ಬೆಂಗಳೂರು : ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂಬ ಹೈಕೋರ್ಟ್ ಆದೇಶದ ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಜೊತೆಗೆ, ಪ್ರಸಕ್ತ 2025–26ನೇ ಸಾಲಿಗೆ ಹಿಂದಿ ಭಾಷೆಗೆ ಗ್ರೇಡ್ ಬದಲಾಗಿ ಅಂಕಗಳನ್ನು ನೀಡಲೇಬೇಕು ಎಂದು ಸ್ಪಷ್ಟ ಸೂಚನೆ ನೀಡುವ ಮೂಲಕ ಸರ್ಕಾರದ ನಿರ್ಧಾರಕ್ಕೆ ಚಾಟಿ ಬೀಸಿದೆ.

ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರು, ಏಪ್ರಿಲ್ 15ರ ಆದೇಶವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವ ಮೂಲಕ ಈ ಆದೇಶ ನೀಡಿದ್ದಾರೆ.
ಪರೀಕ್ಷೆಗಳ ಪ್ರಕಟಣೆಗೂ ಮುನ್ನ ಜಾರಿಯಲ್ಲಿದ್ದ ನಿಯಮಾವಳಿಗಳ ಪ್ರಕಾರ ಮೌಲ್ಯಮಾಪನ ವ್ಯವಸ್ಥೆಯನ್ನು ಮುಂದುವರಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅದರಿಂದ ವಿಮುಖರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
ಇದನ್ನೂ ಓದಿ : ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಪರಿಶ್ರಮಿ,ಒಳ್ಳೆಯ ಸ್ನೇಹಿತ : ಆಂಧ್ರ ಸಿಎಂಗೆ ಮೋದಿ,ಶಾ ಸ್ಪೆಷಲ್ ವಿಶ್..!
ಹೈಕೋರ್ಟ್ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಶುಕ್ರವಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ತುರ್ತುವಾಗಿ ವಿಚಾರಣೆ ಕೈಗೊಳ್ಳುವಂತೆ ಸರ್ಕಾರ ಮನವಿ ಮಾಡಿತ್ತು. ಅದರಂತೆ ಇಂದು ಅಂದರೆ ಎಪ್ರಿಲ್ 21ರಂದು ಅರ್ಜಿ ವಿಚಾರಣೆಗೆ ಬಂದಿತು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ವಾದದ ವೇಳೆ, ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದರಿಂದ ಅವರ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಗ್ರೇಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಎಜಿ ತಿಳಿಸಿದರು. ಅಲ್ಲದೆ, ಅಂಕಗಳ ಬದಲು ಗ್ರೇಡ್ ನೀಡುವ ಕುರಿತು ಸರ್ಕಾರ ಸೂಕ್ತ ತಿದ್ದುಪಡಿ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.





