• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಅಂಕಣ | ನೂರು ದಿನಗಳ ನಡಿಗೆ ಐದು ವರ್ಷಗಳ ಸವಾಲು

ನಾ ದಿವಾಕರ by ನಾ ದಿವಾಕರ
September 3, 2023
in ಅಂಕಣ, ಅಭಿಮತ
0
ಅಂಕಣ | ಕರ್ನಾಟಕ ಮಾಡೆಲ್‌-ಕಾಲದ ಅನಿವಾರ್ಯತೆ-ಭಾಗ 1
Share on WhatsAppShare on FacebookShare on Telegram

ಬರದ ಛಾಯೆ ಅದ್ಧೂರಿ ದಸರಾ ತುಂಬದ ಕಾವೇರಿಯ ನಡುವೆ ಅಧಿಕಾರದ ಸಂಘರ್ಷ

ADVERTISEMENT

–ನಾ ದಿವಾಕರ

2023ರ ರಾಜ್ಯ ವಿಧಾನಸಭಾ ಚುನಾವಣೆಗಳು ಹಲವು ದಾಖಲೆಗಳನ್ನು ನಿರ್ಮಿಸಿದ್ದವು. ಕಾಂಗ್ರೆಸ್‌ ಮುಕ್ತ ಕರ್ನಾಟಕದ ಕನಸು ಕಂಡಿದ್ದ ಬಿಜೆಪಿಯ ಮಹದಾಕಾಂಕ್ಷೆಯನ್ನು ಭಗ್ನಗೊಳಿಸುವ ದಾಖಲೆಯೂ ಅದರೊಳಗೊಂದು. ಮೂರು ದಶಕಗಳಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ದಾಖಲೆ ಮಾಡಿತ್ತು. ಈ ದಾಖಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಹೊಸ ಸರ್ಕಾರ ರಚನೆಯಾದ ಮೊದಲ ನೂರು ದಿನಗಳನ್ನು ಕರ್ನಾಟಕದ ವಿಧಾನಸಭೆ ವಿರೋಧ ಪಕ್ಷದ ನಾಯಕನಿಲ್ಲದೆ ಕಳೆದಿದೆ. ತನ್ನ ಸೋಲಿನ ಕಾರಣಗಳನ್ನು ಗುರುತಿಸಲು ವಿಫಲವಾಗಿರುವ ಬಿಜೆಪಿ ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾಗಿ ಈ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಿತ್ತು. ಆದರೆ ಅಧಿಕಾರ ರಾಜಕಾರಣದ ಸೂಕ್ಷ್ಮತೆಗಳು ಆಳುವ ಪಕ್ಷಗಳನ್ನಷ್ಟೇ ಅಲ್ಲದೆ ವಿರೋಧ ಪಕ್ಷಗಳನ್ನೂ ಸಮನಾಗಿ ಕಾಡುವುದರಿಂದ ಬಿಜೆಪಿ ಗೊಂದಲದ ಗೂಡಾಗಿದೆ. ಸರ್ಕಾರದ ತಪ್ಪುಒಪ್ಪುಗಳ ಬಗ್ಗೆ ಬಿಜೆಪಿ ನಾಯಕರ ಪ್ರತಿಕ್ರಿಯೆಗಳು, ಹೇಳಿಕೆಗಳು ಈ ಗೊಂದಲವನ್ನು ಮತ್ತಷ್ಟು ಸ್ಫುಟಗೊಳಿಸುತ್ತಿವೆ.

ಶಿವಮೊಗ್ಗ ದಸರಾ
ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ನಡುವೆಯೇ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನೂರು ಯಶಸ್ವಿ ದಿನಗಳನ್ನು ಪೂರೈಸಿದೆ. ಡಬ್ಬಲ್‌ ಇಂಜಿನ್‌ ಸರ್ಕಾರ ಹಳಿ ತಪ್ಪಿದ ಮೇಲೆ ಈಗ ಮಾಧ್ಯಮಗಳ ಪರಿಭಾಷೆಯಲ್ಲಿ ʼಜೋಡೆತ್ತಿನ ಸರ್ಕಾರʼ ಹಾದಿ ಕ್ರಮಿಸುತ್ತಿದ್ದು, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಭಾಗ್ಯಗಳ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿರುವುದು ಮೆಚ್ಚುವಂತಹುದೇ. ನಿರುದ್ಯೋಗ, ಬೆಲೆ ಏರಿಕೆ, ಅಪೌಷ್ಟಿಕತೆ ಹಾಗೂ ಆರ್ಥಿಕ ಅಭದ್ರತೆಯಿಂದ ನಲುಗಿಹೋಗಿದ್ದ ಕರ್ನಾಟಕದ ತಳಮಟ್ಟದ ಜನಸಮುದಾಯಗಳಿಗೆ ಈ ಭಾಗ್ಯ ಯೋಜನೆಗಳು ಕೊಂಚ ಆಕ್ಷಿಜನ್‌ ನೀಡಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಬದಿಗೊತ್ತಿ ಭಾವನಾತ್ಮಕ-ಪ್ರಚೋದಕ ವಿಚಾರಗಳಿಗೇ ಹೆಚ್ಚು ಪ್ರಾಶಸ್ತ್ಯ ನೀಡುವ ಮೂಲಕ ರಾಜ್ಯದಲ್ಲಿ ಸಾಮಾಜಿಕ ಅಸ್ಥಿರತೆ, ಸಾಂಸ್ಕೃತಿಕ ಅರಾಜಕತೆ ಹಾಗೂ ಮತೀಯ ಆತಂಕಗಳನ್ನು ಸೃಷ್ಟಿಸಿದ್ದ ಬಿಜೆಪಿಗೆ ಬಹುಶಃ ಕರ್ನಾಟಕದ ಜನತೆಯ ನಾಡಿಮಿಡಿತ ಈಗಾಗಲೂ ಅರ್ಥವಾಗಿರಲೇಬೇಕು.

ಆರಂಭಿಕ ಆತಂಕಗಳ ನಡುವೆ

ಆಂತರಿಕ ಭಿನ್ನಾಭಿಪ್ರಾಯಗಳು, ಹುದ್ದೆ ಪದವಿಗಳ ಆಕಾಂಕ್ಷೆಗಳು ಮತ್ತು ಅಧಿಕಾರ ಕೇಂದ್ರಕ್ಕೆ ನಿಕಟವಾಗಿರುವ ಅಪೇಕ್ಷೆಗಳ ನಡುವೆಯೇ ಸಿದ್ಧರಾಮಯ್ಯ ಸರ್ಕಾರ ಶಾಸಕರ ನಡುವೆ ಒಂದು ರೀತಿಯ ತಣ್ಣನೆಯ ಐಕಮತ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಅಧಿಕಾರಾಕಾಂಕ್ಷಿಗಳನ್ನು ಮಣಿಸುವುದು ಅಥವಾ ತಣಿಸುವುದು ಯಾವುದೇ ಸರ್ಕಾರಕ್ಕೆ ಅಗ್ನಿಪರೀಕ್ಷೆಯಂತೆಯೇ ಆಗಿರುತ್ತದೆ. ಈ ತಣಿಸುವ ಪ್ರಕ್ರಿಯೆಯಾಗಿಯೇ ನಿಗಮ ಮಂಡಲಿಗಳ ಅಧ್ಯಕ್ಷ ಗಾದಿಗಳನ್ನು ಭರ್ತಿಮಾಡುವ ಮಾರ್ಗವೂ ಇದೆ. ಮುಂದಿನ ದಿನಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಈ ಹುದ್ದೆಗಳಿಗೆ ಜಾತಿ/ಮತ/ಪ್ರಾದೇಶಿಕ ಪ್ರಾತಿನಿಧ್ಯಗಳಿಗೆ ಅನುಸಾರವಾಗಿ ಹಂಚಿಕೆ ಮಾಡಬೇಕಾಗುತ್ತದೆ. ಅಲ್ಲಿಯೂ ಉದ್ಭವಿಸಬಹುದಾದ ಅಸಮಾಧಾನದ ಹೊಗೆಯನ್ನು ತಣಿಸಲು ಮುಂದಿನ ಸಂಭಾವ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬ ಪ್ರಹಸನ ಸಿದ್ಧವಾಗಿರುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಅಧಿಕಾರ ರಾಜಕಾರಣದ ಈ ಸವಾಲುಗಳ ನಡುವೆಯೇ ಸಿದ್ಧರಾಮಯ್ಯ ಸರ್ಕಾರ ಗೃಹಲಕ್ಷ್ಮಿ, ಶಕ್ತಿಯೋಜನೆ , ಗೃಹ ಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಸ್ವಾಗತಾರ್ಹವೇ. ಈ ಯೋಜನೆಗಳ ಹಿಂದಿನ ರಾಜಕೀಯ ಅರ್ಥಶಾಸ್ತ್ರದ ಆಯಾಮಗಳನ್ನು ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು ಗಂಭೀರವಾಗಿ ಪರಿಶೀಲಿಸಬೇಕಿದೆ. ಏಕೆಂದರೆ ಶಕ್ತಿ ಯೋಜನೆಯಿಂದ ಮಹಿಳೆಯರ ಶ್ರಮಶಕ್ತಿಗೆ ಹೆಚ್ಚು ನಮ್ಯತೆಯನ್ನು ಒದಗಿಸಿರುವುದು, ಶ್ರಮಿಕ ಮಹಿಳೆಯರ ಭೌತಿಕ ಚಲನೆಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿರುವುದು ಹಾಗೂ ಶ್ರಮಶಕ್ತಿಯ ಚಲನೆಗೆ ಮುಕ್ತ ವಾತಾವರಣವನ್ನು ಸೃಷ್ಟಿಸಿರುವುದು ರಾಜ್ಯದ ಶ್ರಮಜಗತ್ತಿನ ಚಿತ್ರಣವನ್ನೇ ಬದಲಿಸುವ ಸಾಧ್ಯತೆಗಳಿವೆ.  ಗೃಹಲಕ್ಷ್ಮಿ ಯೋಜನೆಯು ಗೃಹಿಣಿಯ ದುಡಿಮೆಯನ್ನು ಮೌಲೀಕರಿಸುವ ಒಂದು ಆರ್ಥಿಕ ಪ್ರಕ್ರಿಯೆಯಾಗಿದ್ದು, ಈ ಯೋಜನೆಯಿಂದ ದುಡಿಮೆ ಎಂಬ ವ್ಯಾಖ್ಯಾನಕ್ಕೊಳಗಾದ ಗೃಹಿಣಿಯರ ಗೃಹಕೃತ್ಯಗ್  ಶ್ರಮ ಮೌಲ್ಯವನ್ನು ಮಾರುಕಟ್ಟೆಯ ನೆಲೆಯಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಈ ಕುರಿತು ಗಂಭೀರ ವಿಶ್ಲೇಷಣೆ ಆಗಬೇಕಿದೆ.

ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತದೆ ಅಥವಾ ದಿವಾಳಿಯಾಗುತ್ತದೆ ಎಂಬ ವಿರೋಧ ಪಕ್ಷಗಳ ಹುಯಿಲು ಅರ್ಥಹೀನವಷ್ಟೇ ಅಲ್ಲದೆ ರಾಜಕೀಯ ಅಸೂಕ್ಷ್ಮತೆಯ ಸಂಕೇತವಾಗಿಯೂ ಕಾಣುತ್ತದೆ. ಆದರೆ ಈ ಯೋಜನೆಗಳಿಗೆ  ಹೇಗೆ ಹಣಕಾಸನ್ನು ಹೊಂದಿಸಲಾಗುತ್ತದೆ ಎನ್ನುವುದನ್ನು ಸಹ ಸರ್ಕಾರವು ಸ್ಪಷ್ಟಪಡಿಸಬೇಕಿದೆ. ಉಳ್ಳವರ ಕಿಸೆಯಿಂದ ಕಸಿದು ಇಲ್ಲದವರ ಹಟ್ಟಿಗೆ ರವಾನಿಸುವ ಒಂದು ತಂತ್ರಗಾರಿಕೆ ಎಷ್ಟೇ ಅಪ್ಯಾಯಮಾನವಾಗಿ ಕಂಡರೂ, ಸಮಾಜದ ಎಲ್ಲ ವಲಯಗಳಲ್ಲಿ ತಮ್ಮದೇ ಆದ ಪ್ರಾಬಲ್ಯ ಗಳಿಸಿರುವ ಉಳ್ಳವರ ಪ್ರತಿನಿಧಿಗಳು, ಮಧ್ಯಮ ವರ್ಗಗಳು ಹಾಗೂ ನಗರೀಕರಣಕ್ಕೊಳಗಾದ ಹಿತವಲಯದ ನಾಗರಿಕರು ಈ ತಂತ್ರಗಾರಿಕೆಯನ್ನು ವಿರೋಧಿಸಿಯೇ ತೀರುತ್ತಾರೆ. ರಾಜಕೀಯ ಪಕ್ಷಗಳಿಗೆ ಇಲ್ಲಿಯೂ ಒಂದು ಬಲಿಷ್ಟ ಮತಬ್ಯಾಂಕ್‌ ಇರುವುದರಿಂದ ಇದು ಹಗ್ಗದ ಮೇಲಿನ ಒಂಟಿಕಾಲು ನಡಿಗೆಯಾಗುತ್ತದೆ. ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರನ್ನೂ ಸಂತುಷ್ಟಿಗೊಳಿಸುವ ಮಾದರಿಯನ್ನೇ ಅನುಸರಿಸಬೇಕಾಗುತ್ತದೆ.

ಹಲವು ಸವಾಲುಗಳ ನಡುವೆ

ಈ ದೃಷ್ಟಿಯಿಂದ ನೋಡಿದಾಗ ಸಿದ್ಧರಾಮಯ್ಯ ಸರ್ಕಾರದ ಮುಂದಿನ ಸವಾಲುಗಳು ಕ್ಲಿಷ್ಟವಾಗಿಯೇ ಕಾಣುತ್ತವೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಭರಿಸುವ ಸಲುವಾಗಿ SCSP/TSP ಕಾಯ್ದೆಯಡಿ ಬಜೆಟ್‌ನಲ್ಲಿ ಮೀಸಲಿರಿಸಿದ್ದ ನಿಧಿಯಿಂದ 11,114 ಕೋಟಿ ರೂಗಳನ್ನು ಹಿಂಪಡೆದುಕೊಂಡಿದ್ದು, ಇದು ರಾಜ್ಯಾದ್ಯಂತ ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟರ ಸಂಖ್ಯೆ 24 ಪ್ರತಿಶತ ಇದ್ದು, ಈ ಕಾಯ್ದೆಯ ಅನುಸಾರ 24 ಪ್ರತಿಶತ ಹಣವನ್ನು ಪ್ರತಿ ಬಜೆಟ್‌ನಲ್ಲೂ ಪರಿಶಿಷ್ಟ ಜಾತಿ/ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಮೀಸಲಿರಿಸಬೇಕಾಗುತ್ತದೆ. ಈ ಬಾರಿ ಬಜೆಟ್‌ನಲ್ಲಿ 1.42 ಲಕ್ಷ ಕೋಟಿ ರೂಗಳನ್ನು ಅನುದಾನಗಳಿಗಾಗಿ ಮೀಸಲಿರಿಸಿದ್ದರೂ ಅದರಿಂದಲೇ ಒಂದಂಶವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿರುವುದು ಅಕ್ಷಮ್ಯ. ಈ ಹಿಂಪಡೆದ ಹಣವನ್ನು ಪರಿಶಿಷ್ಟರಿಗಾಗಿಯೇ ಬಳಸುತ್ತೇವೆ ಎಂಬ ಸರ್ಕಾರದ ಹಾರಿಕೆಯ ಉತ್ತರ ಬೇಜವಾಬ್ದಾರಿಯುತವಾದದ್ದು. ಸರ್ಕಾರದ ಈ ಕ್ರಮದ ವಿರುದ್ಧ ಸಮಸ್ತ ದಲಿತ ಸಂಘಟನೆಗಳ ಒಕ್ಕೊರಲ ವಿರೋಧ ವ್ಯಕ್ತವಾಗದಿರುವುದು ಅಚ್ಚರಿದಾಯಕ ಅಂಶ. ಇದು ದಲಿತ ಸಂಘಟನೆಗಳ ಬೇಜವಾಬ್ದಾರಿಯೋ ಅಥವಾ ಜಾಣ ನಡೆಯೋ ? ಬಹುಶಃ ಅಧಿಕಾರ ರಾಜಕಾರಣದ ಆಯಸ್ಕಾಂತೀಯ ಶಕ್ತಿಯ ಸೆಳೆತಕ್ಕೆ ಪ್ರತಿರೋಧದ ಪ್ರಬಲ ದನಿಗಳೂ ಒಳಗಾಗುವ ಒಂದು ಪ್ರವೃತ್ತಿಯನ್ನು ಇದು ಸೂಚಿಸುತ್ತದೆ. ದಲಿತ ಸಂಘರ್ಷ ಸಮಿತಿಗಳು ಈ ಕುರಿತು ಗಂಭೀರವಾಗಿ ಆಲೋಚನೆ ಮಾಡಬೇಕಿದೆ.

ಈ ನಡುವೆ ಮುಂಗಾರು ವೈಫಲ್ಯದ ಪರಿಣಾಮ ರಾಜ್ಯವು ಈ ವರ್ಷ ಭೀಕರ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸರ್ಕಾರದ ಅಧಿಕೃತ ವರದಿಗಳೇ ಹೇಳುವಂತೆ ರಾಜ್ಯದ 227 ತಾಲ್ಲೂಕುಗಳ ಪೈಕಿ 130ರಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದೆ. ಆಗಸ್ಟ್‌ ತಿಂಗಳಲ್ಲಿ 74 ಪ್ರತಿಶತ ಮಳೆಯ ಕೊರತೆ ಉಂಟಾಗಿರುವುದು ಎಲ್ಲ ಅಣೆಕಟ್ಟುಗಳ ನೀರಿನ ಮಟ್ಟವನ್ನು ತಗ್ಗಿಸಿದೆ. ಜಾನುವಾರುಗಳಿಗೂ ನೀರು ಸಿಗದ ಪರಿಸ್ಥಿತಿಯೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಲೆದೋರಿದೆ. ಈ ವೇಳೆಗೆ ಗರಿಗೆದರಬೇಕಿದ್ದ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು ವಾಡಿಕೆ ಬಿತ್ತನೆ ಪ್ರಕ್ರಿಯೆಯಲ್ಲಿ  65 ಪ್ರತಿಶತ ಮಾತ್ರ ಸಾಧ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕಾವೇರಿಯ ಒಡಲೂ ಬರಿದಾಗುತ್ತಿದ್ದು ಈಗಾಗಲೇ ತಮಿಳುನಾಡಿನೊಡನೆ ಕಾವೇರಿ ವಿವಾದ ಕಾವೇರಿದ್ದು ರಾಜ್ಯಾದ್ಯಂತ ರೈತಸಂಘಟನೆಗಳು ನೆರೆರಾಜ್ಯಕ್ಕೆ ನೀರು ಹರಿಸುವುದನ್ನು ಪ್ರತಿಭಟಿಸುತ್ತಿವೆ. ಕಾವೇರಿ ಬಿಕ್ಕಟ್ಟಿನ ಹೊರತಾಗಿಯೂ ಮಳೆಯ ಕೊರತೆಯಿಂದ ಉಂಟಾಗಬಹುದಾದ ಕುಡಿವ ನೀರಿನ ಕೊರತೆಯನ್ನು, ಕೃಷಿ ಚಟುವಟಿಕೆಗಳ ಸಮಸ್ಯೆಗಳನ್ನು ನೀಗಿಸಲು ರಾಜ್ಯ ಸರ್ಕಾರ ಸಜ್ಜಾಗಬೇಕಿದೆ.

ಬಿಜೆಪಿ ಆಳ್ವಿಕೆಯ 40 ಪರ್ಸೆಂಟ್‌ ಆಡಳಿತವನ್ನು ವಿರೋಧಿಸುತ್ತಲೇ ಅಧಿಕಾರ ಪಡೆದ ಕಾಂಗ್ರೆಸ್‌ ಈ ಪರ್ಸೆಂಟೇಜ್‌ ಪಾಯಿಂಟನ್ನು ಶೂನ್ಯಕ್ಕೆ ಇಳಿಸುವುದು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಸಾಧ್ಯವೇ ಆದರೂ, ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇನ್ನೂ ಕಾರ್ಯೋನ್ಮುಖವಾಗಬೇಕಿದೆ. ಹಿಂದಿನ ಸರ್ಕಾರದ ಅಕ್ರಮಗಳನ್ನು ತನಿಖೆಗೊಳಪಡಿಸುವುದು ಕಾನೂನಾತ್ಮಕ ವಿಚಾರವಾಗುತ್ತದೆ. ಆದರೆ ಹಾಲಿ ಸರ್ಕಾರದಲ್ಲಿರುವ ಭ್ರಷ್ಟಾಚಾರದ ಬ್ರಹ್ಮಾಂಡ ಬಾಹುಗಳನ್ನು ನಿಯಂತ್ರಿಸುವುದು ಸಾಂವಿಧಾನಿಕ ಕರ್ತವ್ಯವಾಗಿರುತ್ತದೆ. ಭ್ರಷ್ಟಾಚಾರ ಹಗರಣಗಳನ್ನು ತನಿಖೆ ಮಾಡುವುದಕ್ಕಿಂತಲೂ ಪ್ರಾಮಾಣಿಕವಾದ ಹೆಜ್ಜೆ ಎಂದರೆ ಭ್ರಷ್ಟ ಪರಂಪರೆಯನ್ನು ಬೇರಿನಿಂದಲೇ ಉತ್ಪಾಟನೆ ಮಾಡುವುದು. ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಈ ಮಹತ್ಕಾರ್ಯಕ್ಕೆ ಮುಂದಾಗುವುದೇ ಕಾದು ನೋಡಬೇಕಿದೆ. ಏಕೆಂದರೆ ಈ ಬೇರುಗಳ ವ್ಯಾಪ್ತಿ ಇಡೀ ರಾಜಕೀಯ ವಲಯವನ್ನೇ ಆವರಿಸಿದ್ದು, ಆಪರೇಷನ್‌ ಹಸ್ತದ ನೆರಳಿನಲ್ಲಿ ಇದೇ ಬೇರುಗಳು ಮತ್ತೊಮ್ಮೆ ಚಿಗುರುವ ಸಾಧ್ಯತೆಗಳೂ ಇವೆ. ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ನಿಷ್ಠೆ-ಬದ್ಧತೆಯನ್ನು ಪ್ರದರ್ಶಿಸಬೇಕಿರುವುದು ಇಲ್ಲಿ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಭವಿಷ್ಯದ ನಡೆಯ ಸವಾಲುಗಳು

ಈ ಸಂಕಷ್ಟ, ಸವಾಲುಗಳ ನಡುವೆಯೇ ಈ ಬಾರಿಯ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದಂತಿದೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಗ್ಯಾರಂಟಿ ಯೋಜನೆಗಳಿಂದ ಉಂಟಾಗಿರುವ ಹಣಕಾಸು ಬಿಕ್ಕಟ್ಟಿನ ನಡುವೆ ಈ ಬಾರಿ ಸರಳ ದಸರಾ ಆಚರಿಸಲು ಸರ್ಕಾರ ನಿರ್ಧರಿಸುವುದು ಒಳಿತು. ಅದ್ಧೂರಿ ಆಚರಣೆಯನ್ನು ಭೌತಿಕವಾಗಿ ಅಳೆಯದೆ ಸಾಂಸ್ಕೃತಿಕವಾಗಿ ಅದ್ಧೂರಿಯಾಗಿ ಆಚರಿಸುವ ಮೂಲಕ ಅನಗತ್ಯ ವೈಭೋಗ, ಆಡಂಬರ, ದುಂದು ವೆಚ್ಚ ಮತ್ತು ಅಧಿಕಾರ ವಲಯದ ಆಟಾಟೋಪಗಳನ್ನು ನಿಗ್ರಹಿಸುವ ಮೂಲಕ ರಾಜ್ಯ ಸರ್ಕಾರ ಸರಳ ದಸರಾ ಆಚರಿಸಬಹುದು. ನಾಡು-ನಾಡಿನ ಕೃಷಿಕ ಸಮುದಾಯ-ನಾಡ ಜನತೆ ಸಂಕಷ್ಟದಲ್ಲಿರುವಾಗ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಅತಾರ್ಕಿಕ ನಡೆಯಾಗುತ್ತದೆ. ಹೊಸ ಸರ್ಕಾರದ ಪ್ರಥಮ ದಸರಾ ಉತ್ಸವವೇ ಆದರೂ, ಅಲಂಕಾರಿಕವಾಗಿ ಮಾಡಲಾಗುವ ದುಂದು ವೆಚ್ಚಗಳನ್ನು ಕಡಿತಗೊಳಿಸಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ನಾಡಹಬ್ಬವನ್ನು ಸರಳವಾಗಿ ಆಚರಿಸಬಹುದು.

ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಿದ್ಧರಾಮಯ್ಯ ಸರ್ಕಾರದ ಮುಂದಿರುವ ಮತ್ತೊಂದು ಸವಾಲು ಸಾಂಸ್ಕೃತಿಕ ವಲಯದಲ್ಲಿ, ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ಎದುರಾಗುತ್ತದೆ. ಅಧಿಕಾರಾಕಾಂಕ್ಷೆ ಎನ್ನುವುದು ರಾಜಕೀಯ ಚೌಕಟ್ಟುಗಳನ್ನೂ ಮೀರಿ ಸಾಂಸ್ಕೃತಿಕ ಕ್ಷೇತ್ರವನ್ನೂ ಆವರಿಸಿರುವುದರಿಂದ ಈ ಹುದ್ದೆಗಳಿಗಾಗಿ ಮಹತ್ವಾಕಾಂಕ್ಷೆಯುಳ್ಳ ಅಭ್ಯರ್ಥಿಗಳ ದಂಡು ಈಗಾಗಲೇ ಸರ್ಕಾರದ ಕದ ತಟ್ಟುತ್ತಿರುತ್ತದೆ. ಹಿಂದಿನ ಸರ್ಕಾರದಲ್ಲಿ ಕರ್ನಾಟಕದ ಸಾಂಸ್ಕೃತಿಕ ಜಗತ್ತು ಎದುರಿಸಿರುವ ಅಪಾಯಗಳು ಮತ್ತು ಅನುಭವಿಸಿರುವ ಪೆಟ್ಟುಗಳನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳನ್ನೂ , ರಂಗಸಮಾಜ, ರಂಗಾಯಣ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪುನಾರಚಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶಾಲ ತಳಹದಿಯ ತಜ್ಞರ ಸಮಿತಿಯೊಂದನ್ನು ರಚಿಸಿ, ಅನುಭವಿಗಳನ್ನು ಸಂಪರ್ಕಿಸುವ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಕರ್ನಾಟಕದ ಸಾಂಸ್ಕೃತಿಕ ಭೂಮಿಕೆಯನ್ನು ಪುನಃ ಪ್ರಜಾಸತ್ತಾತ್ಮಕವಾಗಿ ಅರಳುವಂತೆ ಮಾಡುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿರುವುದನ್ನು ಅಲಕ್ಷಿಸಲಾಗುವುದಿಲ್ಲ.

ಈ ಹಲವು ಸವಾಲುಗಳ ನಡುವೆಯೇ ಕಾಂಗ್ರೆಸ್‌ ಸರ್ಕಾರ ತನ್ನ ಮೊದಲ ನೂರು ದಿನಗಳನ್ನು ಪೂರೈಸಿದೆ. ತನ್ನನ್ನು ಆಯ್ಕೆ ಮಾಡಿದ ಸಾಮಾನ್ಯ ಜನತೆಯೇ ಪ್ರಜಾಸತ್ತಾತ್ಮಕ ವಿರೋಧ ಪಕ್ಷದಂತೆ ಸದಾ ಜಾಗೃತಾವಸ್ಥೆಯಲ್ಲಿರುತ್ತದೆ ಎಂಬ ಪರಿವೆಯೊಂದಿಗೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ತನ್ನ ಜನಪರ ಕೆಲಸಗಳನ್ನು ಸಮರ್ಪಕವಾಗಿ, ನ್ಯಾಯಯುತವಾಗಿ ನಿಭಾಯಿಸುತ್ತಾ ಸಾಂವಿಧಾನಿಕ ಬದ್ಧತೆಯೊಂದಿಗೆ ಐದು ವರ್ಷಗಳ ಆಳ್ವಿಕೆಯನ್ನು ಪೂರೈಸುವುದೆಂದು ಆಶಿಸೋಣ.

-೦-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸೌಜನ್ಯ ರೇಪ್‌ & ಮರ್ಡರ್:‌ ಸೆರಗೊಡ್ಡಿ ನ್ಯಾಯ ಬೇಡಿದ ಸೌಜನ್ಯ ತಾಯಿ

Next Post

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದ ಸಿದ್ದರಾಮಯ್ಯ..! ಕಾರಣ ಎನು ಗೊತ್ತಾ..?

Related Posts

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು
Top Story

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

by ಪ್ರತಿಧ್ವನಿ
April 20, 2026
0

ವಿಶೇಷ ಲೇಖನ : ನಾ ದಿವಾಕರ ( ಸಂವಾದ ಮಾಸಪತ್ರಿಕೆಯ ಏಪ್ರಿಲ್ 2026 ರ ಅಂಬೇಡ್ಕರ್ ವಿಶೇಷ ಸಂಚಿಕೆಗೆ ಬರೆದ ಲೇಖನ ) ಭಾಗ 2 ಹಕ್ಕು...

Read moreDetails
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
Next Post
ಶಿವಮೊಗ್ಗ ದಸರಾ

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದ ಸಿದ್ದರಾಮಯ್ಯ..! ಕಾರಣ ಎನು ಗೊತ್ತಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada