ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರವನ್ನು ಸಮರ್ಥವಾಗಿ, ವಸ್ತುನಿಷ್ಠವಾಗಿ ಟೀಕಿಸುವ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ನಡೆಯನ್ನು ಕಟು ವಾಕ್ಯಗಳಲ್ಲಿ ಟೀಕಿಸಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಯಾವ ರೀತಿ ಆಗ್ತಿದೆ ಅನ್ನೋದನ್ನ ಸ್ಪಷ್ಟವಾಗಿ ಬಿಡಿಸಿಟ್ಟಿದ್ದಾರೆ.
ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿಗೆ ಬೆಚ್ಚಿರುವ ಕೇಂದ್ರ ಸರ್ಕಾರ..!
ಇಂಡಿಯಾ ಮೈತ್ರಿಕೂಟದ ಮೂರನೆಯ ಸಭೆ ಮುಂಬೈನಲ್ಲಿ ನಡೆದಿತ್ತು. ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯುವ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದು, ದೇಶಾದ್ಯಂತ ಬಿಜೆಪಿ ವಿರೋಧಿ ಅಲೆ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ಕುಹಕವಾಡಿರುವ ಸಿದ್ದರಾಮಯ್ಯ, ಮೋದಿ ದುರಾಡಳಿತವನ್ನು ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟ ಪ್ರಮುಖ ಹೆಜ್ಜೆ ಇರಿಸಿದೆ. ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿಯಲ್ಲಿ ನಡುಕು ಶುರುವಾಗಿದೆ ಎಂದಿದ್ದಾರೆ. ಮೈತ್ರಿಕೂಟದ ಒಗ್ಗಟ್ಟಿನಿಂದ ಭ್ರಷ್ಟ ಬಿಜೆಪಿ ಸರ್ಕಾರ ಭೀತಿಗೊಳಗಾಗಿದೆ. ಇತ್ತೀಚಿನ ನಡವಳಿಕೆಯಿಂದ ಭೀತಿ ಶುರುವಾಗಿತುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಹುಳುಕು ಮುಚ್ಚಿಕೊಳ್ಳುವ ಕಸರತ್ತು ಶುರು ಮಾಡಿದ ಮೋದಿ..
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ. ಉದ್ಯಮಿ ಗೌತಮ್ ಅದಾನಿ ಭಾರೀ ಚರ್ಚೆಯ ಹೆಸರು. ಗುಜರಾತ್ ಮೂಲದ ಉದ್ಯಮಿಗೆ ನರೇಂದ್ರ ಮೋದಿ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಡುವ ಕೆಲಸ ಮಾಡ್ತಿದೆ. ಆ ಬಳಿಕ ಪರೋಕ್ಷವಾಗಿ ಅದಾನಿ ಸಂಸ್ಥೆಗಳಿಂದ ಬಿಜೆಪಿ ಲಾಭ ಪಡೆದುಕೊಳ್ಳುತ್ತೆ ಎನ್ನುವ ಆರೋಪಕ್ಕೆ ಬಿಜೆಪಿ ಸರ್ಕಾರ ಇಲ್ಲೀವರೆಗೂ ಸ್ಪಷ್ಟ ಉತ್ತರ ನೀಡಿಲ್ಲ. ಈ ಬಗ್ಗೆ ಪ್ರಸ್ತಾಪ ಮಾಡಿರುವ ಸಿದ್ದರಾಮಯ್ಯ, ಕೇಂದ್ರದ ಜನ ವಿರೋಧಿ ನಿಲುವು, ನಿರ್ಧಾರಗಳು ಜನರನ್ನು ಕಂಗಾಲಾಗುವಂತೆ ಮಾಡಿದೆ. ವಂಚಕ ಉದ್ಯಮಿಗಳೊಂದಿಗೆ ಸೇರಿಕೊಂಡು ಲೂಟಿ ನಡೆಸಲಾಗ್ತಿದೆ. ಇಂಡಿಯಾ ಮೈತ್ರಿಕೂಟವು ಎತ್ತುತ್ತಿರುವ ಪ್ರಶ್ನೆಗಳ ಬಗ್ಗೆ ಬಿಜೆಪಿಯ ನಾಯಕರ ಬಳಿ ಉತ್ತರವಿಲ್ಲ. ಪ್ರಧಾನಿ ಮೋದಿಯವರು ತಾವೇ ಮುಂದಾಗಿ ಅದಾನಿ ರಕ್ಷಣೆಗೆ ನಿಂತಿದ್ದಾರೆ. ಮೋದಿ ಅಂಡ್ ಕಂಪನಿ ತಮ್ಮ ಹುಳುಕು ಮುಚ್ಚಿಕೊಂಡು, ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ವಿಫಲ ಪ್ರಯತ್ನಕ್ಕೆ ಕೈಹಾಕಿದೆ ಎಂದು ಬಣ್ಣಿಸಿದ್ದಾರೆ.
ಅವಸರದ ಅಧಿವೇಶನ ಕಾರಣ ಏನು..? ಹಲವು ಅನುಮಾನ..!!
ಕೇಂದ್ರ ಸರ್ಕಾರ ಇದೇ ತಿಂಗಳು ವಿಶೇಷ ಅಧಿವೇಶನ ಕರೆದಿದೆ. ಅದಕ್ಕೂ ಮೊದಲು ವಿಶೇಷ ಅಧಿವೇಶನ ಘೋಷಣೆ ಮರು ದಿನವೇ ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವರದಿ ನೀಡುವಂತೆ ಕೇಳಿಕೊಳ್ಳಲಾಗಿದೆ. ಅವಸರದಲ್ಲಿ ಕರೆಯಲಾದ ಸಂಸತ್ನ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಕಾನೂನು ಜಾರಿ ಮಾಡುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಒಂದೇ ದೇಶ, ಒಂದೇ ಚುನಾವಣೆಯ ಬಗ್ಗೆ ಅನಾವಶ್ಯಕ ಚರ್ಚೆಯ ಮೂಲಕ ಜ್ವಲಂತ ಸಮಸ್ಯೆಗಳನ್ನು ಜನರ ಕಣ್ಣುಗಳಿಂದ ಮರೆಮಾಚುವ ಹತಾಶೆ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದಿದ್ದಾರೆ ಸಿದ್ದರಾಮಯ್ಯ. ಇನ್ನು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗ ‘ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ ಮಸೂದೆ ಸೇರಿದಂತೆ ತನ್ನ ಸಂಘ ಪರಿವಾರದ ಮೂಲಕ ಹಿಂಬಾಗಿಲಿನ ಚರ್ಚೆಗಳಿಗೆ ಚಾಲನೆ ನೀಡಿದೆ ಎಂದು ಗುಡುಗಿದ್ದಾರೆ.
ಇಸ್ರೋ ಯೋಜನೆ ನಿಮ್ಮ ಸಾಧನೆಯಲ್ಲ.. 9 ವರ್ಷದ ಸಾಧನೆ ಹೇಳಿ..
ಕೇಂದ್ರ ಬಿಜೆಪಿ ಸರ್ಕಾರ ಹಾಗು ಪ್ರಧಾನಿ ನರೇಂದ್ರ ಮೋದಿ ನಮ್ಮ ಹೆಮ್ಮೆಯ ಇಸ್ರೋದ ಶ್ರೇಷ್ಠ ವಿಜ್ಞಾನಿಗಳ ಸಾಧನೆಯನ್ನು ತನ್ನ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುವಷ್ಟು ಸಣ್ಣತನಕ್ಕೆ ಇಳಿದಿದೆ. ಅದರಲ್ಲೂ ದೇಶದ ಪ್ರಧಾನಿ ಈ ಮಟ್ಟಕ್ಕೆ ಇಳಿದಿರುವುದು ವಿಷಾದನೀಯ ಮಾತ್ರವಲ್ಲ ಖಂಡನೀಯ ಕೂಡ ಎಂದಿದ್ದಾರೆ. ಸೌರಯಾನದ ಯಶಸ್ಸುಗಳಿಗೆ ನಮ್ಮ ವಿಜ್ಞಾನಿಗಳಷ್ಟೇ ಅರ್ಹರು ಎಂದಿರುವ ಸಿದ್ದರಾಮಯ್ಯ, ಜಿ-20 ಶೃಂಗ ಸಭೆಯ ಆಯೋಜನೆಯನ್ನೇ ತನ್ನ ಗೆಲುವು ಎಂದು ತೋರಿಸಿಕೊಳ್ಳುವ ಸಾಧನಾ ದಾರಿದ್ರ್ಯ ಮೋದಿ ಸರ್ಕಾರಕ್ಕೆ ಬಂದಿದೆ. ಇಸ್ರೋ ಸಾಧನೆಯ ಬಗ್ಗೆ ಇಡೀ ದೇಶವೇ ಸದಾ ಹೆಮ್ಮೆಪಡುತ್ತದೆ. ಆದರೆ ಈಗ ನಿಮ್ಮ ಸಾಧನೆ ಏನೆಂದು ಹೇಳಿ? ಎಂದಿರುವ ಸಿಎಂ, ಇನ್ನು ‘ಮನ್ ಕೀ ಬಾತ್’ ಸಾಕು ಮಾಡಿ, ‘ಕಾಮ್ ಕೀ ಬಾತ್’ ಮಾತನಾಡಿ. ಒಂಭತ್ತು ವರ್ಷ ದೇಶವನ್ನಾಳಿರುವ ನೀವು ದೇಶಕ್ಕೆ ನೀಡಿದ ಕೊಡುಗೆಯಾದರೂ ಏನು..? ನೋಟು ರದ್ದತಿ, ನಿರುದ್ಯೋಗ ಹೆಚ್ಚಳ, ಉದ್ಯಮಿಗಳ ವಂಚನೆಗೆ ನೆರವು. ಕೋಮುದ್ವೇಷ ಮತ್ತು ಜನಾಂಗೀಯ ಹಿಂಸಾಚಾರಗಳಿಗೆ ಕುಮ್ಮಕ್ಕು. ಶತ್ರು ದೇಶ ನಮ್ಮ ದೇಶದ ನೆಲವನ್ನು ಆಕ್ರಮಿಸುತ್ತಿದ್ದರೂ ಬಾಯಿ ಬಿಡಲಾರದ ಹೇಡಿತನ. ಇದರಲ್ಲಿ ಯಾವುದು ನಿಮ್ಮ ಸಾಧನೆ ಹೇಳಿ ಎಂದು ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಇನ್ನು ಕಡೆಯದಾಗಿ ದೇಶದ ಜನತೆ ಈ ಒಂಭತ್ತು ವರ್ಷಗಳಲ್ಲಿ ನಿಮ್ಮನ್ನ ಚೆನ್ನಾಗಿ ಅರಿತಿದ್ದಾರೆ. ಇನ್ನು ನಿಮ್ಮ ಆಟಗಳು ನಡೆಯವುದಿಲ್ಲ ಎನ್ನುವ ಮೂಲಕ ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷ್ಣಮಣಿ