ಒಕ್ಕಲಿಗರು ಹಾಗು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿ ಶಾಸಕ ಮುನಿರತ್ನರನ್ನು ಕೋಲಾರದಲ್ಲಿ ಬಂಧನ ಮಾಡಲಾಗದೆ. ಸ್ವತಃ ಕೋಲಾರ ಎಸ್ಪಿ ಬಿ. ನಿಖಿಲ್ ಶಾಸಕ ಮುನಿರತ್ನ ಕಾರನ್ನು ಚೇಸ್ ಮಾಡಿ ಬಂಧನ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ಬಂಧಿಸಿ ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶಾಸಕ ಮುನಿರತ್ನರನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಮಾಹಿತಿ ಪಡೆದ ಪೊಲೀಸ್ರು, ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ್ರು. ಅಷ್ಟರಲ್ಲಿ ಕೋಲಾರ ಎಸ್ಪಿಗೆ ಮಾಹಿತಿ ಕೊಟ್ಟು ಬಂಧನಕ್ಕೆ ತಯಾರಿ ಮಾಡಿಕೊಂಡಿದ್ದರು. ಬಳಿಕ ಆಂಧ್ರ ಪ್ರದೇಶದ ಗಡಿ ಪ್ರದೇಶವಾಗ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧನ ಮಾಡಲಾಗಿದೆ.
ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಮುದುಗೆರೆ – ಗಡ್ಡೂರು ಬಳಿ ಶಾಸಕ ಮುನಿರತ್ನನನ್ನು ಬಂಧನ ಮಾಡಲಾಗಿದೆ. ಕೇಸ್ ಆದ ಬಳಿಕ ಇಂದು ಅರೆಸ್ಟ್ ಮಾಡ್ತಾರೆ ಅನ್ನೋ ಮಾಹಿತಿ ಗೊತ್ತಾಗ್ತಿದ್ದ ಹಾಗೆ ಶಾಸಕ ಮುನಿರತ್ನ ಆಂಧ್ರಪ್ರದೇಶದಲ್ಲಿ ಅಡಗಿಕೊಳ್ಳಲು ನಿರ್ಧಾರ ಮಾಡಿದ್ರು ಎನ್ನಲಾಗಿದೆ. ಇದೇ ಕಾರಣಕ್ಕೆ ಆಂಧ್ರ ಕಡೆಗೆ ಹೊರಟಿದ್ದರು. ಆದರೆ ಆಂಧ್ರ ಗಡಿ ದಾಟುವ ಮುನ್ನವೇ ಪೊಲೀಸ್ರು ಚೇಸ್ ಮಾಡಿ ಬಂಧನ ಮಾಡಿದ್ದಾರೆ.
ಆಂಧ್ರಕ್ಕೆ ಎಸ್ಕೇಪ್ ಆಗಲು ನಿರ್ಧಾರ ಮಾಡಿದ್ದ ಶಾಸಕ ಮುನಿರತ್ನ ತನ್ನ ಆ್ಯಪಲ್ ಮೊಬೈಲ್ ಮನೆಯಲ್ಲೇ ಇಟ್ಟು ಯಾವುದೋ ಬೇಸಿಕ್ ಮೊಬೈಲ್ ತೆಗೆದುಕೊಂಡು ಹೊರಟಿದ್ದರು. ಮೊಬೈಲ್ ಟವರ್ ಡಂಪ್ನಲ್ಲೂ ಸಿಕ್ಕಿ ಬೀಳಬಾರದು ಎಂದು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಆದರೆ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟು ಅಡಗಿಕೊಳ್ಳಲು ನಿರ್ಧಾರ ಮಾಡಿದ್ದ ಶಾಸಕರು ಒಂದೆರಡು ಮಾಧ್ಯಮಗಳನ್ನು ಸಂಪರ್ಕಿಸಿದ್ರು. ಅಷ್ಟರಲ್ಲೇ ಕಾರ್ಯಪ್ರವೃತರಾದ ಪೊಲೀಸ್ರು ಲೊಕೇಷನ್ ಡಂಪ್ ಮಾಡಿ ಅರೆಸ್ಟ್ ಮಾಡಿದ್ದಾರೆ.
ಬಂಧನದ ಬಳಿಕ ಶಾಸಕ ಮುನಿರತ್ನಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದು, ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಡಿಸಿಪಿ ದೇವರಾಜು ಮತ್ತು ಎಸಿಪಿ ಪ್ರಕಾಶ್ ಶಾಸಕ ಮುನಿರತ್ನ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗುತ್ತಿಗೆದಾರನಿಗೆ ಕಮಿಷನ್ ಹಣ ಕೇಳುವ ನೆಪದಲ್ಲಿ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ ಆರೋಪವಿದ್ದು, ಗುತ್ತಿಗೆದಾರ ಭೇಟಿ ಮಾಡಿದ್ದು ಯಾವಾಗ..? ಮಾತನಾಡಿರೋದು ಯಾವಾಗ..? ಚಲುವರಾಜು ಮತ್ತು ಮುನಿರತ್ನ ನಡುವೆ ಕಮಿಷನ್ ವ್ಯವಹಾರವೇನು..? ಎಂಬುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.