ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಸಾಯುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಕಳೆದ ಸೋಮವಾರ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸೋಂಕಿತರು ಮೃತಪಟ್ಟ ನಂತರ ಮೈಸೂರು, ಚಾಮರಾಜನಗರ ಮತ್ತು ಮಂಡ್ಯದ ಜಿಲ್ಲಾಡಳಿತಗಳು ಚುರುಕಾಗಿದ್ದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬಹಳ ಮುತುವರ್ಜಿ ವಹಿಸಿ ಸ್ವತಃ ಆಕ್ಸಿಜನ್ ಸರಬರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದು ಆಡಳಿತ ಪಕ್ಷದ ಜನಪ್ರತಿನಿಧಿಗಳಲ್ಲೇ ಜಟಾಪಟಿಗೂ ಕಾರಣವಾಗಿದೆ.
ಆಕ್ಷಿಜನ್ ತೆಗೆದುಕೊಂಡು ಹೋಗಲು ಮೈಸೂರಿಗೆ ಬರುತ್ತಿರುವ ಮಂಡ್ಯ ಮತ್ತು ಚಾಮರಾಜನಗರ ಅಧಿಕಾರಿಗಳು ಮತ್ತು ಉಸ್ತುವಾರಿ ಸಚಿವರ ವಿರುದ್ದ ಶುಕ್ರವಾರ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗಿ ಬಿದ್ದಿದ್ದಾರೆ. ಚಾಮರಾಜನಗರದಲ್ಲಿ ನಡೆದ ದುರಂತ ಘಟನೆಯನ್ನೇ ಮುಂದಿಟ್ಟುಕೊಂಡು, ನೆರೆ ಜಿಲ್ಲೆಯ ಉಸ್ತುವಾರಿ ಸಚಿವರು ಮೈಸೂರಿಗೆ ಖುದ್ದಾಗಿ ಬಂದು ಆಮ್ಲಜನಕದ ಸಿಲಿಂಡರ್ ಕೊಂಡೊಯ್ಯುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಂಸದ ಪ್ರತಾಪ ಸಿಂಹ ಕಿಡಿಕಾರಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಯೇ ಸ್ವತಃ ಪೊಲೀಸ್ ಬೆಂಗಾವಲಿನೊಂದಿಗೆ ಮೈಸೂರಿಗೆ ಬಂದು, ಆಮ್ಲಜನಕದ ಮರು ಭರ್ತಿ (ರೀ ಫಿಲ್ಲಿಂಗ್) ಘಟಕದಿಂದ ಸಿಲಿಂಡರ್ ಕೊಂಡೊಯ್ಯುವುದು ಸರಿಯೇ..? ಎಂದು ಸಂಸದರು ಮಾಧ್ಯಮದವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ನೆರೆ ಜಿಲ್ಲೆಯ ಉಸ್ತುವಾರಿ ಸಚಿವರು ದಬ್ಬಾಳಿಕೆ ಮಾಡುವುದನ್ನು ತಕ್ಷಣವೇ ಬಿಡಬೇಕು. ಸಚಿವ ಸಂಪುಟ ಸಭೆಯಲ್ಲಿ ತಮ್ಮ ಜಿಲ್ಲೆಗೆ ಎಷ್ಟು ಆಮ್ಲಜನಕ ಬೇಕಿದೆ ಎಂಬ ಕೋಟಾವನ್ನು ಮುಖ್ಯಮಂತ್ರಿಯಿಂದಲೇ ನಿಗದಿ ಮಾಡಿಸಿಕೊಳ್ಳಬೇಕು. ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ, ತಮ್ಮ ಜಿಲ್ಲೆಯ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪೊಲೀಸ್ ಬೆಂಗಾವಲಿನೊಂದಿಗೆ ಮೈಸೂರಿಗೆ ಬಂದು, ಮರು ಭರ್ತಿ ಘಟಕದಲ್ಲೇ ಠಿಕಾಣಿ ಹೂಡುವುದು ಸರಿಯಲ್ಲ’ ಎಂದು ತಮ್ಮದೇ ಪಕ್ಷದ ಸಚಿವರ ಕಾರ್ಯವೈಖರಿಯನ್ನು ಪ್ರತಾಪ್ ಸಿಂಹ ಖಂಡಿಸಿದ್ದಾರೆ.
ಮೈಸೂರಿನಲ್ಲೇನು ಆಮ್ಲಜನಕ ಉತ್ಪಾದಿಸುತ್ತಿಲ್ಲ. ಇಲ್ಲಿ ನಡೆದಿರುವುದು ಮರು ಭರ್ತಿಯಷ್ಟೇ. ಈಗಾಗಲೇ ನಮ್ಮಲ್ಲೇ ಆಮ್ಲಜನಕದ ಕೊರತೆ ಸಾಕಷ್ಟು ಕಾಡುತ್ತಿದೆ. ಬೇಕಿದ್ದರೇ ನಿಮ್ಮ ಜಿಲ್ಲೆಯ ಕೋಟಾವನ್ನು ನಿಮ್ಮಲ್ಲಿಗೆ ತರಿಸಿಕೊಂಡು ಮರು ಭರ್ತಿ ಮಾಡಿಕೊಳ್ಳಿ. ಅನಗತ್ಯವಾಗಿ ನಮಗೆ ತೊಂದರೆ ಕೊಡಬೇಡಿ. ನೀವೂ ಇದೇ ರೀತಿ ದಬ್ಬಾಳಿಕೆ ಮುಂದುವರೆಸಿದರೆ, ನಾವೂ ಪ್ರತಿರೋಧಿಸಬೇಕಾಗುತ್ತದೆ. ಆಗ ನಮ್ಮಿಬ್ಬರ ನಡುವೆಯೇ ಬೀದಿ ಕಿತ್ತಾಟ ನಡೆಯುವುದು ಬೇಡ. ಮೇ ಅಂತ್ಯದ ವೇಳೆಗೆ ನಮ್ಮಲ್ಲೇ ಸೋಂಕಿತರ ಸಂಖ್ಯೆ ಇನ್ನೂ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಆಮ್ಲಜನಕ ಸಹಿತ ಹಾಸಿಗೆ ಸಿದ್ಧತೆ ಭರದಿಂದ ನಡೆದಿದೆ. ರಾಜ್ಯ ಸರ್ಕಾರ ಸಹ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಆಮ್ಲಜನಕ ಪೂರೈಕೆಯ ಪ್ರಮಾಣವನ್ನು ನಿಗದಿಪಡಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಮೈಸೂರಿನಲ್ಲಿ ನಿತ್ಯವೂ 75 ಕಿಲೋಲಿಟರ್ (ಕೆಎಲ್) ದ್ರವ ಆಮ್ಲಜನಕವನ್ನು ಮರುಭರ್ತಿ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ತಯಾರಕರು ಇಲ್ಲವಾದರೂ, ಇಲ್ಲಿ ಐದು ಮರುಪೂರಣ ಘಟಕಗಳಿವೆ, ಅವು ವಿವಿಧ ಸ್ಥಳಗಳಿಂದ ಬೃಹತ್ ಪ್ರಮಾಣದ ಆಮ್ಲಜನಕವನ್ನು ಪಡೆಯುತ್ತಿವೆ. ಈ ಮರುಪೂರಣ ಘಟಕಗಳು ಬಳ್ಳಾರಿಯ ಬಳ್ಳಾರಿ ಆಕ್ಸಿಜನ್ ಕಂಪೆನಿ, ಕೊಪ್ಪಳದ ಪ್ರಾಕ್ಸೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬೆಂಗಳೂರಿನ ಭೋರುಕಾ ಗ್ಯಾಸ್ ಲಿಮಿಟೆಡ್ನಿಂದ ಎಲ್ಎಂಒ ಅನ್ನು ಬೃಹತ್ ಪ್ರಮಾಣದಲ್ಲಿ ತರಿಸಿಕೊಳ್ಳುತ್ತವೆ ಲಾರಿಗಳ ಮೂಲಕ ಬರುವ ಆಕ್ಸಿಜನ್ ನ್ನು ಸಣ್ಣ ಸಿಲಿಂಡರ್ ಗಳಿಗೆ ಭರ್ತಿ ಮಾಡಲಾಗುತ್ತದೆ.
ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ಅವರು ಇಲ್ಲಿಯೇ ಮೊಕ್ಕಾಂ ಹೂಡಿದ್ದು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು 15 ಮಂದಿ ಸದಸ್ಯರಿರುವ ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಇನ್ನು ಮುಂದೆ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಶಾಸಕರು ಸದಸ್ಯರಾಗಿರುವ ಈ ಕಾರ್ಯಪಡೆ ಕೋವಿಡ್ ನಿಯಂತ್ರಣ ಮಾತ್ರವಲ್ಲ ಆಮ್ಲಜನಕ ಪೂರೈಕೆಯ ಮೇಲೂ ನಿಗಾ ವಹಿಸಲಿದೆ. ಒಬ್ಬೊಬ್ಬ ಅಧಿಕಾರಿಗಳಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಬಗೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಇಲ್ಲೂ ಇದೇ ರೀತಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಲಾಗಿದೆ. ಇದರ ಉದ್ದೇಶ ಕೋವಿಡ್ ವೇಗವಾಗಿ ನಿಯಂತ್ರಣಕ್ಕೆ ತರುವುದಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಹಲವು ತಿಂಗಳ ಕಾಲ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ದೇಶದಲ್ಲಿಯೇ ಚಾಮರಾಜನಗರ ಹೆಸರುವಾಸಿಯಾಗಿತ್ತು. ಆದರೆ, ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದಿದ್ದಾರೆ. ಕೇವಲ ಅಧಿಕಾರಿಗಳಿಂದ ಮಾತ್ರವೇ ಕೋವಿಡ್ ನಿಯಂತ್ರಣವಾಗುವುದಿಲ್ಲ. ಸಾರ್ವಜನಿಕರ ಸಹಕಾರ ತೀರಾ ಅಗತ್ಯ ಇದೆ. ಆಸ್ಪತ್ರೆಯ ಒಳಗೆ ಬಂದರೆ ವೇದನೆಪಡುವಂತಹ ಸ್ಥಿತಿ. ಹೊರಗೆ ಸಾರ್ವಜನಿಕರು ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಇನ್ನಾದರೂ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.ಕರೋನಾ ಸೋಂಕಿತರೂ ಸಹ ತಡ ಮಾಡದೇ ಆಸ್ಪತ್ರೆಗೆ ಬರಬೇಕು. ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬಂದರೆ ನಿಜಕ್ಕೂ ಏನು ಮಾಡಲಾಗದು. ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಅಥವಾ ಕರೋನಾ ಪಾಸಿಟೀವ್ ಆದ ನಂತರ ಒಂದೊಂದು ದಿನವೂ ಮುಖ್ಯ. ಒಂದೊಂದು ದಿನ ಕಳೆಯುತ್ತಿದ್ದಂತೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದನ್ನು ಯಾರೂ ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.