
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ, ನಾನೇ ಅಧ್ಯಕ್ಷನಾಗಿರುತ್ತೇನೆಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷ ಆಗಿ ಇದ್ದೇನೆ. ರಾಜ್ಯಾಧ್ಯಕ್ಷ ಬದಲಾವಣೆ ಬೇಡ ಅಂತ ಒಂದು ವಿಂಗ್ ಇದೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ನಾವು ಅದರ ಬಗ್ಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು.

ಬಿಜೆಪಿ -ಜೆಡಿಎಸ್ ಸಮನ್ವಯ ಸಮಿತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಆರ್‌ಎಸ್‌ಎಸ್ ಬಗ್ಗೆ ತಾವು ಈ ಹಿಂದೆ ಆಡಿದ್ದ ಮಾತಿನ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಿಗೆ ಪ್ರತಿಕ್ರಿಯಿಸಿ, , ಆರ್‌ಎಸ್‌ಎಸ್ ಬಗ್ಗೆ ನಾನು ಹಿಂದೆ ಟೀಕೆ ಮಾಡಿದ್ದೇನೆ. ಇಲ್ಲ ಎಂದು ಎಲ್ಲೂ ಹೇಳಿಲ್ಲ. ಆ ಬಗ್ಗೆ ಚರ್ಚಿಸುವ ಬದಲು, ಕಲಬುರಗಿ ಜಿಲ್ಲೆಯಲ್ಲಿ ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಯನ್ನು ಆಲಿಸಿ. ಮೊದಲು ಅವರಿಗೆ ಪರಿಹಾರ ನೀಡಿ ಎಂದರು.

ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣವಾಗಿದೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದವರು ಕಾಂಗ್ರೆಸ್‌ನವರು. ಅದಕ್ಕೂ ಮುನ್ನ ನಾವು ಬಿಜೆಪಿಯೊಂದಿಗೆ ಸೇರಿ ಅಧಿಕಾರ ಮಾಡಿದ್ದೆವು ಎನ್ನುವುದು ಅವರಿಗೆ ಗೊತ್ತಿರಲಿಲ್ಲವೇ. ಕಾಂಗ್ರೆಸ್‌ನವರು ಅಧಿಕಾರ ಹಿಡಿಯಲು ಬೇಕಾದಾಗ ನಮ್ಮ ಹತ್ತಿರ ಬರುತ್ತಾರೆ ಎಂದು ತಿರುಗೇಟು ನೀಡಿದರು.












