ರಾಜ್ಯದ ಹಿಂದುಳಿದ ಜಿಲ್ಲೆ ಚಾಮರಾಜನಗರದ ಗಡಿ ಕುಗ್ರಾಮ ಮಾರ್ಟಳ್ಳಿ ಯು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿದೆ. ಈ ಕುಗ್ರಾಮವು ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ಹಾವಳಿ ಮಾಡಿದ್ದ ಪ್ರದೇಶವಾಗಿತ್ತು. ಆದರೆ ಈಗ ಇಲ್ಲಿನ ಯುವಕರು ಸೇನೆಗೆ ಸೇರಿ ದೇಶ ಸೇವೆ ಮಾಡಲು ಮುಂದಾಗಿದ್ದಾರೆ. ಅವರ ಆಶಯಕ್ಕೆ ಇಂಬು ಕೊಡುವಂತೆ ಗ್ರಾಮದಲ್ಲಿರುವ ಮಾಜಿ ಸೈನಿಕರ ಸಂಘ ಇವರಿಗೆ ಸೂಕ್ತ ತರಬೇತಿಯನ್ನೂ ನೀಡುತ್ತಿದೆ. ಈ ಕುಗ್ರಾಮ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದರೂ ದೇಶದ ಸೇನೆಗೆ ನೀಡಿರುವ ಕೊಡುಗೆ ಕಡಿಮೆಯದ್ದೇನಲ್ಲ. ಇಲ್ಲಿಂದ ನೂರಾರು ಯೋಧರು ದೇಶದ ರಕ್ಷಣಾ ಪಡೆಗಳಿಗೆ ಆಯ್ಕೆ ಆಗಿ ಹೋಗಿದ್ದಾರೆ, ಈ ಗ್ರಾಮಕ್ಕೆ ಭೇಟಿ ನೀಡಿದರೆ ಪ್ರತೀ ಮನೆ ಮನೆಯಲ್ಲೂ ಯೋಧ ಇಲ್ಲವೇ ನಿವೃತ್ತ ಯೋಧ ನಿಮಗೆ ಕಾಣ ಸಿಗುತ್ತಾನೆ. ಏಕೆಂದರೆ ಇಲ್ಲಿನ ಯುವಕರು ದೇಶ ಸೇವೆಯೇ ದೇವರ ಸೇವೆ ಎಂದು ಭಾವಿಸಿಕೊಂಡಿದ್ದಾರೆ. ಈ ಗ್ರಾಮವನ್ನು ಯೋಧರ ಗ್ರಾಮ ಎಂದು ಕರೆಯಬಹುದು. ಇಲ್ಲಿನ ಯಾರಾದರೂ ಚಿಕ್ಕ ವಯಸ್ಸಿನ ಯುವಕನನ್ನು ನೀವು ಮಾತಾಡಿಸಿದರೆ ಆತನು ಸೇನೆಗೆ ಸೇರಬೇಕೆಂಬ ಹೆಬ್ಬಯಕೆಯನ್ನು ಹೊಂದಿರುವುದು ಖಚಿತ.
ಈ ಗ್ರಾಮದಲ್ಲಿ ಶೇಕಡಾ 70 ರಷ್ಟು ಕ್ರಿಶ್ಚಿಯನ್ನರು ಮತ್ತು ಶೇಕಡಾ 30 ರಷ್ಟು ಹಿಂದು ಮತ್ತು ಮುಸಲ್ಮಾನರು ಇದ್ದಾರೆ. ಈ ಗ್ರಾಮವು ಈಗ 65 ನಿವೃತ್ತ ಯೋಧರು ಮತ್ತು 45 ಸೇವೆ ಸಲ್ಲಿಸುತ್ತಿರುವ ಯೋಧರನ್ನು ಹೊಂದಿದೆ. ಒಂದು ಕಾಲದಲ್ಲಿ ವೀರಪ್ಪನ್ ನ ಹಾವಳಿಯಿಂದಾಗಿ ಕುಖ್ಯಾತಿಯನ್ನೇ ಪಡೆದುಕೊಂಡಿದ್ದ ಈ ಗ್ರಾಮವು ಇಂದು ದೇಶಪ್ರೇಮಿಗಳ ಹೆಮ್ಮೆಯ ತಾಣವಾಗಿದೆ. ಒಂದು ಕಾಲದಲ್ಲಿ ಈ ಗ್ರಾಮದ ಅನೇಕ ಪುರುಷರು ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ನ ಸದಸ್ಯರೇ ಆಗಿದ್ದರು, ಅನೇಕರು ಪೋಲೀಸರೊಂದಿಗಿನ ಘರ್ಷಣೆಯಲ್ಲಿ ಹತ್ಯೆಗೊಂಡಿದ್ದಾರೆ.

ಕೆಲವರು ಜೈಲಿಗೂ ಹೋಗಿದ್ದಾರೆ. ಆದರೆ ಕಾಲ ಉರುಳಿದಂತೆ ಇಲ್ಲಿನ ಗ್ರಾಮದ ಯುವ ಜನಾಂಗವು ಹಳೆಯ ಕಪ್ಪು ಚುಕ್ಕಿಗಳನ್ನು ಯಶಸ್ವಿಯಾಗಿ ಅಳಿಸಿ ಹಾಕಿದೆ. ಇಲ್ಲಿನ ಯೋಧರು 1965 ರ ಇಂಡೋ-ಪಾಕಿಸ್ತಾನ ಯುದ್ಧ, 1972 ರ ಬಾಂಗ್ಲಾದೇಶ ಯುದ್ಧ, 1984 ರ ಗೋಲ್ಡನ್ ಟೆಂಪಲ್ನಲ್ಲಿ ಆಪರೇಷನ್ ಬ್ಲೂ ಸ್ಟಾರ್, ಮತ್ತು 1999 ರಲ್ಲಿ ಕಾರ್ಗಿಲ್ ಯುದ್ಧ ಸೇರಿದಂತೆ ಪ್ರಮುಖ ಯುದ್ಧಗಳಲ್ಲಿ ಹೋರಾಡಿದ್ದಾರೆ. ಅವರಲ್ಲಿ ಅನೇಕರು ದೇಶಕ್ಕೆ ಬಲಿದಾನವನ್ನೂ ಮಾಡಿದ್ದು ವೀರ ಯೋಧರು ಹುತಾತ್ಮರಾಗಿ ಬಂದಾಗ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

ಮಾರ್ಟಳ್ಳಿ ಈ ಹಿಂದೆ ಭಾರತೀಯ ಸೇನೆಯ ಮದ್ರಾಸ್ (ಈರೋಡ್) ರೆಜಿಮೆಂಟ್ನ ಒಂದು ಭಾಗವಾಗಿತ್ತು. ಇದು ಕೊಳ್ಳೇಗಾಲ ಮತ್ತು ಮಲೆ ಮಹದೇಶ್ವರ ಬೆಟ್ಟದ ನಡುವಿನ ದೊಡ್ಡ ಹಳ್ಳಿಯಾಗಿದೆ. ಕರ್ನಾಟಕ ರಾಜ್ಯದ ರಚನೆಯ ನಂತರ, ಮಾರ್ಟಳ್ಳಿ ರಾಜ್ಯಕ್ಕೆ ಸೇರಿಕೊಂಡಿತು. ಈ ಗ್ರಾಮದಲ್ಲಿ ಗಣನೀಯ ಸಂಖ್ಯೆಯ ಅರ್ಚಕರು, ಪುರೋಹಿತರು, ಶಿಕ್ಷಕರು, ಪೊಲೀಸ್ ಕಾನ್ಸ್ಟೆಬಲ್ಗಳು, ಗಣಿ ಮತ್ತು ಕ್ವಾರಿಗಳಲ್ಲಿ ಕೆಲಸ ಮಾಡುವಲ್ಲಿ ಪರಿಣತಿ ಹೊಂದಿರುವ ಜನರು ಕೂಡ ಇದ್ದಾರೆ. ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಚಾಮರಾಜನಗರ ಒಂದಾಗಿದ್ದು ಇಲ್ಲಿನ ಯುವಕರು ಉದ್ಯೋಗವನ್ನಾಗಿ ಒಕ್ಕಲುತನ ಮಾಡಬೇಕು. ಇಲ್ಲವೇ ಇತರ ಉದ್ಯೋಗ ಹುಡುಕಿಕೊಳ್ಳಬೇಕು. ಇತರ ಉದ್ಯೋಗಗಳಿಗಿಂತ ಸೇನೆಗೆ ಸೇರುವುದು ಆಕರ್ಷಕ ಎಂದು ಇಲ್ಲಿ ಬಹುತೇಕ ಯುವಕರ ಅಭಿಪ್ರಾಯ. ಸೇನೆಯ ಉದ್ಯೋಗ ಸದಾ ಸಾಹಸಮಯ ಆಗಿರುತ್ತದೆ ಎಂಬುದು ಇದಕ್ಕೆ ಕಾರಣ. ಜೊತೆಗೆ ಈ ಗ್ರಾಮದಲ್ಲಿರುವ ನಿವೃತ್ತ ಸೈನಿಕರ ಸಂಘವು ಸೇನೆ ಸೇರುವ ಯುವಕರಿಗೆ ಬೆನ್ನೆಲುಬಾಗಿ ನಿಂತಿದೆ. ಇಲ್ಲಿ ಸೇನೆ ಸೇರ ಬಯಸುವ ಯುವಕರಿಗೆ ಸೇನೆಯಲ್ಲಿ ನೀಡಲಾಗುವ ಕಠಿಣ ತರಬೇತಿಯನ್ನು ನೀಡಲಾಗುತ್ತದೆ. ಈಗ 65 ಯುವಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರೆ ಯುವಕರ ಸೇನಾ ಮೋಹ ನಮಗೆ ಅರಿವಾಗುತ್ತದೆ . ಮಾರ್ಟಳ್ಳಿಯ ಸೈನಿಕರು ಮದ್ರಾಸ್ ರೆಜಿಮೆಂಟ್, ಮರಾಠಾ ರೆಜಿಮೆಂಟ್, ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ಮತ್ತು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನಲ್ಲಿ ಸೇವೆ ಸಲ್ಲಿಸಿದ್ದಾರೆ.

ಇಲ್ಲಿನ ಯುವಕರಿಗೆ ಆರ್ಮಿ ಅಸೋಸಿಯೇಷನ್ ಟ್ರಸ್ಟ್ ನಿತ್ಯವೂ ಕಠಿಣ ತರಬೇತಿಯನ್ನು ನೀಡುತ್ತಿದೆ. ಸ್ವತಃ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ಕೆಎಎಸ್ ಅಧಿಕಾರಿ ಮತ್ತು ಮಾಜಿ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ, ಅವರೂ ತರಬೇತಿ ನೀಡುತ್ತಿದ್ದಾರೆ. ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು . ನಿವೃತ್ತ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುತ್ತಿರುವವರು ನೀಡಿದ ಹಣಕಾಸಿನ ಕೊಡುಗೆಯೊಂದಿಗೆ ಈ ಟ್ರಸ್ಟ್ ನಡೆಸಲಾಗುತ್ತಿದೆ. ಈ ಟ್ರಸ್ಟ್ ಸುಲ್ವಾಡಿ ಸರ್ಕಾರಿ ಆಸ್ಪತ್ರೆ ಬಳಿ ಒಂದು ಎಕರೆ ಭೂಮಿಯನ್ನು ರೂ. 2 ಲಕ್ಷ ರೂಪಾಯಿ ನೀಡಿ ಲೀಸ್ ಗೆ ಪಡೆದುಕೊಂಡಿದ್ದು ಮಾರ್ಟಳ್ಳಿ ಜಾಗೇರಿ, ಕೌದಳ್ಳಿ , ಜಲ್ಲಿಪಾಲ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ತರಬೇತಿ ನೀಡುತ್ತಿದೆ. ಸೈನ್ಯದ ಮಾನದಂಡಗಳನ್ನು ಪೂರೈಸಲು ಐದು ಮಾಜಿ ಸೈನಿಕರು ತರಬೇತಿಯನ್ನು ನೀಡುತ್ತಿದ್ದಾರೆ.
ನಿವೃತ್ತ ಸುಬೇದಾರ್ ಮಾರಿಯಾ ಜೋಸೆಫ್ ತರಬೇತಿ ಕೇಂದ್ರವನ್ನು ನಿರ್ವಹಿಸುತ್ತಿದ್ದರೆ, ನಿವೃತ್ತ ಹವಿಲ್ದಾರ್ ಅರುಣ್ ಕುಮಾರ್, ಮಾಣಿಕಂ, ಮಡಲೈಮುತ್ತು ಮತ್ತು ಡೇವಿಡ್ ರಾಜ್ಕುಮಾರ್ ಅವರು ತರಬೇತಿಯ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ರಜೆಯ ಮೇಲೆ ಮಾರ್ಟಳ್ಳಿ ಗೆ ಬರುವ ಸೈನಿಕರು ಸಹ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಾರೆ. ಇಲ್ಲಿ ಮಿಲಿಟರಿ ಶಿಬಿರದಂತೆಯೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ 9 ಮತ್ತು ಸಂಜೆ ಕೂಡ ಎರಡು ಗಂಟೆ ತರಬೇತಿಯನ್ನು ನೀಡಲಾಗುತ್ತಿದೆ. ಸೈನ್ಯದಲ್ಲಿ ಮಾಡುವಂತೆಯೇ ಯುವಕರ ಮಾನಸಿಕ ಕೌಶಲ್ಯಗಳನ್ನು ಸುಧಾರಿಸಲು ಪ್ರತಿದಿನ ಒಂದು ಗಂಟೆಯ ಬ್ರೀಫಿಂಗ್ ನಡೆಸಲಾಗುತ್ತದೆ. ಇದರಿಂದಾಗಿ ಈ ಹಳ್ಳಿಯು ಇಂದು ಸಂಪೂರ್ಣ ದೇಶ ಭಕ್ತರ ಹಳ್ಳಿಯೇ ಆಗಿದೆ.