ವಿಶೇಷ ಲೇಖನ : ನಾ ದಿವಾಕರ
(ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್ 2026)
ಡಾ. ಬಿ.ಆರ್. ಅಂಬೇಡ್ಕರ್ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು ಇಂದಿಗೂ ಸಹ ಸಂಭ್ರಮದಿಂದ ಕಾಣುತ್ತಿದ್ದೇವೆ. ರಾಜ್ಯದ ಜನತೆಗೆ , ವಿಶೇಷವಾಗಿ ದಲಿತ ಸಮುದಾಯಗಳಿಗೆ ಅದೊಂದು ಮಹತ್ವದ ಕ್ಷಣ ಎನ್ನುವ ಭಾವನೆ ಇಂದಿಗೂ ದಟ್ಟವಾಗಿದೆ. 135 ವರ್ಷಗಳನ್ನು ಪೂರೈಸುವ ಅಂಬೇಡ್ಕರ್ ಎಂಬ ಚಿಂತನಾಶೀಲ ಚೇತನವನ್ನು ಸ್ಮರಿಸಲು ನಮ್ಮ ನಡುವೆ ಇದೇ ರೀತಿಯ ಹಲವು ಸ್ಮಾರಕಗಳಿವೆ. ಒಂದುವೇಳೆ ಅಂಬೇಡ್ಕರ್ ಈಗ ಕರ್ನಾಟಕಕ್ಕೆ ಭೇಟಿ ನೀಡಿದರೆ ಅವರ ಮನಸ್ಸಿಗೆ ಎಷ್ಟು ಘಾಸಿಯಾಗಬಹುದು ಎಂಬ ಆಲೋಚನೆಯಲ್ಲೇ ಅಂಬೇಡ್ಕರ್ ಜಯಂತಿಯನ್ನು ಆಚರಿಸಬೇಕೆನಿಸುತ್ತದೆ.

ಸದಾ ಅವರಿಗೆ ಮುಖಾಮುಖಿಯಾಗಿಸುವ ಭಾರತದ ಸಂವಿಧಾನ ವಿಭಿನ್ನ ಕಾರಣಗಳಿಗಾಗಿ ತಳಸಮುದಾಯಗಳ ನಿತ್ಯ ಜೀವನದ ಒಂದು ನಿರ್ಣಾಯಕ ಭಾಗವಾಗಿದೆ. ಏಪ್ರಿಲ್ 14ರಂದು ದೇಶಾದ್ಯಂತ ನೀಲಿ ಬಾವುಟಗಳು, ಗಜಗಾತ್ರದ ಹಾರಗಳಿಂದ ಅಲಂಕೃತವಾದ ಅಂಬೇಡ್ಕರ್ ಪ್ರತಿಮೆಗಳು, ಕೆಲವೆಡೆ ರಥಾರೂಢ ಅಂಬೇಡ್ಕರ್ ಅವರ ಮೆರವಣಿಗೆ ಮತ್ತು ʼ ಜೈ ಭೀಮ್ ʼ ಘೋಷಣೆ ದೇಶದ ಮೂಲೆ ಮೂಲೆಯಲ್ಲೂ ಕಾಣುತ್ತದೆ. ದಲಿತ ಅಸ್ಮಿತೆಯನ್ನು ಮತ್ತೆ ಮತ್ತೆ ಸ್ಥಾಪಿಸಲು ಇದು ಅವಶ್ಯವೂ ಹೌದು.
ವೇದಿಕೆಗಳನ್ನು ಅಲಂಕರಿಸುವ ರಾಜಕೀಯ ನಾಯಕರು, ಇತ್ತೀಚೆಗೆ ದಲಿತ ಹೋರಾಟಗಳ ಮುಂಚೂಣಿಯಲ್ಲಿರುವ ಖಾವಿಧಾರಿಗಳು, ಸಾಂಸ್ಕೃತಿಕ ವಲಯದ ಚಿಂತಕರು, ʼ ದಲಿತ ಸಂಘಟನೆ ʼ ಎಂಬ ಏಕಶಿಲಾ ಕಲ್ಪನೆಯ (Mಁonolithic perception) ಛಿದ್ರವಾದ ʼ ಉಪ ಸಂಘಟನೆಗಳ ʼ ನಾಯಕರು ತಮ್ಮ ಸಿದ್ಧಮಾದರಿಯ ಭಾಷಣ, ಉಪನ್ಯಾಸಗಳ ಮೂಲಕ ಯುವ ಸಮೂಹವನ್ನು ಜಾಗೃತಗೊಳಿಸುವ ಪ್ರಯತ್ನದಲ್ಲಿರುತ್ತಾರೆ. ಬುದ್ಧನಿಂದ ಅಂಬೇಡ್ಕರ್‌ವರೆಗಿನ ಸಮ ಸಮಾಜದ ಕಲ್ಪನೆಯ ಚರಿತ್ರೆಯ ಹರಿವು ದಿಕ್ಕಾಪಾಲಾಗಿ ಎಲ್ಲೆಡೆ ಪಸರಿಸಿರುತ್ತದೆ. ಈಗ ʼ ಧರ್ಮ ʼ ಎಂದೇ ನಿರ್ವಚಿಸಲ್ಪಟ್ಟಿರುವ ಸಂವಿಧಾನಕ್ಕೆ ಸಂಚಕಾರ ಎದುರಾಗಿರುವುದನ್ನು ವಿಭಿನ್ನ ಸೈದ್ದಾಂತಿಕ ನೆಲೆಗಳಲ್ಲಿ ಚರ್ಚಿಸಲಾಗುತ್ತದೆ. ಅಂಬೇಡ್ಕರ್ ಒಪ್ಪಿಕೊಂಡ ಬುದ್ಧ ಕರ್ನಾಟಕದ ವರ್ತಮಾನದ ಸಂದಿಗ್ಧತೆಯಲ್ಲಿ ʼ ಸ್ಥಿತಪ್ರಜ್ಞ ಧ್ಯಾನಿ ʼ ಆಗಿರಬೇಕೋ ಅಥವಾ ತನ್ನ ಜನಗಳ ನಡುವೆ ಸಂಚರಿಸಿ ಒಂದುಗೂಡಿಸಬೇಕೋ ಎಂಬ ಜಿಜ್ಞಾಸೆಯಲ್ಲಿ ಏಪ್ರಿಲ್ 14 ಆಚರಿಸಬೇಕಿದೆ.
ಇದನ್ನೂ ಓದಿ : ಉದಯನಿಧಿಗೆ ವಿಜಯ್ ಖಡಕ್ ಕೌಂಟರ್ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?
ಏಪ್ರಿಲ್ 14 – ತದನಂತರ ಏನು ?
ಈ ಪ್ರಶ್ನೆ ಬಹುಶಃ ಶಾಶ್ವತವಾಗಿ ಕಾಡುತ್ತಲೇ ಬಂದಿದೆ. ಕರ್ನಾಟಕದ ಪ್ರಸ್ತುತ ಸಂದರ್ಭವನ್ನು ನೋಡಿದಾಗ ಈ ಪ್ರಶ್ನೆಯ ಹಿಂದೆ ನೋವು, ಸಂಕಟ, ಆತಂಕಗಳೂ ಕಾಣಬಹುದು. ಏಕೆಂದರೆ ಶೋಷಿತ ಸಮುದಾಯಗಳ ಸಮಾನತೆ ಮತ್ತು ಸಬಲೀಕರಣದ ಆಶಯಗಳು ಮತ್ತು ಭರವಸೆಗಳು ಈಗ ಜಾತಿ-ಉಪಜಾತಿಗಳ ಚೌಕಟ್ಟುಗಳಲ್ಲಿ ವಿಂಡಿಸಲ್ಪಟ್ಟು, ಸಮಾನತೆ ಯಾರಿಗೆ ಬೇಕು, ಸಬಲೀಕರಣ ಯಾರದ್ದಾಗಬೇಕು ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.
1947ರಲ್ಲಿ ಮತ್ತು ಅದಕ್ಕೂ ಮುನ್ನ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಕಾಡಿದ ಪ್ರಶ್ನೆಗಳನ್ನು ಮರುಮನನ ಮಾಡಿಕೊಂಡರೆ ಈಗ ಹುಟ್ಟಿರುವ ಜಿಜ್ಞಾಸೆಗಳು ಭಿನ್ನವಾಗೇನೂ ಕಾಣುವುದಿಲ್ಲ. ಅಲ್ಲವೇ ? ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ ಎದುರಿಸುತ್ತಿದ್ದ ಸಮಸ್ಯೆಗಳು ಅನಕ್ಷರತೆ, ಬಡತನ, ಸಾಮಾಜಿಕ-ಆರ್ಥಿಕ ಅಸಮಾನತೆ, ನಿರುದ್ಯೋಗ ಮತ್ತು ಅಪಾರ ಸಂಖ್ಯೆಯ ಅವಕಾಶವಂಚಿತ ಸಮುದಾಯಗಳು. ಆರ್ಥಿಕ ಶೋಷಣೆ, ಸಾಮಾಜಿಕ ದಬ್ಬಾಳಿಕೆ ಮತ್ತು ಸಾಂಸ್ಕೃತಿಕ ಬಹಿಷ್ಕಾರಕ್ಕೊಳಗಾಗಿದ್ದ ಈ ಶೋಷಿತ-ದಮನಿತ ಜನರು ಸಂವಿಧಾನ ರಚನೆಯ ಸಂದರ್ಭದಲ್ಲಿ ವಿಮೋಚನೆಗಾಗಿ ಕಾದುನಿಂತ ಸಮಾಜಗಳಾಗಿ ಕಂಡಿದ್ದು ಸಹಜ. ಈ ಸಂದಿಗ್ಧತೆಯ ನಡುವೆ ಅಂಬೇಡ್ಕರ್ ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಉದಾತ್ತ ನೀತಿ ಇಂದಿಗೂ ಸಹ ಭಾರತವನ್ನು ಕಾಪಾಡುತ್ತಿದೆ.
ಈ ಅಸಮಾನತೆ ಮತ್ತು ಶೋಷಣೆಯ ಮೂಲ ಕಾರಣವನ್ನು ಜಾತಿ ವ್ಯವಸ್ಥೆಯಲ್ಲಿ ಗುರುತಿಸಿದ್ದರಿಂದಲೇ ಅಂಬೇಡ್ಕರ್ ತಮ್ಮ ಸಮ ಸಮಾಜದ ಕಲ್ಪನೆಯಲ್ಲಿ ಶೋಷಿತ ಸಮಾಜ ಮತ್ತು ತಳಸಮುದಾಯಗಳನ್ನೇ ಕೇಂದ್ರೀಕರಿಸಿ ಸಾಂವಿಧಾನಿಕ ನಿಯಮಗಳನ್ನು ರೂಪಿಸಿದ್ದರು. ʼ ಮೀಸಲಾತಿ ʼ ಎಂಬ ಸಾಂವಿಧಾನಿಕ ಸವಲತ್ತಿನ ಉಗಮವನ್ನು ಇಲ್ಲಿ ಕಾಣಬಹುದು. ಏಕೆಂದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಊಳಿಗಮಾನ್ಯ ಸಮಾಜದಲ್ಲಿ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾಗಿದ್ದವರು ಕೆಳಸ್ತರದ ಜಾತಿಯ ಜನರು, ಮಹಿಳೆಯರು ಮತ್ತು ಆದಿವಾಸಿ ಸಮುದಾಯಗಳು. ಈ ಸಮಾಜಗಳ ಸಬಲೀಕರಣವಾಗದೆ, ಸಮಾನತೆ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಸಮಾನತೆ ಎಂದರೆ ಒಂದು ಸಮಾಜದ ಆಂತರಿಕ ವಿದ್ಯಮಾನವಲ್ಲ ಬದಲಾಗಿ ಎಲ್ಲ ಸಮಾಜಗಳನ್ನೂ ಒಳಗೊಂಡಂತಹ ವಿಶಾಲ ಭಾರತದ ವಿದ್ಯಮಾನ ಎನ್ನುವುದನ್ನು ಗಮನಿಸಬೇಕು.

ಆ ವೇಳೆಗಾಗಲೇ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸುಭದ್ರತೆ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಗಳಿಸಿದ್ದ ಮೇಲ್ಜಾತಿಯ, ಮೇಲ್ವರ್ಗದ ಸಮಾಜಗಳಿಗೆ ಸಮಾನವಾಗಿ, ಕೆಳಸ್ತರದ ಸಮಾಜಗಳನ್ನೂ ಉನ್ನತೀಕರಿಸುವುದು ಮೀಸಲಾತಿ ಕಲ್ಪನೆಯ ಮೂಲ ಧಾತು. ವಂಚಿತರ ವಿಮೋಚನೆಯ ಕನಸುಗಳು ಈ ಅವಕಾಶವಂಚಿತ ಸಮಾಜಗಳ ಪೈಕಿ ಅತಿ ನಿಕೃಷ್ಟ ಬದುಕು ಸಾಗಿಸುತ್ತಿದ್ದ ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ಅಸ್ಪೃಶ್ಯರು ಮತ್ತು ತಳಸಮುದಾಯಗಳ ಮಹಿಳೆಯರು ಬ್ರಿಟೀಷ್ ದಾಸ್ಯ ಮತ್ತು ಮೇಲ್ಜಾತಿಯ ದಬ್ಬಾಳಿಕೆಗಳಿಂದ ಒಮ್ಮೆಲೆ ವಿಮೋಚನೆ ಗಳಿಸುವುದು ಅತ್ಯವಶ್ಯವಾಗಿತ್ತು. ಹಾಗಾಗಿಯೇ ಅಂಬೇಡ್ಕರ್ ಮತ್ತಿತರ ಸ್ವಾತಂತ್ರ್ಯಪೂರ್ವ ನಾಯಕರು ತಳಸಮುದಾಯಗಳಲ್ಲೇ ಅತ್ಯಂತ ನಿಕೃಷ್ಟ ಜೀವನ ಸಾಗಿಸುತ್ತಿದ್ದ ಸಮುದಾಯಗಳನ್ನು ಮರುವರ್ಗೀಕರಣ ಮಾಡುವ ಮೂಲಕ ಮೀಸಲಾತಿ ಸೌಲಭ್ಯವನ್ನು ಸಾಂವಿಧಾನಿಕವಾಗಿ ಕಲ್ಪಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಮೀಸಲಾಗಿ ಸಾಂವಿಧಾನಿಕ ಮೂಲ ಭೂತ ಹಕ್ಕು ಅಲ್ಲ (Constitutional Fundamental Right) . ಅದು ಸಾಂವಿಧಾನಿಕ-ಶಾಸನಬದ್ಧ ಸವಲತ್ತು ಮಾತ್ರ.
ಕರ್ನಾಟಕದ ಒಳಮೀಸಲಾತಿ ವಿವಾದದ ನಡುವೆ ಕೇಳಿಬರುತ್ತಿರುವ ಕೆಲವು ದನಿಗಳು ಈ ವಾಸ್ತವವನ್ನು ಮರೆತಿರುವುದು ವಿಷಾದನೀಯ. ಅಂಬೇಡ್ಕರ್ ಮಹರ್ ಅಥವಾ ಹೊಲೆಯ ಅಥವಾ ಈಗ ಪ್ರಚಲಿತವಾಗಿರುವ ಬಲಗೈ ಸಮುದಾಯದ ಪ್ರತಿನಿಧಿಯಾಗಿ, ಸರ್ವರ ಸಮಾನತೆಗಾಗಿ ಹೋರಾಡಿದರೇ ಹೊರತು, ಕೇವಲ ಆ ನಿರ್ದಿಷ್ಟ ಸಮುದಾಯದ ಹಕ್ಕುಗಳಿಗಾಗಿ ಹೋರಾಡಲಿಲ್ಲ. ಅಂಬೇಡ್ಕರ್ ದೃಷ್ಟಿಯ ʼಸಮಾನತೆʼ ಎಲ್ಲ ಶೋಷಿತ ಸಮುದಾಯಗಳನ್ನೂ ಒಳಗೊಂಡ ಉದಾತ್ತ ಕಲ್ಪನೆಯಾಗಿತ್ತು. ಅವರ ಈ ಔದಾತ್ಯ ಮತ್ತು ಹೋರಾಟವನ್ನೇ ಸ್ವಾಧೀನಪಡಿಸಿಕೊಳ್ಳುವ (Appropriating ) ಒಂದು ಸಮುದಾಯದ ಪ್ರಯತ್ನ ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರ ಅಲ್ಲವೇ ?
ಒಳಮೀಸಲಾತಿ ಎಂಬ ಪದಬಳಕೆಯೇ ʼಮೀಸಲಾತಿʼಯನ್ನು ಮೂಲದಲ್ಲೇ ಅಪಭ್ರಂಶಗೊಳಿಸುವ ಪ್ರಯತ್ನ ಎನಿಸುತ್ತದೆ.
ಅಥವಾ ಮೀಸಲಾತಿಗೆ ಅರ್ಹವಾದ ನೂರಾರು ಅವಕಾಶವಂಚಿತ ಸಮುದಾಯಗಳ ಒಳಗೆ ಇನ್ನೂ ಕೆಲವು ಸಮುದಾಯಗಳು ಉಳಿದಿವೆ, ಆ ಸಮುದಾಯಗಳು ಇನ್ನೂ ಸಬಲೀಕರಣ-ಸಮಾನತೆಯ ಕನಸು ಕಾಣುತ್ತಿವೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಇದು ನಿಜವೇ ಆದರೆ ಆ ಸಮಾಜಗಳಿಗೆ ಸಾಂವಿಧಾನಿಕವಾಗಿ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗುವುದಿಲ್ಲವೇ ? ಇಂದಿಗೂ ನಿರ್ಗತಿಕರಾಗಿರುವ ಅಲೆಮಾರಿಗಳು, ವಸತಿಹೀನರಾಗಿರುವ ಬುಡಕಟ್ಟು ಸಮುದಾಯಗಳು, ಶಿಕ್ಷಣ-ಉದ್ಯೋಗದಲ್ಲಿ ಪ್ರಾತಿನಿಧ್ಯವನ್ನೇ ಪಡೆಯಲಾಗದ ಅಸ್ಪೃಶ್ಯ ಸಮುದಾಯಗಳು, ಸಾಂವಿಧಾನಿಕ ಸವಲತ್ತುಗಳ ಹಕ್ಕುದಾರರಾಗುವುದಿಲ್ಲವೇ ? ಫಲಾನುಭವಿ ಸಮಾಜಗಳ ಗಟ್ಟಿದನಿ ಸ್ವಾತಂತ್ರ್ಯಾನಂತರದ ಆಳ್ವಿಕೆಗಳಲ್ಲಿ ನಗರೀಕರಣ, ಕೈಗಾರಿಕೀಕರಣ, ಸಾರ್ವಜನಿಕ ಉದ್ದಿಮೆಗಳ ರಾಷ್ಟ್ರೀಕರಣ, ಶೈಕ್ಷಣಿಕ ವ್ಯವಸ್ಥೆಯ ಉನ್ನತೀಕರಣ ಇವೆಲ್ಲವೂ ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ತಾರತಮ್ಯಗಳನ್ನು ಒಂದು ಹಂತದವರೆಗೆ ನಿವಾರಿಸಿದೆಯಲ್ಲವೇ ? ತತ್ಪರಿಣಾಮವಾಗಿ ಈಗ ಶೋಷಿತ ಸಮಾಜಗಳಲ್ಲೇ ಹಿತವಲಯ, ಮಧ್ಯಮ ವರ್ಗಗಳು ಸೃಷ್ಟಿಯಾಗಿವೆ ಶ್ರೀಮಂತ ವರ್ಗಗಳೂ ಇವೆ. ಸಾಮಾಜಿಕ ತಾರತಮ್ಯಗಳನ್ನು ಎದುರಿಸುತ್ತಿದ್ದರೂ ಅದನ್ನು ಮೀರಿ ನಿಲ್ಲುವ ಶಕ್ತಿ, ಸಾಮರ್ಥ್ಯ ಮತ್ತು ಆರ್ಥಿಕ ಬಲ , ವ್ಯಕ್ತಿಗತವಾಗಿ- ಸಂಘಟನಾತ್ಮಕವಾಗಿ ಇರುವುದು ವಾಸ್ತವ ಅಲ್ಲವೇ ? ಈ ಫಲಾನುಭವಿ ಸಮಾಜಗಳ ವರ್ತಮಾನದ ಆದ್ಯತೆ ಏನಾಗಬೇಕು ?

ಏಳು ದಶಕಗಳ ಅಭಿವೃದ್ಧಿಯ ನಂತರವೂ ಇಂದಿಗೂ ಸಂವಿಧಾನ ಕಲ್ಪಿಸಿರುವ, ಮೀಸಲಾತಿಯನ್ನೂ ಒಳಗೊಂಡಂತೆ, ಇನ್ನಿತರ ಹಕ್ಕು/ಸವಲತ್ತುಗಳಿಂದ ವಂಚಿತರಾಗಿರುವ ಸಮುದಾಯಗಳಿವೆ ಎಂಬ ವಾಸ್ತವವನ್ನು ಒಪ್ಪಬೇಕಲ್ಲವೇ ? ಪರಿಶಿಷ್ಟರಲ್ಲೇ ಇರುವ ಈ ಜನಸಮುದಾಯಗಳಿಗೆ, ಅಲೆಮಾರಿ ಜನಾಂಗಗಳಿಗೆ , ಬುಡಕಟ್ಟು ಸಮಾಜಗಳಿಗೆ ಅಂಬೇಡ್ಕರ್ ಉದ್ದೇಶಿಸಿದ ಸಾಮಾಜಿಕ ನ್ಯಾಯ ಆರ್ಥಿಕ ಸಮಾನತೆ ಅನ್ವಯಿಸುವುದೇ ಆದರೆ, ನವ ಉದಾರವಾದಿ ಆರ್ಥಿಕತೆಯು ಹಂತಹಂತವಾಗಿ ಕಸಿದುಕೊಳ್ಳುತ್ತಿರುವ ಸಾಂವಿಧಾನಿಕ ಹಕ್ಕುಗಳನ್ನು ಈ ಸಮಾಜಗಳಿಗೂ ತಲುಪಿಸುವುದು ನಮ್ಮ ಆದ್ಯತೆಯಾಗಬೇಕಲ್ಲವೇ ? ಇದನ್ನು ಹೇಗೆ ನಿಭಾಯಿಸಬೇಕು ? ಬಂಡವಾಳಶಾಹಿ ಮಾರುಕಟ್ಟೆಯ ನಿಯಂತ್ರಣದಲ್ಲಿರುವ ನವ ಉದಾರವಾದಿ ಆರ್ಥಿಕತೆಯಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಿಲ್ಲ. ಶಿಕ್ಷಣ ಸುಲಭವಾಗಿ, ಹಣಬಲ ಇಲ್ಲದೆ ಕೈಗೆಟುಕುವುದಿಲ್ಲ. ಇರುವ ಉದ್ಯೋಗಗಳನ್ನೇ ವಂಚಿತರ ನಡುವೆ ಹಂಚಿಕೊಳ್ಳಬೇಕು.
ಉಳ್ಳವರು ಇಲ್ಲದವರಿಗೆ, ಪಡೆದವರು ಪಡೆಯದಿರುವವರಿಗೆ, ಫಲಾನುಭವಿಗಳು ವಂಚಿತರಿಗೆ, ಸಬಲರು ದುರ್ಬಲರಿಗೆ, ಅನುಕೂಲಸ್ಥರು ಅನುಕೂಲರಹಿತರಿಗೆ ಬಿಟ್ಟುಕೊಡಬೇಕು. ಇದು ಅಸಾಧ್ಯ ಅಥವಾ ʼ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ʼ ಎಂದು ಹಠ ಮಾಡಿದರೆ, ಈ ಅವಕಾಶವಂಚಿತರು, ಮಾದಿಗ ಸಮುದಾಯ, ಅಲೆಮಾರಿ ಸಮುದಾಯ ಏನು ಮಾಡಬೇಕು ? ಅವರ ಸಮಾನತೆ, ಏಳಿಗೆ, ಸಬಲೀಕರಣ ಅಂಬೇಡ್ಕರ್ ಅವರ ಆಶಯವೂ ಹೌದಲ್ಲವೇ ಅಲ್ಲವೇ ? ಈ ಉದಾತ್ತ ದೂರದೃಷ್ಟಿಯಿಂದಲೇ ಸಿದ್ದಲಿಂಗಯ್ಯ ʼ ಹೊಲೆ ಮಾದಿಗರ ʼ ಹಾಡುಗಳನ್ನು ರಚಿಸಿದರು, ಪ್ರತ್ಯೇಕ ಹೊಲೆಯರ, ಮಾದಿಗರ ಹಾಡುಗಳನ್ನಲ್ಲ.
ಈ ಔದಾತ್ಯ ಮತ್ತು ದೂರಗಾಮಿ ಚಿಂತನೆಯನ್ನೇ ನಾವು ಕಳೆದುಕೊಂಡಿದ್ದೇವೆಯೇ ? ಮೀಸಲಾತಿ-ಒಳಮೀಸಲಾತಿ ಎರಡೂ ರಾಜಕೀಯ ಪ್ರಶ್ನೆಗಳಲ್ಲ, ರಾಜಕೀಯ ದೃಷ್ಟಿಯಿಂದ ಒಳಮೀಸಲಾತಿ ಹೋರಾಟಗಳನ್ನು ನೋಡಿದರೆ ಅದು ಆಳುವ ವರ್ಗಗಳ ಅಥವಾ ಹಿಂದುತ್ವ ರಾಜಕಾರಣದ ಅಥವಾ ಇತ್ತೀಚೆಗೆ ಕ್ಲೀಷೆಯಾಗಿ ಬಳಕೆಯಲ್ಲಿರುವ ʼಮನುವಾದಿʼ ಗಳ ಪಿತೂರಿಯಾಗಿ ಕಾಣುತ್ತದೆ. ಇದು ಪಿತೂರಿಯೇ ಎಂದಾದಲ್ಲಿ, ತಮ್ಮ ಸಾಂವಿಧಾನಿಕ ಹಕ್ಕಿಗಾಗಿ ಹೋರಾಡುತ್ತಿರುವ ಅವಕಾಶವಂಚಿತ ಅಲೆಮಾರಿ, ಬುಡಕಟ್ಟು, ಅಸ್ಪೃಶ್ಯ ಸಮುದಾಯಗಳಲ್ಲಿ ಅಸಮಾನತೆಗಳೇ ಇಲ್ಲ ಎಂದು ಹೇಳಿದಂತಾಗುತ್ತದೆ. ʼ ಪಿತೂರಿ ಅಥವಾ ಷಡ್ಯಂತ್ರ ʼ ಎಂಬ ಪದ ಬಳಕೆಯೇ ಸಮಸ್ಯೆಗೆ ವಿಮುಖವಾಗುವ ಜಾಣ್ಮೆಯ ನಡೆ ಆಗುತ್ತದೆ. ಆ ಪಿತೂರಿಯನ್ನು ಪರಾಭವಗೊಳಿಸುವ ಐಕಮತ್ಯ-ಐಕ್ಯತೆ ನಮ್ಮಲ್ಲಿಲ್ಲ ಎಂದು ಒಪ್ಪಿಕೊಂಡಂತಾಗುತ್ತದೆ.
ಮಾರುಕಟ್ಟೆ ಆರ್ಥಿಕತೆ-ಅಸಮಾನತೆ
ಒಳಮೀಸಲಾತಿ ಸಾಮುದಾಯಿಕ ಸಮಸ್ಯೆ. ತಳಸ್ತರದ ಸಮಾಜದಲ್ಲಿ ನಾಳೆಗಳ ಕನಸು ಕಾಣುತ್ತಾ ತಾರೆಗಳನ್ನು ಎಣಿಸುತ್ತಿರುವ ಶೋಷಿತ ಸಮುದಾಯಗಳ ಬದುಕುವ ಹಕ್ಕಿನ ಸಮಸ್ಯೆ. ನವ ಉದಾರವಾದ ಹೇಗೆ ಈ ಸಮಸ್ಯೆಗಳನ್ನು ಸರಳೀಕರಿಸುತ್ತಿದೆ ಎನ್ನುವುದನ್ನು, ಇತ್ತೀಚಿನ ಸುಪ್ರೀಂಕೋರ್ಟ್ ಆದೇಶ ಎತ್ತಿ ತೋರಿಸಿದೆ. ಹಿಂದೂ, ಸಿಖ್ ಮತ್ತು ಬೌದ್ಧ ಧಮ್ಮಕ್ಕೆ ಮತಾಂತರವಾದವರಿಗೆ ಲಭ್ಯವಾಗುವ ಸಾಂವಿಧಾನಿಕ ಸವಲತ್ತುಗಳು ಕ್ರೈಸ್ತ-ಇಸ್ಲಾಂ ಧರ್ಮ ಒಪ್ಪಿಕೊಂಡವರಿಗೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ. ಅಂದರೆ ಅಸ್ಪೃಶ್ಯತೆಯ ಅವಮಾನ, ಅಸಮಾನತೆಯ ಹಿಂಸೆಯನ್ನೂ ಸಹ ಧಾರ್ಮಿಕ ದೃಷ್ಟಿಯಿಂದ ನೋಡಲಾಗುತ್ತದೆ ಎಂದರ್ಥ. ಅಂದರೆ ಈ ಧರ್ಮಗಳಿಗೆ ಮತಾಂತರಗೊಂಡವರು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಭದ್ರತೆ ಪಡೆದಂತೆ ಎಂದು ಹೇಳಿದಂತಾಗುತ್ತದೆ.
ಈ ಸಮಸ್ಯೆಗೆ ಮೂಲ ಕಾರಣವನ್ನು 1947ರಲ್ಲಿ ಅಂಬೇಡ್ಕರ್ ಕಂಡಂತೆ ಕೇವಲ ಜಾತಿ ವ್ಯವಸ್ಥೆಯಲ್ಲಿ ಗುರುತಿಸಲಾಗುವುದಿಲ್ಲ. ಉದಾರವಾದಿ ಮಾರುಕಟ್ಟೆ ನೀತಿಗಳು ವರ್ತಮಾನದ ಆರ್ಥಿಕತೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಷ್ಕರ್ಷೆ ಮಾಡುತ್ತವೆ, ನಿರ್ದೇಶಿಸುತ್ತವೆ. ಶೋಷಿತ ಸಮುದಾಯಗಳನ್ನು ರಕ್ಷಿಸುವ ಭದ್ರ ಕವಚವಾಗಿ ಪರಿಗಣಿಸಲಾಗುವ ಸಂವಿಧಾನದ ಚೌಕಟ್ಟಿನಲ್ಲೇ ಈ ಅಸಮಾನತೆಯ ನೀತಿಗಳು ಜಾರಿಯಾಗುತ್ತಿವೆ. ಈ ಆರ್ಥಿಕತೆಯ ವಿರುದ್ಧ, ಕಾರ್ಪೋರೇಟ್ ಮಾರುಕಟ್ಟೆ ಆಧಿಪತ್ಯದ ವಿರುದ್ಧ ದಲಿತ ಚಳುವಳಿಗಳು, ದಲಿತರನ್ನೇ ಪ್ರತಿನಿಧಿಸುವ ಬಿಎಸ್‌ಪಿ, ಆರ್‌ಪಿಐ ಮುಂತಾದ ಪಕ್ಷಗಳು ಏಕೆ ಹೋರಾಟಗಳನ್ನು ರೂಪಿಸುತ್ತಿಲ್ಲ ? ಈ ಆರ್ಥಿಕ ವ್ಯವಸ್ಥೆಯನ್ನು ರಾಜಕೀಯವಾಗಿ ಒಪ್ಪಿಕೊಂಡು, ಸಾಮಾಜಿಕವಾಗಿ ಅದು ಸೃಷ್ಟಿಸುವ ಅಪಾಯಗಳ ವಿರುದ್ಧ ಹೋರಾಡುವುದು, ಎರಡು ದೋಣಿಗಳಲ್ಲಿ ಕಾಲಿಟ್ಟು ಚಲಿಸಿದಂತಾಗುವುದಿಲ್ಲವೇ ?
ವಿಘಟನೆಯಿಂದ ವಿಭಜನೆಯೆಡೆಗೆ ಒಳಮೀಸಲಾತಿ ವಿವಾದ ಕರ್ನಾಟಕದ ದಲಿತ ಸಮಾಜವನ್ನು ಮೂರು ಭಾಗಗಳಾಗಿ ವಿಭಜಿಸಿದೆ.
ಬಲಗೈ, ಎಡಗೈ ಮತ್ತು ಅಲೆಮಾರಿಗಳು. ಮೂರೂ ಗುಂಪುಗಳು ತಮ್ಮದೇ ಆದ ಹಕ್ಕೊತ್ತಾಯಗಳೊಂದಿಗೆ ಹೋರಾಡುತ್ತಿವೆ. ಕರ್ನಾಟಕದ ದಲಿತ ಚಳುವಳಿಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಲಿತರ ಹೋರಾಟಕ್ಕೆ ಖಾವಿಧಾರಿಗಳ ನಾಯಕತ್ವ ದೊರೆತಿದೆ. ಪ್ರಗತಿಪರ ಖಾವಿಧಾರಿ ಎನ್ನುವುದಾದರೆ, ಇದು ಮುಂದಿನ ಹೋರಾಟಗಳಿಗೆ ಪೂರ್ವನಿದರ್ಶನವಾಗುವ (Precedent) ಸಾಧ್ಯತೆ/ಅಪಾಯ ಇರುವುದನ್ನು ಗಂಭೀರವಾಗಿ ಚರ್ಚಿಸಬೇಕಿದೆ. ಈ ವಿವಾದದಲ್ಲಿ ಯಾವ ಸಮುದಾಯವೂ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿಲ್ಲ. ಆ ದಿನಗಳು ಸಮೀಪಿಸುತ್ತಿವೆ. ಬದಲಾಗಿ ಪಡೆದಿರುವ ಹಕ್ಕುಗಳಲ್ಲಿ ಅಲ್ಪಾಂಶವನ್ನು ಪಡೆಯದೆ ಇರುವವರಿಗೆ ನೀಡುವ ಔದಾತ್ಯವನ್ನು ವಿವೇಕಯುತ ಸಮಾಜ ಅಪೇಕ್ಷಿಸುತ್ತದೆ.

ರಾಜಕೀಯ ದೃಷ್ಟಿಯಲ್ಲೇ ನೋಡಿದಾಗ, ಈ ಸಮಸ್ಯೆ ಅಂತಿಮವಾಗಿ ಮತಬ್ಯಾಂಕ್ ರಾಜಕಾರಣದಲ್ಲಿ (Vote Bank Politics) ಪರ್ಯವಸಾನ ಹೊಂದುತ್ತದೆ. ಕರ್ನಾಟಕದ ಯಾವ ದಲಿತ ಶಾಸಕ, ಸಂಸದರೂ ಸಹ ಈವರೆಗೆ ಮೂರು ದಿಕ್ಕುಗಳಲ್ಲಿ ನಡೆಯುತ್ತಿರುವ ಹೋರಾಟಗಳನ್ನು ಒಂದು ವೇದಿಕೆಗೆ ತರುವ ಪ್ರಯತ್ನ ಮಾಡಿಲ್ಲ. ಸಹಜವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿರುವ ದಲಿತ ಸಂಘಟನೆಗಳೂ ಸಹ ನೀಲಿ ಬಾವುಟವನ್ನು, ಜೈ ಭೀಮ್ ಘೋಷಣೆಯನ್ನು ರಾಜಕೀಯವಾಗಿ ಸಂಕುಚಿತಗೊಳಿಸುತ್ತಿವೆ. “ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ” ಎಂಬ ಘೋಷಣೆ ಸಮಸ್ತ ದಲಿತ ಸಮಾಜಗಳ ಒಕ್ಕೊರಲಿನ ದನಿಯಾಗಬೇಕಿತ್ತಲ್ಲವೇ ? ಈಗ ಅದು ಸಮುದಾಯಗಳ ದನಿಯಾಗಿ ಕೇಳಿಬರುತ್ತಿದೆ.
ಮೂರು ವರ್ಷಗಳ ಹಿಂದೆ ಅಲ್ಪ ಸ್ವಲ್ಪ ಭರವಸೆ ಮೂಡಿಸಿದ್ದ ಈ ʼ ಒಕ್ಕೊರಲ ದನಿ ʼ ಮತ್ತು ಅದಕ್ಕೆ ಅವಶ್ಯವಾದ ʼ ದಲಿತ ಐಕ್ಯತೆ-ದಲಿತ ರಾಜಕಾರಣ ʼದ ಆಶಯಗಳು ಈಗ ಮಣ್ಣುಪಾಲಾಗಿದೆ. ಶೋಷಿತ ಸಮುದಾಯಗಳಿಗೆ ಭವಿಷ್ಯದ ಬೆಳಕಿಂಡಿಯನ್ನು ತೋರಿಸಿದ, ಮುಂದಾರಿಯ ದೀವಿಗೆಯನ್ನು ಕಲ್ಪಿಸಿದ, ವ್ಯವಸ್ಥೆಯ ವಿರುದ್ಧ ಹೋರಾಟದ ಪಂಜುಗಳನ್ನು ಹೊತ್ತಿಸಿದ, 1970ರ ದಶಕದ ದಲಿತ ಚಳುವಳಿಯ ರೂವಾರಿಗಳ ಧ್ವನಿ ಏಕೋ ಮಸುಕಾಗಿದೆ. ಉಪಜಾತಿಯ ಅಸ್ಮಿತೆ ಮತ್ತು ಸಂಘಟನಾತ್ಮಕ ಅಸ್ಮಿತೆ-ಅಸ್ತಿತ್ವಗಳೇ ನಿರ್ಣಾಯಕವಾದಂತೆ ಕಾಣುತ್ತಿದೆ. ಬಲಗೈ ಪರವೋ ಎಡಗೈ ಪರವೋ ಎಂಬ ಪ್ರಶ್ನೆಯೇ ಕೇಂದ್ರವಾಗಿರುವುದರಿಂದ ʼ ದಲಿತರ ಪರ ʼ ಧ್ವನಿ ಎಲ್ಲೋ ಕಳೆದುಹೋದಂತೆ ಕಾಣುತ್ತಿದೆ.
ಈ ಸಂಘರ್ಷಮಯ ವಾತಾವರಣದಲ್ಲಿ ಏಳು ದಶಕಗಳ ಸಾಂವಿಧಾನಿಕ ಅಭಿವೃದ್ಧಿಯ ಹಾದಿಯಲ್ಲಿ ಇಂದಿಗೂ ಅವಕಾಶವಂಚಿತರಾಗಿಯೇ ಇರುವ ಅಲೆಮಾರಿ, ಬುಡಕಟ್ಟು, ಅಸ್ಪೃಶ್ಯ-ಸ್ಪೃಶ್ಯ ಸಮುದಾಯಗಳು ಯಾರ ಮೊರೆ ಹೋಗಬೇಕು ? ಈಗಾಗಲೇ ರಾಜಕೀಯ ಪಕ್ಷಗಳ ಚದುರಂಗದಾಟದಲ್ಲಿ ಆಟಕಾಯಿಗಳಾಗಿರುವ ಈ ಜನರು, ಅಧಿಕಾರ ರಾಜಕಾರಣದ ದಾಳಗಳಾಗಬೇಕೇ ? ಅಂಬೇಡ್ಕರ್ ಅವರನ್ನು ಹಿಂದುತ್ವ ರಾಜಕಾರಣ ವ್ಯವಸ್ಥಿತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಷಮ ಗಳಿಗೆ ವಿಘಟನೆಯ ದಿನಗಳನ್ನು ದಾಟಿ ವಿಭಜನೆಯ ಕವಲು ಹಾದಿಗಳಲ್ಲಿ ಸಾಗುತ್ತಿರುವ ದಲಿತ ಚಳುವಳಿ ಮತ್ತು ದಲಿತ/ದಲಿತೇತರ ನಾಯಕರು ಯಾರ ಕಡೆ ನೋಡಬೇಕು ?
ಮುಂದಿನ ಪೀಳಿಗೆಯ ನಾಳೆಗಳು !
ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಪರಿಣಾಮವಾಗಿ ಅನಿಶ್ಚಿತ ಭವಿಷ್ಯ ಅಭದ್ರ ವರ್ತಮಾನ ಮತ್ತು ಅಸ್ಥಿರ ಬದುಕಿನ ಕರಾಳ ವಾತಾವರಣದಲ್ಲಿ ಸಿಲುಕಿರುವ ಭವಿಷ್ಯ ಭಾರತದ ಭಾಗಿದಾರರ (Stake holders) ಕಡೆ ಅಲ್ಲವೇ ? ಈ ಭಾಗಿದಾರರು ಇರುವುದು ವರ್ತಮಾನದ ಯುವ ಸಮಾಜದಲ್ಲಿ, ಮಿಲೆನಿಯಂ ಜಗತ್ತಿನಲ್ಲಿ, ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಮಹಿಳೆಯರಲ್ಲಿ ಮತ್ತು ಇರುವ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಜಗತ್ತಿನಲ್ಲಿ.

ಈ ವರ್ಗಗಳ ಪೈಕಿ ವಿಶೇಷವಾಗಿ ಯುವ ಸಮುದಾಯವೊಂದನ್ನು ಗುರುತಿಸಬೇಕಲ್ಲವೇ ? ಒಳಮೀಸಲಾತಿ ಇತ್ಯಾದಿಗಳ ಜಟಿಲ ಸಮಸ್ಯೆಗಳಿಂದ ಅತಿಹೆಚ್ಚು ಬಾಧಿತರಾಗುವ ಈ ಸಮಾಜಗಳೊಡನೆ ನಾವು, ಅಂದರೆ ಹಿರಿಯ ತಲೆಮಾರಿನವರು, ಸಂವಾದ ನಡೆಸಿದ್ದೇವೆಯೇ ? ವಿದ್ಯಾರ್ಥಿ ಯುವ ಜನಾಂಗದ ಆತಂಕಗಳೇನು, ತಲ್ಲಣಗಳೆಷ್ಟು, ಹಂಬಲ ಮತ್ತು ನಿರೀಕ್ಷೆಗಳೇನು ಎಂದು ಯೋಚಿಸಿದ್ದೇವೆಯೇ ? ಸೆಮಿನಾರ್‌ಗಳ ಮೂಲಕ ಹಿರಿಯರ ಮಿದುಳಿನಲ್ಲಿರುವ ಅಪಾರ ಜ್ಞಾನ ಸಂಪತ್ತಿನ ಕೆಲವಂಶವನ್ನು ಈ ಯುವ ಜನಾಂಗದ ನಡುವೆ ಪ್ರಸರಣ ಮಾಡುತ್ತಿದ್ದೇವೆ. ಹಾಗಾಗಿ ಯುವ ಜನಾಂಗ ಕೇವಲ ಕೇಳುಗ ಜನಾಂಗವಾಗಿದೆಯೇ ಹೊರತು, ತನ್ನ ಮನದಾಳದ ತುಮುಲಗಳನ್ನು ಹೊರಗೆಡಹುವ ಅವಕಾಶಗಳನ್ನೇ ಕಾಣುತ್ತಿಲ್ಲ. ಏಪ್ರಿಲ್ 14ರಂದು ಅಂಬೇಡ್ಕರ್ ಅವರ 136ನೆ ಜನ್ಮದಿನವನ್ನು ಆಚರಿಸುವ ಮುನ್ನ ಈ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ, ಬಹುಶಃ ಅಂಬೇಡ್ಕರ್ ಶಾಶ್ವತ ಉತ್ಸವಮೂರ್ತಿಯಾಗಿ ಉಳಿದುಬಿಡುತ್ತಾರೆ.
ಸದಾ ನಮ್ಮೊಡನೆಯೇ, ನಮ್ಮ ನಡುವೆಯೇ ಇರುತ್ತಾರೆ ಆದರೆ ʼ ನಮ್ಮೊಳಗೆ ʼ ಇರುತ್ತಾರೆಯೇ ?
ಅಂಬೇಡ್ಕರ್ ಅವರ ದಾರ್ಶನಿಕ ಚಿಂತನೆಗಳನ್ನು ಅಂತರೀಕರಣಗೊಳಿಸಿದ್ದಲ್ಲಿ (Internalise), ಅವರ ಔದಾತ್ಯ ಮತ್ತು ದೂರಗಾಮಿ ದೃಷ್ಟಿಕೋನವನ್ನು ಅಂತರ್ಗತಗೊಳಿಸಿದ್ದಲ್ಲಿ, ಅವರ ಸಮಾನತೆ ಮತ್ತು ಸಮ ಸಮಾಜದ ಆಶಯಗಳನ್ನು ಹೋರಾಟಗಳ ಗುರಿಯನ್ನಾಗಿ ಪರಿಗಣಿಸಿದ್ದಲ್ಲಿ , ಬಹುಶಃ ಅಂಬೇಡ್ಕರ್ ನಮ್ಮೊಳಗೇ ಸ್ಥಾಪನೆಯಾಗುತ್ತಿದ್ದರು. ಇದು ಸಾಧ್ಯವಾಗದಿರುವುದರಿಂದಲೇ ಈಗ ಬಾಹ್ಯ ಸಮಾಜದಲ್ಲಿ ಪ್ರತಿಮೆಗಳಲ್ಲಿ ಬಂಧಿಯಾಗಿದ್ದಾರೆ, ಧ್ಯಾನ ಪೀಠಗಳಲ್ಲಿ ಮರೆಯಾಗಿದ್ದಾರೆ, ರಾಜಕಾರಣದಲ್ಲಿ ಎಲ್ಲರಿಗೂ ಸಲ್ಲುವ, ಯಾರಿಗೂ ಬೇಡವಾದ ಸಮಾಜ ಸುಧಾರಕರಾಗಿ ಸ್ಥಾವರ ರೂಪ ತಳೆದಿದ್ದಾರೆ. ಈಗಲಾದರೂ ಅಂಬೇಡ್ಕರ್ ಅವರನ್ನು ಜಂಗಮರಾಗಿಸೋಣ. ಏಪ್ರಿಲ್ 14ರ ಆಚರಣೆಗಳನ್ನು ಸಾರ್ಥಕಗೊಳಿಸೋಣ.
-೦-೦-೦-೦-





