ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಹೊಸ ಸಂಪರ್ಕ ರಸ್ತೆಗಳು ಮತ್ತು ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಉದ್ದೇಶಗಳೊಂದಿಗೆ ರೂಪುಗೊಂಡ ಈ ಯೋಜನೆ, ಕಾಲಕ್ರಮೇಣ ರಸ್ತೆ, ಭೂಸ್ವಾಧೀನ, ಟೋಲ್, ಒಪ್ಪಂದದ ಷರತ್ತುಗಳು ಹಾಗೂ ಸರ್ಕಾರದ ಹೊಣೆಗಾರಿಕೆ ಕುರಿತ ವಿವಾದಗಳ ಕೇಂದ್ರಬಿಂದುವಾಗಿದೆ.

ಯೋಜನೆಯ ಆರಂಭಿಕ ಪರಿಕಲ್ಪನೆ ಏನಾಗಿತ್ತು? ಸರ್ಕಾರ ಮತ್ತು ಯೋಜನಾ ಸಂಸ್ಥೆಯ ನಡುವೆ ಮಾಡಿಕೊಂಡ ಒಪ್ಪಂದದಲ್ಲಿ ಯಾವ ಷರತ್ತುಗಳನ್ನು ನಿಗದಿಪಡಿಸಲಾಗಿತ್ತು? ಯೋಜನೆಯಡಿ ನಿರ್ಮಾಣವಾಗಬೇಕಿದ್ದ ಮೂಲಸೌಕರ್ಯಗಳ ಪೈಕಿ ಎಷ್ಟು ವಾಸ್ತವವಾಗಿ ನಿರ್ಮಾಣಗೊಂಡಿವೆ? ಯೋಜನೆಯ ವ್ಯಾಪ್ತಿಯಲ್ಲಿ ಎಷ್ಟು ಭೂಮಿ ಬಂದಿತು? ಅದರಲ್ಲಿ ಸರ್ಕಾರದ ಭೂಮಿ ಎಷ್ಟು, ಖಾಸಗಿ ಜಮೀನು ಎಷ್ಟು? ಭೂಸ್ವಾಧೀನದ ಪ್ರಕ್ರಿಯೆಯಲ್ಲಿ ರೈತರು ಮತ್ತು ಭೂಮಾಲೀಕರಿಗೆ ಎದುರಾದ ಸಮಸ್ಯೆಗಳೇನು? ಎಂಬುದರ ಕುರಿತು ರಾಜಕಾರಣಿಗಳು ಒಂದೊಂದು ಕಾಲದಲ್ಲಿ ಒಂದೊಂದು ಹೇಳಿಕೆ ನೀಡುತ್ತಾ ಬಂದಿದ್ದಾರೆ.
ಇವುಗಳ ಜೊತೆಗೆ ಮತ್ತೊಂದು ಪ್ರಮುಖ ಪ್ರಶ್ನೆ ಟೋಲ್ ಕುರಿತದ್ದು. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯ ವೆಚ್ಚವನ್ನು ವಸೂಲಿ ಮಾಡುವ ಉದ್ದೇಶದಿಂದ ಟೋಲ್ ವ್ಯವಸ್ಥೆ ರೂಪಿಸಲಾಯಿತು. ಆದರೆ ಟೋಲ್ ದರ, ವಸೂಲಿಯ ಅವಧಿ, ಯೋಜನಾ ವೆಚ್ಚ ಹಾಗೂ ಸಂಸ್ಥೆಗೆ ದೊರೆಯುವ ಹಕ್ಕುಗಳ ನಡುವೆ ಇರುವ ಸಂಬಂಧವೇನು? ಕಾಲಕಾಲಕ್ಕೆ ಸರ್ಕಾರಗಳು ಈ ಕುರಿತು ಯಾವ ನಿರ್ಧಾರಗಳನ್ನು ಕೈಗೊಂಡಿವೆ? ಒಪ್ಪಂದದ ಮೂಲ ಷರತ್ತುಗಳಿಗೆ ಹೋಲಿಸಿದರೆ ನಂತರದ ತೀರ್ಮಾನಗಳಲ್ಲಿ ಏನೆಲ್ಲ ಬದಲಾವಣೆಗಳಾಗಿವೆ? ಎಂಬ ಕುರಿತೂ ನಾಡಿನ ಜನತೆಗೆ ಒಂದು ಸ್ಪಷ್ಟ ಚಿತ್ರಣವನ್ನು ನೀಡುವ ಪ್ರಯತ್ನವನ್ನು ಯಾವೊಂದು ಪಕ್ಷವೂ ಮಾಡಿಲ್ಲ.
NICE ಯೋಜನೆ ಕೇವಲ ಒಂದು ರಸ್ತೆ ನಿರ್ಮಾಣ ಯೋಜನೆಯಾಗಿರಲಿಲ್ಲ. ಅದರ ಮೂಲ ಪರಿಕಲ್ಪನೆಯಲ್ಲಿ ಸುಮಾರು 111 ಕಿ.ಮೀ. ಎಕ್ಸ್‌ಪ್ರೆಸ್‌ವೇ, 41 ಕಿ.ಮೀ. ಪೆರಿಫೆರಲ್ ರಸ್ತೆ, ಲಿಂಕ್ ರಸ್ತೆಗಳು ಹಾಗೂ ಟೌನ್‌ಶಿಪ್‌ಗಳ ಅಭಿವೃದ್ಧಿ ಸೇರಿದಂತೆ ಹಲವು ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು.

1995ರಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ರೂಪುಗೊಂಡಿದ್ದು, 1997ರಲ್ಲಿ ಸರ್ಕಾರ ಮತ್ತು ಯೋಜನಾ ಸಂಸ್ಥೆಯಾದ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (NICE) ನಡುವೆ ಒಪ್ಪಂದ ನಡೆದಿತ್ತು. ನಂತರ ಯೋಜನೆಯ ಅನುಷ್ಠಾನ, ಭೂಸ್ವಾಧೀನ ಮತ್ತು ಒಪ್ಪಂದದ ಷರತ್ತುಗಳ ಕುರಿತು ವಿವಾದಗಳು ನ್ಯಾಯಾಲಯಗಳ ಮೆಟ್ಟಿಲೇರಿದವು. ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಗಳು ಮತ್ತು 2006ರ ಸುಪ್ರೀಂ ಕೋರ್ಟ್ ತೀರ್ಪು ಈ ಯೋಜನೆಯ ಕಾನೂನು ಇತಿಹಾಸದಲ್ಲಿ ಪ್ರಮುಖ ಹಂತಗಳಾಗಿವೆ.
ಹೀಗಾಗಿ NICE ಕುರಿತ ಇಂದಿನ ಯಾವುದೇ ರಾಜಕೀಯ ಆರೋಪವನ್ನು ಅರ್ಥಮಾಡಿಕೊಳ್ಳಲು, ಕೇವಲ ಇತ್ತೀಚಿನ ಹೇಳಿಕೆಗಳನ್ನು ನೋಡುವುದಕ್ಕಿಂತ ಮೂಲ ಒಪ್ಪಂದ, ಸರ್ಕಾರದ ಆದೇಶಗಳು, ನ್ಯಾಯಾಲಯದ ವಿಚಾರಣೆ, ಎಲ್ಲವನ್ನೂ ಪರಿಶೀಲಿಸುವುದು ಅಗತ್ಯ.

ಭೂಸ್ವಾಧೀನ ಸುತ್ತಲಿನ ವಿವಾದ
ಯೋಜನೆಯ ಅತ್ಯಂತ ಸೂಕ್ಷ್ಮ ಭಾಗವೆಂದರೆ ಭೂಸ್ವಾಧೀನ. ಭೂಸ್ವಾಧೀನಗೊಂಡ ರೈತರಿಗೆ ಬರಬೇಕಾದ ಪರಿಹಾರ ಸಿಗಲಿಲ್ಲ ಎಂಬುದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪ. ರೈತರಿಗೆ ಪರಿಹಾರದ ಹಣವನ್ನು ನಾವು ಕೆಐಎಡಿಬಿಗೆ ಪಾವತಿಸಿದ್ದೇವೆ ಎಂದು ನೈಸ್ ಸಂಸ್ಥೆಯು ಪ್ರತಿಪಾದಿಸಿದ್ದು, ಕೆಐಎಡಿಬಿ ಕಂಪೆನಿ ಪಾವತಿಸಿದ ಪರಿಹಾರದ ಮೊತ್ತವನ್ನು ಜಮೀನು ಕಳೆದುಕೊಂಡ ರೈತರಿಗೆ ಪಾವತಿಸದೆ ಯಾಕೆ ಉಳಿಸಿಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಭೂಸ್ವಾಧೀನದಲ್ಲಿ ರೈತರಿಗೆ ಪರಿಹಾರ ನೀಡುವ ಜವಾಬ್ದಾರಿಯು ರಾಜ್ಯ ಸರ್ಕಾರ ಮತ್ತು ಅದರ ಸಂಸ್ಥೆಯಾದ ಕೆಐಎಡಿಬಿ ಸಂಸ್ಥೆಯದ್ದೇ ಎಂಬುದು ಕಂಪೆನಿಯ ವಾದ.
ಸಾರ್ವಜನಿಕ ಮೂಲಸೌಕರ್ಯ ಯೋಜನೆಗಾಗಿ ಖಾಸಗಿ ಜಮೀನು ಪಡೆಯುವಾಗ ಸರ್ಕಾರದ ಮುಂದೆ ಎರಡು ಬದಿಗಳ ಜವಾಬ್ದಾರಿ ಇರುತ್ತದೆ. ಒಂದು ಕಡೆ ಸಾರ್ವಜನಿಕ ಉದ್ದೇಶಕ್ಕಾಗಿ ಅಗತ್ಯವಿರುವ ಭೂಮಿಯನ್ನು ಒದಗಿಸುವುದು; ಮತ್ತೊಂದೆಡೆ ಭೂಮಾಲೀಕರ ಹಕ್ಕುಗಳು, ಪರಿಹಾರ ಮತ್ತು ಕಾನೂನುಬದ್ಧ ಪ್ರಕ್ರಿಯೆಯನ್ನು ರಕ್ಷಿಸುವುದು. ಇದನ್ನು ಜವಾಬ್ದಾರಿಯುತವಾಗಿ ನಿರ್ಣಯಿಸಲು ಕೆಐಎಡಿಬಿಯಂತಹ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಆದರೆ, ಕೆಐಎಡಿಬಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ, ಇವತ್ತು ನಡೆಯುತ್ತಿರುವ ಗೊಂದಲಗಳ ಪ್ರಮಾಣ ಕಡಿಮೆ ಇರುತ್ತಿತ್ತು.
ನೈಸ್ ಯೋಜನೆಯ ಪರಿಕಲ್ಪನೆ, ಒಪ್ಪಂದ, ಭೂಸ್ವಾಧೀನ, ಕಾಮಗಾರಿ, ನ್ಯಾಯಾಲಯದ ಹೋರಾಟ, ಟೋಲ್ ಹಾಗೂ ನಂತರದ ಆಡಳಿತಾತ್ಮಕ ನಿರ್ಧಾರಗಳು ಹಲವು ವರ್ಷಗಳ ಅವಧಿಯಲ್ಲಿ ವಿವಿಧ ಸರ್ಕಾರಗಳ ಕಾಲದಲ್ಲಿ ನಡೆದಿವೆ. ಆದರೆ, ಇವತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಗೂಬೆ ಕೂರಿಸಲು ಹೆಚ್ ಡಿ ಕುಮಾರಸ್ವಾಮಿ ಅವರು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ರಾಜಕೀಯ ವಲಯದಲ್ಲಿದೆ. ಯಾಕೆಂದರೆ, ಈ ಯೋಜೆನೆಗೆ ಅಂದಿನ ಸಿಎಂ ಹೆಚ್‌ಡಿ ದೇವೇಗೌಡ ಅವರೇ ಅಡಿಗಲ್ಲು ಹಾಕಿದ್ದರೂ, ಇಂದು ಜೆಡಿಎಸ್‌ಗೆ ಇದು ಹಗರಣವಾಗಿ ಕಂಡಿರುವುದರಿಂದ ಜೆಡಿಎಸ್ ನ ರಾಜಕೀಯ ಹಿತಾಸಕ್ತಿಯ ಕುರಿತು ಗುಮಾನಿ ಏಳಲು ಕಾರಣವಾಗಿದೆ.
ಒಂದು ಕಡೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವೇಗದ ರಸ್ತೆ ಸಂಪರ್ಕ, ಪ್ರಯಾಣದ ಸಮಯದಲ್ಲಿ ಉಳಿತಾಯ ಹಾಗೂ ಪರ್ಯಾಯ ಮಾರ್ಗದಂತಹ ಮೂಲಸೌಕರ್ಯ ಪ್ರಯೋಜನಗಳಿಗೆ ಕಾರಣವಾದ ಬಹು ನಿರೀಕ್ಷಿತ ಯೋಜನೆಯೊಂದು ಕೇವಲ ರಾಜಕೀಯ ಕಾರಣಗಳಿಗೋಸ್ಕರ ಪದೇ ಪದೇ ವಿವಾದಕ್ಕೊಳಗಾಗುತ್ತಿರುವುದು ಸಾರ್ವಜನಿಕರಲ್ಲಿ ಇಂತಹ ಯೋಜನೆಗಳ ಕುರಿತು ಗೊಂದಲ, ಗುಮಾನಿ ಉಂಟಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆಯಿಂದಾದ ಲಾಭ-ನಷ್ಟಗಳ ಕುರಿತು ವಸ್ತುನಿಷ್ಟವಾದ ವಿಶ್ಲೇಷಣೆಯನ್ನು ರಾಜ್ಯದ ಜನತೆಯ ಮುಂದಿಡುವುದು ಪ್ರಸ್ತುತ ಹಾಗೂ ಇದುವರೆಗೆ ರಾಜ್ಯವನ್ನು ಆಳಿದ ಸರ್ಕಾರಗಳ ಜವಾಬ್ದಾರಿಯೂ ಆಗಿದೆ.
SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!





