ಬೆಂಗಳೂರು : NEET UG 2026 ರ ರದ್ದತಿಯು ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಲ್ಲಿ ಭಾರಿ ಆತಂಕವನ್ನು ಹುಟ್ಟುಹಾಕಿದೆ, ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂಬ ಮಾಹಿತಿಗಳು ಹೊರಬರುತ್ತಿವೆ. ಈಗಾಗಲೇ ಎನ್ಟಿಎ ಮರು ಪರೀಕ್ಷೆ ಮಾಡುವುದಾಗಿ ಘೋಷಿಸಿದೆ.

ಪ್ರಮುಖವಾಗಿ ನೀಟ್ ಭಾರತದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿದೆ. ಯುಜಿ 2026 ಅನ್ನು ‘ಗೆಸ್ ಪತ್ರಿಕೆ’ ಸೋರಿಕೆ ಆರೋಪದ ನಂತರ ರದ್ದುಪಡಿಸಲಾಗಿದೆ. ಮೇ 3 ರಂದು ನಡೆದ ಪರೀಕ್ಷೆಯ ಸಮಗ್ರತೆಯ ಬಗ್ಗೆ ಕೇಂದ್ರೀಯ ಸಂಸ್ಥೆಗಳಿಂದ ಬಂದ ಮಾಹಿತಿಗಳು ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ತಕ್ಷಣವೇ ಈ ಇಡೀ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.
ಪರೀಕ್ಷೆಗೂ ಮುನ್ನ ಪ್ರಸಾರವಾದ ಪ್ರಶ್ನೆಗಳು ಮತ್ತು ಮೇ 3 ರಂದು ನಡೆಸಲಾದ ನಿಜವಾದ ಪ್ರಶ್ನೆ ಪತ್ರಿಕೆಯ ನಡುವಿನ ಹೋಲಿಕೆಯು ಅನುಮಾನವನ್ನು ಹುಟ್ಟುಹಾಕಿದೆ. ವಿವಾದದ ಸುತ್ತಲಿನ ಚರ್ಚೆಗಳು ಅಂತಿಮ ಪತ್ರಿಕೆಯ ಸುಮಾರು 140 ಪ್ರಶ್ನೆಗಳು ಪರೀಕ್ಷೆಗೆ ಮೊದಲು ಹಂಚಿಕೊಳ್ಳಲಾದ ಸೋರಿಕೆಯಾದ ಪ್ರಶ್ನೆಗಳಿಗೆ ಹೊಂದಿಕೆಯಾಗುತ್ತವೆ ಎಂಬ ಮಾಹಿತಿಯು ಇದೆ.
ಲೀಕ್ ಆಗಿರುವ ಪ್ರಶ್ನೆ ಪತ್ರಿಕೆಯಲ್ಲಿನ ಹೊಂದಾಣಿಕೆ ಪ್ರಶ್ನೆಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವು ಕೇರಳದವರೆಗೂ ಹಬ್ಬಿರುವ ಶಂಕೆಯು ವ್ಯಕ್ತವಾಗುತ್ತಿದೆ.. ಇಷ್ಟು ದೊಡ್ಡ ಪ್ರಮಾಣದಲ್ಲಿ ಪತ್ರಿಕೆ ಸೋರಿಕೆಯಾಗಿರುವುದರ ಹಿಂದೆ ಕೋಚಿಂಗ್ ಮಾಫಿಯಾ ಹಾಗೂ ಕೇಂದ್ರಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ : ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆ, ಬೆಂಗಳೂರು ಉಪನಗರ ರೈಲು ಯೋಜನೆಗೆ 153 ಹೊಸ ಕೋಚ್ಗಳು!
ಟೆಲಿಗ್ರಾಮ್ನಲ್ಲಿ ಪೇಪರ್ ಸೋರಿಕೆ..!.
ಇನ್ನೂ ಪರೀಕ್ಷೆಯ ನಂತರದ ದಿನಗಳಲ್ಲಿ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದೆ ಎಂದು ಹೇಳಲಾಗುವ ಟೆಲಿಗ್ರಾಮ್ ವೀಡಿಯೊಗಳು, ಸ್ಕ್ರೀನ್ಶಾಟ್ಗಳು ಮತ್ತು ಪ್ರಶ್ನೆ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇದಾದ ಬಳಿಕ ಈ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೆ ಪರೀಕ್ಷೆ ನಡೆದ ನಾಲ್ಕು ದಿನಗಳ ಬಳಿಕ, ಮೇ 7 ರ ಸಂಜೆ, ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಬಂದಿರುವುದಾಗಿ ಎನ್ಟಿಎ ತಿಳಿಸಿದೆ. ಸ್ವತಂತ್ರ ಪರಿಶೀಲನೆ ಮತ್ತು ಹೆಚ್ಚಿನ ತನಿಖೆಗಾಗಿ ಮೇ 8 ರಂದು ಈ ಮಾಹಿತಿಯನ್ನು ತಕ್ಷಣವೇ ಸಿಬಿಐಗೆ ರವಾನಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆರೋಪಿಗಳು ಪರೀಕ್ಷೆಗೂ ಮುನ್ನವೇ ಹೆಚ್ಚಿನ ಪ್ರಶ್ನೆಪತ್ರಿಕೆ ಸೆಟ್ಗಳನ್ನು ಪಡೆದಿರಬಹುದೇ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಆರೋಪಿಗಳು ಪ್ರಶ್ನೆ ಪತ್ರಿಕೆಯ ಒಂದಕ್ಕಿಂತ ಹೆಚ್ಚು ಪ್ರಶ್ನೆಪತ್ರಿಕೆ ಸೆಟ್ಗಳನ್ನು ಪಡೆದಿರಬಹುದು ಮತ್ತು ಎರಡೂ ಸೆಟ್ಗಳಿಂದ ಪ್ರಶ್ನೆಗಳನ್ನು ಹರಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

22 ಲಕ್ಷ ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕದ ಛಾಯೆ..!
ಈ ನೀಟ್ ಹಗರಣದ ಕುರಿತು ಸಂಪೂರ್ಣ ತನಿಖೆಗೆ ಆದೇಶಿಸಿರುವ ಕೇಂದ್ರ ಸರ್ಕಾರವು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಎನ್ಟಿಎಗೆ ಸೂಚಿಸಿದ ಬಳಿಕ ಸಂಸ್ಥೆಯು ಈ ಕ್ರಮ ಕೈಗೊಂಡಿದೆ.ಆದರೆ ಮರು ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸುವ ನಿರೀಕ್ಷೆಯಿರುವುದರಿಂದ, ಲಕ್ಷಾಂತರ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯ ಮುಂದಿನ ಹಂತದ ಬಗ್ಗೆ ಆತಂಕದಲ್ಲಿದ್ದಾರೆ. ಆದರೆ ಇದು ದೇಶದ ದೊಡ್ಡ ಹಗರಣಗಳಲ್ಲಿ ಒಂದಾಗಿರುವಂತೆ ಕಂಡು ಬರುತ್ತಿದೆ. ಬರೊಬ್ಬರಿ ಪರೀಕ್ಷೆ ಬರೆದಿದ್ದ ಸುಮಾರು 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಈ ನಿರ್ಧಾರದಿಂದ ಆಘಾತವಾದಂತಾಗಿದ್ದು, ಇದೀಗ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ.






