಸೇನೆಯ ಸೇವೆಗೆ ಸೇರ್ಪಡೆಗೊಂಡಿತ್ತು. ಮತ್ತು ಇದನ್ನು 2013ರಲ್ಲಿ ಸೇವಾ ನಿವೃತ್ತಿಗೊಳಿಸಲಾಯಿತು.
ಭಾರತೀಯ ವಾಯುಸೇನೆಯು ಸುಧಾರಿತ ಮಾದರಿಯ ಮಿಗ್-21 ಬೈಸನ್ ಯುದ್ಧ ವಿಮಾನವನ್ನು 2001ರಲ್ಲಿ ಪಡೆದುಕೊಂಡಿತು ಮತ್ತು ಈ ಯುದ್ಧ ವಿಮಾನಗಳ ಕೊನೆಯ ಸುದಾರಿತ ಮಾದರಿ ಐ.ಎ.ಎಫ್.ಗೆ ಬಂದಿದ್ದು 2008ರಲ್ಲಿ. ಅಂದರೆ ಕಳೆದ 14 ವರ್ಷಗಳಿಂದೀಚೆಗೆ ಮಿಗ್-21 ಯುದ್ಧ ವಿಮಾನದ ಸುಧಾರಿತ ಮಾದರಿ ನಮ್ಮ ವಾಯುಸೇನೆಯ ಬಳಿ ಇಲ್ಲವೆಂದೇ ಹೇಳಬಹುದು!
ಇದೀಗ ಗ್ರೂಪ್ ಕ್ಯಾಪ್ಟನ್ ಆಗಿರುವ ಮತ್ತು ಅಂದು ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ತಮಾನ್ ಅವರು ಚಲಾಯಿಸುತ್ತಿದ್ದ ಮಿಗ್-21 ಯುದ್ಧ ವಿಮಾನವನ್ನು 2019ರ ಫೆಬ್ರವರಿ 27ರಂದು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದಾಗಿ ವರದಿಯಾಗಿತ್ತು ಮತ್ತು ಇದು ಎರಡೂ ದೇಶಗಳ ನಡುವೆ ಕೆಲ ದಿನಗಳ ಕಾಲ ‘ಟೆನ್ಷನ್’ಗೂ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಈ ಮಿಗ್-21 ಲಘು ಯುದ್ಧ ವಿಮಾನವನ್ನು ಐ.ಎ.ಎಫ್.ನ ಮಹಿಳಾ ಪೈಲಟ್ ಫ್ಲೈಯಿಂಗ್ ಆಫಿಸರ್ ಅವನಿ ಚತುರ್ವೇದಿ ಅವರು 2016ರಲ್ಲಿ ಚಲಾಯಿಸುವ ಮೂಲಕ ವಾಯುಸೇನೆಯ ಪ್ರಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು.

ಮಿಗ್-21 ಲಘು ಯುದ್ಧ ವಿಮಾನಕ್ಕೆ ‘ಹಾರಾಡುವ ಶವ ಪೆಟ್ಟಿಗೆ’ ಎಂಬ ಕುಖ್ಯಾತಿ ಬಂದದ್ದು ಹೇಗೆ?
ಐ.ಎ.ಎಫ್.ನ ಯುದ್ಧ ವಿಮಾನಗಳ ಸಾಲಿನಲ್ಲಿ ಪ್ರಧಾನವಾಗಿರುವ ಮತ್ತು ವಾಯುಪಡೆಯ ಬೆನ್ನೆಲೆಬು ಎಂದು ಕರೆಯಿಸಿಕೊಳ್ಳುವ ಈ ಮಿಗ್-21 ಲಘು ಯುದ್ಧ ವಿಮಾನ ಬಹಳಷ್ಟು ಬಾರಿ ಅಪಘಾತಕ್ಕೀಡಾಗಿರುವ ನಿದರ್ಶನಗಳಿವೆ. ಇವುಗಳಲ್ಲಿ ಹೆಚ್ಚಿನ ಮಾದರಿಗಳಿಗೆ ಭಾರತದಲ್ಲೇ ಉತ್ಪಾದನೆಗೊಳ್ಳುವ ಪರವಾನಿಗೆಯೂ ಸಹ ಇದೆ. ಈ ಯುದ್ದ ವಿಮಾನದ ಕಳಪೆ ಸುರಕ್ಷತಾ ಆರೋಪಗಳ ಕಾರಣದಿಂದ ಹಲವಾರು ವಿಚಾರಣೆಗಳೂ ಸಹ ನಡೆದಿದೆ. ಈಗಾಗಲೇ ಈ ಯುದ್ಧ ವಿಮಾನವು ನಮ್ಮ ವಾಯುಪಡೆಯ 170 ಪೈಲಟ್ ಗಳ ಸಾವಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ವಾಯುಪಡೆಯ ಮೂಲಗಳೇ ಈ ಹಿಂದೆ ಬಹಳಷ್ಟು ಸಲ ಹೊರಗೆಡಹಿದೆ. 2010ರಲ್ಲಿ 20ಕ್ಕೂ ಹೆಚ್ಚಿನ ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿವೆ. ಮತ್ತು 2003 ರಿಂದ 2013ರ ನಡುವೆ ಹತ್ತು ವರ್ಷಗಳಲ್ಲಿ 38 ಮಿಗ್ 21 ವಿಮಾನಗಳು ಪತನಗೊಂಡಿವೆ. ಈ ರೀತಿ ಮಿಗ್21 ಯುದ್ಧ ವಿಮಾನದ ಪತನದ ಸರಮಾಲೆ ಈ ವಿಮಾನಕ್ಕೆ ‘ಹಾರಾಡುವ ಶವ ಪೆಟ್ಟಿಗೆ’ ಎಂಬ ಕುಖ್ಯಾತಿಯನ್ನು ತಂದುಕೊಟ್ಟಿದೆ!
2001ರಲ್ಲಿ ಸೂರತ್ ಘರ್ ನಲ್ಲಿ ಮಿಗ್-21 ಯುದ್ಧ ವಿಮಾನವೊಂದು ಅಪಘಾತಕ್ಕೀಡಾಗುತ್ತದೆ ಮತ್ತು ಇದನ್ನು ಚಲಾಯಿಸುತ್ತಿದ್ದವರು ಫ್ಲೈಟ್ ಲೆಫ್ಟಿನೆಂಟ್ ಅಭಿಜಿತ್ ಗಾಡ್ಗಿಳ್. ಈ ಯುದ್ಧ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಅವಘಡಕ್ಕಡಾಗುತ್ತದೆ. ಗಾಡ್ಗಿಳ್ ಅವರ ತಾಯಿ ಕವಿತಾ ಗಾಡ್ಗಿಳ್ ಅವರು ಈ ಸಂದರ್ಭದಲ್ಲಿ ಮಾಡಿದ್ದ ಆರೋಪವೊಂದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಅವರು ಈ ಯುದ್ಧ ವಿಮಾನದಲ್ಲಿದ್ದ ತಾಂತ್ರಿಕ ದೋಷದ ಬಗ್ಗೆ ಗಮನಸೆಳೆದಿದ್ದರು ಮತ್ತು ತನ್ನ ಮಗನ ಮೇಲೆ ಈ ಅಪಘಾತದ ಹೊಣೆ ಹೊರಿಸಿದ್ದಕ್ಕೆ ಅವರು ಖೇದಗೊಂಡಿದ್ದರು. ಮತ್ತು ತನ್ನ ಹೇಳಿಕೆಗಳ ಮೂಲಕ ಐ.ಎ.ಎಫ್.ನ ನೈತಿಕತೆಯನ್ನು ಕುಗ್ಗಿಸಿದ್ದಾರೆಂಬ ಕಾರಣಕ್ಕೆ ಕವಿತಾ ಅವರಿಗೆ ಐ.ಎ.ಎಫ್.ನ ಆಗಿನ ಇನ್ ಸ್ಪೆಕ್ಟರ್ ಜನರಲ್ ಆಫ್ ಸೇಫ್ಟಿ ಆಗಿದ್ದ ಏರ್ ಮಾರ್ಷಲ್ ಅಶೋಕ್ ಗೋಯಲ್ ಅವರು ಪತ್ರವೊಂದನ್ನೂ ಸಹ ಬರೆದಿದ್ದರು. ಆದರೆ ಆ ಬಳಿಕ ಆಗ ಏರ್ ಚಿಫ್ ಆಗಿದ್ದ ಏರ್ ಚೀಫ್ ಮಾರ್ಷಲ್ ಎಸ್.ಪಿ.ತ್ಯಾಗಿ ಅವರು ಈ ಪತ್ರಕ್ಕಾಗಿ ಕವಿತಾ ಅವರ ಬಳಿ ಕ್ಷಮೆ ಯಾಚಿಸಿದ್ದರು ಮತ್ತು ಈ ಪತ್ರವನ್ನು ಹಿಂಪಡೆದುಕೊಳ್ಳುವುದಾಗಿ ಕವಿತಾ ಅವರಿಗೆ ಮರು ಪತ್ರ ಬರೆದಿದ್ದರು.
ಮಿಗ್-21 ಯುದ್ಧ ವಿಮಾನದಲ್ಲಿ ಇನ್ನಷ್ಟು ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಕವಿತಾ ಅವರು ನಡೆಸಿದ್ದ ಹೋರಾಟದ ಕಥೆಯನ್ನು 2006ರಲ್ಲಿ ಬಿಡುಗಡೆಯಾದ ‘ರಂಗ್ ದೇ ಬಸಂತಿ’ ಎಂಬ ಹಿಂದಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು.






