ಕೋವಿಡ್-19 ನಿಯಂತ್ರಿಸುವಲ್ಲಿ ನಮ್ಮ ಪಕ್ಕದ ರಾಜ್ಯಗಳಿಂದ ಕಲಿಯಬಹುದಾದ ಪಾಠಗಳಿವು…

ದೇಶದಲ್ಲಿ ಪ್ರತಿನಿತ್ಯದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರವನ್ನು ಹಿಂದಿಕ್ಕಿರುವ ಕರ್ನಾಟಕ ಅಗ್ರಸ್ಥಾನಕ್ಕೇರಿದೆ. ಅದೇ ವೇಳೆ, ಕಳೆದ ಕೆಲವು ವಾರಗಳಲ್ಲಿ ಅಗ್ರಸ್ಥಾನದಲ್ಲಿದ್ದ ಮಹಾರಾಷ್ಟ್ರ ಈ ಪಟ್ಟಿಯಲ್ಲಿ ನಿಧಾನವಾಗಿ ಕೆಳಕ್ಕಿಳಿಯುವ ಸೂಚನೆಯನ್ನು ನೀಡಲಾರಂಭಿಸಿದೆ. ನಮ್ಮ ರಾಜ್ಯದ ಜನರ ಪಾಲಿಗೆ ಈ ಅಗ್ರಸ್ಥಾನವು ಖಂಡಿತ ಖುಷಿಯ ಸಮಾಚಾರವಲ್ಲ!

ಶನಿವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರ ಸಂ‍ಖ್ಯೆ 41,779 ಆಗಿದ್ದರೆ, ಮಹಾರಾಷ್ಟ್ರದಲ್ಲಿ ಅದೇ ವೇಳೆ ಸೋಂಕಿತರಾದವರ ಸಂಖ್ಯೆ 39,923 ಮಂದಿ. ನೆಮ್ಮದಿಯ ವಿಚಾರವೆಂದರೆ, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ 19 ನಿಂದ ಮೃತಪಟ್ಟವರ ಸಂಖ್ಯೆ 714 ಆಗಿದ್ದರೆ, ಕರ್ನಾಟಕದಲ್ಲಿ 373 ಆಗಿದೆ.

ನಮ್ಮ ಸುತ್ತಮುತ್ತಲಿನ ಬೇರೆ ಬೇರೆ ರಾಜ್ಯಗಳು ಕೊರೋನಾ 2ನೇ ಅಲೆಯ ಅಟ್ಟಹಾಸ ನಿಯಂತ್ರಿಸಲು ನಡೆಸಿದ್ದ ಪೂರ್ವಸಿದ್ಧತೆ, ಈಗ ನಿರ್ವಹಿಸುತ್ತಿರುವ ರೀತಿಯಿಂದ ಕರ್ನಾಟಕದ ಸರಕಾರವೂ ಪಾಠ ಕಲಿತರೆ ಇನ್ನೂ ಉತ್ತಮವಾಗಿ ಕೋವಿಡ್ 19 ಅನ್ನು ಎದುರಿಸಬಹುದು ಎನ್ನುವುದು ತಜ್ಞರ ಅಭಿಮತ.

ಮುಂಬಯಿ, ಚೆನ್ನೈ ಮಾದರಿ ಕಲಿಸಿದ ಪಾಠ:

ಹಾಗೆ ನೋಡಿದರೆ, ಕೊರೋನಾ ನಿಯಂತ್ರಿಸುವ ವಿಷಯದಲ್ಲಿ ಇಡಿಯ ದೇಶದಲ್ಲಿ ಈಗ ಅತಿ ಹೆಚ್ಚು ಚರ್ಚೆಯಲ್ಲಿರುವುದು ಮುಂಬಯಿ ಮಾದರಿ. ಜತೆಗೆ ಚೆನ್ನೈ ಮಾದರಿ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಇವೆರಡೂ ಮಾದರಿಗಳಲ್ಲಿ ಮಹಾನಗರದ ಎಲ್ಲ ವಾರ್ಡ್ ಗಳಲ್ಲಿ ವಿಕೇಂದ್ರೀಕೃತ ಚಿಕಿತ್ಸಾ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ತುರ್ತು ಪ್ರತಿಕ್ರಿಯಿ ನೀಡಲು ವೈದ್ಯರು, ದಾದಿಯರು, ಸ್ವಯಂ ಸೇವಕರು, ಸ್ಥಳೀಯ ನಿವಾಸಿಗಳ ಸಂಘದ ಪದಾಧಿಕಾರಿಗಳಿರುವ ಕನಿಷ್ಠ 50 ಜನರ ಸಮಿತಿಗಳನ್ನು ರಚಿಸಲಾಗಿರುತ್ತದೆ. ಅವರು ಸೋಂಕಿತರನ್ನು ಚಿಕಿತ್ಸೆಯ ಅವಶ್ಯಕತೆ ಇದೆಯೇ ಇಲ್ಲವೇ ಎಂದು ವಿಂಗಡಿಸಿ, ಮುಂದಿನ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಅಲ್ಲದೆ ಕೊರೋನಾ ಪರೀಕ್ಷೆಗಾಗಿ ಸ್ಯಾಂಪಲ್‍ಪಡೆಯಲು ವೈದ್ಯರು, ವೈದ್ಯ ಸಿಬ್ಬಂದಿಯೇ ಮನೆ ಮನೆಗೆ ತೆರಳುತ್ತಾರೆ. ಜತೆಗೆ ವಾರ್ಡ್ ಗಳಲ್ಲಿ ವಾಹನವೊಂದನ್ನು ವ್ಯವಸ್ಥೆ ಮಾಡಿ ಸ್ಯಾಂಪಲ್ ಗಳನ್ನು ಪಡೆಯಲಾಗುತ್ತದೆ. ಮನೆಯಲ್ಲೇ ಕ್ವಾರಂಟೈನ್ ಆಗಬೇಕಿದ್ದರೆ, ಅಗತ್ಯವಿರುವ ಔಷಧ ಕಿಟ್ ನೀಡುವ ಕೆಲಸವನ್ನು ಸಮಿತಿಯವರು ಮಾಡುತ್ತಾರೆ. ರೋಗಿಗಳಿಗೆ ದಿನಕ್ಕೆ ಮೂರು ನಾಲ್ಕು ಬಾರಿ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ. ರೋಗಲಕ್ಷಣಗಳು ಉಲ್ಬಣವಾದರೆ ಮಾತ್ರ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ, ಸೂಕ್ತ ಬೆಡ್ ನ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ರೋಗ ಲಕ್ಷಣವಿರುವ ಎಲ್ಲರೂ ಬೆಡ್ ಪಡೆಯಲು ಪೈಪೋಟಿ ನಡೆಸುವುದು ತಪ್ಪುತ್ತದೆ. ಆತಂಕವೂ ಕಡಿಮೆ ಆಗುತ್ತದೆ. ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆಯೂ ಸಿಗುತ್ತದೆ. ಜನರ ಪ್ರಾಣಗಳೂ ಉಳಿಯುತ್ತದೆ.


ಮುಂಬಯಿಯ ಅಧಿಕಾರಿಗಳು ಅನುಸರಿಸಿದ ಮಾದರಿಯಿಂದಾಗಿ ಅಲ್ಲಿ ಬೆಡ್ ಹಾಗೂ ಆಮ್ಲಜನಕದ ಸಿಲಿಂಡರ್ ಕೊರತೆ ಆಗದಿರುವುದನ್ನು ಕಂಡು ಕೇಂದ್ರ ಸರಕಾರ ಮಾತ್ರವಲ್ಲ, ದೇಶದ ಸುಪ್ರೀಂಕೋರ್ಟ್ ಕೂಡ ಕೊಂಡಾಡಿದೆ. ಕೋವಿಡ್ ನಿರ್ವಹಣೆ ಮಾಡುವುದು ಹೇಗೆಂದು ಮುಂಬಯಿ ನೋಡಿ ಕಲಿಯಿರಿ ಎಂದು ದಿಲ್ಲಿ ಸರಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದ್ದು ಇದೇ ಕಾರಣಕ್ಕೆ.


ಈಗಿನ ವ್ಯವಸ್ಥೆಯಲ್ಲಿ ಕರ್ನಾಟಕದಲ್ಲಿ ದಾಖಲಾತಿಗೆ ಗುರುತಿಸುವುದಕ್ಕೇ 12 ಗಂಟೆಗಳಷ್ಟು ವಿಳಂಬವಾಗುತ್ತಿದೆ. ಈ ಮಾದರಿಗಳನ್ನು ಅನುಸರಿಸಲು ಕೊನೆಗೂ ಕರ್ನಾಟಕದ ಸರಕಾರವೂ ಇದೀಗ ಮುಂದಾಗಿರುವುದು ಉತ್ತಮ ವಿಚಾರ. ಆದರೆ ಅದನ್ನು ಅಳವಡಿಸಲು ಈಗಾಗಲೇ ತಡವಾಗಿದ್ದು, ಸರಕಾರದ ನಡೆ ಕೇವಲ ಬಾಯ್ಮಾತಿನಲ್ಲೇ ಮುಗಿದು ಹೋದರೆ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಈ ಮಾದರಿಗಳ ಅನುಷ್ಠಾನ ಕ್ಷಿಪ್ರವಾಗಿ ಆದರೆ ಕನಿಷ್ಠ ಬೆಂಗಳೂರಿನಲ್ಲಾದರೂ ಕೊರೋನಾಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಹಾಕಬಹುದು.


ಪುಣೆ, ಮುಂಬಯಿ ಕಂಟೈನ್ಮೆಂಟ್ ಮಾದರಿಯಿಂದ ಲಾಭ:


ಕೋವಿಡ್ 19 ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಮಾಡುತ್ತಿರುವ ಅಟ್ಟಹಾಸ ತಡೆಯಲು ಮಹಾರಾಷ್ಟ್ರದ ಪುಣೆ ಹಾಗೂ ಮುಂಬಯಿಗಳಲ್ಲಿ ಮಾಡಲಾದ ಮೈಕ್ರೋ ಕಂಟೈನ್ಮೆಂಟ್ ವಲಯದ ಮಾದರಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ಇತ್ತೀಚಿನ ಫಲಿತಾಂಶಗಳಿಂದ ಗೊತ್ತಾಗಿದೆ. ಈ ಬೆಳವಣಿಗೆಗೆ ಕೇಂದ್ರ ಸರಕಾರವೂ ಶ್ಲಾಘನೆ ಮಾಡಿದೆ.
ಸೋಂಕು ಹರಡುವುದನ್ನು ತಡೆಯಲು ಈ ಮೈಕ್ರೋ ಕಂಟೈನ್ಮೆಂಟ್ ವಲಯದ ಮಾದರಿ ತುಂಬ ಉಪಯುಕ್ತವಾಗಿದ್ದು, ಸೋಂಕು ಇರುವ ಪ್ರದೇಶದಿಂದ ಸುತ್ತಮುತ್ತಲಿನ ಮನೆಮಂದಿಗೆ ಹರಡದಂತೆ ಮಾಡಲು ಇದರಿಂದ ಸಾಧ್ಯವಾಗುತ್ತಿದೆ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ, ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕು ಪತ್ತೆಯಾದ ಪ್ರದೇಶದಲ್ಲಿ ಈ ಮಾದರಿಯನ್ನು ಬಳಸಲು ಸಾಧ್ಯವಾಗುತ್ತದೆ.
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗ ಇದೇ ಮಾದರಿಯಲ್ಲಿ ಅದನ್ನು ನಿಯಂತ್ರಿಸಲಾಗಿತ್ತು. ಆದರೆ ರಾಜ್ಯ ಸರಕಾರ ಇಂಥ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಬೆಂಗಳೂರಿನಲ್ಲೇ ಈ ಮಾದರಿಯಲ್ಲಿ ಕೊರೋನಾ ನಿಯಂತ್ರಿಸಿ ದೇಶಕ್ಕೆ ;ಬೆಂಗಳೂರು ಮಾದರಿ’ಯನ್ನು ನೀಡಬಹುದಿತ್ತು. ದುರದೃಷ್ಟವಶಾತ್ ರಾಜ್ಯ ಸರಕಾರ ಈ ಬಗ್ಗೆ ಗಮನವನ್ನೇ ಹರಿಸಲಿಲ್ಲ.


ಗಮನ ಸೆಳೆದ ಕೇರಳದ ಎರ್ನಾಕುಳಂ ಜಿಲ್ಲೆಯ ಮಾದರಿ:


ಬೆಂಗಳೂರಿನಲ್ಲಿ ರೋಗಿಗಳಿಗೆ ಬೆಡ್ ಗಳ ಕೊರತೆ, ಕಾಳ ಸಂತೆಯಲ್ಲಿ ಬೆಡ್ ಮಾರಾಟದ ಪ್ರಹಸನಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಅದೇ ವೇಳೆ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕೊರೋನಾ ಪೀಡಿತ ರೋಗಿಗಳು ಹಾಸಿಗೆಗೆ ಅಲೆದಾಡುವ ಪ್ರಸಂಗವೇ ಬಂದಿಲ್ಲ. ಅಲ್ಲಿ ಕೇಂದ್ರಿಕೃತ ವಾರ್ ರೂಂ ಹಾಗೂ ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆ ಇರುವುದರಿಂದ ಹಾಸಿಗೆ ಹಂಚಿಕೆ ಬಹಳ ಸುವ್ಯವಸ್ಥಿತವಾಗಿದೆ.

ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದು, ಅವರ ಮೇಲೆ ನಿಗಾ ಇಡುವುದು, ಆಮ್ಲಜನಕ ಪೂರೈಕೆಯಂಥ ವಿಭಾಗಗಳನ್ನು ಕೇಂದ್ರೀಕೃತ ವಾರ್ ರೂಂ ಹೊಂದಿದೆ. ಮನೆಯಲ್ಲೇ ಐಸೊಲೇಶನ್ ಮಾಡಿ ಮೊದಲ ಹಾಗೂ ಎರಡನೇ ಹಂತದ ಆರೋಗ್ಯ ಸೇವೆ ನೀಡುವ ಕೆಲಸವನ್ನೂ ವಾರ್ ರೂಂಗೆ ಹೊಂದಿಸಲಾಗಿದೆ. ಕೋವಿಡ್ ದೃಢಪಟ್ಟ ಕೂಡಲೇ ರೋಗಿಯು ವಾರ್ ರೂಂನಲ್ಲಿ ನೋಂದಣಿ ಮಾಡುತ್ತಾನೆ. ಬಳಿಕ ಆ ಭಾಗದ ಆರೋಗ್ಯ ಕಾರ್ಯಕರ್ತರು ವೈದ್ಯರ ಸಮಾಲೋಚನೆಗೆ ದೂರವಾಣಿ ಸೇವೆ ನೀಡುತ್ತಾರೆ. ಒಂದು ವೇಳೆ ರೋಗಿಗೆ ತುರ್ತು ಚಿಕಿತ್ಸೆ ಬೇಕೆನ್ನಿಸಿದರೆ ಈ ಮಾಹಿತಿಯನ್ನು ವಾರ್ ರೂಂಗೆ ನೀಡಲಾಗುತ್ತದೆ. ಅವರು ಹಾಸಿಗೆ ಲಭ್ಯತೆ ಆಧಾರದಲ್ಲಿ ಯಾವ ಆಸ್ಪತ್ರೆಗೆ ಹೋಗಬೇಕೆಂದು ರೋಗಿಗೆ ಮಾಹಿತಿ ನೀಡುತ್ತಾರೆ.

ಅಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಕೋವಿಡ್ ನೋಡಲ್ ಅಧಿಕಾರಿಗಳು, ತಮ್ಮ ಆಸ್ಪತ್ರೆಯಲ್ಲಿ ಎಷ್ಟು ಬೆಡ್, ಐಸಿಯು, ವೆಂಟಿಲೇಟರ್ ಲಭ್ಯವಿವೆ ಎನ್ನುವ ಮಾಹಿತಿಯನ್ನು ವೆಬ್ ಪೋರ್ಟಲ್ ಗಳಲ್ಲಿ ಪರಿಷ್ಕರಿಸುವ ಕೆಲಸ ಮಾಡುತ್ತಾರೆ. ಹೀಗೆ ಸರಳವಾಗಿ ಪ್ರಕ್ರಿಯೆಗಳು ನಡೆಯುವುದರಿಂದ ಯಾವುದೇ ಗೊಂದಲಗಳಿಗಾಗಲಿ, ಕಾಳದಂಧೆಗಾಗಲಿ ಇಲ್ಲಿ ಅವಕಾಶ ಲಭ್ಯವಾಗುತ್ತಿಲ್ಲ.

ಆಂಧ್ರಪ್ರದೇಶದಲ್ಲಿ ಜ್ವರ ಪತ್ತೆಗೆ ಮನೆಮನೆ ಸಮೀಕ್ಷೆ:


ಆಂಧ್ರಪ್ರದೇಶ ಸರಕಾರವು ಜ್ವರ ಪತ್ತೆ ಮಾಡಿ, ಕೋವಿಡ್ ಹರಡುವುದನ್ನು ತಪ್ಪಿಸಲು ಶನಿವಾರದಿಂದ ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಜ್ವರ ಕಂಡುಬಂದ ಜನರಿಗೆ ಕೋವಿಡ್ 19 ಔಷಧದ ಕಿಟ್ ನೀಡಲಾಗುತ್ತದೆ ಮತ್ತು ಮನೆಯಲ್ಲೇ ಪ್ರತ್ಯೇಕವಾಗಿರುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಈ ಸಮೀಕ್ಷೆಯಲ್ಲಿ ಎಲ್ಲ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಮತ್ತು ಎ.ಎನ್.ಎಂ. ಗಳು ಭಾಗವಹಿಸಲಿದ್ದು, ರಾಜ್ಯದ ಪ್ರತಿ ಮನೆಯಲ್ಲೂ ಪರೀಕ್ಷಿಸಿ ಜ್ವರವಿರುವ ಜನರನ್ನು ಗುರುತಿಸಲಿದ್ದಾರೆ. ಈ ಮೂಲಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಯುವ, ಆಸ್ಪತ್ರೆಗಳಲ್ಲಿ ಬೆಡ್ ಗಳಿಗೆ ಉಂಟಾಗುವ ಒತ್ತಡವನ್ನು ತಡೆಯಲು ಯೋಜನೆಯನ್ನು ಆಂಧ್ರ ಸರಕಾರ ಮಾಡಿದೆ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲೂ ಅಂದರೆ, 2020ರಲ್ಲೂ ಆಂಧ್ರಸರಕಾರ ಮನೆ ಮನೆ ಸಮೀಕ್ಷೆ ಮಾಡಿದ್ದನ್ನು ಸ್ಮರಿಸಬಹುದು.

ಗೊಂದಲವಿಲ್ಲದೆ ಶವಸಂಸ್ಕಾರದ ಪ್ರಕ್ರಿಯೆ:

ಬೆಂಗಳೂರು ಮತ್ತಿತರ ಕಡೆ ಸ್ಮಶಾನಗಳಲ್ಲಿ ಆಂಬ್ಯುಲೆನ್ಸ್ ಗಳಲ್ಲಿ ಕಾಯುತ್ತಿರುವ ದೃಶ್ಯಗಳನ್ನು ನೋಡಿ ಕರ್ನಾಟಕದ ಜನತೆ ಮರುಕಪಡುತ್ತಿದ್ದ ಕ್ಷಣಗಳನ್ನು ನೆನಪಿಸಿದರೆ ಕರುಳು ಚುರ್ರೆನಿಸುತ್ತದೆ. ಕೋವಿಡ್ ನಿಯಂತ್ರಿಸುವುದಿರಲಿ, ಚಿಕಿತ್ಸೆಯನ್ನೂ ಕೊಡಲಾಗದ ಸರಕಾರ, ಒಂದು ಗೌರವಯುತ ಅಂತಿಮ ಸಂಸ್ಕಾರವಾದರೂ ಕೊಡಬಾರದೇ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ಎಲ್ಲರೂ ಗಮನಿಸಿದ್ದಾರೆ.

ಆದರೆ ಕೊರೋನಾದಿಂದಾಗಿ ಲಾಕ್ ಡೌನ್ ಗೆ ಮುನ್ನ ಅತಿ ಹೆಚ್ಚು ಜನಸಂಖ್ಯೆ ಇರುವ ಮುಂಬಯಿಯಲ್ಲಿ ಅತಿ ಹೆಚ್ಚು ಜನ ಸಾಯುತ್ತಿದ್ದರೂ ಶವ ಸಂಸ್ಕಾರ ವ್ಯವಸ್ಥೆಯಲ್ಲಿ ಗೊಂದಲವಾಗಿದ್ದು ಎಲ್ಲೂ ಕಾಣಿಸಿಲ್ಲ. ಹೆಣಗಳನ್ನು ಇರಿಸಿಕೊಂಡು ಸ್ಮಶಾನದ ಮುಂದೆ ಆಂಬ್ಯುಲೆನ್ಸ್ ಗಳ ಸಾಲುಗಳು ನಿಂತಿದ್ದನ್ನು ಯಾರೂ ಕಂಡಿಲ್ಲ. ಏಕೆಂದರೆ ಐಐಟಿಯ ನೆರವಿನಿಂದ ಮುಂಬಯಿಯ 47 ಸ್ಮಶಾನಗಳ ಆನ್ ಲೈನ್ ಡ್ಯಾಶ್ ಬೋರ್ಡ್ ರೂಪಿಸಿದ್ದ ಮುಂಬಯಿಯ ಮಹಾನಗರ ಪಾಲಿಕೆ, ಸಮಯದ ಹಂಚಿಕೆ ಮಾಡಿ ಮೃತಪಟ್ಟವರ ಕುಟುಂಬಗಳಿಗೆ ವಿತರಿಸಿ, ಗೌರವಯುತ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿತ್ತು.
ಕೊರೋನಾ ವಿರುದ್ಧದ ಹೋರಾಟದಲ್ಲಿ ಪಕ್ಕದ ರಾಜ್ಯಗಳಲ್ಲಿನ ವಿಭಿನ್ನ ಪ್ರಯತ್ನಗಳನ್ನು ಗಮನಿಸಿದ ಮೇಲಾದರೂ ಅವುಗಳಲ್ಲಿ ಉತ್ತಮವೆನ್ನಿಸಿದ್ದನ್ನು ಅನುಸರಿಸಿ, ಕರ್ನಾಟಕ ಸರಕಾರ ಕೋವಿಡ್ ಅಟ್ಟಹಾಸಕ್ಕೆ ತಡೆಯೊಡ್ಡಬೇಕಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...