ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭವಾಗಿದೆ ಬೆಡ್ಗಳ ಕೊರತೆ

ರಾಜ್ಯದ ತೀರಾ ಹಿಂದುಳಿದಿರುವ ಜಿಲ್ಲೆಗಳ ಪೈಕಿ ಒಂದಾಗಿರುವ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ 24 ಜನ ಸೋಂಕಿತರು  ಆಕ್ಸಿಜನ್ ದೊರಕದೇ ಮೃತರಾಗಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ  ಸುದ್ದಿ ಆಗಿತ್ತು. ಈ ಕುರಿತು ರಾಜ್ಯ ಹೈ ಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ ಮೇರೆಗೆ  ಕೋರ್ಟ್ ನ್ಯಾಯಾಂಗ  ತನಿಖೆಗೆ ಆದೇಶಿಸಿದೆ. ಹಿಂದುಳಿದ ಈ ಜಿಲ್ಲೆಯಲ್ಲಿ  ಸಣ್ಣ ರೈತರು ಮತ್ತು ಕಾರ್ಮಿಕ ವರ್ಗದವರ ಪಾಲೇ ಶೇಕಡಾ 80 ರಷ್ಟಿದೆ. ಈ ವರ್ಗದವರಿಗೆ  ವೈದ್ಯಕೀಯ ನೆರವಿಗೆ ಇರುವ ಏಕೈಕ ಆಸರೆಯೇ   ಜಿಲ್ಲಾಸ್ಪತ್ರೆ.  ಆದರೆ ಇಲ್ಲಿನ ಜನಸಂಖ್ಯೆ 10.2 ಲಕ್ಷ ಆಗಿದ್ದು  ಇಂತಹ ಸಂದರ್ಭಗಳಲ್ಲಿ  ತುರ್ತು ಚಿಕಿತ್ಸೆಗೆ ಅವಶ್ಯಕತೆಯಾಗಿರುವ  ಬೆಡ್ ಗಳ ಕೊರತೆಯೇ ಎದುರಾಗಿದೆ. ಕಳೆದ ವರ್ಷದ ಸಾಂಕ್ರಮಿಕ ಸಮಯದಲ್ಲಿ ಹಸಿರು ಪಟ್ಟಿಯಲ್ಲಿದ್ದ ಈ ಜಿಲ್ಲೆಯಲ್ಲಿ ಈಗ ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದೆ. ಈಗ ತುರ್ತಾಗಿ ಬೇಕಾಗಿರುವುದು ಹಾಸಿಗೆಗಳು. ಆದರೆ ಅದಕ್ಕೆ ತೀವ್ರ ಅಭಾವ ಎದುರಾಗಿದೆ.

   ಜಿಲ್ಲಾ ಕೋವಿಡ್ ಆಸ್ಪತ್ರೆಯ 50 ಐಸಿಯು, 75 ಆಕ್ಸಿಜನೇಟೆಡ್, 43 ಸಾಮಾನ್ಯ ಹಾಸಿಗೆಗಳು ಸೇರಿದಂತೆ ಇರುವ 168 ಹಾಸಿಗೆಗಳು ಭರ್ತಿಯಾಗಿವೆ. ಇದರಿಂದ ತೀವ್ರ ತರದ ರೋಗ ಲಕ್ಷಣವುಳ್ಳ ಆಕ್ಸಿಜನ್ ಅಗತ್ಯ ಇರುವ ಅಥವಾ ರೋಗಲಕ್ಷಣಗಳಿಲ್ಲದ ಹೊಸ ಸೋಂಕಿತರಿಗೆ ಬೆಡ್ ದೊರೆಯುವುದು ಅನುಮಾನವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರು ಜಿಲ್ಲಾಡಳಿತ ಸೋಂಕಿತರನ್ನು ಕೋವಿಡ್ ಕೇರ್ಸೆಂಟರ್ಗಳಿಗೆ ದಾಖಲಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕರ್ನಾಟಕ ಮುಕ್ತ ವಿವಿ ಅಧ್ಯಯನ ಕೇಂದ್ರ ಹಾಗೂ ಮಾದಾಪುರದ ಬಳಿ ಇರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಾಸ್ಟೆಲ್ನಲ್ಲಿ 85 ಬೆಡ್ ಗಳ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಇಲ್ಲಿಗೆ ಸೋಂಕಿತರನ್ನು ದಾಖಲಿಸುವ ಪ್ರಯತ್ನ ಮಾಡಿಲ್ಲ. ಈ ಕೇಂದ್ರಗಳಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಸೋಂಕಿತರಿದ್ದಾರೆ. ಉಳಿದಂತೆ ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರಿನಲ್ಲಿರುವ ಕೇರ್ ಸೆಂಟರ್ಗಳಿಗೆ ಯಾವ ಸೋಂಕಿತರನ್ನು ದಾಖಲು ಮಾಡಿಲ್ಲ. ಪ್ರತಿದಿನ ಪತ್ತೆಯಾಗುವ ಹೊಸ ಸೋಂಕಿತರನ್ನು ಈ ಕೇರ್ ಸೆಂಟರ್ಗಳಿಗೆ ದಾಖಲಿಸದೇ ಹೋಂ ಐಸೋಲೇಷನ್ಗೆ ಕಳುಹಿಸಲಾಗುತ್ತಿದೆ.

ಹೋಂ ಐಸೋಲೇಷನ್ನಲ್ಲಿರುವವರ ಮೇಲೆ ಆರೋಗ್ಯ ಇಲಾಖೆ ನೇರ ನಿಗಾ ವಹಿಸದ ಕಾರಣ ಇವರಲ್ಲಿ ಬಹುತೇಕ ಮಂದಿ ಎಲ್ಲೆಂದರಲ್ಲಿ ಸುತ್ತಾಡುತ್ತಾ ಕರೋನಾ ಸ್ಫೋಟಕ್ಕೆ ಕಾರಣವಾಗುತ್ತಿದ್ದಾರೆ.

ಇದಲ್ಲದೆ ಹೋಂ ಐಸೋಲೇಷನ್ನಿಂದಾಗಿ ಮನೆಮಂದಿಗೆಲ್ಲ ಕರೋನಾ ಹಬ್ಬುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತಿದಿನ 400ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಹಾಲಿ 3500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 457 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿ ಮಾತ್ರ ಕೇರ್ ಸೆಂಟರ್ಗಳಲ್ಲಿ ಇದ್ದಾರೆ. ಉಳಿದವರು ಅಂದರೆ ಶೇಕಡಾ 85 ರಷ್ಟು ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ ಐಸಿಯು ಸೇರಿದಂತೆ 200 ಬೆಡ್ ಗಳ ಕೇರ್ ಸೆಂಟರ್ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಆದರೆ ಅದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ.

ಸದ್ಯ ಹೊಸ ಪ್ರಕರಣ ವರದಿಯಾದ ತಕ್ಷಣ ಅವರನ್ನು ಕಡ್ಡಾಯವಾಗಿ ಆಸ್ಪತ್ರೆ ಇಲ್ಲವೆ ಕೇರ್ ಸೆಂಟರ್ ಗಳಿಗೆ ದಾಖಲಿಸಿ 14 ದಿನಗಳ ಕಾಲ ಐಸೋಲೇಷನ್ ನಲ್ಲಿಟ್ಟರೆ ಮಾತ್ರ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಕೇವಲ ಹೋಂ ಐಸೋಲೇಷನ್ ಗೆ ಕಳುಹಿಸುತ್ತಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಬುಧವಾರ ಹೈ ಕೋರ್ಟಿನ ಆದೇಶದ ಮೇರೆಗೆ   ಆಕ್ಸಿಜನ್ ಕೊರತೆಯಿಂದ 24 ಮಂದಿ ಕರೋನಾ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸೀಜ್ ಮಾಡಲು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು   ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.  ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಡಿಎಚ್ಓ ಕಚೇರಿ, ಸರ್ಕಾರಿ ವೈದ್ಯಕೀಯ ಕಾಲೇಜು, ಡೀನ್ ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಿದ್ದು, ಘಟನೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ವಿಡಿಯೋ ಚಿತ್ರೀಕರಣವೂ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ಮೃತಪಟ್ಟಿರುವ ವಿಷಯವನ್ನು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಆಮ್ಲಜನಕ ಕೊರತೆಯಿಂದಲೇ ಕೋವಿಡ್ ರೋಗಿಗಳು ಬಲಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

   ಚಾಮರಾಜನಗರದಲ್ಲಿ  10 ದಿನಗಳ ಹಿಂದಷ್ಟೆ 6000 ಕೆಜಿ  ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿದ್ದರೂ ಆಕ್ಸಿಜನ್ ಪರದಾಟ ಮಾತ್ರ ತಪ್ಪಿಲ್ಲ. ಆದರೆ, ಮೃತರಲ್ಲಿ ಮೂವರು ಮಾತ್ರ  ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ  ಎಂದು ಆರೋಗ್ಯ ಸಚಿವ ಸುಧಾಕರ್ ಹೇಳುತ್ತಿದ್ದಾರೆ.

 ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾಗ  ಜಿಲ್ಲಾಧಿಕಾರಿಗಳೇ ಸ್ವತಃ ಅಕ್ಸಿಜನ್ ಕೊರತೆಯಿಂದ 24 ಸಾವು ಸಂಭವಿಸಿರುವುದನ್ನು  ಒಪ್ಪಿಕೊಂಡಿದ್ದರು ಎನ್ನಲಾಗಿದೆ.  ಇದೀಗ ಸಚಿವ ಸುಧಾಕರ್ ಅವರ ಕಾರ್ಯ ಕ್ಷಮತೆಯೇ ಸರ್ಕಾರದಲ್ಲಿ ಪ್ರಶ್ನಾರ್ಥವಾಗಿದೆ. ಏಕೆಂದರೆ ಚಾಮರಾಜನಗರದ ಬೆನ್ನಿಗೆ ಕಲಬುರ್ಗಿಯ ಅಫಜಲಪುರ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಕೊರತೆಯಿಂದಾಗಿ ನಾಲ್ಕು ಜನ ಸಾವನ್ನಪ್ಪಿದ್ದ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆಡವಿದ್ದರು. ಇದರಿಂದ   ಕೋವಿಡ್ ವಾರ್ ರೂಂ ಜವಾಬ್ದಾರಿ ಹೊತ್ತಿದ್ದ ಸಚಿವ ಸುಧಾಕರ್ ಮುಖಭಂಗ ಅನುಭವಿಸುವಂತಾಗಿತ್ತು. ಸಂಬಂದಪಟ್ಟವರು ಇನ್ನಾದರೂ ಎಚ್ಚತ್ತುಕೊಂಡು ಚಾಮರಾಜನಗರ ಜಿಲ್ಲೆ ಸೇರಿದಂತೆ ಬೆಡ್‌ ಕೊರತೆಯಿರುವ ಆಸ್ಪತ್ರೆಗಳಿಗೆ ಹೆಚ್ಚಿನ ಬೆಡ್ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ. 

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...