ಶೋಷಣೆ ತಾರತಮ್ಯ ದೌರ್ಜನ್ಯಗಳಿಗೆ ವೈಚಾರಿಕತೆಯ ಕೊರತೆಯೂ ಒಂದು ಕಾರಣ
–ನಾ ದಿವಾಕರ
ಇತ್ತೀಚೆಗೆ ಕಾಗಿನೆಲೆ ಮಠ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ “ ಮಕ್ಕಳು ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ನಾಗರಿಕರಾಗಲು, ಮಾನವೀಯಗೊಳ್ಳಲು ಸಾಧ್ಯ. ಸಮಾಜದ ಹಲವು ಸಮಸ್ಯೆಗಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಲ್ಲಿ ಪರಿಹಾರ ಇದೆ ” ಎಂದು ಹೇಳಿರುವುದು ಒಂದು ರೀತಿಯಲ್ಲಿ ಭರವಸೆಯ ನುಡಿಗಳಂತೆ ಕೇಳಿಬರುತ್ತದೆ. ಸಾಂಪ್ರದಾಯಿಕತೆ ಮತ್ತು ಪರಂಪರೆಯ ಹೆಸರಿನಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಮೂಲೆಗುಂಪು ಮಾಡಿ, ಮೂಢನಂಬಿಕೆಗಳನ್ನು ಪೋಷಿಸುವ ಪ್ರಯತ್ನಗಳು ಹೆಚ್ಚಾಗುತ್ತಿರುವ ವರ್ತಮಾನದ ಸನ್ನಿವೇಶದಲ್ಲಿ ಈ ಆಶಯ ನುಡಿಗಳು ಭಿನ್ನವಾಗಿ ಕಾಣುತ್ತವೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಮೂಢನಂಬಿಕೆ ಪ್ರತಿಬಂಧಕ ಮಸೂದೆಯನ್ನು ಜಾರಿಗೊಳಿಸಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಿದ್ದವು. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನ ವಿವಾದದ ಹಿನ್ನೆಲೆಯಲ್ಲಿ ರೂಪುಗೊಂಡಿದ್ದ ಈ ಕಾಯ್ದೆಗೆ ಬೊಮ್ಮಾಯಿ ಸರ್ಕಾರ 2020ರಲ್ಲಿ ಚಾಲನೆ ನೀಡಿದ್ದು, ಮೌಢ್ಯ ನಿಷೇಧ ಕಾಯ್ದೆಯನ್ನು ಅಧಿಕೃತಗೊಳಿಸಿದೆ.
ಆದರೆ ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಮೌಢ್ಯಗಳನ್ನು ಕಾನೂನಾತ್ಮಕವಾಗಿ ತೊಡೆದುಹಾಕಲು ಅಪೇಕ್ಷಿಸುವುದು ಹಗಲುಗನಸು ಕಂಡಂತೆಯೇ ಆಗುತ್ತದೆ. ಯಾವುದನ್ನು ಮೌಢ್ಯ ಎಂದು ವರ್ಗೀಕರಿಸಬೇಕು ಎನ್ನುವುದೇ ಒಂದು ಜಟಿಲ ಸಮಸ್ಯೆಯಾಗಿ ಕಾಡುತ್ತದೆ. ಏಕೆಂದರೆ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಿರುವ ಶ್ರದ್ಧೆ, ನಂಬಿಕೆ ಮತ್ತು ಅತೀತ ಶಕ್ತಿಗಳಲ್ಲಿನ ಅತಿಯಾದ ಭಕ್ತಿ-ವಿಶ್ವಾಸಗಳ ನೆಲೆಯಲ್ಲೇ ಅನೇಕ ರೀತಿಯ ಮೂಢ ನಂಬಿಕೆಗಳು, ಮೌಢ್ಯಾಚರಣೆಗಳು ಜಾರಿಗೆ ಬಂದಿರುತ್ತವೆ. ಈ ಶ್ರದ್ಧಾಭಕ್ತಿಯ ಮೂಲ ನೆಲೆಯನ್ನು ಪ್ರಶ್ನಿಸುವುದು ಹಾವಿನ ಹುತ್ತಕ್ಕೆ ಕೈಹಾಕಿದಂತಾಗುತ್ತದೆ. ಆದರೆ ಆಧುನಿಕತೆಯತ್ತ ಸಾಗುತ್ತಿರುವ ಒಂದು ಸಮಾಜದಲ್ಲಿ ಪ್ರಾಚೀನ ಕಾಲದ ಶ್ರದ್ಧಾಭಕ್ತಿಗಳು ತಮ್ಮದೇ ಆದ ಸಾಂಸ್ಕೃತಿಕ-ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡಿದ್ದರೂ, ಇದರಿಂದ ಉದ್ಭವಿಸುವಂತಹ ಆಚರಣೆಗಳು ವರ್ತಮಾನದ ಸಮಾಜದ ಬೆಳವಣಿಗೆಗೆ ಅಡ್ಡಿಯಾದಾಗ ಅಂತಹ ಆಚರಣೆಗಳನ್ನು ವಸ್ತುನಿಷ್ಠವಾಗಿ ವಿಮರ್ಶೆಗೊಳಪಡಿಸಬೇಕಾಗುತ್ತದೆ.
ಶ್ರದ್ಧೆ ನಂಬಿಕೆಗಳ ನಡುವೆ
ಭಾರತದ ಇತಿಹಾಸದಲ್ಲಿ ಅನೇಕಾನೇಕ ಸಮಾಜ ಸುಧಾರಕರು ಈ ಪ್ರಯತ್ನಗಳನ್ನು ಮಾಡಿದ್ದಾರೆ. ದೈವತ್ವದಲ್ಲಿನ ನಂಬಿಕೆಯನ್ನೂ ಸಹ ಪ್ರಶ್ನಿಸುವ ನಾಸ್ತಿಕ ತತ್ವಗಳಿಂದ ಹಿಡಿದು, ಶ್ರದ್ಧಾಭಕ್ತಿಯ ಹೆಸರಿನಲ್ಲಿ ನಡೆಯುವ ಅನೇಕ ಆಚಾರಗಳನ್ನು ಡಾಂಭಿಕತೆ ಎಂದೋ, ಆಡಂಬರ ಎಂದೋ ಅಥವಾ ಅತಾರ್ಕಿಕ ಎಂದೋ ವ್ಯಾಖ್ಯಾನಿಸಿರುವುದನ್ನು ದಾಸಪರಂಪರೆಯಲ್ಲೇ ಕಾಣಬಹುದು. ಮೂಲತಃ ದೈವತ್ವದ ನಂಬಿಕೆ ಮತ್ತು ತತ್ಸಂಬಂಧಿತ ಆಚರಣೆಗಳು ವ್ಯಕ್ತಿಗತ ನೆಲೆಯಲ್ಲೇ ಸಾರ್ವತ್ರಿಕತೆಯನ್ನು ಪಡೆದುಕೊಂಡರೆ ಅದು ವಿಶಾಲ ಸಮಾಜಕ್ಕೆ ಅಪಾಯಕಾರಿ ಎನಿಸುವುದಿಲ್ಲ. ಆದರೆ ಈ ಶ್ರದ್ಧಾನಂಬಿಕೆಗಳು ಸಾಂಸ್ಥಿಕ ಸ್ವರೂಪ ಪಡೆದುಕೊಂಡು, ಆಚರಣೆಗಳನ್ನು ಸಾರ್ವತ್ರೀಕರಿಸುವ ಪ್ರಕ್ರಿಯೆ ಚಾಲನೆ ಪಡೆದುಕೊಂಡಾಗ, ಸಾಂಸ್ಥಿಕ ಅಸ್ತಿತ್ವ ಮತ್ತು ಅಸ್ಮಿತೆಗಳ ಉಳಿವಿಗೆ ಆಚರಣೆಗಳು ರೂಪಾಂತರಗೊಳ್ಳುತ್ತವೆ. ಈ ರೂಪಾಂತರದ ಪ್ರಕ್ರಿಯೆಯಲ್ಲೇ ಜನಸಾಮಾನ್ಯರ ಭಕ್ತಿಯ ಮೂಲ ಸೆಲೆ ಭ್ರಷ್ಟವಾಗುತ್ತಾ ಮೂಢ ನಂಬಿಕೆಗಳು ಮತ್ತು ಮೌಢ್ಯಾಚರಣೆಗಳು ಮಾನ್ಯತೆ ಪಡೆದುಬಿಡುತ್ತವೆ. ಮಾನವನ ಜೀವನ ಅತೀತ ಶಕ್ತಿಗಳ ಅಣತಿಯಂತೆಯೇ ನಡೆಯುತ್ತದೆ ಎಂಬ ಅತಿರೇಕದ ಶ್ರದ್ಧಾನಂಬಿಕೆಗಳ ಫಲವಾಗಿಯೇ, ಈ ಅತೀತತೆಯನ್ನು ಸಾರ್ವತ್ರೀಕರಿಸುವ ಧರ್ಮಗಳು ಅಮಾನುಷ ಪದ್ಧತಿಗಳನ್ನೂ ಸಹ ಸ್ವೀಕೃತಗೊಳಿಸಿಬಿಡುತ್ತವೆ. ಈ ಪ್ರವೃತ್ತಿಯನ್ನು ಎಲ್ಲ ಧರ್ಮಗಳ ಇತಿಹಾಸದ ಪುಟಗಳಲ್ಲೂ ಕಾಣಬಹುದು.
ಆಧುನಿಕತೆಯ ಉಚ್ಛ್ರಾಯ ಹಂತದಲ್ಲಿರುವ ಒಂದು ಸಮಾಜ ಈ ಪ್ರಾಚೀನ ಚಿಂತನಾ ಮಾದರಿಗಳಿಂದ ವಿಮೋಚನೆ ಪಡೆದು ವರ್ತಮಾನದ ಹಾಗೂ ಭವಿಷ್ಯದ ಮನುಷ್ಯ ಸಮಾಜದ ಮುನ್ನಡೆಗೆ ಸಜ್ಜಾಗಬೇಕಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಮಾನವನ ಭೌತಿಕ ಹಾಗೂ ಬೌದ್ಧಿಕ ಚಟುವಟಿಕೆಗಳನ್ನು ನಿರ್ದೇಶಿಸುವ, ನಿಯಂತ್ರಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಭಾರತದ ಚಂದ್ರಯಾನ ತನ್ನ ಆಂತಿಮ ಗುರಿ ತಲುಪಲಿದೆ. ಈ ವೈಜ್ಞಾನಿಕ ಮಹತ್ಸಾಧನೆಯ ನಡುವೆಯೇ ಚಂದ್ರಯಾನದ ರೂವಾರಿ ಸಂಸ್ಥೆಯ ಮುಖ್ಯಸ್ಥರು ಯಶಸ್ಸಿಗಾಗಿ ದೈವತ್ವದ ಮೊರೆ ಹೋಗುವ ವಿಡಂಬನೆಯನ್ನೂ ಕಂಡಿದ್ದೇವೆ. ದೈವತ್ವದಲ್ಲಿನ ನಂಬಿಕೆ ಅಥವಾ ಶ್ರದ್ಧೆ ಮನುಷ್ಯನ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಒಂದು ಸಾಧನವಾಗಬಹುದೇ ಹೊರತು, ಮಾನವ ಜಗತ್ತಿನ ಚಟುವಟಿಕೆಗಳ ಸಾಫಲ್ಯ ವೈಫಲ್ಯಗಳನ್ನು ನಿರ್ಧರಿಸುವ ಮಾಪಕವಾಗುವುದಿಲ್ಲ ಎನ್ನುವ ಕನಿಷ್ಠ ವ್ಯವಧಾನವನ್ನು ನಮ್ಮ ಸಮಾಜ ಮೂಡಿಸಿಕೊಳ್ಳಬೇಕಿದೆ.
ವೈಚಾರಿಕತೆ ಮತ್ತು ಸಾಮಾಜಿಕ ಪರಿಸರ
ವಿದ್ಯಾರ್ಥಿ ಸಮುದಾಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸುವ ಮುಖ್ಯಮಂತ್ರಿಗಳ ಆಶಯ ಈ ನಿಟ್ಟಿನಲ್ಲಿ ಸಾಗಬೇಕಿದೆ. ನಾಸ್ತಿಕತೆ-ಆಸ್ತಿಕತೆ-ಅಧ್ಯಾತ್ಮಗಳ ಹೊರತಾಗಿಯೂ ಸಮಾಜದ ಬೆಳವಣಿಗೆಯಲ್ಲಿ ಯುವ ಸಮೂಹ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಪಠ್ಯಗಳು ಸಾಗಬೇಕಿದೆ. ರಾಷ್ಟ್ರಕವಿ ಕುವೆಂಪು, ಯುಗದ ಕವಿ ರವೀಂದ್ರನಾಥ ಠಾಗೋರ್, ಸ್ವಾಮಿ ವಿವೇಕಾನಂದ, ನಾರಾಯಣಗುರು ಮುಂತಾದ ದಾರ್ಶನಿಕರು ದೈವತ್ವವನ್ನು ಸಂಪೂರ್ಣವಾಗಿ ನಿರಾಕರಿಸದೆಯೇ, ನಾಸ್ತಿಕತೆಯನ್ನು ಅಪ್ಪಿಕೊಳ್ಳದೆಯೇ ವೈಚಾರಿಕ ಪ್ರಜ್ಞೆಯನ್ನು, ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸಿದ್ದನ್ನು ಕಂಡಿದ್ದೇವೆ. ನಮ್ಮ ನಿತ್ಯಬದುಕಿನ ನಡೆನುಡಿಗಳಲ್ಲಿ ಒಂದು ಮಾನವೀಯ ಸಮಾಜವನ್ನು ರೂಪಿಸುವ ಪ್ರಯತ್ನಗಳಿಗೆ ದೈವತ್ವದ ಕಲ್ಪನೆಯಾಗಲೀ, ಧರ್ಮದ ಚೌಕಟ್ಟುಗಳಾಗಲೀ ಅಡ್ಡಿಯಾಗದಂತೆ ಎಚ್ಚರವಹಿಸುವ ಪ್ರಜ್ಞಾವಂತಿಕೆ ನಮ್ಮಲ್ಲಿರಬೇಕಾಗುತ್ತದೆ.
ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಸಾಮಾಜಿಕ ನೆಲೆಯಲ್ಲಿ ನಿರ್ವಚಿಸುವಾಗ ನಮಗೆ ಈವರೆಗೂ ನಡೆದುಬಂದ ಹಾದಿಯನ್ನು ಪುನರ್ ವಿಮರ್ಶಿಸುವ ವ್ಯವಧಾನ ಮುಖ್ಯವಾಗುತ್ತದೆ. ಅಗೋಚರ ಅಥವಾ ಅತೀತ ಶಕ್ತಿಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳದ ಒಂದು ಮನಸ್ಥಿತಿ ವೈಜ್ಞಾನಿಕ ಪ್ರಜ್ಞೆಗೆ ಪೂರಕವಾದರೆ, ಈ ಮನಸ್ಥಿತಿಗೆ ಪೂರಕವಾಗಿ ನಿತ್ಯ ನಡುವಳಿಕೆಗಳಲ್ಲಿ ಕಂಡುಬರುವ ಪ್ರಾಚೀನ ಪದ್ಧತಿಗಳು, ನಂಬಿಕೆಗಳು ಮತ್ತು ಅಚರಣೆಗಳನ್ನು ವಸ್ತುನಿಷ್ಠವಾಗಿ ಒರೆಹಚ್ಚಿ ನೋಡುವ, ತೌಲನಿಕವಾಗಿ ಪರಾಮರ್ಶಿಸುವ ಧೋರಣೆ ವೈಚಾರಿಕತೆಯನ್ನು ಬೆಳೆಸುತ್ತದೆ. ಇಲ್ಲಿಯೇ ನಮಗೆ ಜೋತಿಷ್ಯ, ವಾಸ್ತು, ಹಸ್ತಸಾಮುದ್ರಿಕೆ ಹಾಗೂ ಕೆಲವು ಅವೈಜ್ಞಾನಿಕ ನಂಬಿಕೆಗಳೂ, ಮೌಢ್ಯಾಚರಣೆಗಳೂ ಸಹ ಮುಖ್ಯವಾಗುತ್ತವೆ. ಚಂದ್ರನ ಮೇಲೆ ಕಾಲಿಸಿರುತ್ತಿರುವ ಒಂದು ಆಧುನಿಕ ಮಾನವ ಸಮಾಜ, ಸೂರ್ಯ-ಚಂದ್ರರನ್ನು ಇಂದಿಗೂ ಒಂದು ಗ್ರಹ ಎಂದೇ ಪರಿಗಣಿಸುವ, ಬ್ರಹ್ಮಾಂಡದ ಕೇಂದ್ರ ಭೂಮಿ ಎಂದು ನಂಬುವ ಜೋತಿಷ್ಯ ಶಾಸ್ತ್ರವನ್ನು ಮಾನ್ಯ ಮಾಡುವುದು ವೈಚಾರಿಕತೆ ಮತ್ತು ವೈಜ್ಞಾನಿಕ ಮುನ್ನಡೆಗೆ ತೊಡಕಾಗಿ ಕಾಣುವುದು ಅಚ್ಚರಿಯೇನಲ್ಲ ಅಲ್ಲವೇ ?
ವಿದ್ಯಾರ್ಥಿ ಯುವ ಸಮೂಹದಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ಹೆಚ್ಚಿಸಬೇಕೆಂದರೆ ನಾವು ಪ್ರಾಥಮಿಕ ಹಂತದಿಂದಲೇ ಭೌತಶಾಸ್ತ್ರ, ಮಾನವ ವಿಕಾಸ ಶಾಸ್ತ್ರ ಹಾಗೂ ಗಣಿತ ಶಾಸ್ತ್ರದ ಅರಿವು ಮೂಡಿಸುವುದು ಅತ್ಯವಶ್ಯವಾಗುತ್ತದೆ. ತಾವು ಅನುಸರಿಸುವ ಧರ್ಮಗಳ ಚೌಕಟ್ಟಿನಲ್ಲಿ ಯಾವುದೇ ದೈವಶಕ್ತಿಯಲ್ಲಿರಿಸುವ ಶ್ರದ್ಧೆ ಮತ್ತು ಭಕ್ತಿ, ತಾವು ಕೈಗೊಳ್ಳುವ ಚಟುವಟಿಕೆಗಳ ಸಾಫಲ್ಯ ವೈಫಲ್ಯಗಳನ್ನು ನಿರ್ಧರಿಸುವುದಿಲ್ಲ ಎಂದು ಎಳೆ ಮನಸುಗಳಿಗೆ ಆರಂಭದಿಂದಲೇ ಹೇಳಬೇಕಾಗುತ್ತದೆ. ಶ್ರದ್ಧಾಭಕ್ತಿಗಳು ಸಾಂತ್ವನದ ಅಥವಾ ಆತ್ಮಸ್ಥೈರ್ಯದ ಸಾಧಕಗಳಾಗಬಹುದೇ ಹೊರತು, ಮಾನವನ ಕ್ರಿಯಾಶೀಲ ಚಟುವಟಿಕೆಗಳ ಫಲಾನುಫಲಗಳನ್ನು ನಿರ್ಧರಿಸುವುದರಲ್ಲಿ ಸ್ವಪ್ರಯತ್ನವೊಂದೇ ಪ್ರಭಾವಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಬೇಕಾಗುತ್ತದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ತಾವು ಬೆಳೆಯುವ ಪರಿಸರದಿಂದಲೇ ತಮ್ಮ ಶ್ರದ್ಧಾನಂಬಿಕೆಗಳನ್ನು ರೂಢಿಸಿಕೊಂಡು ಬರುವ ಮಕ್ಕಳಲ್ಲಿ ಆಧುನಿಕ ವಿಜ್ಞಾನದ ಅರಿವು ಮೂಡಿಸಬೇಕಾದರೆ, ಆ ನಂಬಿಕೆಗಳ ಹಿಂದಿನ ಅವೈಜ್ಞಾನಿಕ ಅಂಶಗಳನ್ನು, ವೈಚಾರಿಕತೆಯ ನೆಲೆಯಲ್ಲಿ ಮನದಟ್ಟು ಮಾಡಬೇಕಾಗುತ್ತದೆ.
ಮುಂದುವರೆಯುತ್ತದೆ,,,,,,