ಆಮ್ಲಜನಕ ಹಂಚಿಕೆ: ಮತ್ತೆ ಕರ್ನಾಟಕಕ್ಕೆ ಅನ್ಯಾಯವೆಸಗಿದ ಕೇಂದ್ರ..!

ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಕರ್ನಾಟಕಕ್ಕೆ ಅಗತ್ಯ ಪ್ರಮಾಣದ ಆಮ್ಲಜನಕ ಸರಬರಾಜು ಮಾಡಲು ಕೇಂದ್ರದ ನಿರಾಕರಣೆ ಮುಂದುವರಿದಿದೆ.

ವಾಸ್ತವವಾಗಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ಸಾವಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ತನಗೆ 1400 ಟನ್ ಆಮ್ಲಜನಕವನ್ನು ಹಂಚಿಕೆ ಮಾಡುವಂತೆ ಕಳೆದ ಒಂದು ವಾರದಿಂದ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದರೂ, ಕೇಂದ್ರ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ.

ಆ ಹಿನ್ನೆಲೆಯಲ್ಲಿ ಕಳೆದ ವಾರ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿ, ರಾಜ್ಯದ ಬೇಡಿಕೆಗೆ ತಕ್ಕಂತೆ ಕನಿಷ್ಟ 1200 ಟನ್ ಆಮ್ಲಜನಕ ಸರಬರಾಜು ಮಾಡುವಂತೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಆ ನಿರ್ದೇಶನದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ, ಹಾಗೆ ಹೈಕೋರ್ಟುಗಳು ಆಮ್ಲಜನಕ ಸರಬರಾಜಿಗೆ ತಾಕೀತು ಮಾಡುತ್ತಾ ಹೋದರೆ, ಎಲ್ಲಾ ರಾಜ್ಯಗಳಿಂದಲೂ ಅಂತಹದ್ದೇ ಬೇಡಿಕೆ ಬರಬಹುದು. ಆಗ ತನಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಧ್ಯವಿಲ್ಲ. ಹಾಗಾಗಿ ಅಂತಹ ನಿರ್ದೇಶನಕ್ಕೆ ತಡೆ ನೀಡಿ, ಲಭ್ಯವಿರುವ ಆಮ್ಲಜನಕವನ್ನು ಹಂಚುವುದನ್ನು ತನ್ನ ವಿವೇಚನೆಗೆ ಬಿಡಬೇಕು ಎಂದು ಕೋರಿತ್ತು.

ಆದರೆ, ಸುಪ್ರೀಂಕೋರ್ಟ್, ಕೇಂದ್ರದ ಆ ವಾದವನ್ನು ತಳ್ಳಿ ಹಾಕಿ, ಕರ್ನಾಟಕ ಹೈಕೋರ್ಟ್ ನೀಡಿರುವ ನಿರ್ದೇಶನ ಅತ್ಯಂತ ನ್ಯಾಯಸಮ್ಮತ ಮತ್ತು ವಿವೇಚನೆಯ ಕ್ರಮ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಕರ್ನಾಟಕಕ್ಕೆ ಆಮ್ಲಜನಕ ಹಂಚಿಕೆ ಮಾಡಬೇಕು. ಕರ್ನಾಟಕದ ಬೇಡಿಕೆಯ 1400 ಟನ್ ನಷ್ಟು ಸರಬರಾಜು ಸಾಧ್ಯವಿಲ್ಲದೇ ಇದ್ದರೂ, ಹೈಕೋರ್ಟ್ ತೀರಾ ಕನಿಷ್ಟ ಜೀವ ರಕ್ಷಣೆಗೆ ಅಗತ್ಯ ಅಂದಾಜು ಮಾಡಿದಂತೆ 1200 ಟನ್ ಆದರೂ ನೀಡಲೇಬೇಕು. ಇಲ್ಲವಾದಲ್ಲಿ ತಾನೇ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಆಗ 1200 ಟನ್ ಆಮ್ಲಜನಕ ಸರಬರಾಜಿಗೆ ಒಪ್ಪಿದ್ದ ಕೇಂದ್ರ ಸರ್ಕಾರ, ಅದಾಗಿ ಐದಾರು ದಿನ ಗತಿಸಿದರೂ ಈವರೆಗೆ ಸರಬರಾಜು ಮಾಡಿರುವುದು 120 ಟನ್ ಮಾತ್ರ!

ಅದೂ ಕೂಡ ಮಂಗಳವಾರ ರೈಲ್ವೆ ಗೂಡ್ಸ್ ಕಂಟೇನರ್ ಮೂಲಕ ಸರಬರಾಜಾಗಿದ್ದು, ಆ ವಿಷಯದಲ್ಲಿ ಕೂಡ ಬಿಜೆಪಿ ರಾಜಕೀಯ ಲಾಭ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡಿದೆ. ಟಿವಿ ಮಾಧ್ಯಮಗಳು ಕೂಡ 1800 ಟನ್ ಅಗತ್ಯ, 1400 ಟನ್ ಬೇಡಿಕೆ, 1200 ಟನ್ ಕೋರ್ಟ್ ಹಂಚಿಕೆ, ಮತ್ತು ಅಂತಿಮವಾಗಿ ಸರಬರಾಜಾಗಿರುವ ಕೇವಲ 120 ಟನ್ ಆಮ್ಲಜನಕದ ಲೆಕ್ಕ ಕೊಡುವ ಬದಲು, ಬಂದಿರುವ 120 ಟನ್ ಆಮ್ಲಜನಕವೇ ಕೇಂದ್ರ ಸರ್ಕಾರದ ಮಹಾ ಪ್ರಸಾದ ಎಂಬಂತೆ ಬಿಂಬಿಸಲು ಅರ್ಧ ದಿನ ಬಡಾಯಿ ಕೊಚ್ಚಿವೆ.

ಹಾಗೆ ನೋಡಿದರೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟುಗಳು, ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಮತ್ತು ಹೆಚ್ಚು ಸಾವುಗಳು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಒಂದು. ಅಲ್ಲದೆ, ಚಾಮರಾಜನಗರದಲ್ಲಿ ಒಂದೇ ದಿನ ಆಮ್ಲಜನಕ ಸಿಗದೆ 28 ಮಂದಿ ಜೀವ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ನಿತ್ಯ ಹಲವರು ಸಕಾಲದಲ್ಲಿ ಆಮ್ಲಜನಕ ಸಿಗದೆ ಸಾವು ಕಾಣುತ್ತಿರುವ ದಾರುಣ ಪರಿಸ್ಥಿತಿ ಇದೆ. ಆ ಹಿನ್ನೆಲೆಯಲ್ಲಿ ಆ ರಾಜ್ಯಕ್ಕೆ ಆದ್ಯತೆಯ ಮೇಲೆ ಆಮ್ಲಜನಕ ಹಂಚಿಕೆ ಮತ್ತು ಸರಬರಾಜು ಮಾಡಿ ಎಂದು ತಾಕೀತು ಮಾಡಿದ್ದರೂ ಕೇಂದ್ರ ಸರ್ಕಾರ ಈಗಲೂ ಕರ್ನಾಟಕದ ವಿಷಯದಲ್ಲಿ ಒಂದು ಬಗೆಯ ಸೇಡಿನ ಮನೋಧರ್ಮವನ್ನೇ ಪ್ರದರ್ಶಿಸುತ್ತಿರುವಂತಿದೆ ಎಂಬ ಮಾತುಗಳು ಕೇಳಿಬಂದಿವೆ.

ಇಂತಹ ಮಾತುಗಳಿಗೆ ಪೂರಕವಾಗಿ, ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ನಂತರ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ರಾಜ್ಯಕ್ಕೆ ಕೇವಲ 120 ಟನ್ ಆಮ್ಲಜನಕ ಸರಬರಾಜಾಗಿದ್ದರೆ, ನಾಲ್ಕನೇ ಸ್ಥಾನದಲ್ಲಿರುವ ಉತ್ತರಪ್ರದೇಶಕ್ಕೆ 1630 ಟನ್ ಆಮ್ಲಜನಕ ಸರಬರಾಜು ಮಾಡಲಾಗಿದೆ. ಕೇಂದ್ರ ಸರ್ಕಾರ 375 ಟ್ಯಾಂಕರ್ ಮೂಲಕ ಸೋಮವಾರ ಒಟ್ಟು 5,735 ಟನ್ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಿದ್ದು, ಆ ಪೈಕಿ ಉತ್ತರಪ್ರದೇಶಕ್ಕೆ ಸಿಂಹಪಾಲು ಸಿಕ್ಕಿದೆ. ವಿಪರ್ಯಾಸವೆಂದರೆ; ಸಾವು ಮತ್ತು ಹೊಸ ಪ್ರಕರಣಗಳಲ್ಲಿ ದೇಶದಲ್ಲೆ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ ನೀಡಿರುವುದು ಕೂಡ ಕೇವಲ 293 ಟನ್ ಆಮ್ಲಜನಕ ಮಾತ್ರ! ಆದರೆ, ಪ್ರಕರಣ ಮತ್ತು ಸಾವಿನ ಪ್ರಮಾಣದಲ್ಲಿ 11ನೇ ಸ್ಥಾನದಲ್ಲಿರುವ ಗುಜರಾತಿಗೆ 1232 ಟನ್ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ!

ಸದ್ಯ ರಾಜ್ಯದ ಆಮ್ಲಜನಕದ ಬೇಡಿಕೆ ದಿನವೊಂದಕ್ಕೆ 1800 ಟನ್ ನಷ್ಟಿದ್ದರೆ, ಕೇಂದ್ರದಿಂದ ನಿತ್ಯ ಸರಬರಾಜಾಗುತ್ತಿರುವ ಆಮ್ಲಜನಕದ ಪ್ರಮಾಣ 865 ಟನ್ ಮಾತ್ರ! ಈ ನಡುವೆ ಮಂಗಳವಾರ 120 ಟನ್ ರೈಲು ಮೂಲಕ ಸರಬರಾಜು ಮಾಡಲಾಗಿದೆ. ಆದಾಗ್ಯೂ ಕೋರ್ಟ್ ನಿರ್ದೇಶಿಸಿದ ಪ್ರಮಾಣಕ್ಕಿಂತ ತೀರಾ ಕಡಿಮೆಯೇ ಸರಬರಾಜಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿನವೊಂದಕ್ಕೆ ಸುಮಾರು 935 ಟನ್ ನಷ್ಟು ಭಾರೀ ಪ್ರಮಾಣದ ಆಮ್ಲಜನಕದ ಕೊರತೆ ಇದೆ. ರಾಜ್ಯದಲ್ಲೇ ಉತ್ಪಾದನೆಯಾಗುವ 1200 ಟನ್ ನಷ್ಟು ಆಮ್ಲಜನಕವನ್ನು ಕೂಡ ರಾಜ್ಯಕ್ಕೇ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಕಳೆದ ವಾರ ರಾಜ್ಯ ಮುಖ್ಯಕಾರ್ಯದರ್ಶಿಗಳೇ ಹೇಳಿದ್ದರು.

ಈ ನಡುವೆ, 120 ಟನ್ ನಷ್ಟು ಆಮ್ಲಜನಕ ರೈಲಿನ ಮೂಲಕ ಬಂದದ್ದನೇ ದೊಡ್ಡ ಯಶೋಗಾಥೆಯಂತೆ ಬಿಂಬಿಸುತ್ತಿರುವ ಬಿಜೆಪಿ ಮತ್ತು ಅದರ ಐಟಿ ಸೆಲ್, ವಾಸ್ತವವಾಗಿ ರಾಜ್ಯಕ್ಕೆ ಇನ್ನೂ ಬರಬೇಕಾಗಿರುವ ಪಾಲು ಕೇಳುವ ಬಗ್ಗೆ ಮಾತ್ರ ಮುಗುಮ್ಮಾಗಿವೆ. ರಾಜ್ಯದ 25 ಮಂದಿ ಬಿಜೆಪಿ ಸಂಸದರು ಕೂಡ ಈವರೆಗೆ ಆಮ್ಲಜನಕದ ವಿಷಯದಲ್ಲಿ ಕೇಂದ್ರದ ತಮ್ಮದೇ ಸರ್ಕಾರ, ಜಿಎಸ್ ಟಿ ಪಾಲು, ನೆರೆ ಮತ್ತು ಬರ ಪರಿಹಾರಗಳಲ್ಲಿ ಮಾಡಿದಂತೆಯೇ ಕನ್ನಡಿಗರ ವಿರೋಧಿ ಧೋರಣೆಯನ್ನು ಮುಂದುವರಿಸಿರುವ ಬಗ್ಗೆ ಉಸಿರೆತ್ತುತ್ತಿಲ್ಲ.

ಕರೋನಾದಂತಹ ಭೀಕರ ಸಾಂಕ್ರಾಮಿಕದ ವಿಷಯದಲ್ಲಿ ಕೂಡ, ಹೀಗೆ ಬಿಡುಬೀಸಾಗಿ ತಾರತಮ್ಯ ಎಸಗುತ್ತಿರುವ, ಉತ್ತರದ ರಾಜ್ಯಗಳ ಪಕ್ಷಪಾತಿ ಧೋರಣೆಯನ್ನು ಪ್ರಜಾಪ್ರಭುತ್ವವೇ ನಾಚುವಂತೆ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ಅಮಾನುಷ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಬಿಜೆಪಿ ಮಾತ್ರ ಕೇವಲ 120 ಟನ್ ಆಮ್ಲಜನಕ ಕಳುಹಿಸಿದ್ದೇ ವರಪ್ರಸಾದ ಎಂಬಂತೆ ಬಿಂಬಿಸುತ್ತಿರುವುದು ವಿಪರ್ಯಾಸ!

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...