ಲಾಕ್ ಡೌನ್: ವಾಹನ ಬಳಸದೆ ವಾಕಿಂಗ್ ಮಾಡುವ ಸವಾಲು, ಗೊಂದಲದ ಗೂಡಾದ ನಿಯಮ

ಕೋವಿಡ್ 19 ನ ಎರಡನೇ ಅಲೆಯು ಮಹಾರಾಷ್ಟ್ರ ಬಿಟ್ಟರೆ ಅತ್ಯಂತ ಹೆಚ್ಚು ಆಟಾಟೋಪ ಪ್ರದರ್ಶಿಸುತ್ತಿರುವ ರಾಜ್ಯ ಕರ್ನಾಟಕ. ಸದ್ಯದ ಅಂಕಿ ಅಂಶಗಳ ಪ್ರಕಾರ, ಪ್ರತಿ ದಿನ 50 ಸಾವಿರದಷ್ಟು ಮಂದಿ ಕೊರೋನಾ ಸೋಂಕಿತರಾಗುತ್ತಿರುತ್ತಿದ್ದಾರೆ. ಪ್ರತಿ ನಿತ್ಯ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆ 500 ದಾಟಲಾರಂಭಿಸಿದೆ!

ಲಾಕ್ ಡೌನ್ ಮಾಡಲು ಇದಕ್ಕಿಂತ ಆತಂಕಕಾರಿ ಅಂಕಿಅಂಶಗಳು ಬೇಕಾಗಿಲ್ಲ. ಹಾಗಂತ, ಸದ್ಯ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದ್ದಕ್ಕೆ ಪ್ರತಿಪಕ್ಷಗಳಾಗಲಿ, ಸಾರ್ವಜನಿಕರಾಗಲಿ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ, ಲಾಕ್‍ಡೌನ್ ಮಾಡಲು ಹೊರಟಿರುವ ತರಾತುರಿ ಮತ್ತು ಅದಕ್ಕೆ ಪೂರಕವಾದ ಪೂರ್ವ ಸಿದ್ಧತೆ ಮಾಡದಿರುವ ಬಗ್ಗೆ ವ್ಯಾಪಕ ಆಕ್ಷೇಪಗಳು ಕೇಳಿಬರಲಾರಂಭಿಸಿವೆ.

ವಾಕಿಂಗ್ ನಿಯಮದ ಸವಾಲು:

ಸ್ವತಃ ಸಿಎಂ ಯಡಿಯೂರಪ್ಪನವರೇ ಮಾಧ್ಯಮದ ಮುಂದೆ ಹಾಜರಾಗಿ ಮೇ 10 ರಿಂದ 24ರವರೆಗೆ ಲಾಕ್‍ಡೌನ್‍ಘೋಷಿಸಿ, ಇದು ನಿರ್ಬಂಧವಷ್ಟೇ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಸೋಮವಾರದಿಂದ ಆರಂಭವಾಗಲಿರುವ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ನಲ್ಲಿ ಹೊಸ ನಿಯಮಗಳೇನೂ ಜಾರಿಯಾಗದು. ಬದಲಿಗೆ ಹಳೆ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಒಂದಿಷ್ಟು ಆಚೀಚೆ ಮಾಡಲಾಗಿದೆ.

ಅಂದಹಾಗೆ, ಈ ಬಾರಿ ಜನರು ಲಾಕ್ ಡೌನ್ ವೇಳೆ ಬೈಕು, ಕಾರು ಬಿಟ್ಟು ಕಾಲ್ನಡಿಗೆಯಲ್ಲೇ ಓಡಾಡಬೇಕು ಎನ್ನುವುದು ರಾಜ್ಯ ಸರಕಾರದ ಒತ್ತಾಸೆ. ವಾಕಿಂಗ್ ಮೂಲಕ ಕಿರಾಣಿ ಸಾಮಾನು, ಹೋಟೆಲ್ ನಲ್ಲಿ ಪಾರ್ಸೆಲ್, ಹಾಲು, ಔಷಧ ಖರೀದಿಸಿದರೆ ಜನರ ಆರೋಗ್ಯವೂ ಸುಧಾರಿಸುತ್ತದೆ. ಸಮೀಪದ ಅಂಗಡಿಗಳಿಗೆ ಮಾತ್ರ ತೆರಳುವುದರಿಂದ ಜನದಟ್ಟಣೆ ಕೂಡ ಕಡಿಮೆಯಾಗುತ್ತದೆ. ಪರಿಸರ ಮಾಲಿನ್ಯವೂ ತಪ್ಪುತ್ತದೆ ಎಂಬ ಉದ್ದೇಶದಿಂದ ಹಾಗೆ ಮಾಡಲಾಗಿದೆಯೋ ಗೊತ್ತಿಲ್ಲ. ಆದರೆ ಕಾರು, ಬೈಕ್ ನಲ್ಲಿ ಸವಾರಿ ಮಾಡಬೇಕಾದ  ಅನಿವಾರ್ಯತೆ ಇರುವವರು ಏನು ಮಾಡಬೇಕು ಎಂದು ಸರಕಾರ ಹೇಳಿಲ್ಲ.

ಲಸಿಕೆ ಹಾಕಿಸುವವರಿಗೆ ಸಮಸ್ಯೆ:

ವಯಸ್ಸಾದವರನ್ನು, ಅನಾರೋಗ್ಯಪೀಡಿತರನ್ನು ಲಸಿಕೆ ಹಾಕಿಸಲು ಕರೆದುಕೊಂಡು ಹೋಗಬೇಕಾದರೂ ಸರಕಾರದ ಹೊಸ ನಿಯಮದಿಂದ ಸಮಸ್ಯೆ ಉಂಟಾಗುತ್ತಿದೆ. ಒಂದೆಡೆ ಲಸಿಕೆ ಹಾಕಿಸಬೇಕು. ಇನ್ನೊಂದೆಡೆ ನಿಯಮಗಳನ್ನು ಮುರಿಯಬಾರದು. ಇಂಥ ಧರ್ಮಸಂಕಟಕ್ಕೆ ಸಾರ್ವಜನಿಕರು ತುತ್ತಾಗುತ್ತಿದ್ದಾರೆ.

ಇನ್ನೊಂದೆಡೆ ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ನಡೆದುಕೊಂಡು ಹೋಗಿ ಖರೀದಿಸಲು ಅವಕಾಶ ಕೊಡಲಾಗಿದೆ. ಬೆಳಗ್ಗೆ 10  ನಂತರ ರಸ್ತೆಗೆ ಇಳಿದರೆ, ವಾಹನ ಜಪ್ತಿ, ದೂರು ದಾಖಲು ಗ್ಯಾರಂಟಿ, ಮೆಡಿಕಲ್ ಎಮರ್ಜೆನ್ಸಿ ಹೊರತು ಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ರಸ್ತೆಗೆ ಇಳಿಯುವಂತಿಲ್ಲ  ಎಂದು ಶುಕ್ರವಾರ ರಾತ್ರಿಯೇ ರಾಜ್ಯ ಸರಕಾರ ಹೇಳಿತ್ತು. ಮತ್ತು ಅದನ್ನು ಬೆಂಗಳೂರಿನಲ್ಲಿ ಶನಿವಾರದಿಂದಲೇ ಅನುಷ್ಠಾನಕ್ಕೆ ತಂದಿತ್ತು. ಈ ನಡುವೆ, ಲಸಿಕೆ ಹಾಕಿಸಿಕೊಳ್ಳಲು ಈಗಾಗಲೇ ಇರುವ ಹಳೆಯ ವೇಳಾಪಟ್ಟಿಯಂತೆ ಜನರ ಲಸಿಕಾ ಕೇಂದ್ರಕ್ಕೆ ಹೋಗಬಹುದೇ ಎಂದು ಸ್ಪಷ್ಟಪಡಿಸಿಲ್ಲ. ಜತೆಗೆ ದೂರದಲ್ಲಿರುವ ಲಸಿಕಾ ಕೇಂದ್ರಕ್ಕೆ ವಾಹನದಲ್ಲಿ ಹೋಗಬೇಕಾದ ಅನಿವಾರ್ಯತೆ ಇರುವವರಿಗೆ ಹೊಸ ನಿಯಮಾವಳಿಯಲ್ಲಿ ಸ್ಪಷ್ಟನೆಯನ್ನೂ ನೀಡಿಲ್ಲ. ಇದು ಗೊಂದಲಕ್ಕೆ ಕಾರಣವಾಗುತ್ತಿದೆ.

ಪೊಲೀಸರ ಜತೆಗೆ ಸಂಘರ್ಷ:

ಲಾಕ್ ಡೌನ್ ಹಿನ್ನೆಲೆಯಲ್ಲಿ ಉಳಿದಿದ್ದ ತುರ್ತು ಕೆಲಸ ಮುಗಿಸಲು ಹೊರಟವರು ಕೂಡ ಶನಿವಾರ ತೊಂದರೆ ಎದುರಿಸುವಂತಾಗಿತ್ತು. ಬೇಕಾಬಿಟ್ಟಿ ತಿರುಗುವವರ ಜತೆ ಹೋಲಿಸಿ ಅವರಿಗೂ ದಂಡ ವಿಧಿಸಿದ್ದನ್ನು ಪ್ರಶ್ನಿಸಿದಾಗ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ವಾಗ್ವಾದಗಳಾದ ರಾಜ್ಯದ ನಾನಾ ಕಡೆ ನಡೆದ ಘಟನೆಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ,

ಮಂಡ್ಯದಲ್ಲಿ ಅನವಶ್ಯಕ ಓಡಾಟ ಮಾಡುತ್ತಿದ್ದ ಬೈಕ್ ಸವಾರನ ಕೀ ಕಿತ್ತುಕೊಂಡ ಪೊಲೀಸರ ನಡೆಗೆ ಆ ಸವಾರ ಆಕ್ಷೇಪಿಸಿ, ನೀವೇನು ನನ್ನ ಬೈಕ್ ಗೆ ಬಂಡವಾಳ ಹಾಕಿದ್ದೀರಾ ಎಂದು ಆವಾಜ್‍ಹಾಕಿದಾಗ, ನೀನು ರಸ್ತೆಯಲ್ಲಿ ನಿಂತು ಕೆಲಸ ಮಾಡು ಬಾ ಎಂದು ತಿರುಗೇಟು ನೀಡಿದ್ದು, ಅದರ ವಿಡೀಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಮಾರುಕಟ್ಟೆಗಳಲ್ಲಿ ಜನವೋ ಜನ:

ಬೆಳಗ್ಗೆ 10 ಗಂಟೆವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶವಿದ್ದುದರಿಂದ ರಾಜ್ಯದ ನಾನಾ ಜಿಲ್ಲೆಗಳ ಮಾರುಕಟ್ಟೆಗಳು, ತಾಲೂಕು ಮಾರುಕಟ್ಟೆಗಳಲ್ಲಿ ಜನರು ನಿಯಮಗಳನ್ನು ಉಲ್ಲಂಘಿಸಿ, ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ ಖರೀದಿಯಲ್ಲಿ ತೊಡಗಿದ್ದನ್ನು ಮಾಧ್ಯಮಗಳು ನೇರ ಪ್ರಸಾರ ಮಾಡಿವೆ.

ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದು, ಇದರಿಂದ ಕೊರೋನಾ ಹರಡುವ ಆತಂಕವೂ ಕಾಣಿಸಿಕೊಂಡಿದೆ. ಆದರೆ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜನರು ಕೂಡ ಖರೀದಿಸುವ ಅನಿವಾರ್ಯತೆಗೆ ಸಿಲುಕಿದ್ದರಿಂದ ಬಹುತೇಕರು ಮಾರುಕಟ್ಟೆ ಕಡೆಗೆ ದೌಡಾಯಿಸಿದ್ದರಿಂದ ಸಮಸ್ಯೆ ಉಂಟಾಗಿತ್ತು.

ಊರಿಗೆ ಹೊರಟವರ ಕಳವಳ:

ಲಾಕ್ ಡೌನ್ ಕಾರಣದಿಂದ ಕೆಲಸವಿಲ್ಲದೆ ತಮ್ಮ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಗೆ ಒಳಗಾಗಿರುವ ಸಾವಿರಾರು ಮಂದಿ ಬೆಂಗಳೂರು ಮತ್ತಿತರ ನಗರಗಳಿಂದ ತಮ್ಮ ಊರಿನ ಕಡೆ ಮುಖ ಮಾಡಿದ್ದಾರೆ.

ಬೆಂಗಳೂರು, ಮೈಸೂರಿನಂಥ ನಗರಗಳಲ್ಲಿ 100 ರಲ್ಲಿ 30 ಮಂದಿ ಕೊರೋನಾ ಸೋಂಕಿಗೆ ಒಳಗಾಗುತ್ತಿರುವ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮೂರಿನ ಬಸ್‍, ರೈಲು ಹಿಡಿಯಲು ಬಯಸುತ್ತಿದ್ದಾರೆ. ಸ್ವಂತ ವಾಹನ ಇರುವವರು ತಮ್ಮ ವಾಹನದಲ್ಲೇ ಸಂಸಾರ ಸಹಿತ ಸವಾರಿ ಮಾಡುತ್ತಿದ್ದಾರೆ.

ಸತ್ತರೂ ಬದುಕಿದರೂ ಸದ್ಯಕ್ಕೆ ಊರಲ್ಲೇ ಇರುವುದು ಸೂಕ್ತ. ಪ್ರಾಣ ಉಳಿದರೆ ಮತ್ತೆ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಬಹುದು. ಅಲ್ಲೇ ಸಣ್ಣಪುಟ್ಟ ಕೆಲಸ, ಕೂಲಿನಾಲಿ ಮಾಡಿದರೂ ಅಡ್ಡಿ ಇಲ್ಲ ಎಂಬುದು ವಲಸೆ ಹೊರಡುತ್ತಿರುವವರ ಅಂಬೋಣ. ಎಲ್ಲರಿಗೂ ತಮ್ಮ ಹಳ್ಳಿ, ಪಟ್ಟಣ ಸುರಕ್ಷಿತ ಎಂಬ ಭಾವನೆ ಇದ್ದರೂ ಕೊರೋನಾ ಪರೀಕ್ಷೆ ನಡೆಸದೇ, ಕೋವಿಡ್ ನೆಗೆಟಿವ್ ವರದಿ ಇಲ್ಲದೇ ನಗರದಿಂದ ಹಳ್ಳಿಗೆ ವಲಸೆ ಹೊರಟಿರುವುದರಿಂದ ಹಳ್ಳಿಗಳೂ ಅಸುರಕ್ಷಿತವಾಗುವ ಭಯವೀಗ ಕಾಡಲಾರಂಭಿಸಿದೆ.

ಕರ್ನಾಟಕದಲ್ಲಿ ಟೆಸ್ಟಿಂಗ್ ಪಾಸಿಟಿವಿಟಿ ದರ ಹೆಚ್ಚಳ:

ದೇಶದಲ್ಲಿ ಪ್ರತಿ ದಿನದ ಕೊರೋನ ಸೋಂಕು ದೃಢಪಟ್ಟವರ ಸಂ‍ಖ್ಯೆ 4 ಲಕ್ಷ ದಾಟುತ್ತಿದೆ. 12 ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, 7 ರಾಜ್ಯಗಳಲ್ಲಿ ತಲಾ 50 ಸಾವಿರದಿಂದ 1 ಲಕ್ಷದವರೆಗೆ ಸಕ್ರಿಯ ಪ್ರಕರಣಗಳಿವೆ. ಗೋವಾದಲ್ಲಿ ಟೆಸ್ಟಿಂಗ್ ಪಾಸಿಟಿವ್ ದರ ಶೇ.48.5 ರಷ್ಟಿದೆ. ಕರ್ನಾಟಕ ರಾಜ್ಯದ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.29.9 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೋನಾ  ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೈಸೂರು, ತುಮಕೂರು, ಚೆನ್ನೈ, ಕೋಯಿಕ್ಕೋಡ್, ಚಿತ್ತೂರು, ಗುರುಗ್ರಾಮ ಮತ್ತಿತರ ನಗರಗಳಲ್ಲೂ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅಲ್ಲದೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಒಡಿಶಾಗಳಲ್ಲಿ ದಿನನಿತ್ಯದ ಹೊಸ ಸೋಂಕಿನ ಪ್ರಕರಣಗಳು ಏರು ಮುಖದಲ್ಲಿವೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿರುವುದು ರಾಜ್ಯ ಸರಕಾರ, ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...