ಮುಂಬೈ :ಏ.೦6: ಹಣದುಬ್ಬರ ಮುಂದುವರಿದಿದ್ದರೂ ಕೂಡ ರಿಸರ್ವ್ ಬ್ಯಾಂಕ್ ತನ್ನ ನೀತಿಗಳ ದರದಲ್ಲಿ ಬದಲಾವಣೆಯನ್ನು ಮಾಡದೆ ಪ್ರಸಕ್ತ ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ ಯಥಾಸ್ಥಿತಿ ಮುಂದುವರಿಯಲು ನಿರ್ಧರಿಸಿದೆ.
ಈ ಬಾರಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇ.6.5 ಇರಿಸಲು ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC) ಶಿಫಾರಸು ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಪಾಡಲು ನಿರ್ಧರಿಸಿರುವದರಿಂದ ಗೃಹಸಾಲ ಸೇರಿದಂತೆ ಬ್ಯಾಂಕ್‌ನಿಂದ ಪಡೆದಿರುವ ಯಾವುದೇ ಸಾಲದ ಬಡ್ಡಿಯಲ್ಲಿ ಏರಿಕೆಯಾಗುವುದಿಲ್ಲ. ಹೀಗಾಗಿ ಸಾಲ ಪಡೆದ ಗ್ರಾಹಕರು ಬ್ಯಾಂಕುಗಳಿಗೆ ಪಾವತಿಸುವ ಮಾಸಿಕ ಸಮಾನ ಕಂತು (EMI) ಸಹ ಏರುಪೇರಾಗುವುದಿಲ್ಲ. ಇತ್ತೀಚೆಗೆ ಕೆಲ ಬ್ಯಾಂಕ್‌ಗಳು ಸ್ಥಿರ ಠೇವಣಿ ಮೇಲಿನ ಬಡ್ಡಿದ ದರಗಳನ್ನು ಹೆಚ್ಚಿಸಿದ್ದವು. ಯಥಾಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಠೇವಣಿಗಳ ಮೇಲಿನ ಬಡ್ಡಿ ಏರಿಕೆಗೂ ತಡೆ ಬೀಳಲಿದೆ.
ವಿಶ್ವರಾಜಕಾರಣ ಮತ್ತು ಆರ್ಥಿಕ ವಿಚಾರಗಳಲ್ಲಿ ನಾವು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಬಡ್ಡಿದರ ಹೆಚ್ಚಿಸದಿರುವ ನಿರ್ಧಾರವು ಈ ಸಭೆಗೆ ಮಾತ್ರ ಸೀಮಿತವಾಗಿದೆ. ದೇಶದ ಹಿತಕ್ಕೆ ಪೂರಕವಾಗಿ ಹಣಕಾಸು ನೀತಿಯನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದೇವೆ’ ಎಂದು ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಮುಂದಿನ ದಿನಗಳಲ್ಲಿ ಆರ್‌ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯ ಮುನ್ಸೂಚನೆ ಇದು’ ಎಂದು ಅವರ ಹೇಳಿಕೆಯನ್ನು ಆರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ.
‘ಜಾಗತಿಕ ಪರಿಸ್ಥಿತಿ ಕಳಾಹೀನವಾಗಿದ್ದರೂ ಭಾರತದ ಆರ್ಥಿಕತೆ ಪ್ರತಿರೋಧ ತೋರುತ್ತಿದೆ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (GDP) ಪ್ರಗತಿ ಶೇ 7ರಲ್ಲಿಯೇ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು. ಮುಂದಿನ ಆರ್ಥಿಕ ವರ್ಷದ ಜಿಡಿಪಿ ಪ್ರಗತಿ ದರದ ಮುನ್ನೋಟವನ್ನು ಆರ್‌ಬಿಐ ಶೇ 6.5ರಿಂದ 6.4ಕ್ಕೆ ತಗ್ಗಿಸಿದೆ.
ಹಣದುಬ್ಬರ ಪ್ರಮಾಣ ಗಣನೀಯ ಮಟ್ಟದಲ್ಲಿ ಕಡಿಮೆಯಾಗದೆ ಅದರ ವಿರುದ್ಧ ಸಾರಿರುವ ಯುದ್ಧದಿಂದ ಹಿಂದೆ ಸರಿಯುವುದಿಲ್ಲ. ಸದ್ಯದ ಜಾಗತಿಕ ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಂಡು ಬಡ್ಡಿದರಗಳಲ್ಲಿ ಯಥಾಸ್ಥಿತಿ ಉಳಿಸುವ ನಿರ್ಧಾರ ತೆಗೆದುಕೊಳ್ಳಲಿದೆ. ಆದರೆ ಹಣದುಬ್ಬರದ ಮೇಲಿನ ಯುದ್ಧ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.
ಆರ್‌ಬಿಐ ನಿರ್ಧಾರಕ್ಕೆ ಮೊದಲೇ ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯವು 5 ಪೈಸೆ ಕಡಿಮೆಯಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 81.95ಕ್ಕೆ ಇಳಿದಿದೆ. ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ವಿತ್ತೀಯ ನೀತಿ ಸಭೆಯ ನಂತರ ಆರ್‌ಬಿಐ ರೆಪೊ ದರಗಳನ್ನು 25 ಮೂಲಾಂಶಗಳಷ್ಟು ಹೆಚ್ಚಿಸುವುದರೊಂದಿಗೆ ಶೇ 6.5ಕ್ಕೆ ನಿಲ್ಲಿಸಿತ್ತು. ಕಳೆದ ಮೇ 2022ರಿಂದ ಈವರೆಗೆ ಆರ್‌ಬಿಐ ರೆಪೊ ದರಗಳಗಳನ್ನು 250 ಮೂಲಾಂಶಗಳಷ್ಟು ಹೆಚ್ಚಿಸಿದ್ದು, ಸಾಲದ ಮೇಲಿನ ಬಡ್ಡಿದರಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ.