• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಅಧಿಕಾರ ರಾಜಕಾರಣ ಮತ್ತು ಸಾಮಾಜಿಕ ಜವಾಬ್ದಾರಿ

ನಾ ದಿವಾಕರ by ನಾ ದಿವಾಕರ
December 20, 2022
in ಅಭಿಮತ
0
ಅಧಿಕಾರ ರಾಜಕಾರಣ ಮತ್ತು ಸಾಮಾಜಿಕ ಜವಾಬ್ದಾರಿ
Share on WhatsAppShare on FacebookShare on Telegram

ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಗಳನ್ನು ಶತಮಾನಗಳ ಹಿಂದಿನ ಸಮಾಜಗಳಲ್ಲೇ ಗುರುತಿಸುವ ಒಂದು ಬೌದ್ಧಿಕ ಪ್ರಯತ್ನ ಸದ್ಯದಲ್ಲಿ ಜಾರಿಯಲ್ಲಿದೆ. ಆಧುನಿಕ ಜಗತ್ತಿನ ಪ್ರಜಾಪ್ರಭುತ್ವದ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ನಿಂತು, ಪ್ರಾಚೀನ ಸಮಾಜದಲ್ಲಿನ ಆಡಳಿತ ವ್ಯವಸ್ಥೆಯನ್ನು ಗಮನಿಸುವಾಗ ಈ ಪ್ರತಿಪಾದನೆಯಲ್ಲಿ ಸತ್ಯಾಂಶ ಕಾಣುವುದು ಕಷ್ಟ. ಆದರೂ ʼನಮ್ಮಲ್ಲಿ ಎಲ್ಲವೂ ಇತ್ತುʼ  ಎಂದು ಹೇಳುವ ಬೌದ್ಧಿಕ ಪರಂಪರೆ ಇತ್ತೀಚಿನ ದಿನಗಳಲ್ಲಿ ಗಟ್ಟಿಯಾಗುತ್ತಿರುವುದರಿಂದ ಇದೂ ಸಹ ಸಾರ್ವಜನಿಕ ಸಂಕಥನದ ಒಂದು ಭಾಗವಾಗಿದೆ. ಅದೇನೇ ಇರಲಿ, ಸಮಕಾಲೀನ ರಾಜಕಾರಣ ಮತ್ತು ವರ್ತಮಾನದ ಆಡಳಿತ ವ್ಯವಸ್ಥೆಯನ್ನು ಗಮನಿಸುವಾಗ ನಮಗೆ ಕಾಣುವುದು ಶತಮಾನಗಳ ಹಿಂದಿನ ಊಳಿಗಮಾನ್ಯ ಧೋರಣೆ, ಪಿತೃಪ್ರಧಾನ ಆಲೋಚನೆಗಳು, ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲು-ಕೀಳಿನ ತರತಮಗಳು ಮತ್ತು ರೂಪಾಂತರಗೊಂಡ ಶೋಷಣೆಯ ಹಲವು ಆಯಾಮಗಳು. ಇಷ್ಟು ಮಾತ್ರ.

ADVERTISEMENT

ಒಂದು ವರ್ಗವು ಪ್ರತಿಪಾದಿಸುತ್ತಿರುವಂತೆ ಪ್ರಜಾಪ್ರಭುತ್ವವು ಪ್ರಾಚೀನ ಭಾರತದ ಮೂಲದಲ್ಲೇ ಇದ್ದುದೇ ಆದರೆ ಇಂದಿನ ಭಾರತೀಯ ಸಮಾಜ ಇಡೀ ವಿಶ್ವಕ್ಕೆ ಪ್ರಜಾತಂತ್ರದ ಮಾದರಿಯಾಗಬೇಕಿತ್ತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದರೂ ಸಹ , ಭಾರತದ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲಿ ಇಂದಿಗೂ ಸಹ ಪ್ರಜಾತಂತ್ರದ ಮೂಲ ಅಶಯಗಳಾದ ಸಮಾನತೆ, ಸೌಹಾರ್ದತೆ ಮತ್ತು ಸಮನ್ವಯದ ಕೊರತೆಯನ್ನು ಗುರುತಿಸಬಹುದು. ತಳಮಟ್ಟದಲ್ಲಿ ಜನಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಮನ್ವಯತೆ ಇಂದಿಗೂ ಜೀವಂತವಾಗಿದ್ದರೂ, ಈ ಸ್ಥಿರ ನೆಲೆಗಳನ್ನು ಭಂಜಿಸಿ, ಶಿಥಿಲಗೊಳಿಸುವ ಶಕ್ತಿಗಳು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿವೆ. ಚುನಾಯಿತ ಅಧಿಕಾರ ರಾಜಕಾರಣದಲ್ಲಿರುವ ವ್ಯಕ್ತಿ ಅಥವಾ ಪಕ್ಷಗಳಿಗೆ ಈ ಭಂಜಕ ಶಕ್ತಿಗಳನ್ನು ನಿಗ್ರಹಿಸುವ ಕ್ಷಮತೆ, ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಮಾತ್ರವೇ, ಶಿಥಿಲವಾಗುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ.

ಪ್ರಜಾಪ್ರಭುತ್ದದಲ್ಲಿ ಜನರಿಂದಲೇ ಆಯ್ಕೆಯಾಗುವ ಅಧಿಕಾರದ ವಿವಿಧ ಸ್ತರಗಳನ್ನು ಆಕ್ರಮಿಸುವ ʼ ಜನ ಪ್ರತಿನಿಧಿಗಳು ʼ ತಮ್ಮ ಈ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಚುನಾಯಿತ ಜನಪ್ರತಿನಿಧಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ, ವಿಶ್ವಾಸ ಇರುವಂತೆಯೇ ತಮ್ಮನ್ನು ಅಧಿಕಾರ ಪೀಠಗಳಲ್ಲಿ ಕೂರಿಸುವ ಸಾಮಾನ್ಯ ಜನರ ಜೀವನ, ಜೀವನೋಪಾಯಗಳ ಕಾಳಜಿಯೂ ಇರಬೇಕಾಗುತ್ತದೆ. ಕಟ್ಟಕಡೆಯ ವ್ಯಕ್ತಿಯೂ ಸಹ ಸಮಾಜದಲ್ಲಿ ಸಮಾನತೆಯಿಂದ, ಘನತೆ ಗೌರವಗಳಿಂದ, ಆರ್ಥಿಕ ಸದೃಢತೆಯೊಂದಿಗೆ, ಸೌಹಾರ್ದಯುತ ಬದುಕು ನಡೆಸುವಂತಹ ವಾತಾವರಣವನ್ನು ಸೃಷ್ಟಿಸುವ ಗುರುತರ ಜವಾಬ್ದಾರಿ ಮೂಲತಃ ಚುನಾಯಿತ ಸರ್ಕಾರಗಳ ಮೇಲಿರುತ್ತದೆ.  ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಅಸಮಾನತೆಯ ನೆಲೆಗಳು ಸದಾ ಸಕ್ರಿಯವಾಗಿರುವ ಅಪಾಯವೇ ಹೆಚ್ಚಾಗಿರುವುದರಿಂದ, ಈ ನೆಲೆಗಳನ್ನು ನಿಷ್ಕ್ರಿಯಗೊಳಿಸಿ, ಸಮಾನತೆಯನ್ನು ಸಾಧಿಸಲು ಅವಶ್ಯವಾದ ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಗಳ ಆದ್ಯತೆಯಾಗಬೇಕಾಗುತ್ತದೆ. ಭಾರತೀಯ ಸಮಾಜವನ್ನು ಸದಾ ವಿಘಟಿತ ಸ್ಥಿತಿಯಲ್ಲೇ ಇರಿಸುವಂತಹ ಜಾತಿ, ಧರ್ಮ ಮತ್ತು ಸಾಂಸ್ಕೃತಿಕ ಭೂಮಿಕೆಗಳನ್ನು ಸುಧಾರಣೆಗೊಳಪಡಿಸಿ, ಸಾಮಾನ್ಯ ಜನತೆಯ ನಡುವೆ ಇರಬಹುದಾದ ತರತಮಗಳ ಗೋಡೆಗಳನ್ನು ಕೆಡವಿ, ಸಮನ್ವಯ ಸಾಧಿಸುವ ಜವಾಬ್ದಾರಿಯೂ ಸರ್ಕಾರಗಳ ಮೇಲಿರುತ್ತದೆ.

ಆಡಳಿತ ವ್ಯವಸ್ಥೆಯ ಹೊಣೆಗಾರಿಕೆ

ಈ ದೃಷ್ಟಿಯಿಂದ ನೋಡಿದಾಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ರಾಜಕಾರಣದ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಸಾಧ್ಯ. ಸಾಂವಿಧಾನಿಕವಾಗಿ ಜಾರಿಗೊಳಿಸಲಾಗುವ ಕಾಯ್ದೆ ಕಾನೂನುಗಳು ಸಮಸ್ತ ಜನಸಮುದಾಯಗಳ ಬಗ್ಗೆ ಕಾಳಜಿ ಹೊಂದಿರುವಷ್ಟೇ ಪ್ರಮಾಣದಲ್ಲಿ, ಈ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರ ರಾಜಕಾರಣದ ನೆಲೆಗಳೂ ಸಹ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದು 75 ವರ್ಷಗಳ ಪ್ರಜಾಸತ್ತಾತ್ಮಕ ವಸಂತಗಳನ್ನು ಪೂರೈಸಿರುವ ಭಾರತದ ಅಧಿಕಾರ ರಾಜಕಾರಣದಲ್ಲಿ ಈ ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿ ಇಲ್ಲದಿರುವುದರಿಂದಲೇ, ಇಂದಿಗೂ ಸಮಾಜಘಾತುಕ, ಸೌಹಾರ್ದಭಂಜಕ ಶಕ್ತಿಗಳು ಸಮಾಜದ ಎಲ್ಲ ಸ್ತರಗಳನ್ನೂ ಆಕ್ರಮಿಸಿಕೊಂಡಿವೆ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ರಾಜಕೀಯ ದೀಕ್ಷೆ ನೀಡುವ ಮೂಲಕ ಸುಧಾರಣೆ ಮಾಡುವ ಮಾತುಗಳೂ ಇತ್ತೀಚೆಗೆ ಕೇಳಿಬರುತ್ತಿರುವುದರಿಂದ, ಅಧಿಕಾರ ರಾಜಕಾರಣದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ.

ಚುನಾಯಿತ ಸರ್ಕಾರಗಳು ಜಾರಿಗೊಳಿಸುವ ಕಾನೂನುಗಳು ಕಾಲದಿಂದ ಕಾಲಕ್ಕೆ ಪರಾಮರ್ಶೆಗೊಳಗಾಗುತ್ತಲೇ ಇರುತ್ತವೆ. ಕಾರ್ಯಾಂಗದ ಕಾರ್ಯವೈಖರಿಯ ಮೇಲೆ ನ್ಯಾಯಾಂಗವೂ ಸಹ ಸದಾ ಕಣ್ಣಿಟ್ಟಿರುತ್ತದೆ. ಸರ್ಕಾರಗಳ ತಪ್ಪು ಹೆಜ್ಜೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗದ ಕೊಡುಗೆ ಅಪಾರ. ಆದರೂ ವಿಶಾಲ ಬಾಹ್ಯ ಸಮಾಜದ ರಾಜಕೀಯ ಪ್ರಾಬಲ್ಯ ಮತ್ತು ಶಾಸನ ಸಭೆಗಳ ಪ್ರಾತಿನಿಧಿತ್ವದಲ್ಲಿನ ಬಹುಮತದ ಪರಿಣಾಮ, ನ್ಯಾಯಾಂಗದ ಸೂಚನೆಗಳನ್ನೂ ಮೀರಿ ಸರ್ಕಾರಗಳು ತಮ್ಮ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತವೆ. ಸಂವಿಧಾನದ ಮೂಲ ಆಶಯಗಳಿಗೆ ವ್ಯತಿರಿಕ್ತವಾದ ಹಲವಾರು ಕಾನೂನುಗಳು ಇಂದಿಗೂ ಜಾರಿಯಲ್ಲಿರುವುದು ಇದನ್ನೇ ಸೂಚಿಸುತ್ತದೆ. ಈ ಕಾನೂನುಗಳನ್ನು ಸಮಾಜಭಂಜಕ ಶಕ್ತಿಗಳನ್ನು ನಿಗ್ರಹಿಸುವ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದೊಂದಿಗೆ ಜಾರಿಗೊಳಿಸಲಾಗಿದ್ದರೂ, ಬಹುತೇಕ ಸಂದರ್ಭಗಳಲ್ಲಿ ಆಡಳಿತಾರೂಢ ಸರ್ಕಾರಗಳು ತಮ್ಮ ತಾತ್ವಿಕ-ಸೈದ್ದಾಂತಿಕ ನಿಲುವುಗಳಿಗೆ ಅನುಗುಣವಾಗಿ, ಇದೇ ಕಾನೂನುಗಳನ್ನು ಬಳಸುವ ಮೂಲಕ ಪ್ರತಿರೋಧಗಳನ್ನು ಹತ್ತಿಕ್ಕಲು ಮುಂದಾಗುತ್ತವೆ. ಈ ಪ್ರವೃತ್ತಿಯ ಪರಾಕಾಷ್ಠೆಯನ್ನು  1975ರ ತುರ್ತುಪರಿಸ್ಥಿತಿಯಲ್ಲಿ ಕಂಡಿದ್ದರೂ ಇಂದಿಗೂ ಸಹ ಪ್ರಜಾಸತ್ತಾತ್ಮಕ ನೆಲೆಗಳನ್ನು ದುರ್ಬಲಗೊಳಿಸುವ ಆಡಳಿತ ನೀತಿಗಳು ವಿಭಿನ್ನ ಸ್ತರಗಳಲ್ಲಿ ಜಾರಿಯಲ್ಲಿವೆ.

ಈ ಆಡಳಿತ ನೀತಿಗಳ ಹೊರತಾಗಿಯೂ, ಚುನಾಯಿತ ಸರ್ಕಾರ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಾಗುತ್ತದೆ. ಶೈಕ್ಷಣಿಕ ವ್ಯವಸ್ಥೆಯ ಮೂಲಕ ಜನಸಾಮಾನ್ಯರಲ್ಲಿ ಸಾಮಾಜಿಕ ಅರಿವು ಮತ್ತು ಪ್ರಜ್ಞೆಯನ್ನು ಮೂಡಿಸುವ ಪ್ರಕ್ರಿಯೆ ನಿರಂತರವಾಗಿ ಚಾಲ್ತಿಯಲ್ಲಿದ್ದರೂ ಸಹ, ಬಾಹ್ಯ ಸಮಾಜದ ನಿತ್ಯ ಜೀವನದಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ ಒಂದು ಆರೋಗ್ಯಪೂರ್ಣ ಸೌಹಾರ್ದ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಹೊಣೆ ಹೊರಬೇಕಾಗುತ್ತದೆ. ಸಮಾಜದಲ್ಲಿ ಕ್ರಮೇಣ ಶಿಥಿಲವಾಗುತ್ತಿರುವ ನೈತಿಕ ಮೌಲ್ಯಗಳನ್ನು ಕಾಪಾಡುವುದಷ್ಟೇ ಅಲ್ಲದೆ, ಸಾಮಾಜಿಕ ಬದುಕಿನಲ್ಲಿ ನುಸುಳಿರಬಹುದಾದ ಅಸಭ್ಯತೆ, ಅಶ್ಲೀಲತೆ, ಅನಾಗರಿಕತೆ, ಕ್ರೌರ್ಯ ಮತ್ತು ಅಸೂಕ್ಷ್ಮತೆಗಳನ್ನು ಗ್ರಹಿಸಿ, ಹೋಗಲಾಡಿಸುವ ಜವಾಬ್ದಾರಿಯೂ ಚುನಾಯಿತ ಪ್ರತಿನಿಧಿಗಳ ಮೇಲಿರುತ್ತದೆ. ಅಧಿಕಾರ ರಾಜಕಾರಣದ ಫಲಾನುಭವಿಗಳಾಗಿ ಈ ಪ್ರತಿನಿಧಿಗಳ ಪ್ರತಿಯೊಂದು ಮಾತು, ವರ್ತನೆ ಮತ್ತು ನಡೆಯೂ ಸಹ ಬಾಹ್ಯ ಸಮಾಜಕ್ಕೆ ಅನುಕರಣೀಯವಾಗಿರಬೇಕಾಗುತ್ತದೆ.

ಅಧಿಕಾರ ರಾಜಕಾರಣದ ಪೀಠದಾಹ, ಲಾಲಸೆ, ಅಸೂಯೆ ಮತ್ತು ಮಹದಾಕಾಂಕ್ಷೆಗಳ ಹೊರತಾಗಿಯೂ ಭಾರತದ ರಾಜಕಾರಣದಲ್ಲಿ ಇಂತಹ ಜವಾಬ್ದಾರಿಯುತ ನಾಯಕತ್ವವನ್ನು ಗುರುತಿಸಬಹುದಾಗಿತ್ತು. 1990ರ ದಶಕದವರೆಗಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಅಧಿಕಾರ ಪೀಠದಲ್ಲಿರುವ ನಾಯಕರು ಮತ್ತು ಅಧಿಕಾರಾಕಾಂಕ್ಷಿ ನಾಯಕರು ತಮ್ಮ ನಡೆ ನುಡಿಗಳ ಮೂಲಕವೇ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಅನುಕರಣೀಯವಾಗಿದ್ದುದನ್ನು ಗುರುತಿಸಬಹುದು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಾರ್ಥ ಹಿತಾಸಕ್ತಿ ಮತ್ತು ಸಂಪತ್ತಿನ ಕ್ರೋಢೀಕರಣ ಈ ಮೂಲ ಲಕ್ಷಣಗಳನ್ನು ಕಾಪಾಡಿಕೊಂಡೇ ರಾಜಕೀಯ ನಾಯಕರು ತಮ್ಮ ನಿತ್ಯ ಬದುಕಿನ ವರ್ತನೆಯ ಮೂಲಕ ಜನರ ಮೆಚ್ಚುಗೆ ಗಳಿಸುತ್ತಿದ್ದ ಕೆಲವು ನಿದರ್ಶನಗಳನ್ನಾದರೂ ಈ ಕಾಲಘಟ್ಟದಲ್ಲಿ  ಶೋಧಿಸಲು ಸಾಧ್ಯ. ಹಾಗಾಗಿಯೇ ಮತೀಯವಾದ, ಕೋಮುವಾದ, ಭ್ರಷ್ಟಾಚಾರಗಳ ನಡುವೆಯೇ ರಾಜಕೀಯ ಕ್ಷೇತ್ರದ ನಿರಪರಾಧೀಕರಣದ ಕೂಗು ಸಹ ಕೇಳಿಬರುತ್ತಿತ್ತು.

ಆದರೆ ಭಾರತ ಇಂದು ಬದಲಾಗಿದೆ. ರಾಜಕಾರಣದ ನಿರಪರಾಧೀಕರಣ ಇಂದು ಯಾವುದೇ ಪಕ್ಷದ ಕಾರ್ಯಸೂಚಿಯಲ್ಲಾಗಲೀ, ಪ್ರಣಾಳಿಕೆಯಲ್ಲಾಗಲೀ ಕಾಣಲಾಗುವುದಿಲ್ಲ. ಇತ್ತೀಚೆಗೆ ನಡೆದ ಗುಜರಾತ್‌ ಚುನಾವಣೆಯಲ್ಲಿ ಶೇ 22ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿರುವುದಾಗಿ ವರದಿಯಾಗಿದೆ. ಈ ಅಂಕಿಅಂಶಗಳನ್ನು ಬದಿಗಿಟ್ಟು ಇಂದು ನಾವು ನೋಡಬೇಕಿರುವುದು ಅಧಿಕಾರ ರಾಜಕಾರಣದಲ್ಲಿ ಸ್ಥಾಪಿತವಾಗುತ್ತಿರುವ ರಾಜಕೀಯ ನಾಯಕರ ವ್ಯಕ್ತಿತ್ವ, ಚಹರೆ ಮತ್ತು ವ್ಯಕ್ತಿ ವೈಶಿಷ್ಟ್ಯಗಳನ್ನು. ತಮ್ಮ ಗತ ಜೀವನದ ಅಪರಾಧಿ ಲಕ್ಷಣಗಳನ್ನು ಹೆಮ್ಮೆಯಿಂದ ಬೆನ್ನುತಟ್ಟಿಕೊಂಡು ಹೇಳಿಕೊಳ್ಳುತ್ತಿರುವ ನಾಯಕರು ಒಂದೆಡೆಯಾದರೆ ಮತ್ತೊಂದೆಡೆ, ಸಮಾಜಘಾತುಕರಿಗೂ ರಾಜಕೀಯ ದೀಕ್ಷೆ ನೀಡಿ ಸುಧಾರಣೆಗೊಳಪಡಿಸುವ ಮಾತುಗಳೂ ಕೇಳಿಬರುತ್ತಿವೆ. ಅಧಿಕಾರ ರಾಜಕಾರಣದ ಒಳಾಂಗಣದಿಂದಲೇ ಕೇಳಿಬರುವ ಇಂತಹ ಮಾತುಗಳು ಯುವ ಸಮೂಹಕ್ಕೆ, ಭವಿಷ್ಯದ ತಲೆಮಾರಿಗೆ ಯಾವ ಸಂದೇಶವನ್ನು ನೀಡಲು ಸಾಧ್ಯ ? ಈಗಾಗಲೇ ಹಾದಿತಪ್ಪಿರುವ ಯುವ ಸಮೂಹಕ್ಕೂ ಸಹ ಅಧಿಕಾರ ವಲಯದಲ್ಲಿ ಸ್ಥಾನಮಾನಗಳನ್ನು ಗಳಿಸುವ ಆಶಾಭಾವನೆಯನ್ನು  ಸಹಜವಾಗಿಯೇ ಮೂಡಿಸುತ್ತದೆ ಅಲ್ಲವೇ ?

ಆಡಳಿತ ವಲಯದ ಪ್ರಾಮಾಣಿಕತೆ

ಪ್ರಾಮಾಣಿಕತೆ, ಸತ್ಯಸಂಧತೆ, ಸಂವಿಧಾನ ನಿಷ್ಠೆ, ಸಾಮಾಜಿಕ ಬದ್ಧತೆ ಮತ್ತು ವ್ಯಕ್ತಿ ಸಚ್ಚಾರಿತ್ರ್ಯಗಳೇ ರಾಜಕೀಯ ಪ್ರವೇಶದ ಪ್ರಧಾನ ಮಾನದಂಡಗಳು ಎಂದು ಎದೆತಟ್ಟಿ ಹೇಳುವ ನಾಯಕತ್ವವೇ ನಮ್ಮ ನಡುವೆ ಇಲ್ಲದಿರುವುದನ್ನು ವಿಷಾದದೊಂದಿಗೇ ಒಪ್ಪಿಕೊಳ್ಳಬೇಕಿದೆ. ರಾಜಕೀಯ ನಾಯಕರ ಜನಪ್ರಿಯತೆಗೂ, ಆ ನಾಯಕರು ಸಮಾಜದ ದೃಷ್ಟಿಯಿಂದ ಮಾರ್ಗದರ್ಶಕರಾಗಿ ರೂಪುಗೊಳ್ಳುವುದಕ್ಕೂ ಅಪಾರ ಅಂತರವಿದೆ ಎನ್ನುವುದನ್ನು ನಾವು ಮನಗಾಣಬೇಕಿದೆ. ಕಣ್ಣೆದುರಿನಲ್ಲೇ ನಡೆಯುತ್ತಿರುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ ಮತ್ತು ಭ್ರಷ್ಟಾಚಾರಗಳನ್ನು ನಿಯಂತ್ರಿಸಬೇಕಾದ್ದು ಆಡಳಿತ ವ್ಯವಸ್ಥೆಯ ಕರ್ತವ್ಯ. ಇವುಗಳನ್ನು ಸರಿಪಡಿಸಬೇಕಾದ್ದು ನಮ್ಮ ನಡುವಿನ ಬೌದ್ಧಿಕ ವಲಯದ ಕರ್ತವ್ಯ. ಈ ನಡುವೆಯೇ ಅಧಿಕಾರ ರಾಜಕಾರಣದ ಫಲಾನುಭವಿಗಳು ಇಂತಹ ದುರ್ನಡತೆಗಳನ್ನು ಖಂಡಿಸುವಷ್ಟಾದರೂ ವ್ಯವಧಾನ ರೂಢಿಸಿಕೊಳ್ಳಬೇಕಲ್ಲವೇ ? ದುರಂತ ಎಂದರೆ ಭಾರತದ ಪ್ರಸ್ತುತ ರಾಜಕಾರಣದಲ್ಲಿ ಇಂತಹ ದುರಂತಗಳನ್ನು ಕೆಲವೊಮ್ಮೆ ನೇರವಾಗಿ ಸಮರ್ಥಿಸಲಾಗುತ್ತಿದ್ದರೆ ಕೆಲವೊಮ್ಮೆ ಮೌನ ವಹಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ದೌರ್ಜನ್ಯಗಳಿಗೆ ಕುರುಡಾಗುವುದಕ್ಕೂ, ದೌರ್ಜನ್ಯಗಳನ್ನು ಸಮರ್ಥಿಸುವುದಕ್ಕೂ ಹೆಚ್ಚಿನ ಅಂತರವೇನೂ ಇರುವುದಿಲ್ಲ. ಡಿಜಿಟಲ್‌ ಯುಗದಲ್ಲಿ ನೈಜ ಇತಿಹಾಸದ ಅರಿವೇ ಇಲ್ಲದೆ ಬೆಳೆಯುತ್ತಿರುವ ಒಂದು ಬೃಹತ್‌ ಸಂಖ್ಯೆಯ ಹೊಸ ತಲೆಮಾರು ನಮ್ಮ ನಡುವೆ ಇದೆ. ಈ ತಲೆಮಾರಿನ ಯುವಸಮೂಹ ಭವಿಷ್ಯ ಭಾರತದ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ನಾಲ್ಕು ಅಂಗುಲ ಉದ್ದದ ಆಂಡ್ರ್ಯಾಯ್ಡ್‌ ಚರವಾಣಿಯ ಪರದೆಯ ಮೇಲೆ ಮೂಡುವುದನ್ನೇ ಪರಮಸತ್ಯ ಎಂದು ನಂಬುವ ಒಂದು ಪೀಳಿಗೆ ಇದ್ದರೆ, ಹೀಗೆ ನಂಬಿಸಲೆಂದೇ ಸೃಷ್ಟಿಸಲಾದ ಬೌದ್ಧಿಕ ಸರಕುಗಳೂ ನಮ್ಮ ನಡುವೆ ಹೇರಳವಾಗಿವೆ. ಆದರೆ ಭವಿಷ್ಯದ ಪೀಳಿಗೆಗೆ ಇದನ್ನು ಮೀರಿದ ಒಂದು ಸಮಾಜವೂ ಇದೆ ಎಂಬ ಅರಿವು ಮೂಡಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲಿ ಅಧಿಕಾರ ರಾಜಕಾರಣದ ಸಾಮಾಜಿಕ ಜವಾಬ್ದಾರಿ ಮುನ್ನೆಲೆಗೆ ಬರುತ್ತದೆ.

“ ನಾನು ನನ್ನ ಬಳಿ ಇರುವ ಸಂಪತ್ತನ್ನು, ಆಸ್ತಿಯನ್ನು ಪ್ರಾಮಾಣಿಕ ಮಾರ್ಗದಲ್ಲೇ ನಡೆದು ಸಂಪಾದಿಸಿದ್ದೇನೆ, ಯಾವುದೇ ವಾಮ ಮಾರ್ಗಗಳನ್ನು ಅನುಸರಿಸಿಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗುವ ಯಾವುದೇ ಚಟುವಟಿಕೆಯಲ್ಲಿ ನಾನು ಭಾಗಿಯಾಗಿಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುವ ಅಸಭ್ಯ ಅಸಾಂವಿಧಾನಿಕ ಮಾತುಗಳನ್ನು ಸಾರ್ವಜನಿಕವಾಗಿ ಎಲ್ಲಿಯೂ ಆಡಿಲ್ಲ, ಭಾರತದ ಸಂವಿಧಾನದ ಆಶಯಗಳಿಗೆ ಬದ್ಧನಾಗಿ, ಪ್ರಾಮಾಣಿಕವಾಗಿ ಶಾಸನಸಭೆಯ ಒಳಗೆ ಮತ್ತು ಹೊರಗೆ ನಡೆದುಕೊಂಡಿದ್ದೇನೆ, ಅಧಿಕಾರ ಗಳಿಸುವ ಸಲುವಾಗಿ ಸತ್ಯಾಂಶಗಳನ್ನು ಮರೆಮಾಚಿ ಅಪದ್ಧಗಳನ್ನು ಅವಲಂಬಿಸಿಲ್ಲ, ಸಮಾಜದಲ್ಲಿ ಸೋದರತ್ವ ಮತ್ತು ಸೌಹಾರ್ದತೆಯನ್ನು ಕದಡುವಂತಹ ಯಾವುದೇ ರೀತಿಯ ಮಾತು ಅಥವಾ ಅಪರಾಧಿಕ ಕೃತ್ಯದಲ್ಲಿ ತೊಡಗಿಲ್ಲ ”

ಈ ರೀತಿಯ ಪ್ರಮಾಣವಚನ ಸ್ವೀಕರಿಸುವ ರಾಜಕೀಯ ನಾಯಕರನ್ನು ಇಂದು ಕಾಣಲು ಸಾಧ್ಯವೇ ? ಇದ್ದರೂ ಬೆರಳೆಣಿಕೆಯಷ್ಟಿರಬಹುದು. ರಾಜಕೀಯ ಅಧಿಕಾರಕ್ಕಾಗಿ ನಡೆಸುವ ಕಸರತ್ತುಗಳನ್ನು ಗಮನಿಸುವಾಗ ಇಂತಹ ನಾಯಕರನ್ನು ಸೂಕ್ಷ್ಮದರ್ಶಕದ ಸಹಾಯದಿಂದಲೇ ಶೋಧಿಸಬೇಕಾಗುತ್ತದೆ. ತಮ್ಮ ಮಾತು, ನಡೆ, ನುಡಿ, ವರ್ತನೆ ಮತ್ತು ಸಾರ್ವಜನಿಕ ಚಟುವಟಿಕೆಗಳ ಮೂಲಕ ಯುವ ಸಮುದಾಯಕ್ಕೆ ಒಂದು ಆರೋಗ್ಯಕರ ಮಾರ್ಗದರ್ಶನವನ್ನು ನೀಡುವಂತೆ ನಡೆದುಕೊಳ್ಳುವುದು ಅಧಿಕಾರ ರಾಜಕಾರಣದ ವಾರಸುದಾರರ ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಭವಿಷ್ಯದ ಪೀಳಿಗೆಯನ್ನು ರೂಪಿಸಲು ಅಗತ್ಯವಾದ ಪರಿಕರಗಳನ್ನು ಈ ಮೂಲಕವೇ ಒದಗಿಸಬೇಕಾಗುತ್ತದೆ. ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ ಹೊರಬರುವ ಯುವ ಸಮೂಹವು ಬಾಹ್ಯ ಸಮಾಜಕ್ಕೆ ತೆರೆದುಕೊಂಡ ಕೂಡಲೇ ಕಾಣುತ್ತಿರುವುದಾದರೂ ಏನನ್ನು ? ಅದೇ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಅತ್ಯಾಚಾರ, ಕ್ರೌರ್ಯ ಮತ್ತು ಸಾಮಾಜಿಕ ಅಸಮಾನತೆ. ಈ ಯುವ ಸಮೂಹಕ್ಕೆ ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಬೇಕಾದರೆ, ಅಧಿಕಾರ ರಾಜಕಾರಣವನ್ನು ಪ್ರತಿನಿಧಿಸುವ ನಾಯಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕಾಗುತ್ತದೆ.

ನಮ್ಮ ಮುಂದೆ ಗತ ಇತಿಹಾಸದ ಪುಟಗಳಲ್ಲಿ, ಸಮಕಾಲೀನ ಚರಿತ್ರೆಯಲ್ಲೂ ಸಹ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ನೆರವಾಗುವ ಅನುಕರಣೀಯ, ಮಾರ್ಗದರ್ಶಕ ವ್ಯಕ್ತಿಗಳು ಹೇರಳವಾಗಿದ್ದಾರೆ. ದುರಂತ ಎಂದರೆ ಅಧಿಕಾರ ರಾಜಕಾರಣದಲ್ಲಿ ಇವರೆಲ್ಲರೂ ಬಳಕೆಯ ವಸ್ತುಗಳಾಗಿದ್ದಾರೆ. ಆದರೆ ವಿಶಾಲ ಬಾಹ್ಯ ಸಮಾಜಕ್ಕೆ ಈ ವ್ಯಕ್ತಿಗಳ ಅವಶ್ಯಕತೆ ಇದೆ. ಈ ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ನಡೆನುಡಿಗಳನ್ನು ತಿದ್ದಿಕೊಳ್ಳುವುದು ಅಧಿಕಾರ ರಾಜಕಾರಣದ ಪ್ರಾತಿನಿಧ್ಯ ಹೊತ್ತಿರುವವರ ಆದ್ಯತೆಯಾಗಬೇಕಿದೆ. ಇದು ಜನಪ್ರತಿನಿಧಿಗಳ, ಸಾರ್ವಜನಿಕ ಅಧಿಕಾರಿಗಳ, ಸಾಂಸ್ಕೃತಿಕ ಸಂಸ್ಥೆ ಮತ್ತು ವ್ಯಕ್ತಿಗಳ ಸಾಮಾಜಿಕ ಜವಾಬ್ದಾರಿಯೂ ಆಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಪಟ್ಟಿ: ಮೈಸೂರಿನ 11 ಕ್ಷೇತ್ರಗಳಲ್ಲಿ 7 ಫೈನಲ್‌; 4 ಸಸ್ಪೆನ್ಸ್‌

Next Post

ನಿಖಿಲ್​ ಕುಮಾರಸ್ವಾಮಿ ಹೆಸರು ಘೋಷಣೆ ಮತ್ತು ಜೆಡಿಎಸ್​ ನಾಯಕರ ಚಾಣಕ್ಯ ನಡೆ..!

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ನಿಖಿಲ್​ ಕುಮಾರಸ್ವಾಮಿ ಹೆಸರು ಘೋಷಣೆ ಮತ್ತು ಜೆಡಿಎಸ್​ ನಾಯಕರ ಚಾಣಕ್ಯ ನಡೆ..!

ನಿಖಿಲ್​ ಕುಮಾರಸ್ವಾಮಿ ಹೆಸರು ಘೋಷಣೆ ಮತ್ತು ಜೆಡಿಎಸ್​ ನಾಯಕರ ಚಾಣಕ್ಯ ನಡೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada