ಛತ್ರಪತಿ ಸಂಭಾಜಿನಗರ: ದುಬಾರಿ ಸ್ಮಾರ್ಟ್ಫೋನ್ (Smartphone) ಮತ್ತು ಬಂಗಾರದ ಒಡವೆಗಳನ್ನು ಖರೀದಿಸುವ ದುರಾಸೆಗೆ ಬಿದ್ದು ಹೆತ್ತ ತಂದೆ-ತಾಯಿಯೇ ತಮ್ಮ ಕೇವಲ ಒಂದು ತಿಂಗಳ ಹಸುಗೂಸನ್ನು ಮಾರಾಟ ಮಾಡಿರುವ ಆಘಾತಕಾರಿ (Shocking) ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಳಕಿಗೆ ಬಂದಿದೆ.

ಹಣಕ್ಕಾಗಿ ಕೈಬದಲಾದ ಈ ಕಂದಮ್ಮ ಕೇವಲ 48 ಗಂಟೆಗಳ ಅವಧಿಯಲ್ಲಿ ನಾಲ್ಕು ಜನರ ಕೈಸೇರಿ, ನಾಂದೇಡ್ ಮಾರ್ಗವಾಗಿ ತೆಲಂಗಾಣ ತಲುಪಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಂತಾರಾಜ್ಯ ಜಾಲವನ್ನು ಭೇದಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮಗುವಿನ ಜನ್ಮದಾತರು ಕಂದಮ್ಮನನ್ನು 1 ಲಕ್ಷದ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಹಣದಿಂದ ಅವರು ಎರಡು ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು ಹಾಗೂ ಸುಮಾರು 62 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಖರೀದಿಸಿದ್ದರು. ಮುಕುಂದವಾಡಿ ಠಾಣಾ ಪೊಲೀಸರು ಸೆಪ್ಟೆಂಬರ್ 24ರಂದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದು, ಕಂದಮ್ಮನ ಹೆತ್ತವರು ಸೇರಿದಂತೆ ಜಾಲದಲ್ಲಿದ್ದ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಗುವನ್ನು ಮೊದಲು ಸೀಮಾ ಎಂಬಾಕೆ 2 ಲಕ್ಷದ 70 ಸಾವಿರ ರೂಪಾಯಿಗೆ ಸಂಗೀತಾ ಆವ್ಹಾಡ್ಗೆ ಮಾರಾಟ ಮಾಡಿದ್ದಳು. ಆ ಬಳಿಕ ಸಂಗೀತಾ ಹಾಗೂ ವೈದ್ಯನೆಂದು ಹೇಳಿಕೊಂಡಿದ್ದ ಸುರೇಶ್ ಗುಂಟುಕಾ ಎಂಬಾತ ನಾಂದೇಡ್ನಲ್ಲಿ ಮಗುವನ್ನು ಕೈಬದಲಾಯಿಸಿದ್ದರು. ಅಂತಿಮವಾಗಿ ಮಗುವನ್ನು ಹೈದರಾಬಾದ್ ಮೂಲದ ಉಮಾ ಖಟ್ಕಮ್ ಎಂಬಾಕೆಗೆ 3 ಲಕ್ಷದ 50 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಹೈದರಾಬಾದ್ಗೆ ತೆರಳಿ ಮಗುವನ್ನು ಸುರಕ್ಷಿತವಾಗಿ ಮರಳಿ ಕರೆತಂದಿರುವ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಕಂದಮ್ಮನನ್ನು ಸುರಕ್ಷಿತವಾಗಿ ಆರೈಕೆ ಸಂಸ್ಥೆಯ ವಶಕ್ಕೆ ಒಪ್ಪಿಸಿದ್ದಾರೆ.






