ಲಾಕ್ ಡೌನ್ ಕ್ರಮಕ್ಕೆ ಕೋವಿಡ್ ಡೇಟಾ ಫೀಡ್ ಬ್ಯಾಕ್ ಹೇಳುವುದೇನು?

ಒಂದು ಕಡೆ ರಾಜ್ಯದಲ್ಲಿ ದೈನಂದಿನ ಕೋವಿಡ್ ಪ್ರಕರಣ ಸಂಖ್ಯೆ ಮತ್ತು ಸೋಂಕು ದೃಢ ಶೇಕಡಾವಾರು ಪ್ರಮಾಣಗಳೆರಡೂ ಇಳಿಮುಖವಾಗುತ್ತಿವೆ ಎನ್ನುತ್ತಿರುವ ರಾಜ್ಯ ಸರ್ಕಾರ, ಅದೇ ಹೊತ್ತಿಗೆ ಈಗಿನ ಬಿಗಿ ಲಾಕ್ ಡೌನ್ ಇನ್ನಷ್ಟು ದಿನ ಮುಂದುವರಿಸಲು ಸಿದ್ಧತೆ ನಡೆಸಿದೆ.

ಆದರೆ, ರಾಜ್ಯದಲ್ಲಿ ವರದಿಯಾಗುತ್ತಿರುವ ದೈನಂದಿನ ಕರೋನಾ ಪ್ರಕರಣಗಳ ಪ್ರಮಾಣದಲ್ಲಿ ಆಗಿರುವ ಇಳಿಮುಖಕ್ಕೆ ಅಸಲೀ ಕಾರಣವೇನು? ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆ ಕುಸಿತಕ್ಕೆ ನಿಜವಾಗಿಯೂ ಕಳೆದ 20 ದಿನಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಕಾರಣವೇ? ಎರಡನೇ ಅಲೆಯ ವ್ಯಾಪಕ ಸೋಂಕು ಪ್ರಸರಣವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ಲಾಕ್ ಡೌನ್ ಕ್ರಮ ಕೆಲವೇ ದಿನಗಳಲ್ಲಿ ಯಶಸ್ವಿಯಾಗಿಬಿಟ್ಟಿತೆ? ಅಥವಾ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ದೈನಂದಿನ ಕರೋನಾ ಪರೀಕ್ಷೆಗಳನ್ನೇ ಕಡಿಮೆ ಮಾಡಿರುವುದರ ಪರಿಣಾಮವಾಗಿ ಪ್ರಕರಣಗಳು ಕುಸಿದಿವೆಯೇ? ಅಥವಾ ಇನ್ನಾವುದಾದರೂ ಕಾರಣಗಳಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿ, ಲಾಕ್ ಡೌನ್ ಮತ್ತು ಕರೋನಾ ನಿಯಂತ್ರಣದ ಕುರಿತ ತನ್ನ ಕ್ರಮಗಳಿಗೆ ರಾಜ್ಯದ ಸಾರ್ವಜನಿಕರ ಬೆಂಬಲ ಪಡೆಯುವ ಯತ್ನವನ್ನು ಸರ್ಕಾರ ನಡೆಸಿಲ್ಲ.

ಬದಲಾಗಿ, 20 ದಿನಗಳ ಲಾಕ್ ಡೌನ್ ಹೇರಿಕೆಯ ತನ್ನ ನಿರ್ಧಾರಕ್ಕೆ ಪೂರಕ ಸಮರ್ಥನೆಗಳನ್ನು, ಸಾಕ್ಷ್ಯಗಳನ್ನು ಸೃಷ್ಟಿಸಲೋ ಎಂಬಂತೆ ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ದೈನಂದಿನ ಕರೋನಾ ಪರೀಕ್ಷೆಯ ಪ್ರಮಾಣವನ್ನೇ ಗಣನೀಯವಾಗಿ ತಗ್ಗಿಸಿ, ಆ ಮೂಲಕ ಒಟ್ಟಾರೆ ದೈನಂದಿನ ಹೊಸ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಬಿಂಬಿಸತೊಡಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ, ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕರೋನಾ ಪ್ರಕರಣಗಳು ಇಳಿಮುಖವಾಗಿವೆ. ಅದಕ್ಕೆ ಮುಖ್ಯ ಕಾರಣ ಬಿಗಿ ಲಾಕ್ ಡೌನ್ ಎನ್ನುವ ಮೂಲಕ ಲಾಕ್ ಡೌನ್ ನ ತಮ್ಮ ಪ್ರಯತ್ನವನ್ನು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ಲಾಕ್ ಡೌನ್ ನನ್ನು ಇನ್ನಷ್ಟು ದಿನ ವಿಸ್ತರಿಸುವ ಸೂಚನೆಯನ್ನು ನೀಡಿದ್ದಾರೆ. ಅದೇ ಹೊತ್ತಿಗೆ, ಕರೋನಾ ನಿರ್ವಹಣೆ ಕುರಿತ ತಜ್ಞರ ಟಾಸ್ಕ್ ಫೋರ್ಸ್ ಕೂಡ ಕರೋನಾವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬಿಗಿ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಒಲವು ತೋರಿದೆ ಎಂದು ವರದಿಯಾಗಿದೆ.

ಆದರೆ, ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಈ ಇಪ್ಪತ್ತು ದಿನಗಳಲ್ಲಿ ಎಷ್ಟು ಫಲ ಕೊಟ್ಟಿದೆ? ಎಂಬ ಪ್ರಶ್ನೆಗೆ ಕೋವಿಡ್ ಸೋಂಕಿನ ಕುರಿತ ರಾಜ್ಯ ಸರ್ಕಾರದ ಅಧಿಕೃತ ದೈನಂದಿನ ಬುಲೆಟಿನ್ ನ ವಿವರಗಳೇ ಉತ್ತರ ಹೇಳುತ್ತಿವೆ.

ಏಪ್ರಿಲ್ 28ರಿಂದ ಜಾರಿಗೆ ಬಂದ ಲಾಕ್ ಡೌನ್ ರೀತಿಯ ನಿರ್ಬಂಧದಿಂದಾಗಿ ಪ್ರಕರಣಗಳನ್ನು ನಿಯಂತ್ರಿಸುವುದು ಸಾಧ್ಯವಾಗಿಲ್ಲ. ದೇಶದಲ್ಲೇ ಆತಂಕಕಾರಿ ಪ್ರಮಾಣದಲ್ಲಿ ರಾಜ್ಯದಲ್ಲಿ ಹೊಸ ಪ್ರಕರಣಗಳು ದಾಖಲಾಗುತ್ತಿವೆ ಮತ್ತು ಸಾವಿನ ಪ್ರಕರಣಗಳು ಕೂಡ ಹೆಚ್ಚುತ್ತಿವೆ ಎಂಬ ಹಿನ್ನೆಲೆಯಲ್ಲಿ ಮೇ 10ರಂದು ಬಿಗಿ ಲಾಕ್ ಡೌನ್ ಜಾರಿಗೆ ಬರುವ ಹಿಂದಿನ ದಿನ ರಾಜ್ಯದ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 47,500 ಇದ್ದ ಹೊಸ ಪ್ರಕರಣಗಳ ಪ್ರಮಾಣ, ಇದೀಗ ಮೇ 17ರಂದು 38,600ರ ಆಸುಪಾಸಿನಲ್ಲಿದೆ. ಕಠಿಣ ಲಾಕ್ ಡೌನ್ ಜಾರಿಗೆ ಬಂದ ಈ ಒಂದು ವಾರದಲ್ಲಿ ಒಟ್ಟು ಪ್ರಕರಣಗಳಲ್ಲಿ ಆಗಿರುವ ಸುಮಾರು 9 ಸಾವಿರದಷ್ಟು ಕುಸಿತ ಲಾಕ್ ಡೌನ್ ಪರಿಣಾಮವೇ ಎಂಬುದು ಈಗಿರುವ ಪ್ರಶ್ನೆ. ಏಕೆಂದರೆ, ಇದೇ ಅವಧಿಯಲ್ಲಿ ದೈನಂದಿನ ಪರೀಕ್ಷೆ ಪ್ರಮಾಣದಲ್ಲಿ ಕೂಡ, ಸರಿಸುಮಾರು ಪ್ರಕರಣಗಳ ಇಳಿಕೆಯ ಗತಿಗೆ ತಕ್ಕಷ್ಟೇ ಕುಸಿತವಾಗಿದೆ!

ಮೇ 9ರಂದು 1,46,491 ಕರೋನಾ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಿದ್ದರೆ, ಮೇ 17ರಂದು ಆ ಪ್ರಮಾಣ ಕೇವಲ 97,235ಕ್ಕೆ ಕುಸಿದಿದೆ. ಅಂದರೆ, ದೈನಂದಿನ ಒಟ್ಟು ಪರೀಕ್ಷೆಯ ಪ್ರಮಾಣದಲ್ಲಿ ಸುಮಾರು 50ಸಾವಿರದಷ್ಟು ಭಾರೀ ಕಡಿತ ಮಾಡಲಾಗಿದ್ದು, ಹತ್ತು ದಿನಗಳ ಹಿಂದೆ ಮತ್ತು ಈಗಿನ ನಡುವೆ ಮೂರನೇ ಒಂದು ಭಾಗದಷ್ಟು ಪರೀಕ್ಷೆ ಕಡಿತ ಮಾಡಲಾಗಿದೆ! ಸೋಂಕಿನ ತೀವ್ರತೆಯನ್ನು ಅಳತೆ ಮಾಡುವ ಏಕೈಕ ಮಾನದಂಡವಾದ ಸೋಂಕು ಪತ್ತೆ ಪರೀಕ್ಷೆಯಲ್ಲಿ ಇಷ್ಟು ಪ್ರಮಾಣದ ಕಡಿತ ಮಾಡಿ, ದೈನಂದಿನ ಪ್ರಕರಣಗಳ ಪ್ರಮಾಣದಲ್ಲಿ, ಪರೀಕ್ಷೆ ಕಡಿತಕ್ಕೆ ಹೋಲಿಸಿದರೆ ಆಗಿರುವ ತೀರಾ ಕಡಿಮೆ ಎನ್ನಬಹುದಾದ ಕೇವಲ 8-9 ಸಾವಿರದ ಕುಸಿತವನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಸರ್ಕಾರ, ರಾಜ್ಯದ ಜನತೆಗೆ ರವಾನಿಸುತ್ತಿರುವ ಸಂದೇಶವೇನು? ಎಂಬುದು ಪ್ರಶ್ನೆ.

ಈ ನಡುವೆ, ರಾಜ್ಯಾದ್ಯಂತ ಸೋಂಕು ಪತ್ತೆ ಪರೀಕ್ಷೆಗಳನ್ನು ಕಡಿತ ಮಾಡುವಂತೆ ಪ್ರಯೋಗಾಲಯಗಳಿಗೆ ಸರ್ಕಾರವೇ ಸೂಚನೆ ನೀಡಿದೆ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಹಾಗೇ, ಆರ್ ಟಿ ಪಿಸಿಆರ್ ಪರೀಕ್ಷೆಗಳ ಫಲಿತಾಂಶವನ್ನು 24 ಗಂಟೆಯೊಳಗೇ ನೀಡಬೇಕು ಎಂಬ ಸುತ್ತೋಲೆ ಹೊರಡಿಸಿರುವುದು ಕೂಡ ಪರೋಕ್ಷವಾಗಿ 24 ಗಂಟೆಯಲ್ಲಿ ಫಲಿತಾಂಶ ನೀಡುವಷ್ಟೇ ಪರೀಕ್ಷೆ ಮಾದರಿ ಸಂಗ್ರಹಿಸಿ ಎನ್ನುವ ಸೂಚನೆ. ಒಟ್ಟಾರೆ ಸರ್ಕಾರವೇ ನೇರವಾಗಿ ಮತ್ತು ಪರೋಕ್ಷವಾಗಿ ಪರೀಕ್ಷೆಗಳನ್ನು ತಗ್ಗಿಸುವ ಮೂಲಕ ಸೋಂಕು ನಿಯಂತ್ರಣದ ಚಿತ್ರ ನೀಡುವ ಯತ್ನ ನಡೆಸುತ್ತಿದೆ ಎನ್ನಲಾಗುತ್ತಿದೆ.

ಹಾಗೇ, ಸೋಂಕಿನ ಕುರಿತ ಕರಾರುವಾಕ್ಕು ಮಾಹಿತಿ ನೀಡುವ ಮತ್ತೊಂದು ಮಾನದಂಡವೆಂದೇ ಹೇಳಲಾಗುವ, ಪರೀಕ್ಷೆಯಲ್ಲಿ ಶೇಕಡವಾರು ಸೋಂಕು ದೃಢಪಡುವ ಪ್ರಮಾಣ ಕೂಡ ಲಾಕ್ ಡೌನ್ ಪರಿಣಾಮಗಳ ಬಗ್ಗೆ ಸರ್ಕಾರದ ವಾದಕ್ಕೆ ಪುಷ್ಟಿ ನೀಡುವ ಬದಲು, ವ್ಯತಿರಿಕ್ತ ಸಂಗತಿಯನ್ನು ಹೇಳುತ್ತಿದೆ. ಮೇ 9ರಂದು ಕಠಿಣ ಲಾಕ್ ಡೌನ್ ಹೇರುವ ಹಿಂದಿನ ದಿನ ರಾಜ್ಯದಲ್ಲಿ ಒಟ್ಟು ಪರೀಕ್ಷೆಗೊಳಗಾದವರ ಪೈಕಿ ಸೋಂಕು ದೃಢ ಪ್ರಮಾಣ(ಟಿಪಿಆರ್) ಶೇ.32.71 ಇದ್ದರೆ, ಇದೀಗ ಮೇ 17ರಂದು ಆ ಪ್ರಮಾಣ 39.70 ಶೇಕಡಕ್ಕೆ ಏರಿದೆ! ಅಂದರೆ; ಸೋಂಕು ಪತ್ತೆ ಪರೀಕ್ಷೆಯಲ್ಲಿ ಭಾರೀ ಕಡಿತ ಮಾಡಿದಾಗ್ಯೂ ಸೋಂಕು ದೃಢ ಪ್ರಮಾಣ ಭಾರೀ ಏರಿಕೆ ಕಂಡಿದೆ. ಇದು ಸೋಂಕು ಮತ್ತು ಲಾಕ್ ಡೌನ್ ಕುರಿತ ಗ್ರಹಿಕೆಗೆ ತದ್ವಿರುದ್ಧ ಸಂದೇಶ ನೀಡುತ್ತಿದೆ.

ಏಕೆಂದರೆ, ಜನ ಮುಕ್ತವಾಗಿ ಓಡಾಡಿಕೊಂಡಿದ್ದರೆ, ಮದುವೆ, ಸಭೆ-ಸಮಾರಂಭಗಳಲ್ಲಿ ಗುಂಪುಗೂಡುತ್ತಿದ್ದರೆ ಸೋಂಕು ವ್ಯಾಪಕವಾಗುತ್ತದೆ ಎಂಬ ತಜ್ಞರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜನಸಾಮಾನ್ಯರ ದುಡಿಮೆ, ಉದ್ಯೋಗ, ವ್ಯವಹಾರವನ್ನೆಲ್ಲಾ ಬಲಿಕೊಟ್ಟು ಲಾಕ್ ಡೌನ್ ಹೇರಲಾಗಿದೆ. ಆದರೆ, ಅಂತಹ ಕಠಿಣ ಲಾಕ್ ಡೌನ್ ಹೊರತಾಗಿಯೂ, ಸೋಂಕು ಪತ್ತೆ ಪರೀಕ್ಷೆಗಳ ಕಡಿತದ ಹೊರತಾಗಿಯೂ ಸೋಂಕು ದೃಢ ಪ್ರಮಾಣ ಭಾರೀ ದರದಲ್ಲಿ ಏರುಗತಿಯಲ್ಲೇ ಮುಂದುವರಿದೆ ಎಂದರೆ; ಲಾಕ್ ಡೌನ್ ಪರಿಣಾಮಗಳ ಬಗ್ಗೆಯೇ ಅನುಮಾನಗಳು ಏಳುವುದು ಸಹಜ.

ಜೊತೆಗೆ, ಪರೀಕ್ಷೆಗೊಳಗಾದ ನೂರಕ್ಕೆ ಸುಮಾರು 40 ಮಂದಿ(ಉತ್ತರಕನ್ನಡ, ಬಳ್ಳಾರಿ, ಮೈಸೂರು, ಶಿವಮೊಗ್ಗ, ಹಾಸನದಲ್ಲಿ ಶೇ,40ಕ್ಕೂ ಅಧಿಕ ಟಿಪಿಆರ್ ಇದೆ) ಸೋಂಕಿತರಾಗಿದ್ದಾರೆ ಎಂದಾದರೆ, ಲಾಕ್ ಡೌನ್ ನಂತಹ ಕ್ರಮದಿಂದ ಎಷ್ಟರಮಟ್ಟಿಗೆ ಪ್ರಯೋಜವಾಗುತ್ತದೆ? ಎಂಬುದು ಪ್ರಶ್ನೆ.

ಆ ಹಿನ್ನೆಲೆಯಲ್ಲೇ, ಡಾ ಶ್ರೀನಿವಾಸ ಕಕ್ಕಿಲಾಯ ಅವರಂತಹ ತಜ್ಞರು, ಕರೋನಾ ವ್ಯಾಪಕವಾಗಿ ಬಹುತೇಕ ಮಂದಿಗೆ ಹರಡಿರುವ ಹೊತ್ತಿನಲ್ಲಿ ಕೆಲವರಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿರಬಹುದು, ಕೆಲವರಿಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದೇ ಇರಬಹುದು, ಹಾಗೇ ಕೆಲವರಿಗೆ ಕೇವಲ ನಗಡಿಯಂತಹ ಲಕ್ಷಣ ಕಾಣಿಸಿಕೊಂಡು ಮೂರ್ನಾಲ್ಕು ದಿನದಲ್ಲಿ ತನ್ನಷ್ಟಕ್ಕೆ ತಾನೇ ವಾಸಿಯಾಗಲೂ ಬಹುದು. ಹಾಗಾಗಿ ಸಮುದಾಯಿಕ ಪ್ರಸರಣವಾಗಿರುವ ಈ ಹಂತದಲ್ಲಿ ಸೋಂಕು ಪತ್ತೆ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ, ಸೋಂಕು ದೃಢಪಟ್ಟವರನ್ನು ಕೋವಿಡ್ ಸೆಂಟರುಗಳಲ್ಲಿ ಕೂಡಿಹಾಕುವುದು ಮುಂತಾದ ಕ್ರಮಗಳು ಸಮಂಜಸವಲ್ಲ. ಬದಲಾಗಿ, ಈಗ ಬೇಕಿರುವುದು ರೋಗ ಲಕ್ಷಣ ಕಾಣಿಸಿಕೊಂಡವರ ಮೇಲೆ ವೈದ್ಯಕೀಯ ನಿಗಾ ವಹಿಸುವುದು ಮತ್ತು ಒಂದು ವೇಳೆ ಅವರಿಗೆ ಉಸಿರಾಟದ ತೊಂದರೆಯಂತಹ ಗಂಭೀರ ಸಮಸ್ಯೆಗಳಾದಲ್ಲಿ ಮಾತ್ರ ಅಂಥವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತಹ ವ್ಯವಸ್್ಥೆ ಅಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅದೇ ಹೊತ್ತಿಗೆ ರಾಜ್ಯದ ಜನರಲ್ಲಿ ಬಹುಪಾಲು ಮಂದಿಗೆ ಸೋಂಕು ಹರಡಿರುವಾಗ, ಈ ಹಂತದಲ್ಲಿ ಕಠಿಣ ಲಾಕ್ ಡೌನ್ ನಂತಹ ಕ್ರಮಗಳು ಕೂಡ ಹೆಚ್ಚಿನ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ಈ 20 ದಿನಗಳ ಲಾಕ್ ಡೌನ್ ಅವಧಿಯ ಕೋವಿಡ್ ಸೋಂಕಿನ ಕುರಿತ ನಿರ್ಣಾಯಕ ಅಂಕಿಅಂಶಗಳು ತೋರಿಸಿಕೊಟ್ಟಿವೆ. ಹಾಗಾಗಿ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ದಾರಿಯಾಗಿ, ಅಥವಾ ಸೋಂಕು ಮತ್ತು ಸಾಂಕ್ರಾಮಿಕಗಳ ಬಗ್ಗೆ ಸರಿಯಾದ ಮಾಹಿತಿಯಾಗಲೀ, ಅನುಭವವಾಗಲೀ ಇರದ ಕೆಲವು ತಜ್ಞರ ಅಭಿಪ್ರಾಯಗಳನ್ನು ಕುರುಡಾಗಿ ಅನುಸರಿಸುವ ಉಮೇದಿನಲ್ಲಾಗಲೀ ಸಂಪೂರ್ಣ ಲಾಕ್ ಡೌನ್ ನಂತಹ ಕ್ರಮಗಳಿಗೆ ಮುಂದಾಗುವುದು ವಿವೇಚನೆಯ ಕ್ರಮವಲ್ಲ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.

ಈಗ ವಾಸ್ತವವಾಗಿ ಆಗಬೇಕಿರುವುದು ಗ್ರಾಮೀಣ ಭಾಗದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಅವರ ಆರೋಗ್ಯದ ಮೇಲೆ ನಿಗಾ ಇಡಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವುದು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಟ ತುರ್ತು ಕೋವಿಡ್ ನಿಗಾ ಘಟಕಗಳನ್ನು ತಾತ್ಕಾಲಿಕವಾಗಿ ತೆರೆಯಬೇಕಿದೆ. ಅದಕ್ಕೆ ಅಗತ್ಯ ಸಿಬ್ಬಂದಿ, ಸೌಕರ್ಯ ನೀಡಬೇಕಿದೆ. ಆ ಮೂಲಕ ಹಳ್ಳಿಯ ಜನರ ಜೀವ ರಕ್ಷಣೆಯ ಕಾರ್ಯವಾಗಬೇಕಿದೆ. ಅದೇ ಹೊತ್ತಿಗೆ, ಕಳೆದ ವರ್ಷವೇ ತಜ್ಞರು ನೀಡಿದ ಸಲಹೆಯಂತೆ ನಗರ ಪ್ರದೇಶಗಳಲ್ಲಿ ಕನಿಷ್ಟ ವಾರ್ಡುವಾರು ನಾಲ್ಕಾರು ಹಾಸಿಗೆ ಸಾಮರ್ಥ್ಯದ ಮೊಹಲ್ಲಾ ಕ್ಲಿನಿಕ್ ಮಾದರಿಯ ತುತ್ತು ಚಿಕಿತ್ಸಾ ಘಟಕಗಳು ಮತ್ತು ಮೊಬೈಲ್ ಕ್ಲಿನಿಕ್ ಗಳನ್ನು ವ್ಯವಸ್ಥೆ ಮಾಡಬೇಕಿದೆ. ಈ ಎಲ್ಲಾ ಕೆಲಸಗಳು ತೀರಾ ತುರ್ತಾಗಿ ಆಗುವಂಥವುಗಳಲ್ಲ. ಆದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಹ ವ್ಯವಸ್ಥೆ ಮಾಡುವುದು ಸಾಧ್ಯವಿತ್ತು. ಆದರೆ ಆಗ ಚುನಾವಣೆಯಲ್ಲಿ ಮೈಮರೆತ ಸರ್ಕಾರದ ಹೊಣೆಗೇಡಿತನಕ್ಕೆ ಈಗ ಜನ ಜೀವಬೆಲೆ ತೆರಬೇಕಾಗಿದೆ.

ಕನಿಷ್ಟ ಈಗಲಾದರೂ ಸರ್ಕಾರ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನೂರಾರು ಹಾಸಿಗೆಗಳ ಕೋವಿಡ್ ನಿಗಾ ಘಟಕ, ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಬದಲು, ಹಳ್ಳಿ ಮತ್ತು ವಾರ್ಡಗಳ ಮಟ್ಟದಲ್ಲಿ ತುರ್ತು ವೈದ್ಯಕೀಯ ಘಟಕಗಳನ್ನು ತೆರೆಯುವ ಮೂಲಕ ಜನರ ಜೀವ ರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕ ಬರಲಿರುವ ಮೂರನೇ ಅಲೆ ತಡೆಗೆ ಪ್ರಾಮಾಣಿಕ ಯತ್ನಗಳನ್ನು ಮಾಡಬೇಕಿದೆ. ಅದು ಬಿಟ್ಟು, ಪರೀಕ್ಷೆ ಪ್ರಮಾಣವನ್ನೇ ತಗ್ಗಿಸಿ, ಕೋವಿಡ್ ನಿಯಂತ್ರಣಕ್ಕೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಪರಮ ಆತ್ಮವಂಚಕ ನಡೆ ‘ಭಯದಿಂದ ಮರಳಲ್ಲಿ ಮುಖ ಮುಚ್ಚಿಕೊಳ್ಳಲುವ ಆಸ್ಟ್ರಿಚ್ ಹಕ್ಕಿಯ’ ವರಸೆಯಾಗಲಿದೆ. ಅದು ಅಂತಿಮವಾಗಿ ಅಮಾಯಕ ಜನರ ಜೀವದ ದುಬಾರಿ ಬೆಲೆ ಪಡೆಯಲಿದೆ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...