ಮೊದಲ ದಿನವೇ ನರಕದರ್ಶನ ಮಾಡಿಸಿದ ಅಮಾನುಷ ಲಾಕ್ ಡೌನ್!

ಮೊದಲ ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಏಕಕಾಲಕ್ಕೆ ಜನಸಾಮಾನ್ಯರ ಅಸಹಾಯಕತೆಯನ್ನು, ಪೊಲೀಸರ ಅಮಾನವೀಯ ಅಟ್ಟಹಾಸವನ್ನೂ ಮತ್ತು ಸರ್ಕಾರದ ಹೇಯ ಜಾಣಕುರುಡುತದ ದರ್ಶನ ಮಾಡಿಸಿದೆ.

ಲಾಕ್ ಡೌನ್ ಜಾರಿಗೊಳಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶ ಮತ್ತು ವಾಸ್ತವವಾಗಿ ಪೊಲೀಸರ ಮೂಲಕ ಆ ಆದೇಶವನ್ನು ಜಾರಿಗೆ ತರುತ್ತಿರುವುದರ ನಡುವೆ ಯಾವ ಸಾಮ್ಯತೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ತನ್ನ ಆದೇಶದಲ್ಲಿ ಬೆಳಗ್ಗೆ 6ರಿಂದ 10ರವರೆಗೆ ಆಯಾ ಪ್ರದೇಶದಲ್ಲಿ ದಿನಸಿ, ತರಕಾರಿ, ಹಣ್ಣು, ಹಾಲು, ಔಷಧಿ ಖರೀದಿಗೆ ಜನ ಓಡಾಡಬಹುದು. ಆದರೆ ವಾಹನ ಬಳಸುವಂತಿಲ್ಲ ಎಂದಿದೆ. ಆದರೆ, ರಾಜ್ಯದ ಹಲವು ಕಡೆ ಮೊದಲ ದಿನ ಪೊಲೀಸರು ಅನುಮತಿ ನೀಡಿದ ಅವಧಿಯಲ್ಲಿ ಕೂಡ ಜನ ಸಂಚಾರಕ್ಕೆ ಅಡ್ಡಿಪಡಿಸಿದ, ತರಕಾರಿ, ಹಾಲು ಕೊಳ್ಳುವವರು, ಮಾರುವವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಪ್ರಕರಣಗಳು ವರದಿಯಾಗಿವೆ.

ಹಾಗೇ ಜನರು ತಮ್ಮ ತಮ್ಮ ಮನೆಯ ಪ್ರದೇಶದಲ್ಲಿಯೇ ಅಗತ್ಯ ವಸ್ತು ಖರೀದಿಸಬೇಕು. ಅದೂ ಕೂಡ ನಡೆದುಕೊಂಡೇ ಅಂಗಡಿಗಳಿಗೆ ಹೋಗಿಬರಬೇಕು. ಅದು ಬಿಟ್ಟು ತಮ್ಮ ವ್ಯಾಪ್ತಿಯ ಪ್ರದೇಶಹೊರತುಪಡಿಸಿ ಉಳಿದೆಡೆ ಓಡಾಡುವಂತಿಲ್ಲ. ವಾಹನಗಳನ್ನಂತೂ ಬಳಸುವಂತಿಲ್ಲ. ಬಳಸಿದ್ದಲ್ಲಿ ವಾಹನ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಹೇಳಿದ್ದರೆ, ಪೊಲೀಸರು ಸೋಮವಾರ ಬೆಳಗ್ಗೆಯಿಂದ ಎಟಿಎಂ, ಮೆಡಿಕಲ್ ಶಾಪ್, ಆಸ್ಪತ್ರೆಗಳಿಗೆ ಹೋಗುವವರನ್ನು ಕೂಡ ತಡೆದು ಸಾಕಷ್ಟು ಅನಾಹುತಗಳಿಗೆ ಕಾರಣರಾಗಿದ್ದಾರೆ. ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಹೊರಟ್ಟಿದ್ದ ಗಂಭೀರ ರೋಗಿಯನ್ನು ಕರೆದೊಯ್ಯುತ್ತಿದ್ದ ವಾಹನ ತಡೆದು ಕಿರುಕುಳ ನೀಡಿದ ಕಾರಣ, ಆ ಮಹಿಳೆ ಆಸ್ಪತ್ರೆಗೆ ತಲುಪುವುದು ತಡವಾಗಿ ಸಾವುಕಂಡ ಘಟನೆ ಉಡುಪಿಯಲ್ಲಿ ವರದಿಯಾಗಿದೆ.

ಹೀಗೆ ನಿಯಮ ಒಂದು ಹೇಳಿದರೆ, ಪೊಲೀಸರು ಅದನ್ನು ಮತ್ತೊಂದು ಅತಿಗೆ ತೆಗೆದುಕೊಂಡುಹೋಗಿ, ಮೆಡಿಕಲ್ ಶಾಪಿಗೆ ಹೋದವರು, ಹಾಲು ಮಾರುವವರು, ತರಕಾರಿ ಕೊಳ್ಳುವವರು, ಆಸ್ಪತ್ರೆಗೆ ಹೋಗುವವರ ಮೇಲೂ ಲಾಠಿ ಬೀಸಿದ್ದಾರೆ.

ಇನ್ನು ಸರ್ಕಾರದ ಆದೇಶದಲ್ಲಿಯೇ ಸಾಕಷ್ಟು ಗೊಂದಲವಿದ್ದು, ಜನಸಾಮಾನ್ಯರ ಬದುಕಿನ ಬಗ್ಗೆ ಕನಿಷ್ಟ ಜ್ಞಾನ ಕೂಡ ಇರದವರೇ ಅಂತಹ ನಿಯಮಗಳನ್ನು ರೂಪಿಸಿದ್ದಾರೆ. ಅವರಿಗೆ ಬಡವರ ಬದುಕು, ಗ್ರಾಮೀನ ಹಳ್ಳಿಗಾಡಿನ ಜನರ ಜೀವನ, ನಗರವಾಸಿಗಳಾದರೂ ಹೊರವಲಯದಲ್ಲಿ ಬದುಕುವವರ ಅನಿವಾರ್ಯತೆಗಳು, ನಿತ್ಯ ಕೂಲಿ ಮಾಡಿ ಹೊತ್ತಿನ ಊಟ ಸಂಪಾದಿಸುವವ ಸಂಕಟಗಳ ಪರಿಚಯವೇ ಇಲ್ಲ. ಅಂತಹ ಅವಿವೇಕಿತನವೇ ಇಡೀ ಆದೇಶದಲ್ಲಿ ಕಣ್ಣಿಗೆ ರಾಚುತ್ತೆ. ಯಾವುದೋ ಹಾಂಕಾಂಗ್, ಬ್ಯಾಂಕಾಂಗ್ ಮಾದರಿಯಲ್ಲಿ ರಾಜ್ಯದ ಮೂಲೆಮೂಲೆಯ ಜನ ಬದುಕು ನಡೆಸುತ್ತಿದ್ದಾರೆ ಎಂಬಂತೆ ಭ್ರಮಿಸುವವರು ಮಾತ್ರ ಇಂತಹದ್ದೊಂದು ಅವಾಸ್ತವಿಕ ಮತ್ತು ಜನವಿರೋಧಿ ಆದೇಶ ಹೊರಡಿಸಲು ಸಾಧ್ಯ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಮೊದಲ ದಿನದ ಸಂಪೂರ್ಣ ಲಾಕ್ ಡೌನ್ ನ ಕೆಲವು ಘಟನೆಗಳು ನಿಜಕ್ಕೂ ಸರ್ಕಾರದ ಆದೇಶ ಮತ್ತು ಅದನ್ನು ಜಾರಿಗೊಳಿಸುವಲ್ಲಿ ಪೊಲೀಸರು ಸೃಷ್ಟಿಸಿದ ಅನಾಹುತಗಳ ಸಣ್ಣ ಪರಿಚಯ ಮಾಡಿಕೊಡಲಿವೆ.

ಘಟನೆ – 1

ಉಡುಪಿ

ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಮಂಜುಳಾ ಎಂಬ ಮಹಿಳೆಗೆ ಎದೆನೋವು ಕಾಣಿಸಿಕೊಂಡಿತ್ತು. ಕೋವಿಡ್ ನೆಗೇಟಿವ್ ಇದ್ದ ಅವರನ್ನು ಊರಿನ ವ್ಯಕ್ತಿಯೊಬ್ಬರ ಖಾಸಗೀ ವಾಹನದಲ್ಲಿ ಕಾರ್ಕಳದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಬಜಗೋಳಿ ಬಳಿ ಉಡುಪಿ ಪೊಲೀಸರು ವಾಹನ ತಡೆದು, ಎಂತಹದ್ದೇ ಪರಿಸ್ಥಿತಿ ಇದ್ದರೂ ಖಾಸಗಿ ವಾಹನ ಬಳಸುವಂತಿಲ್ಲ. ಬೇಕಾದರೆ ಆ್ಯಂಬುಲೆನ್ಸ್ ಮಾಡಿಕೊಂಡು ಕರೆದೊಯ್ಯಿರಿ ಎಂದಿದ್ದಾರೆ. ಆಗ ಮನೆಯವರು ಅವರನ್ನು ವಾಪಸು ಕರೆದುಕೊಂಡು ಹೋಗಿ, ಆ್ಯಂಬುಲೆನ್ಸ್ ಗಳು ಲಭ್ಯವಿಲ್ಲದ ಕಾರಣ ಮತ್ತೊಂದು ಬಳಸು ದಾರಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲಿ ಸಾಕಷ್ಟು ತಡವಾದ್ದರಿಂದ ಆ ಮಹಿಳೆ ಸಾವು ಕಂಡಿದ್ದಾರೆ!

ಸರ್ಕಾರದ ಆದೇಶದಲ್ಲಿ ತೀವ್ರ ಅನಾರೋಗ್ಯದಂತಹ ಸಂದರ್ಭದಲ್ಲಿ ಖಾಸಗೀ ವಾಹನ ಬಳಸಬಹುದು ಎಂಬುದು ಸ್ಪಷ್ವವಾಗಿಲ್ಲದ ಕಾರಣ, ಉಡುಪಿ ಪೊಲೀಸರು ಮಾನವೀಯತೆ ಮರೆತು ಅಕ್ಷರಶಃ ನಿಯಮ ಪಾಲಿಸಲು ಹೋಗಿದ್ದೇ ಈ ಅನ್ಯಾಯದ ಸಾವಿಗೆ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ!

ಘಟನೆ- 2

ಶಿವಮೊಗ್ಗ

ಬೆಳಗ್ಗೆ 8 ಗಂಟೆಯ ಹೊತ್ತಿಗೆ ಶಿವಮೊಗ್ಗ ನಗರದ ವಿವಿಧ ಮನೆಗಳಿಗೆ ಹಾಲು ಹಾಕಲು ಬರುತ್ತಿದ್ದ ನಗರದ ಹೊರವಲಯದ ಚಿಕ್ಕಲ್, ಪುರಲೆ ಮತ್ತಿತರ ಆಸುಪಾಸಿನ ಭಾಗದ ರೈತರನ್ನು ಪೊಲೀಸರು ತಡೆದು, ಹಾಲು ಮನೆಗಳಿಗೆ ಹಾಕದಂತೆ ವಾಪಸು ಕಳಿಸಿದ್ದಾರೆ. ಹಾಗಾಗಿ 15-20 ಮಂದಿ ಹೈನುಗಾರ ರೈತರು ಕರೆದ ಹಾಲನ್ನು ಚರಂಡಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶದಲ್ಲಿ ಹಾಲು ತರಕಾರಿ ಹಣ್ಣುಗಳನ್ನು ಮನೆಮನೆಗೆ ಹೋಗಿ ಮಾರಾಟ ಮಾಡಲು ಅವಕಾಶ ನೀಡಿದ್ದರೂ, ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗ ಪೊಲೀಸರು, ಎಳೆ ಮಕ್ಕಳ ಕುಡಿಯುವ ಹಾಲನ್ನೂ ಲಾಕ್ ಡೌನ್ ಹೆಸರಿನಲ್ಲಿ ಕಸಿದುಕೊಂಡಿರುವ ಹೇಯ ಘಟನೆ ವರದಿಯಾಗಿದೆ.

ಘಟನೆ- 3

ಕೋಲಾರ

ನಗರದ ಅಮ್ಮವರ ಪೇಟೆ ವೃತ್ತದ ಬಳಿ ಔಷಧಿ ಕೊಳ್ಳಲು ಬೆಳಗ್ಗೆ ಸ್ಕೂಟಿಯಲ್ಲಿ ಬಂದ ಮಂಗಳಮುಖಿಯ ಮೇಲೆ ಗಲ್ ಪೇಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೇದಾವತಿ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿದ ವೀಡಿಯೋ ಬೆಳಗ್ಗೆಯಿಂದಲೇ ವೈರಲ್ ಆಗಿದೆ. ಆ ಮಂಗಳಮುಖಿ, ತನಗೆ ಸರ್ಜರಿಯಾಗಿದೆ. ಅದಕ್ಕಾಗಿ ಮೆಡಿಕಲ್ ಶಾಪ್ ಗೆ ಔಷಧಿಗೆ ಬಂದಿರುವೆ ಎಂದು ಹೇಳಿದರೂ, ಪೊಲೀಸರು ಆಕೆಯನ್ನು ಕೂದಲು ಹಿಡಿದು ಎಳೆದುಕೊಂಡು ಬೀದಿಯಲ್ಲಿ ಓಡಾಡಿಸಿ ಹೊಡೆಯುವ ಪೈಶಾಶಿಕ ದೃಶ್ಯಾವಳಿ ಬಗ್ಗೆ ವ್ಯಾಪಕ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ.

ಸ್ವತಃ ನಡೆಯಲಾಗದವರು, ಅನಾರೋಗ್ಯ, ವೃದ್ಧಾಪ್ಯದಂತಹ ಸಮಸ್ಯೆ ಇರುವವರು ಕೂಡ ಕಿಮೀ ಗಟ್ಟಲೆ ದೂರದ ಮೆಡಿಕಲ್ ಶಾಪುಗಳಿಗೆ ನಡೆದುಕೊಂಡೇ ಬರಬೇಕು ಎಂಬ ಅಮಾನುಷ ಮತ್ತು ಅವಿವೇಕಿ ನಿಯಮವನ್ನು ಅಷ್ಟೇ ಅಮಾನುಷವಾಗಿ ಮತ್ತು ಅವಿವೇಕದಿಂದ ಜಾರಿ ಮಾಡಲು ಹೊರಟ ಪರಿಣಾಮ ಈ ಆಘಾತಕಾರಿ ಹೇಯ ಘಟನೆ.

ಘಟನೆ- 4

ಹಾವೇರಿ

ರಾಣೆಬೆನ್ನೂರು ತಾಲೂಕಿನ ಗುತ್ತಲ ಎಪಿಎಂಸಿ ಆವರಣದಲ್ಲಿ ಬೆಳಗ್ಗೆ ತರಕಾರಿ ಮಾರಾಟ ಸಂತೆಯ ಮೇಲೆ ಪೊಲೀಸರು ದಾಳಿ ನಡೆಸಿ ಲಾಠಿ ಪ್ರಹಾರ ನಡೆಸಿದ್ದಾರೆ. ಎಪಿಎಂಸಿ ಏಜೆಂಟರೊಬ್ಬರು ಅನುಮತಿ ಪಡೆಯದೆ ಸಂತೆ ನಡೆಸುತ್ತಿದ್ದ ಎಂಬುದು ಪೊಲೀಸರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಆದರೆ, ಏಜೆಂಟನ ತಪ್ಪಿಗೆ ಪೊಲೀಸರು ತರಕಾರಿ ಕೊಳ್ಳಲು ಬಂದ ಅಮಾಯಕ ಹಳ್ಳಿ ಜನರ ಮೇಲೆ, ಅದರಲ್ಲೂ ವಯೋವೃದ್ಧರು, ಮಹಿಳೆಯರು ಮಕ್ಕಳೆನ್ನದೆ ಭೀಕರ ದಾಳಿ ನಡೆಸಿ, ಪ್ರಾಣಿಗಳಿಗೆ ಬಡಿಯುವಂತೆ ಬಡಿಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಬೆಳಗ್ಗೆ 10ರವರೆಗೆ ತರಕಾರಿ ಮಾರಾಟ ಮಾಡಲು ಮತ್ತು ಕೊಳ್ಳಲು ಅನುಮತಿ ಇದೆ ಎಂಬ ನಿಯಮದಂತೆ ಸುತ್ತಮುತ್ತಲ ಜನ ತರಕಾರಿ ಕೊಳ್ಳಲು ಬಂದಿದ್ದಾರೆ. ಆದರೆ, ಪೊಲೀಸರು ಅಲ್ಲಿ ತರಕಾರಿ ಮಾರಲು ಅನುಮತಿ ಪಡೆಯದೇ ಇರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಬದಲಿಗೆ, ತರಕಾರಿ ಕೊಳ್ಳುವ ಮಕ್ಕಳು, ಮಹಿಳೆಯರ ಮೇಲೆ ಪೈಶಾಚಿಕ ದಾಳಿ ನಡೆಸಿರುವುದು ಲಾಕ್ ಡೌನ್ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯಕ್ಕೆ ಉದಾಹರಣೆ.

ಘಟನೆ- 5

ಶಿವಮೊಗ್ಗ

ಸಾಗರ ತಾಲೂಕಿನ ತ್ಯಾಗರ್ತಿಯ ಪಕ್ಕದ ಹಳ್ಳಿಯ ರೈತರು, ಬೀಜ, ಗೊಬ್ಬರ, ನೀರಾವರಿ ಪೈಪ್ ತರಲು ಟ್ರ್ಯಾಕ್ಟರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೊರಟಾಗ, ಪೊಲೀಸರು ವಾಹನ ಬಳಸುವಂತಿಲ್ಲ ಎಂದು ತಡೆದು ವಾಪಸು ಕಳಿಸಿದ್ದಾರೆ. ಇನ್ನು ಹದಿನೈದು ದಿನಗಳ ಕಾಲ ಗೊಬ್ಬರವಿಲ್ಲದೆ, ಬೀಜವಿಲ್ಲದೆ, ಹಾಕಿದ ಬೆಳೆಗೆ ಸಕಾಲಕ್ಕೆ ನೀರು ಕೊಡಲು ಪೈಪ್ ಇಲ್ಲದೆ ಹೋದರೆ, ಕೃಷಿ ಮಾಡುವುದು ಸಾಧ್ಯವೇ? ಎಂದು ರೈತರು ತಲೆಮೇಲೆ ಕೈಹೊತ್ತು ವಾಪಸು ಹೋಗಿದ್ದಾರೆ!

ಅಗತ್ಯ ವಸ್ತು ಖರೀದಿಗೆ  ಅವಕಾಶ ನೀಡಿರುವ ಬೆಳಗ್ಗೆ ನಿಗದಿತ ಅವಧಿಯಲ್ಲೇ, ಅದರಲ್ಲೂ ಸರ್ಕಾರ ಕೃಷಿ ಚಟುವಟಿಕೆಗೆ ಅಡ್ಡಿ ಪಡಿಸಬಾರದು ಎಂಬುದನ್ನು ಹೇಳಿದ ಹಿನ್ನೆಲೆಯಲ್ಲಿ ಬೀಜ-ಗೊಬ್ಬರದಂತಹ ಕೃಷಿ ಸಾಮಗ್ರಿ ಖರೀದಿಗೂ ಲಾಕ್ ಡೌನ್ ನೆಪದಲ್ಲಿ ಅವಕಾಶ ನೀಡದೇ ಹೋದರೆ, ಸರ್ಕಾರ ಮತ್ತು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ-6

ಉಡುಪಿ

ಕುಂದಾಪುರ ತಾಲೂಕಿನ ಕೋಟೇಶ್ವರ ಬಳಿಯ ಸಗಟು ಅಕ್ಕಿ ವಿತರಕರೊಬ್ಬರು ತಮಗೆ ಅಕ್ಕಿ ಸರಬರಾಜು ಮಾಡುವ ಕಂಪನಿಗೆ ಸರಕಿನ ಬಾಬ್ತು ದುಡ್ಡು ಕಳಿಸಲು ಬ್ಯಾಂಕಿಗೆ ಹೋಗಬೇಕಿತ್ತು. ಕೋಟೇಶ್ವರಕ್ಕಿಂತ ಒಳಗಿನ ತಮ್ಮ ಮನೆಯಿಂದ ಕುಂದಾಪುರ ಬ್ಯಾಂಕಿಗೆ ಬೈಕಿನಲ್ಲಿ ಹೋಗುವಾಗ, ಪೊಲೀಸರು ಹಿಡಿದು, ಅವರು ಯಾವುದೇ ಕಾರಣ ಹೇಳಿದರೂ ಕೇಳದೆ ಬೈಕ್ ಸೀಜ್ ಮಾಡಿದ್ದಾರೆ!

ಅಕ್ಕಿ ಅಗತ್ಯ ವಸ್ತು. ಬ್ಯಾಂಕ್ ಸೇವೆ ಕೂಡ ಅಗತ್ಯ ಸೇವೆ. ಈ ಎರಡನ್ನು ಬಳಸಲು ಜನ ನಡೆದುಕೊಂಡೇ ಹೋಗಬೇಕು ಎಂಬ ನಗೆಪಾಟಲಿನ ಆದೇಶವನ್ನು ಅಷ್ಟೇ ವಿವೇಚನಾಹೀನವಾಗಿ ಜಾರಿಗೆ ತರಲು ಪೊಲೀಸರು ಹೊರಟ ಫಲ ಈ ದುರವಸ್ಥೆ! ಆ ವ್ಯಾಪಾರಿ ನಗದು ಹಣವನ್ನು ಬ್ಯಾಂಕಿಗೆ ಕಟ್ಟಿ ಅಲ್ಲಿಂದ ಕಂಪನಿಗೆ ವರ್ಗಾವಣೆ ಮಾಡಲಾಗದು, ಮತ್ತೆ ಅಕ್ಕಿ ಅವರಿಗೆ ಸರಬರಾಜಾಗದು. ಅಂದರೆ ಅವರು ಸಗಟು ವಹಿವಾಟು ಮಾಡುವ ನೂರಾರು ಮಂದಿ ವ್ಯಾಪಾರಿಗಳಿಗೂ ಅವರಿಂದ ಅಕ್ಕಿ ಬರಲಾರದು!

… ಹೀಗೆ ಲಾಕ್ ಡೌನ್ ಮೊದಲ ದಿನವೇ ಇಂತಹ ನೂರಾರು ಎಡವಟ್ಟುಗಳು, ಅಮಾನುಷ ಕೃತ್ಯಗಳು, ದಬ್ಬಾಳಿಕೆ, ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ. ಹಳ್ಳಿಗಾಡಿನಲ್ಲಂತೂ ಹಲವರು ಹತ್ತಾರು ಕಿ,ಮೀ ಗಟ್ಟಲೆ ನಡೆದುಕೊಂಡು ತಲೆಮೇಲೆ ಅಕ್ಕಿ ಕಾಳು ದಿನಸಿ, ತರಕಾರಿ ಹೊತ್ತು ಹೈರಾಣಾಗಿದ್ದಾರೆ. ಸರ್ಕಾರ ಮತ್ತು ಪೊಲೀಸರಿಗೆ ಹಿಡಿಶಾಪ ಹಾಕುತ್ತಲೇ ಪ್ರತಿ ಹೆಜ್ಜೆ ಇಟ್ಟಿದ್ದಾರೆ. ಪಟ್ಟಣಗಳಲ್ಲಿ ಕೂಡ ನಿರ್ದಿಷ್ಟ ಔಷಧಿಗಾಗಿ ದೂರ ದೂರದ ಔಷಧಿ ಅಂಗಡಿಗಳಿಗೆ ಹೋಗಿ ಬರಲಾಗದೆ, ಹಣಕ್ಕಾಗಿ ದೂರದ ಎಟಿಎಂಗಳಿಗೆ, ಬ್ಯಾಂಕಿಗೆ ಹೋಗಲಾರದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಲು ತರಕಾರಿಗಳು ನಗರ ಪ್ರದೇಶದಲ್ಲಿ ಕೆಲವು ಕಡೆ ಮನೆಮನೆ ಬಾಗಿಲಿಗೆ ಬಂದರೆ ಮತ್ತೆ ಕೆಲವು ಕಡೆ ಅಂತಹ ವ್ಯವಸ್ಥೆಯೂ ಇಲ್ಲದೆ, ಕಿಮೀ ಗಟ್ಟಲೆ ನಡೆದುಹೋಗಬೇಕಾದದು ವಾಸ್ತವ ಸ್ಥಿತಿ.

ಆದರೆ, ಅಂತಹ ಜನಸಾಮಾನ್ಯರ ಬದುಕಿನ ಪರಿಚಯವೇ ಇರದ ಎಸಿ ರೂಮಿನ ಐಷಾರಾಮಿ ಬದುಕಿನ ಅಧಿಕಾರಶಾಹಿ ರೂಪಿಸಿದ ಮನುಷ್ಯ ವಿರೋಧಿ ಆದೇಶ ಮತ್ತು ಅದನ್ನು ಅಷ್ಟೇ ಕ್ರೌರ್ಯದ ಮೂಲಕ ಜಾರಿಗೆ ತರಲು ಹೊರಟ ಪೊಲೀಸರ ನಡೆಯಿಂದಾಗಿ ಲಾಕ್ ಡೌನ್ ಮೊದಲೇ ದಿನವೇ ಜನಸಾಮಾನ್ಯರ ಪಾಲಿಗೆ ನರಕದರ್ಶನವಾಗಿದೆ! ಇನ್ನು ಮುಂದಿನ ದಿನಗಳಲ್ಲಿ ಇನ್ನೆಷ್ಟು ಅನಾಹುತಗಳು ಕಾದಿವೆಯೋ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...