• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ದಿನಾಂಕ 13 ಫೆಬ್ರವರಿ 2026ರಂದು ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲಿ ಮಂಡಿಸಿದ ಉಪನ್ಯಾಸ..

ಪ್ರತಿಧ್ವನಿ by ಪ್ರತಿಧ್ವನಿ
March 18, 2026
in Top Story, ಅಂಕಣ, ಅಭಿಮತ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ
0
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ
Share on WhatsAppShare on FacebookShare on Telegram

 

ADVERTISEMENT

ವಿಶೇಷ ಲೇಖನ : ನಾ. ದಿವಾಕರ್‌, ಹಿರಿಯ ಲೇಖಕರು.. 

ಪ್ರಜಾಸತ್ತೆಯ ಆಶಯಗಳು

 ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಕೇವಲ ಒಂದು ಆಳ್ವಿಕೆಯ ಮಾದರಿಯಾಗಿರಲಿಲ್ಲ. ಅದು ಮಾನವ ಸಮಾಜದ ಜನಜೀವನದ ಒಂದು ಅಂಶಿಕ ಭಾಗವಾಗಿ ಕಂಡಿತ್ತು. ಭಾರತದಂತಹ ಸಾಂಪ್ರದಾಯಿಕ ಮೌಲ್ಯಗಳಿಂದ ಆವೃತವಾದ ಸಮಾಜದಲ್ಲಿ ಸಾಮಾಜಿಕ-ಆರ್ಥಿಕ ಬದಲಾವಣೆ ಮತ್ತು ರಾಜಕೀಯ ಸುಧಾರಣೆಗಳನ್ನು ಸಾಕಾರಗೊಳಿಸಲು ಪ್ರಜಾಪ್ರಭುತ್ವವೊಂದೇ ಮಾರ್ಗ ಎಂದು ಅಂಬೇಡ್ಕರ್‌ ದೃಢವಾಗಿ ನಂಬಿದ್ದರು.

ಹಾಗಾಗಿಯೇ ಫ್ರೆಂಚ್‌ ಕ್ರಾಂತಿಯ ಉದ್ಘೋಷ “ ಸ್ವಾತಂತ್ರ್ಯ ಸಮಾನತೆ ಮತ್ತು ಬಂಧುತ್ವ ” ಅಂಬೇಡ್ಕರ್‌ ಅವರನ್ನು ಆಕರ್ಷಿಸಿತ್ತು. ಈ ಔದಾತ್ಯಗಳನ್ನು ತಾವು ಬುದ್ಧನ ಚಿಂತನೆಗಳಿಂದಲೇ ಗ್ರಹಿಸಿರುವುದಾಗಿ ಅಂಬೇಡ್ಕರ್‌ ದೃಢೀಕರಿಸಿದ್ದಾರೆ. ಆದಾಗ್ಯೂ ಫ್ರೆಂಚ್‌ ಕ್ರಾಂತಿಯ ಪ್ರಭಾವವನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾಯಿತ ಪ್ರತಿನಿಧಿಗಳ ಆಳ್ವಿಕೆಯಲ್ಲ, ದೇಶದ ಸಮಸ್ತ ಜನತೆಯನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಸಮಾನ ಹಕ್ಕು, ಅವಕಾಶ, ಸ್ಥಾನಮಾನಗಳನ್ನು ಒದಗಿಸುವ ಒಂದು ವ್ಯವಸ್ಥೆ ಎಂದೇ ಅಂಬೇಡ್ಕರ್‌ ಪ್ರತಿಪಾದಿಸಿದ್ದರು.

ಡೂನ್ ವಿಶ್ವವಿದ್ಯಾಲಯ

 ಸಾಂವಿಧಾನಿಕ ಚೌಕಟ್ಟಿನೊಳಗೆ ಶಾಂತಿಯುತ ಸುಧಾರಣೆಗಳನ್ನು ತರುವ ಮೂಲಕ ಸಮಾಜ ಪರಿವರ್ತನೆ, ಆರ್ಥಿಕ ಏಳಿಗೆ ಹಾಗೂ ಸಾಂಸ್ಕೃತಿಕ ವಿಮೋಚನೆಯನ್ನು ಸಾಧಿಸಬಹುದು ಎನ್ನುವುದು ಅಂಬೇಡ್ಕರ್‌ ಅವರ ತಾತ್ವಿಕ ನಿಲುವಾಗಿತ್ತು. ಹಾಗಾಗಿಯೇ ಅವರು ಬಲವಾಗಿ ನಂಬಿದ್ದ ಜಾತಿ ವಿನಾಶವನ್ನು ಸಾಧಿಸಲೂ ಸಹ ಅಂಬೇಡ್ಕರ್‌ ಜನಾಂದೋಲನಗಳಿಗೆ ಕರೆ ನೀಡಲಿಲ್ಲ ಅಥವಾ ಸಾಂಘಿಕ ಪ್ರಯತ್ನಗಳನ್ನು ಮುಂದಿಡಲಿಲ್ಲ. ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ,

ಸಮ ಸಮಾಜವನ್ನು ಸಾಧಿಸುವ ಮೂಲಕ ಜಾತಿ ತಾರತಮ್ಯಗಳನ್ನೂ ನಿರ್ಮೂಲ ಮಾಡಬಹುದು ಹಾಗೆಯೇ ಕೆಳಸ್ತರದ ಜಾತಿಗಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ವಸತಿ ಮತ್ತು ಜೀವನಾವಶ್ಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವರ ಜೀವನಶೈಲಿಯನ್ನು ಉನ್ನತೀಕರಿಸಿ ಮೇಲ್ದರ್ಜೆಗೆ ಎತ್ತರಿಸಬಹುದು ಎನ್ನುವ ಕಲ್ಪನೆ ಅಂಬೇಡ್ಕರ್‌ ಅವರಲ್ಲಿತ್ತು.

 ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ

 ಪ್ರಜಾಸತ್ತೆಯನ್ನು ಕುರಿತು ಅಂಬೇಡ್ಕರ್‌ “ ನನ್ನ ಮಟ್ಟಿಗೆ ಹೇಳುವುದಾದರೆ ಪ್ರಜಾಸತ್ತೆಯು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ರಕ್ತರಹಿತವಾಗಿ ತರುವ ಸರ್ಕಾರದ ರೂಪ ಮತ್ತು ಮಾದರಿ ”  (Conditions precedent for the successful working of Democracy 22-09-52) ಎಂದು ಹೇಳುತ್ತಾರೆ.  ಅಬ್ರಾಹಂ ಲಿಂಕನ್‌ನ “ ಜನತೆಯ ಜನತೆಯಿಂದ ಜನತೆಗಾಗಿ ಸರ್ಕಾರ ” ಎಂಬ ಪ್ರಜಾಪ್ರಭುತ್ವದ ನಿರ್ವಚನೆಯನ್ನು ಅಂಬೇಡ್ಕರ್‌ ತಾತ್ವಿಕವಾಗಿ ವಿರೋಧಿಸುತ್ತಾರೆ.

ಅಂಬೇಡ್ಕರ್ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ,ಚುನಾವಣೆ, ಜನೋಪಯೋಗಿ ಯೋಜನೆಗಳು, ಆಡಳಿತ ನೀತಿಗಳು ಇವಿಷ್ಟೇ ಅಲ್ಲ. ಇವುಗಳನ್ನೂ ಮೀರಿ ಸಮಾಜದ ಅಂತರ್ಗತ ಶಕ್ತಿಯಾಗಿ ಎಲ್ಲ ವರ್ಗಗಳ , ಎಲ್ಲ ಸ್ತರಗಳ, ಎಲ್ಲ ಜನಾಂಗಗಳ ಜನತೆಯನ್ನೂ ಒಳಗೊಂಡು, ಸರ್ವರ ಸಮಾನತೆ ಮತ್ತು ಏಳಿಗೆಯನ್ನು ಬಯಸುವ ವ್ಯವಸ್ಥೆ.

ಡಾ| ಬಿ.ಆರ್. ಅಂಬೇಡ್ಕರ್ ಸಂವಿಧಾನ ಹಾಗೂ ಇತಿಹಾಸ ತಿರುಚುವ ಹೊಸ ನೆರೆಟಿವ್‌ಗಳು | Sanmarga

 ಈ ದೃಷ್ಟಿಯಿಂದಲೇ ಅವರು ಸಮಾನತೆಯನ್ನೂ ಏಕಮುಖಿಯಾಗಿ ನೋಡದೆ, ಆರ್ಥಿಕ, ಸಾಮಾಜಿಕ,, ಸಾಂಸ್ಕೃತಿಕ ಸಮಾನತೆಗಳನ್ನು ರಾಜಕೀಯ ಪ್ರಜಾಪ್ರಭುತ್ವದ ಅಡಿಪಾಯಗಳು ಎಂದು ಪರಿಗಣಿಸುತ್ತಾರೆ.  ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಊರ್ಜಿತವಾಗಿರುವವರೆಗೂ ಈ ರೀತಿಯ ಸಮಾನತೆಯನ್ನು ಸಾಧಿಸಲಾಗುವುದಿಲ್ಲ ಎಂಬ ಕಾರಣದಿಂದಲೇ ಅಂಬೇಡ್ಕರ್‌ ಜಾತಿ ವಿನಾಶವನ್ನು ತಮ್ಮ ಪ್ರಧಾನ ಧ್ಯೇಯವಾಗಿ ಘೋಷಿಸುತ್ತಾರೆ.

ಮೂಲತಃ ಅಮೆರಿಕ ಮತ್ತು ಪಶ್ಚಿಮ ದೇಶಗಳ ಉದಾರವಾದಿ ತತ್ವಗಳಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್‌ , ಭಾರತ ಈಗ ಅಳವಡಿಸಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವವನ್ನೂ ಸಹ ಸಂಪೂರ್ಣವಾಗಿ ಒಪ್ಪುವುದಿಲ್ಲ. ವಾಸ್ತವವೆಂದರೆ ಸಂವಿಧಾನ ರಚನಾ ಮಂಡಲಿಯ ಚರ್ಚೆಗಳಲ್ಲಿ ಅಂಬೇಡ್ಕರ್‌ ಈ ಮಾದರಿಯನ್ನು ಕಟುವಾಗಿ ವಿಮರ್ಶಿಸುತ್ತಾರೆ. ಏಕೆಂದರೆ ಸಂಸದೀಯ ಪ್ರಜಾತಂತ್ರವು ಆರ್ಥಿಕ ಸಮಾನತೆಯನ್ನು ಪ್ರಧಾನವಾಗಿ ಪರಿಗಣಿಸುವುದಿಲ್ಲ.  ರಾಜಕೀಯ ಹಕ್ಕುಗಳು ಸಾಮಾಜಿಕ ಮತ್ತು ಆರ್ಥಿಕವಾಗಿಯೂ ವಿಸ್ತರಿಸಲ್ಪಟ್ಟರೂ, ಕಾರ್ಯತಃ ಇದು ಸಾಕಾರಗೊಳ್ಳುವುದಿಲ್ಲ ಎನ್ನುವುದನ್ನು ಅಂಬೇಡ್ಕರ್‌ ಅರಿತಿದ್ದರು.

Ambedkar: A jurist with no equals - Forward Press

 ಸಂಸದೀಯ ಪ್ರಜಾತಂತ್ರದಲ್ಲಿ ಆಳುವ ಮತ್ತು ಆಳಲ್ಪಡುವ ವರ್ಗಗಳು ಸದಾ ಪ್ರತ್ಯೇಕವಾಗಿಯೇ ಇದ್ದು, ಆಳುವ ವರ್ಗಗಳನ್ನು ಪ್ರತಿನಿಧಿಸುವವರು ಸದಾ ಆಳ್ವಿಕೆಯ ನಿಯಂತ್ರಣ ಹೊಂದಿರುತ್ತಾರೆ, ತನ್ಮೂಲಕ ಆಳಲ್ಪಡುವ ಜನಸಾಮಾನ್ಯರನ್ನು ನಿರಂತರ ಅಸಮಾನತೆಗಳ ನಡುವೆಯೇ ನಿರ್ವಹಿಸಲಾಗುತ್ತದೆ ಎನ್ನುವುದು ಅಂಬೇಡ್ಕರ್‌ ಅವರ ಬಲವಾದ ಆತಂಕವಾಗಿತ್ತು.

ಹಾಗಾಗಿಯೇ ಅವರು ಲಿಂಕನ್‌ ಅವರ ಜನರಿಂದ, ಜನರಿಗಾಗಿ ಎಂಬ ಪ್ರಮೇಯವನ್ನು ವಿರೋಧಿಸುತ್ತಾರೆ. ಹೆರಾಲ್ಡ್‌ ಲಾಸ್ಕಿ ಅವರ ಪ್ರಜಾಸತ್ತೆಯ ನೈತಿಕ ಮೌಲ್ಯಗಳ ತತ್ವವನ್ನು ಅನುಮೋದಿಸುವ ಅಂಬೇಡ್ಕರ್‌ , ಬ್ರಿಟನ್ನಿನ ರಾಜಕೀಯ ಚಿಂತಕ ಜಾರ್ಜ್‌ ಗ್ರೋಟ್‌ ಅವರ ಸಾಂವಿಧಾನಿಕ ನೈತಿಕತೆ (Constitutional Morality) ತತ್ವವನ್ನೂ ಬಲವಾಗಿ ಸಮರ್ಥಿಸುತ್ತಾರೆ. ಈ ದೃಷ್ಟಿಯಿಂದಲೇ ಜಾನ್‌  ಸ್ಟುವರ್ಟ್‌ ಮಿಲ್‌ ಅವರ “ ಯಾವುದೇ ಮಹಾನ್‌ ವ್ಯಕ್ತಿಯ ಪಾದದ ಬಳಿ ಜನರು ತಮ್ಮ ಸ್ವಾತಂತ್ರ್ಯವನ್ನು ಇರಿಸಬಾರದು, ಆತನಿಗೆ/ಆಕೆಗೆ ಪ್ರಜಾಸತ್ತೆಯ ಸಂಸ್ಥೆಗಳನ್ನು ಬುಡಮೇಲು ಮಾಡುವ ಅಧಿಕಾರಗಳನ್ನು ಕೊಡಬಾರದು ”  ಎಂಬ ಹೇಳಿಕೆಯನ್ನು ಅಂಬೇಡ್ಕರ್‌ ಪುನರುಚ್ಚರಿಸುತ್ತಾರೆ.

Abraham Lincoln - Wikipedia

 ಭಾರತೀಯ ಸಮಾಜದ ವೈಶಿಷ್ಟ್ಯಗಳು

 ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ, ಸಾಂಪ್ರದಾಯಿಕ ಧರ್ಮಗಳು ಮತ್ತು ಸಾಂಸ್ಕೃತಿಕವಾಗಿ ಬೇರೂರಿದ ಪ್ರಾಚೀನ ಆಚರಣೆಗಳ ದೃಷ್ಟಿಯಿಂದ ಅಂಬೇಡ್ಕರ್‌ ಪ್ರಜಾಪ್ರಭುತ್ವವನ್ನು ಮತ ನಿರಪೇಕ್ಷ ಅಥವಾ ಧರ್ಮ ನಿರಪೇಕ್ಷ (Secular) ತಳಹದಿಯ ಮೇಲೆ ಸ್ಥಾಪಿಸಲು ಇಚ್ಛಿಸುತ್ತಾರೆ.

ಧರ್ಮವನ್ನು ಸಾರಾಸಗಟಾಗಿ ವಿರೋಧಿಸದ ಅಂಬೇಡ್ಕರ್‌, ದೈವತ್ವದ ಕಲ್ಪನೆಯನ್ನು ನಿರಾಕರಿಸುವ ನಾಸ್ತಿಕವಾದವನ್ನೂ ಸಹ ಅನುಮೋದಿಸಲಿಲ್ಲ. ಬದಲಾಗಿ ಆಧ್ಯಾತ್ಮಿಕ ದೃಷ್ಟಿಕೋನದಿಂದ ಧರ್ಮವನ್ನು ವಿಶ್ಲೇಷಿಸಿ, ಧಾರ್ಮಿಕ ಆಚರಣೆಗಳಲ್ಲಿ ಇದ್ದಂತಹ ಮಾನವ ವಿರೋಧಿ ಲಕ್ಷಣಗಳು, ಸಮಾಜ ವಿಭಜಕ ಗುಣಗಳು ಮತ್ತು ಜನಾಂಗೀಯ ಪ್ರತ್ಯೇಕತೆಯ ಧೋರಣೆಗಳನ್ನು ವಿರೋಧಿಸುತ್ತಾರೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್‌ ಸರ್ವ ಸಮಾನತೆ ಮತ್ತು ಬಂಧುತ್ವವನ್ನು ಪ್ರತಿಪಾದಿಸುವ ಬೌದ್ಧ ಧಮ್ಮವನ್ನು ಅಂತಿಮವಾಗಿ ಆಯ್ಕೆ ಮಾಡಿ ಸ್ವತಃ ಬೌದ್ಧರಾಗುತ್ತಾರೆ.

 ಪ್ರಜಾಪ್ರಭುತ್ವದ ಸ್ಥಾಪನೆ ಮತ್ತು ಉಳಿವಿಗೆ ಅಂಬೇಡ್ಕರ್‌ ಹಲವು ನಿರ್ದೇಶನ ಸೂತ್ರಗಳನ್ನೂ ತಮ್ಮ ಭಾಷಣಗಳ ಮೂಲಕ, ಲೇಖನಗಳ ಮೂಲಕ ಮತ್ತು ಸಂವಿಧಾನದ ಮೂಲಕವೂ ಒದಗಿಸುತ್ತಾರೆ. ಬಹುಶಃ ವರ್ತಮಾನದ ಸನ್ನಿವೇಶದಲ್ಲಿ ನಾವು ಈ ನಿರ್ದೇಶನಗಳನ್ನು ಮರೆತು ಭಾವನಾತ್ಮಕವಾಗಿ ಸಂಭ್ರಮಿಸುತ್ತಿದ್ದೇವೆ.

Economic Freedom Under Indian Constitution: Beyond Lockean Libertarianism

ಅಂಬೇಡ್ಕರ್‌ ಪ್ರಪ್ರಥಮವಾಗಿ ಮೂರ್ತಿ ಪೂಜೆ ಅಥವಾ ಆರಾಧನಾ ಮನೋಭಾವವನ್ನು ತೊಡೆದುಹಾಕಲು ಕರೆ ನೀಡುತ್ತಾರೆ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಆರಾಧನಾ ಮನೋಭಾವ ಮತ್ತು ವ್ಯಕ್ತಿಪೂಜೆಯ ಲಕ್ಷಣಗಳನ್ನು ಹೋಗಲಾಡಿಸಲು ಕರೆ ನೀಡುತ್ತಾರೆ. ಪ್ರಜಾಪ್ರಭುತ್ವದ ಚೌಕಟ್ಟಿನೊಳಗೇ ವ್ಯಕ್ತಿ ಪೂಜೆ ಗಟ್ಟಿಯಾದರೆ ಅದು ಅಂತಿಮವಾಗಿ ಸರ್ವಾಧಿಕಾರ ಅಥವಾ ನಿರಂಕುಶಾಧಿಕಾರದಲ್ಲಿ ಪರ್ಯವಸಾನಗೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ಅಂಬೇಡ್ಕರ್‌ ನೀಡುತ್ತಾರೆ.

 ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳೂ ಸಮಾನವಾಗಿ ಇರುವಂತೆ, ಪ್ರಾತಿನಿಧಿಕ ಸಂರಚನೆಯಲ್ಲಿ ಎಲ್ಲ ಜನಪ್ರತಿನಿಧಿಗಳೂ ಸಮಾನರಾಗಿಯೇ ಕಾಣಬೇಕಾಗುತ್ತದೆ. ಈ ದೃಷ್ಟಿಯಿಂದಲೇ ಅಂಬೇಡ್ಕರ್‌, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ , ಶೋಷಣೆ ದಬ್ಬಾಳಿಕೆಗೆ ಈಡಾಗಿರುವ ದಲಿತರು ಮತ್ತು ಮಹಿಳೆಯರಿಗೆ ಸಮಾನಸ್ಥಾನಮಾನವನ್ನು ನೀಡಲು ಆಗ್ರಹಿಸುತ್ತಾರೆ. ಬಹುಶಃ ಲಿಂಗ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸಿ, ರಾಜಕೀಯವಾಗಿ ಅನುಸರಿಸಿದ ಮೊದಲ ನಾಯಕರಾಗಿ ಅಂಬೇಡ್ಕರ್‌ ಸ್ವಾತಂತ್ರ್ಯಪೂರ್ವ ಭಾರತದ ಪ್ರಥಮ ಸ್ತ್ರೀವಾದಿಯಾಗಿ ಕಾಣುತ್ತಾರೆ. ಈ ಸಮಾನತೆಗೆ ಅಡ್ಡಿಯಾಗುವ ಒಂದು ಸಂಸ್ಥೆ ಎಂದರೆ ಜಾತಿ.

Kannada Activist Gurudev Narayankumar Pod cast : ವಾಟಾಳ್ ನಾಗರಾಜ್ ಆ ಗುಟ್ಟನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ..

 ಜಾತಿ ವ್ಯವಸ್ಥೆಯ ತೊಡಕುಗಳು

 ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ಹಾದಿಯಲ್ಲಿ ಅತಿ ದೊಡ್ಡ ತೊಡಕಾಗಿ ಜಾತಿಯನ್ನು ಅಂಬೇಡ್ಕರ್‌ ಗುರುತಿಸುತ್ತಾರೆ.  ಏಕೆಂದರೆ ಭಾರತದ ಜಾತಿ ವ್ಯವಸ್ಥೆಯ ಮೂಲ ಇರುವುದು ವ್ಯಕ್ತಿಯ ಹುಟ್ಟಿನಲ್ಲಿ. ಹುಟ್ಟಿನಿಂದ ಪಡೆಯುವ ಸ್ಥಾನಮಾನ, ಶೈಕ್ಷಣಿಕ ಅವಕಾಶ, ಆರೋಗ್ಯ ಕಾಳಜಿ ಮತ್ತು ಆರ್ಥಿಕ ಸೌಕರ್ಯಗಳೇ ವ್ಯಕ್ತಿಯನ್ನು ತನ್ನ ಕೊನೆಯವರೆಗೂ ಆವರಿಸಿರುತ್ತದೆ.

ಸಾಂವಿಧಾನಿಕ ಉಪಕ್ರಮಗಳು ಮಾತ್ರ ಈ ತಾರತಮ್ಯಗಳನ್ನು ಹೋಗಲಾಡಿಸಲು ಸಾಧ್ಯ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಇಲ್ಲೇ ಎನ್ನುವುದನ್ನು ಅಂಬೇಡ್ಕರ್‌ ಗುರುತಿಸುತ್ತಾರೆ. ಹಾಗಾಗಿಯೇ ಅಂಬೇಡ್ಕರ್‌ ಭಾರತದ ಜಾತಿ ಸಮಾಜವನ್ನು ಮೆಟ್ಟಿಲುಗಳಿಲ್ಲದ ಬಹುಅಂತಸ್ತಿನ ಕಟ್ಟಡ ಎಂದು ಬಣ್ಣಿಸುತ್ತಾರೆ.  ರಾಜಕೀಯ ಸ್ವಾತಂತ್ರ್ಯ, ಸಾಂವಿಧಾನಿಕ ರಕ್ಷಣೆ ಇದ್ದರೂ ಸಹ ಇಂದಿಗೂ ಮೇಲ್ದರ್ಜೆಗೇರುವ ದಲಿತರು ಮತ್ತು ಮಹಿಳೆಯರು ಮೇಲ್ಜಾತಿಗಳಿಂದ ಕಿರುಕುಳಗಳನ್ನು ಎದುರಿಸುವುದನ್ನು ನೋಡುತ್ತಲೇ ಇದ್ದೇವೆ. ಈ ತಾರತಮ್ಯಗಳು ಕೊನೆಯಾಗದ ಹೊರತು ಭಾರತವನ್ನು ನಿಜವಾದ ಪ್ರಜಾಪ್ರಭುತ್ವ ಎಂದು ಪರಿಗಣಿಸಲಾಗುವುದಿಲ್ಲ. ಇದು ಅಂಬೇಡ್ಕರ್‌ ಅವರ ಮೂಲ ತಾತ್ವಿಕತೆಯೂ ಆಗಿತ್ತು.

Caste discrimination in India - iPleaders

 ಈ ಸಾಮಾಜಿಕ-ಆರ್ಥಿಕ ರಾಜಕೀಯ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ, ಆಳುವ ವರ್ಗಗಳನ್ನು ನಿಯಂತ್ರಣದಲ್ಲಿರಿಸುವ ಮಾರ್ಗಗಳೂ ಅಷ್ಟೇ ಅಗತ್ಯ ಎನ್ನುವುದನ್ನು ಅಂಬೇಡ್ಕರ್‌ ಅರಿತಿದ್ದರು. ಬಹುಪಕ್ಷೀಯ ಸಂಸದೀಯ ವ್ಯವಸ್ಥೆ ಮತ್ತು ಸಾರ್ವತ್ರಿಕ ಮತದಾನ ಈ ನಿಟ್ಟಿನಲ್ಲಿ ಪ್ರಮುಖವಾದ ಹೆಜ್ಜೆಗಳಾಗಿದ್ದವು. ರಾಜಕೀಯ ಪಕ್ಷಗಳು ಹೆಚ್ಚಾದಷ್ಟೂ ಜನಸಾಮಾನ್ಯರ ವೈವಿಧ್ಯಮಯ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಸಾಧ್ಯ ಎನ್ನುವುದು ಅವರ ನಂಬಿಕೆಯಾಗಿತ್ತು.

ಈ ಬಹುರೂಪಿ ಪಕ್ಷಗಳ ಸಾಂವಿಧಾನಿಕ ಬದ್ಧತೆಯೇ ಪ್ರಜಾಸತ್ತೆಯನ್ನು ಕಾಪಾಡುತ್ತದೆ ಎನ್ನುವ ಸೂಕ್ಷ್ಮವನ್ನೂ ಅಂಬೇಡ್ಕರ್‌ ಅರಿತಿದ್ದರು. ಈ ದೃಷ್ಟಿಯಿಂದಲೇ ಶಾಸನ ಸಭೆಗಳಲ್ಲಿ ಪ್ರಬಲವಾದ ವಿರೋಧ ಪಕ್ಷವನ್ನು ಅಂಬೇಡ್ಕರ್‌ ಅಪೇಕ್ಷಿಸಿದ್ದರು. ಆಳುವ ಸರ್ಕಾರಗಳ ತಪ್ಪು ಒಪ್ಪುಗಳನ್ನು ಎತ್ತಿ ತೋರಿಸಿ, ಜನತೆಯ ನಡುವೆ, ಉತ್ತಮ ಆಳ್ವಿಕೆಯ ಜಾಗೃತಿ ಮೂಡಿಸುವ ನೈತಿಕ ಜವಾಬ್ದಾರಿ ವಿರೋಧ ಪಕ್ಷಗಳಿಗೆ ಇರಬೇಕು ಎನ್ನುವುದು ಅವರ ಅಪೇಕ್ಷೆಯಾಗಿತ್ತು. (ಎಷ್ಟರ ಮಟ್ಟಿಗೆ ಇದೆ ಎನ್ನುವುದು ಚರ್ಚಾಸ್ಪದ ವಿಚಾರ, ಈ ಸಂದರ್ಭದ ವ್ಯಾಪ್ತಿಗೆ ಹೊರತಾದದ್ದು.)

 ಈ ದೃಷ್ಟಿಯಿಂದಲೇ ಅಂಬೇಡ್ಕರ್‌ ತಾವೇ ಮುಂಚೂಣಿಯಲ್ಲಿದ್ದು ರಚಿಸಿದ ಸಂವಿಧಾನವನ್ನೂ ಸಹ ಕೆಲವು ಷರತ್ತುಗಳನ್ನು ಇಟ್ಟುಕೊಂಡೇ ಪರಾಮರ್ಶಿಸಿದ್ದರು.  ಉತ್ತಮ ಸಂವಿಧಾನವನ್ನು ರಚಿಸುವುದರಿಂದಲೇ ಪ್ರಜಾಪ್ರಭುತ್ವದ ಧ್ಯೇಯಗಳೆಲ್ಲವನ್ನೂ ಸಾಧಿಸಲಾಗುವುದಿಲ್ಲ, ಸಂವಿಧಾನದ ನಿಯಮಗಳನ್ನು ನಿಷ್ಠೆಯಿಂದ ಅನುಷ್ಟಾನಗೊಳಿಸುವುದು ಮುಖ್ಯವಾಗುತ್ತದೆ ಎಂದು ನಂಬಿದ್ದರು. ಸಂವಿಧಾನವನ್ನು ನಿರ್ವಹಿಸುವ ಮತ್ತು ಜಾರಿಗೊಳಿಸುವ ಚುನಾಯಿತ ರಾಜಕೀಯ ಪಕ್ಷ ಅಥವಾ ಕೂಟ, ಪ್ರಜಾಸತ್ತಾತ್ಮಕ ಮಾರ್ಗಕ್ಕೆ ವಿಮುಖವಾದಾಗ, ಸಂವಿಧಾನ ಅಸಹಾಯಕವಾಗುತ್ತದೆ, ನಿಷ್ಪ್ರಯೋಜಕವಾಗುತ್ತದೆ ಎಂಬ ವಾಸ್ತವವನ್ನು ಅಂಬೇಡ್ಕರ್‌ ಅರಿತಿದ್ದರು. (ಇಂದು ಭಾರತ ಇದೇ ಆತಂಕವನ್ನು ಎದುರಿಸುತ್ತಿದೆ )

 ಆರ್ಥಿಕ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಶಿಕ್ಷಣ, ಸಾಮಾಜಿಕ-ಸಾಂಸ್ಕೃತಿಕ ಸಮಾನತೆಗಾಗಿ ಜಾತ್ಯತೀತತೆ ಮತ್ತು ರಾಜಕೀಯ ಸಮಾನತೆಗಾಗಿ ಸಮಾನ ಮತ ಮೌಲ್ಯದ ಮತದಾನ ವ್ಯವಸ್ಥೆ, ಈ ಮೂರು ತತ್ವಗಳನ್ನು ಅಂಬೇಡ್ಕರ್‌ ಪ್ರಜಾಪ್ರಭುತ್ವದ ಅಡಿಪಾಯ ಎಂದೇ ಪರಿಗಣಿಸಿದ್ದರು.

Karl Marx - Simple English Wikipedia, the free encyclopedia

ಈ ಕಲ್ಪನೆಯಲ್ಲೇ ಮೂಲಭೂತ ಹಕ್ಕುಗಳು ಮತ್ತು ಅಲ್ಪಸಂಖ್ಯಾತ ಹಕ್ಕುಗಳಿಗೆ ಅಂಬೇಡ್ಕರ್‌ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು.  ಅವರ ಸಮಾಜವಾದಿ ಆರ್ಥಿಕತೆಯ ಕಲ್ಪನೆಯೂ ಸಹ ಈ ದಿಕ್ಕಿನಲ್ಲೇ ರೂಪುಗೊಂಡಿತ್ತು. ವರ್ಗ ಸಂಘರ್ಷವನ್ನು ಮಾರ್ಕ್ಸ್‌ವಾದದ ಮಾದರಿಯಲ್ಲಿ ವಿಶ್ಲೇಷಿಸದೆ ಇದ್ದರೂ, ಸಮಾಜವಾದದ ಅನುಸರಣೆಯಲ್ಲಿ ಉತ್ಪಾದನಾ ಸಂಬಂಧಗಳನ್ನು ಪರಿಗಣಿಸದೆ ಇದ್ದರೂ, ಜಾತಿ ವಿನಾಶವನ್ನು ಜನಾಂದೋಲನದ ದೃಷ್ಟಿಯಿಂದ ನೋಡದೆ ಇದ್ದರೂ  ವರ್ಗ ರಹಿತ, ಜಾತಿ ರಹಿತ ಸಮಾಜದ ಅಂಬೇಡ್ಕರ್‌ ಅವರ ಕಲ್ಪನೆಯನ್ನು ಕಾಲ್ಪನಿಕ (Utopian) ಎಂದು ಹೇಳಲಾಗುವುದಿಲ್ಲ.

 ಸೈದ್ಧಾಂತಿಕ ಇತಿಮಿತಿಗಳು

 ಏಕೆಂದರೆ ಮೂಲತಃ ಅಂಬೇಡ್ಕರ್‌ ಅವರ ಸೈದ್ಧಾಂತಿಕ ಮಿತಿ ಉದಾರವಾದಿ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿತ್ತು. ಅವರನ್ನು ಪ್ರಭಾವಿಸಿದ ಜಾನ್‌ ಡೇವಿ, ಸ್ಟುವರ್ಟ್‌ ಮಿಲ್‌ ಮೊದಲಾದ ಚಿಂತಕರು ಪ್ರತಿಪಾದಿಸಿದ ಪ್ರಜಾಪ್ರಭುತ್ವೀಯ ಮೌಲ್ಯಗಳನ್ನೇ ಅಂಬೇಡ್ಕರ್‌ ಭಾರತದ ಸಂದರ್ಭಕ್ಕೆ ಅಳವಡಿಸಿದ್ದರು. ಬಹುಶಃ ಅವರು ವ್ಯಾಸಂಗ ನಡೆಸಿದ ಪಶ್ಚಿಮ ರಾಷ್ಟ್ರಗಳ ಸೈದ್ಧಾಂತಿಕ ಚಿಂತನಾ ವಾಹಿನಿಗಳು ಅವರಲ್ಲಿ ಆಳವಾಗಿ ಬೇರೂರಿದ್ದವು. ಯೂರೋಪಿನ ಮಾರ್ಕ್ಸ್‌, ಹೆಗೆಲ್‌,ಲೆನಿನ್ ಮೊದಲಾದವರ ಆಲೋಚನಾ ಲಹರಿ ಅವರನ್ನು ಹೆಚ್ಚು ಪ್ರಭಾವಿಸಿರಲಿಲ್ಲ.  ಇದನ್ನು ಕೊರತೆ ಎನ್ನಲಾಗುವುದಿಲ್ಲ, ಸೈದ್ದಾಂತಿಕ ನೆಲೆಯಲ್ಲಿ ಅಂಬೇಡ್ಕರ್‌ ಅವರ ತಾತ್ವಿಕತೆಯ ಇತಿಮಿತಿಗಳನ್ನು ವಿಶ್ಲೇಷಿಸುವಾಗ ಈ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

Research Integrity and Ethics

ವರ್ತಮಾನದ ಭಾರತಕ್ಕೆ ಅಂಬೇಡ್ಕರ್‌ ಮತ್ತು ಅವರು ಪ್ರತಿಪಾದಿಸಿದ ಸಾಂವಿಧಾನಿಕ ಪ್ರಜಾಪ್ರಭುತ್ವ ಹೆಚ್ಚು ಪ್ರಸ್ತುತ ಎನ್ನುವುದು ನಿರ್ವಿವಾದ ಅಂಶ. ಆದರೆ ಮಾರ್ಕ್ಸ್‌ವಾದವನ್ನು ಕುರಿತ ಅವರ ಆಕ್ಷೇಪ, ವಿರೋಧಗಳು ಏನೇ ಇದ್ದರೂ ಅದು ಆಚರಣೆಯ ಚೌಕಟ್ಟಿನಲ್ಲಿತ್ತು. ಸೈದ್ಧಾಂತಿಕವಾಗಿಯೂ ಸಹ ಗಂಭೀರವಾದ  ಭಿನ್ನಾಭಿಪ್ರಾಯಗಳಿದ್ದವು. ಈ ಚಾರಿತ್ರಿಕ ಭಿನ್ನ ಮತ ವರ್ತಮಾನದ ರಾಜಕಾರಣವನ್ನು ವಿಭಜಿಸಬೇಕಿಲ್ಲ. ಮಾರ್ಕ್ಸ್‌ ಮತ್ತು ಅಂಬೇಡ್ಕರ್‌ ಆಲೋಚನಾ ಕ್ರಮಗಳ ಅನುಸಂಧಾನ ನಡೆಸುವ ಮೂಲಕ, ಭವಿಷ್ಯದ ಭಾರತಕ್ಕೆ ಅಗತ್ಯವಾದ ಪ್ರಜಾಪ್ರಭುತ್ವ ಮತ್ತು ಸಮತಾವಾದದ ಕನಸನ್ನು ನನಸು ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಇದಕ್ಕೆ ಅಡ್ಡಿಯಾಗುವುದು ನಮ್ಮ ಆಲೋಚನಾ ವಿಧಾನಗಳೇ ಹೊರತು, ಈ ದಾರ್ಶನಿಕರ ಚಿಂತನಾಧಾರೆ ಅಲ್ಲ.

 

 

Tags: Abraham Linkonamerican presidentDemocracyDr B R AmbedkarElection SystemequalityFrench RevolutionPratidhvanisocial Justice
Previous Post

ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಿ : ಗುಲಾಬಿ ಹೂ ನೀಡಿ ಮಧು ಬಂಗಾರಪ್ಪ ವಿಶ್..!

Next Post

BREAKING NEWS : ಕೋಗಿಲು ನಿರಾಶಿತರಿಗೆ‌ ಸರ್ಕಾರದಿಂದ ಯುಗಾದಿ, ರಂಜಾನ್‌ ಗಿಫ್ಟ್..!

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 21, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
Next Post
BREAKING NEWS : ಕೋಗಿಲು ನಿರಾಶಿತರಿಗೆ‌ ಸರ್ಕಾರದಿಂದ ಯುಗಾದಿ, ರಂಜಾನ್‌ ಗಿಫ್ಟ್..!

BREAKING NEWS : ಕೋಗಿಲು ನಿರಾಶಿತರಿಗೆ‌ ಸರ್ಕಾರದಿಂದ ಯುಗಾದಿ, ರಂಜಾನ್‌ ಗಿಫ್ಟ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada