ಬೆಂಗಳೂರು : ರಾಜ್ಯದ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ದ ಮಹಿಳಾ ಸಿಬ್ಬಂದಿ ಮತ್ತು ಅಧಿಕಾರಿಗಳ ಸಾಧನೆಯನ್ನು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೂ ಆದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ ಶ್ಲಾಘಿಸಿದ್ದಾರೆ.

ಕೆಪಿಸಿಎಲ್ ವತಿಯಿಂದ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ರಾಜ್ಯಕ್ಕೆ ಬೇಕಾದ ವಿದ್ಯುತ್ ಉತ್ಪಾದನೆ ಮಾಡುವ ಕೆಪಿಸಿಎಲ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಪುರುಷರಿಗಿಂತ ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ಕೆಲಸ ಮಾಡಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಶ್ರಮಿಸಿದ್ದಾರೆ,” ಎಂದು ಹೇಳಿದರು.
“ಸುಮಾರು 40 ವರ್ಷಗಳ ಹಿಂದೆ ನಾನು ಐಐಟಿಯಲ್ಲಿ ಓದುತ್ತಿದ್ದಾಗ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಕೇವಲ 8 ಮಂದಿ ಹೆಣ್ಣು ಮಕ್ಕಳಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಾಕಷ್ಟು ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಓದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಕೆಪಿಸಿಎಲ್ ನಲ್ಲೂ ಸಾಕಷ್ಟು ಮಹಿಳಾ ಇಂಜಿನಿಯರ್ ಗಳು ನಾಯಕತ್ವ ವಹಿಸಿ ಕೆಲಸ ಮಾಡುತ್ತಿದ್ದಾರೆ,” ಎಂದರು.
ಇದನ್ನೂ ಓದಿ : ಮೋದಿ ಆಕಾಶದಿಂದ ಇಳಿದು ಮಾತನಾಡಲಿ, ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ : ಪ್ರಧಾನಿ ಆರೋಪಕ್ಕೆ ರಾಜಣ್ಣ ಟಾಂಗ್
“ಕೆಪಿಸಿಎಲ್ ಎಂದರೆ ಕೇವಲ ಒಂದು ವಿದ್ಯುತ್ ಉತ್ಪಾದನಾ ಸಂಸ್ಥೆಯಲ್ಲ, ಅದೊಂದು ಕುಟುಂಬದ ರೀತಿ. ಪರಸ್ಪರ ಸಹಕಾರದೊಂದಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದ ಅವರು, ನಿಗಮದ ಎಲ್ಲಾ ಮಹಿಳಾ ಸಿಬ್ಬಂದಿಗೆ ಮಹಿಳಾ ದಿನಾಚರಣೆಯ ಶುಭ ಕೋರಿದರು.
ರಾಜಾಜಿಗರದ ಎಸ್ ಜೆಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ದರಾಜು ಮಾತನಾಡಿ, “ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರು ಸುಶಿಕ್ಷಿತರಾಗಿ ಸಮಾನತೆ ಎಂಬುದು ಅಚ್ಚುಕಟ್ಟಾಗಿ ಜಾರಿಯಾಗಿ ಆರ್ಥಿಕವಾಗಿಯೂ ಸಮಾನತೆ ಬಂದಾಗ ಯಾವುದೇ ರಾಷ್ಟ್ರ ಮುಂದುವರಿದ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪುರುಷರಷ್ಟೇ ಸಮಾನ ಅವಕಾಶ ಸಿಗದೇ ಇದ್ದಿದ್ದರೆ ದೇಶ ಇಂದಿಗೂ ಹಿಂದುಳಿದ ರಾಷ್ಟ್ರವಾಗಿಯೇ ಉಳಿಯುತ್ತಿತ್ತು. ಹೆಣ್ಣು ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಶೇ. 100ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಾರೆ. ಹೀಗಾಗಿ ಭಾರತ ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ,” ಎಂದರು.

“ಪ್ರಧಾನ ಭಾಷಣ ಮಾಡಿದ ಸಾರಿಗೆ ಇಲಾಖೆ ಅಪರ ಸಾರಿಗೆ ಆಯುಕ್ತರಾದ ಎಂ.ಪಿ.ಓಂಕಾರೇಶ್ವರಿ ಅವರು ಮಹಿಳಾ ದಿನದ ವಿಶೇಷತೆ ಮತ್ತು ಮಹಿಳಾ ಸಾಧಕಿಯರ ಬಗ್ಗೆ ಮಾತನಾಡಿದರಲ್ಲದೆ, ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವ, ಅದರಲ್ಲೂ ಮಹಿಳೆಯರನ್ನು ಗೌರವಿಸುವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು,” ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಂಗಕರ್ಮಿ, ನಟಿ, ಸಂಚಾರಿ ಥಿಯೇಟರ್ ಸಂಸ್ಥಾಪಕಿ ಮಂಗಳಾ ಎನ್. ಅವರನ್ನು ಗೌರವಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ನಿಗಮದ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೆಪಿಸಿಎಲ್ ಹಣಕಾಸು ನಿರ್ದೇಶಕರಾದ ಆರ್. ನಾಗರಾಜ, ತಾಂತ್ರಿಕ ನಿರ್ದೇಶಕರಾದ ಎಂ.ಆರ್.ಗಂಗಾಧರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ರೇಖಾ ಟಿ., ಕೆಪಿಸಿಎಲ್ ಮುಖ್ಯ ಜಾಗೃತ ಅಧಿಕಾರಿ ಸಿರಿಗೌರಿ ಡಿ.ಜಿ. ಮತ್ತಿತರರು ಪಾಲ್ಗೊಂಡಿದ್ದರು.






