ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಎಲ್ಲಿ ಗಲಾಟೆ ಆದರೂ ಆ ಬಗ್ಗೆ ಮಾತನಾಡಲ್ಲ ಅನ್ನೋ ಮಾತಿಗೆ ವ್ಯತಿರಿಕ್ತವಾಗಿ ಪ್ರಧಾನಿ ಅಬ್ಬರಿಸಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ವಿಚಾರ ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಗಣೇಶ ಪಾಲಿಟಿಕ್ಸ್ ಜೋರಾಗಿ ನಡೆಯುವ ಸಮಯದಲ್ಲಿ ಪ್ರಧಾನಿ ಮೋದಿ ಹರಿಯಾಣ ಚುನಾವಣಾ ಸಭೆಯಲ್ಲಿ ನಾಗಮಂಗಲದ ಗಣೇಶ ಗಲಭೆ ಬಗ್ಗೆ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗಣೇಶ ಉತ್ಸವಕ್ಕೂ ಕಾಂಗ್ರೆಸ್ ವಿಘ್ನ ಮಾಡ್ತಿದ್ದು, ದೇವರು ಗಣೇಶನನ್ನೇ ಬಂಧಿಸಿದ್ದಾರೆ ಅಂತ ಗುಡುಗಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕೋಮು ಗಲಭೆಯಿಂದ ನಾಗಮಂಗಲ ಬೆಂಕಿ ಚೆಂಡು ಎನ್ನುವಂತಾಗಿದೆ. ಈ ಘಟನೆ ಖಂಡಿಸಿ ಬೆಂಗಳೂರಿನ ಟೌನ್‌ಹಾಲ್ ಬಳಿ ಗಣೇಶ ಮೂರ್ತಿ ಹಿಡಿದು ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಈ ಪ್ರತಿಭಟನೆ ತಡೆಯಲು ಮುಂದಾಗಿದ್ದ ಪೊಲೀಸರು, ಗಣೇಶ ಮೂರ್ತಿಯನ್ನು ವಶಕ್ಕೆ ಪಡೆದು ಪೊಲೀಸ್ ವ್ಯಾನ್‌ನಲ್ಲೇ ಕೊಂಡೊಯ್ದಿದ್ದರು. ಈ ವಿಚಾರಕ್ಕೆ ಖುದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹರಿಯಾಣದ ಚುನಾವಣಾ ಪ್ರಚಾರದ ವೇಳೆ ಈ ವಿಷಯ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರನ್ನ ತರಾಟೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತುಷ್ಟೀಕರಣವೇ ಬಹುದೊಡ್ಡ ಗುರಿ, ಇಂದು ಕಾಂಗ್ರೆಸ್ ಆಡಳಿತ ಇರೋ ಕರ್ನಾಟಕದಲ್ಲಿ ಗಣಪತಿಯನ್ನೂ ಸರ್ಕಾರ ಕಂಬಿ ಹಿಂದೆ ಹಾಕಿದೆ. ಇಡೀ ದೇಶವೇ ಗಣೇಶ ಉತ್ಸವ ಆಚರಿಸುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಇಂದಿನ ಕಾಂಗ್ರೆಸ್ ನಗರ ನಕ್ಸಲ್‌ನ ಹೊಸ ರೂಪವಾಗಿದೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟ ರಾಜ್ಯಗಳು ಪಶ್ಚಾತ್ತಾಪ ಪಡುತ್ತಿವೆ ಅಂತನೂ ಹೇಳಿದ್ದಾರೆ.
ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿದೆ. ಕರ್ನಾಟಕದಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಒಳ್ಳೆ ರಾಜ್ಯಗಳನ್ನ ಹಾಳು ಮಾಡುವುದು ಹೇಗೆ..? ಎಂಬುದನ್ನ ಕಾಂಗ್ರೆಸ್ ತೋರಿಸುತ್ತಿದೆ ಎಂದು ಭಾಷಣ ಮಾಡಿದ್ದಾರೆ. ಆದರೆ ಮಣಿಪುರದಲ್ಲಿ ಗಲಭೆ ನಡೆದು ಹೆಚ್ಚು ಕಡಿಮೆ ವರ್ಷ ಆಗಿದೆ. ಆ ಬಗ್ಗೆ ವಿರೋಧ ಪಕ್ಷಗಳು ಅಬ್ಬರಿಸಿ ಬೊಬ್ಬಿರಿದರೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿಲ್ಲ. ಸಂಸತ್‌ನಲ್ಲಿ ವಿಚಾರ ಪ್ರಸ್ತಾಪ ಮಾಡಿದರೂ ಆ ಬಗ್ಗೆ ಉಸಿರು ಬಿಡಲಿಲ್ಲ. ಈಗ ನಾಗಮಂಗಲದಲ್ಲಿ ಆಗಿರುವ ಸಣ್ಣ ವಿಚಾರ ಹಿಡಿದು ಮೋದಿ ಮಾತನಾಡಿದ್ದು ದೇಶದನ ಜಹನರನ್ನೇ ಚಕಿತರನ್ನಾಗಿ ಮಾಡಿದೆ ಎನ್ನಬಹುದು. ಅಲ್ಲವೇ..?