ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿ ಮತ್ತು ಜನರೇ ಹೊಣೆ ಎಂದ ಸಚಿವ ಸುರೇಶ್ ಕುಮಾರ್

[Sassy_Social_Share]

ದೇಶದಲ್ಲಿ ರೋಗಿಗಳ ಬಳಕೆಗೆ ಬೇಕಾದ ಆಕ್ಸಿಜನ್ ಕೊರತೆಯು ತೀವ್ರವಾಗಿದ್ದರೂ  ಕೇಂದ್ರ ಸರ್ಕಾರ ಮಾತ್ರ ಅವಶ್ಯಕತೆ ಇರುವಷ್ಟು  ಆಕ್ಸಿಜನ್ ಲಭ್ಯವಿದೆ ಎಂದು ಹೇಳಿಕೊಳ್ಳುತ್ತಿದೆ. ಜತೆಗೆ ಆಕ್ಸಿಜನನ್ನು ವಿದೇಶಗಳಿಂದಲೂ ತರಿಸಿಕೊಳ್ಳುತಿದ್ದು ಖಾಸಗೀ ಕಂಪೆನಿಗಳೂ ದೇಶದಲ್ಲಿ ಆಕ್ಸಿಜನ್ ಉತ್ಪಾದನೆಯನ್ನು ದುಪ್ಪಟ್ಟು ಮಾಡಿದ್ದು ಸರ್ಕಾರದ ಜತೆ  ಕೈ ಜೋಡಿಸುತ್ತಿವೆ. ಆದರೆ ಪತ್ರಿಕೆಗಳಲ್ಲಿ ಮಾತ್ರ ನಿತ್ಯವೂ ಆಕ್ಸಿಜನ್ ಸಿಗದೇ  ರೋಗಿಗಳು ಸಾವನ್ನಪ್ಪುತ್ತಿರುವ  ಘಟನೆಗಳು ವರದಿ ಆಗುತ್ತಲೆ ಇವೆ. ಕಳೆದ ವಾರ‌ ಕೆಲವು ಸ್ಥಗಳಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಿಲ್ಲದೆ ರೋಗಿಗಳೂ ಸಾಮೂಹಿಕವಾಗಿ ಮೃತರಾಗಿದ್ದರೆ.  ಈಗ ವೈಯಕ್ತಿಕವಾಗಿ ಆಕ್ಸಿಜನ್ ಸಿಲಿಂಡರ್ ಸಿಗದೇ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗಾ ನಮ್ಮದೇ ರಾಜ್ಯದ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ  ಇಂದು ಬೆಳಗಿನ ಜಾವ ಒಟ್ಟು 23 ರೋಗಿಗಳು ಮೃತಪಟ್ಟಿರುವ ಅಘಾತಕಾರಿ ಘಟನೆ ವರದಿ ಆಗಿದೆ.

  ಭಾನುವಾರ ಮದ್ಯರಾತ್ರಿ ಅಮ್ಲಜನಕ ಸಿಲಿಂಡರ ಖಾಲಿಯಾಯಿತು. ರಾತ್ರಿ 9 ಗಂಟೆಗೆ ಮೈಸೂರಿನಿಂದ ಸಿಲಿಂಡರ್ಗಳು ಬರಬೇಕಿತ್ತು. ಆದರೆ ಮೈಸೂರಿಂದ  ಆಕ್ಷಿಜನ್ ಬರಲೇ ಇಲ್ಲ.  ಆದ್ದರಿಂದ ವೆಂಟಿಲೇಟರ್ ಚಿಕಿತ್ಸೆ ಪಡೆಯುತಿದ್ದ 12 ಕೋವಿಡ್ ಸೋಂಕಿತರು  ಮೃತಪಟ್ಟಿದ್ದಾರೆ ಎಂದು  ತಿಳಿದು ಬಂದಿದೆ.  ನಂತರ ಬೆಳಿಗ್ಗೆ ಇತರ 11 ರೋಗಿಗಳು ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಚಾಮರಾಜನಗರ ಆಸ್ಪತ್ರೆಯಲ್ಲಿ ಕಳೆದ ವಾರವಷ್ಟೆ  6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗಿದ್ದು  ಇದು ಒಮ್ಮೆ ಭರ್ತಿ ಮಾಡಿದರೆ  36 ಘಂಟೆಗಳಷ್ಟು ಮಾತ್ರ  ಬಳಸಬಹುದಾಗಿದೆ. ಈ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್ಗಳಿವೆ, 53 ಐಸಿಯು ಹಾಗೂ 55 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಬಹುತೇಕ ಎಲ್ಲವೂ ಭರ್ತಿಯಾಗಿವೆ.

ಆಕ್ಸಿಜನ್ ಕೊರತೆ ಬಗ್ಗೆ ಮತ್ತು ಕರೋನಾ ಸೋಂಕಿತರು ಮೃತಪಟ್ಟಿರುವ ಬಗ್ಗೆ ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಮೈಸೂರಿನಿಂದ ಆಕ್ಸಿಜನ್ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ. ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ ಭಾನುವಾರ ರಾತ್ರಿ 12.30ರ ವೇಳೆಯಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತ ವಾಗಿ 250 ಆಕ್ಸಿಜನ್ ಸಿಲಿಂಡರ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ  ಎಂದು ಜಿಲ್ಲಾಡಳಿತ ಹೇಳಿದೆ.

ಇಂದು ಸೋಂಕಿತರು ಮೃತರಾಗಿರುವ ಕುರಿತು  ಮುಖ್ಯ ಮಂತ್ರಿ  ಬಿಎಸ್ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿ  ಎಂ ಆರ್ ರವಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.  ಜಿಲ್ಲಾಧಿಕಾರಿಗೆ ಕರೆ ಮಾಡಿದ ಅವರು  ದುರಂತ ಹಾಗೂ ಅದಕ್ಕೆ ಕಾರಣ ಕುರಿತಾಗಿ ವಿವರಗಳನ್ನು ಪಡೆದುಕೊಂಡಿದ್ದಾರೆ.

ಆದರೆ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ನಡೆದ ಸಾವು ನೋವಿಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜನರು ಕಾರಣ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್  ಆರೋಪಿಸಿದ್ದಾರೆ. ಘಟನೆಯ ಕುರಿತಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳು ಆಕ್ಸಿಜನ್ಗಾಗಿ ಮೈಸೂರನ್ನು ಅವಲಂಬಿಸಿದೆ. ಆದರೆ ಮೈಸೂರಿನಿಂದ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಇದ್ದರಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಮೈಸೂರಿನಲ್ಲಿ ನಾಲ್ಕು ಆಕ್ಸಿಜನ್ ಪ್ಲಾಂಟ್ ಕೆಲಸ ಮಾಡುತ್ತಿಲ್ಲ. ಅದನ್ನು ಚಾಮರಾಜನಗರಕ್ಕೆ ಕೊಡಿ, ನಾವು ನಡೆಸಿಕೊಂಡು ಹೋಗುತ್ತೇವೆ ಎಂದಿದ್ದಾರೆ.

ಕೋವಿಡ್ ಸೋಂಕಿತರು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರಬೇಡಿ. ಈ ಬಗ್ಗೆ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದೇವೆ. ಆದ್ರೆ ಜನರು ಕೊನೆಯಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಬಗ್ಗೆ ಡೆತ್ ರಿಪೋರ್ಟ್ನಲ್ಲಿ ಮಾಹಿತಿ ಪಡೆದುಕೊಳ್ಳುತ್ತೇನೆ. ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಗೆ ಬರುವುದರ ಬದಲು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್ ಎಲ್ಲಾ ಸಾವುಗಳು ಆಕ್ಸಿಜನ್ ಕೊರತೆಯಿಂದ ನಡೆದಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ. ರಾತ್ರಿ 12.30 ರಿಂದ ಮಧ್ಯರಾತ್ರಿ 2.30 ವರೆಗೆ ಮಾತ್ರ ಆಕ್ಸಿಜನ್ ಕೊರತೆ ಆಗಿದೆ. 24 ಸಾವುಗಳು ಆಮ್ಲಜನಕದ ಕೊರತೆಯಿಂದ ಆಗಿದೆ ಎಂಬುವುದು ಸರಿಯಲ್ಲ. ಈ ನಿಟ್ಟಿನಲ್ಲಿ 24 ಸಾವುಗಳು ಯಾವ ಕಾರಣದಿಂದ ಆಯಿತು ಎಂಬ ಮಾಹಿತಿಯನ್ನು ಕೋರಿದ್ದೇನೆ ಎಂದು ತಿಳಿಸಿದ್ದಾರೆ.

ಡೆತ್ ಆಡಿಟ್ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಹಾಗೂ ಎಡಿಜಿಪಿ ಪ್ರತಾಪ್ ರೆಡ್ಡಿ ಗಮನಕ್ಕೂ ತಂದಿದ್ದೇನೆ ಎಂದರು. ಮಧ್ಯಾಹ್ನದ ಒಳಗಡೆ ಚಾಮರಾಜನಗರಕ್ಕೆ ಆಕ್ಸಿಜನ್ ಬರಲು ಶಾಶ್ವತ ಸೂತ್ರ ಮಾಡಿಕೊಡಬೇಕು ಎಂದು ಕೇಳಿದ್ದೇನೆ ಎಂದರು. ಯಾವ ಕಾರಣದಿಂದ ಈ ಸಾವು ಸಂಭವಿಸಿದೆ ಎಂಬುವುದರ ಕುರಿತು ತನಿಖೆ ನಡೆಸಿದ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತ್ರಿ ಆಗುತ್ತದೆ. ಡೆತ್ ಆಡಿಟ್ ವರದಿ ನೋಡಿ ಸೂಕ್ತ ತನಿಖೆಗೆ ಆದೇಶ ಮಾಡಲಾಗುವುದು ಎಂದರು.

ಈ ಘಟನೆ ನಡೆಯಲು ಕಾರಣ ಚಾಮರಾಜನಗರ ಜಿಲ್ಲಾಸ್ಪತ್ರೆಯ  ಮುಖ್ಯಸ್ಥರ ಕರ್ತವ್ಯಲೋಪ. ಭಾನುವಾರ ರಾತ್ರಿ 9 ಘಂಟೆಗೆ ಬರಬೇಕಾಗಿದ್ದ ಆಕ್ಸಿಜನ್ ಬರದಿದ್ದಾಗ  ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳ ಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ  9 ಘಂಟೆಗೆ ಬರುವ ಲಾರಿ ಎಲ್ಲಿದೆ ಎಂದು ಇವರಿಗೆ ಸಂಜೆಯೇ ಗೊತ್ತಿರುತ್ತದೆ. ಲಾರಿಯು ಬಳ್ಳಾರಿಯಿಂದ ಬರೋದಿಲ್ಲ ಎಂದು ಗೊತ್ತಿದ್ದರೂ ಸುಮ್ಮನೆ ಕೈ ಕಟ್ಟಿ ಕೂತ  ಮುಖ್ಯಸ್ಥರ ತಲೆದಂಡ ಆಗಲೇಬೇಕಿದೆ. ಏನೇ ತಲೆದಂಡ ಆದರೂ 23 ಅಮೂಲ್ಯ ಜೀವಗಳು ಹೋದ  ನಂತರ ವಾಪಾಸ್ ಬರುತ್ತವೆಯೇ ?

Related posts

Latest posts

ವಿದ್ಯಾವಂತ ನಿರುದ್ಯೋಗಿ ಪದವೀಧರರ ಬದುಕಿಗೆ ಆಸರೆ -ನರೇಗಾ

ಕರೊನಾ ಮಹಾಮಾರಿ ಮಹಾನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಕಪ್ರ್ಯೂ ಜಾರಿಗೊಳಿಸಿದ್ದರಿಂದ ತಮ್ಮ ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರಿಗೆ ನರೇಗಾ ಕೆಲಸ ಬದುಕಿಗೆ ಆಸರೆಯಾಗಿದೆ. ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಪ್ರದೇಶಗಳ...

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...