ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..
ಭಾಗ 1
1947ರಲ್ಲಿ ಬ್ರಿಟೀಷ್ ವಸಾಹತುಶಾಹಿಯಿಂದ ವಿಮೋಚನೆ ಪಡೆಯುವ ಸಂದರ್ಭದಲ್ಲಿ ದೇಶದ ರಾಜಕೀಯ ವಿಶ್ಲೇಷಕರನ್ನು ಮತ್ತು ನಾಯಕರನ್ನು ಕಾಡುತ್ತಿದ್ದ ಬಹುಮುಖ್ಯ ಪ್ರಶ್ನೆ ʼ ಸ್ವತಂತ್ರ ಭಾರತದ ಪ್ರಭುತ್ವ ʼ ಮತ್ತು ಅದರ ಸ್ವರೂಪ, ಲಕ್ಷಣಗಳು, ಅಧಿಕಾರ ವ್ಯಾಪ್ತಿ ಹಾಗೂ ಸಾಂವಿಧಾನಿಕ ಚೌಕಟ್ಟು. ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಬಿ.ಅರ್. ಅಂಬೇಡ್ಕರ್ ಮತ್ತಿತರರು ಪ್ರಭುತ್ವದ ಆದ್ಯತೆ, ಬಾಧ್ಯತೆ ಮತ್ತು ಆಯ್ಕೆಗಳನ್ನು ಸಾಂವಿಧಾನಿಕ ನೆಲೆಯಲ್ಲಿ ನಿರ್ವಚಿಸುವಾಗ, ಅವರ ಮುಂದಿದ್ದ ಮಾದರಿ ಬ್ರಿಟೀಷ್ ಪ್ರಭುತ್ವ. ವಿವಿಧ ದೇಶಗಳ ಪ್ರಭುತ್ವ ಲಕ್ಷಣಗಳನ್ನು ಬಿ.ಎನ್ ರಾವ್, ಅಂಬೇಡ್ಕರ್ ಮುಂತಾದವರು ಅಧ್ಯಯನ ಮಾಡಿದ್ದರೂ ಸಹ, ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದ ಭಾರತಕ್ಕೆ ವಿಶಿಷ್ಟ ಲಕ್ಷಣಗಳ ʼ ಪ್ರಭುತ್ವ ʼ (State) ಚಾರಿತ್ರಿಕ ಅಗತ್ಯತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಮಕಾಲೀನ ಭಾರತದ ಪ್ರಭುತ್ವವನ್ನು ವಿಶ್ಲೇಷಿಸಿ ಅರ್ಥಮಾಡಿಕೊಳ್ಳಬೇಕಿದೆ.

ಆಧುನಿಕ ಜಗತ್ತು ಹೊಸ ಆಡಳಿತ ಮಾದರಿಗಳನ್ನು ಅಳವಡಿಸಿಕೊಂಡಂತೆಲ್ಲಾ ಪ್ರಭುತ್ವ ಎಂಬ ಆಳುವ ಮಾದರಿಯೂ ಸಹ ಮರುನಿರ್ವಚನೆಯಾಗುತ್ತಲೇ ಬಂದಿದೆ. ರಾಜಪ್ರಭುತ್ವ, ಊಳಿಗಮಾನ್ಯ ಪ್ರಭುತ್ವ, ಪ್ರಜಾಸತ್ತಾತ್ಮಕ ಪ್ರಭುತ್ವ (Democratic State) ಮತ್ತು ಆಧುನಿಕ ಪ್ರಭುತ್ವ (Modern State) ಇವೆಲ್ಲವೂ ಕಾಲಕಾಲಕ್ಕೆ ಮರುಪರಿಷ್ಕರಣೆಯಾದ ಮಾದರಿಗಳು. ಈ ಎಲ್ಲ ಚಾರಿತ್ರಿಕ ಅಂಶಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ ನಂತರವೇ ಭಾರತದ ಸಂವಿಧಾನವು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಸೂಕ್ತವಾದಂತಹ ʼ ಪ್ರಭುತ್ವ ʼ ವನ್ನು ರೂಪಿಸಿತ್ತು. ಹಾಗಾಗಿಯೇ ಸ್ವತಂತ್ರ ಭಾರತವನ್ನು Union of States (ರಾಜ್ಯಗಳ ಒಕ್ಕೂಟ) ಎಂದೇ ಸಂವಿಧಾನವೂ ನಿರ್ವಚಿಸುತ್ತದೆ.
ಪ್ರಭುತ್ವದ ಸ್ವರೂಪ-ಲಕ್ಷಣಗಳು
State ಅಥವಾ ಪ್ರಭುತ್ವ ಎಂಬ ಕಲ್ಪನೆ ವಿಭಿನ್ನ ಕಾಲಘಟ್ಟಗಳಲ್ಲಿ ಹಲವಾರು ರಾಜಕೀಯ ಚಿಂತಕರಿಂದ, ವಿಶ್ಲೇಷಕರಿಂದ, ತತ್ವಶಾಸ್ತ್ರಜ್ಞರಿಂದ, ಅರ್ಥಶಾಸ್ತ್ರಜ್ಞರಿಂದಲೂ ಸಹ ಭಿನ್ನ ಆಯಾಮಗಳಲ್ಲಿ ನಿರ್ವಚಿಸಲ್ಪಟ್ಟಿದೆ. ಎಲ್ಲ ವ್ಯಾಖ್ಯಾನಗಳ ಮೂಲ ಧಾತು ಒಂದೇ ಆಗಿದ್ದು “ ಪ್ರಭುತ್ವವನ್ನು ಒಂದು ಸಂಘಟಿತ ಸಂಸ್ಥೆಯಾಗಿ ಪರಿಗಣಿಸಲಾಗುತ್ತದೆ. ಈ ಸಂಸ್ಥೆಯು ನಿಗದಿತ-ನಿರ್ದಿಷ್ಟ ಭೂ ಪ್ರದೇಶ ಮತ್ತು ಜನಸಂಖ್ಯೆಯ ಮೇಲೆ ಸಾರ್ವಭೌಮ ಅಧಿಕಾರ ಸ್ಥಾಪಿಸುತ್ತದೆ. ಈ ನ್ಯಾಯಯುತವಾದ ಅಧಿಕಾರ ವ್ಯಾಪ್ತಿಯಲ್ಲೇ ಕಾನೂನುಗಳನ್ನು ರೂಪಿಸಿ, ಜಾರಿಗೊಳಿಸಿ, ಅನುಷ್ಠಾನಗೊಳಿಸಿ ಮರುವ್ಯಾಖ್ಯಾನವನ್ನೂ ಮಾಡುತ್ತಿರುತ್ತದೆ ” ರಾಜ್ಯಶಾಸ್ತ್ರದ ಪರಿಭಾಷೆಯಲ್ಲಿ ʼ ಪ್ರಭುತ್ವ ʼವನ್ನು ಸಾಂಸ್ಥಿಕ ಸಂರಚನೆಯಾಗಿ ಗುರುತಿಸಲಾಗುತ್ತದೆ. ಈ ಸಂಸ್ಥೆಯು ಜನಸಂಖ್ಯೆಯನ್ನು ಕಾನೂನುಗಳ ಮೂಲಕ, ಆಡಳಿತದ ಮುಖಾಂತರ, ಬಲವಂತದ ಹೇರಿಕೆಗೂ ಮುಂದಾಗುತ್ತಾ, ಸಾರ್ವಜನಿಕರಿಗೆ ಅವಶ್ಯವಾದ ಸೌಕರ್ಯಗಳನ್ನು ಒದಗಿಸುತ್ತಿರುತ್ತದೆ. ಹಾಗೆಯೇ ಕಾನೂನು ಸುವ್ಯವಸ್ಥೆಯನ್ನೂ ಕಾಪಾಡುವ ಜವಾಬ್ದಾರಿ ಹೊತ್ತಿರುತ್ತದೆ.
ಜಾನ್ ಲಾಕ್ ಪ್ರಭುತ್ವವನ್ನು “ ಜನರ ಸ್ವಾಭಾವಿಕ ಹಕ್ಕುಗಳಾದ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಆಸ್ತಿಯ ಹಕ್ಕನ್ನು ರಕ್ಷಿಸುವ ಸಲುವಾಗಿ ಸಮ್ಮತಿಯೊಂದಿಗೆ ಸ್ಥಾಪಿಸಲಾದ ರಾಜಕೀಯ ಅಧಿಕಾರ” ಎಂದು ನಿರ್ವಚಿಸುತ್ತಾನೆ. ಜೇನ್ ಜಾಕ್ಸ್ ರೂಸೋ “ ಜನತೆಯ ಸಾಮಾನ್ಯ ಇಚ್ಛೆಯನ್ನು ಅಭಿವ್ಯಕ್ತಿಸುವ ಒಂದು ಸಾಮಾಜಿಕ ಒಪ್ಪಂದದ ಮೂಲಕ ರಚಿಸಲಾದ ನೈತಿಕ-ಸಾಮೂಹಿಕ ಸಂಸ್ಥೆ ” ಎಂದು ವ್ಯಾಖ್ಯಾನಿಸುತ್ತಾನೆ. ಹಾಬ್ಸ್ ಪ್ರಭುತ್ವವನ್ನು “ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ವ್ಯಕ್ತಿಗಳ ನಡುವಿನ ಸಾಮಾಜಿಕ ಒಪ್ಪಂದವು ಸೃಷ್ಟಿಸುವ ಸಂಪೂರ್ಣ ಸಾರ್ವಭೌಮ ಅಧಿಕಾರ ” ಎಂದು ನಿರ್ವಚಿಸುತ್ತಾನೆ. ಕಾರ್ಲ್ ಮಾರ್ಕ್ಸ್ ಪ್ರಭುತ್ವವನ್ನು “ ಆಳುವ ವರ್ಗಗಳು ತಮ್ಮ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ವರ್ಗ ಪ್ರಾಬಲ್ಯವನ್ನು ಸ್ಥಾಪಿಸುವ ಒಂದು ಸಾಧನ” ಎಂದು ವ್ಯಾಖ್ಯಾನಿಸುತ್ತಾನೆ.
ಈ ವಿಭಿನ್ನ ವ್ಯಾಖ್ಯಾನಗಳ ನಡುವೆ ಆಧುನಿಕ ಪ್ರಭುತ್ವ (Modern State) ಕಲ್ಪನೆ ಹೊರಹೊಮ್ಮಿದ್ದು 16-17ನೆಯ ಶತಮಾನಗಳಲ್ಲಿ. ಪ್ರಭುತ್ವವನ್ನು ದೇಶಗಳ ಆಂತರಿಕ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ರಧಾನ ಭೂಮಿಕೆ ವಹಿಸುವ ಒಂದು ಕ್ರೊಢೀಕೃತ ಕಲ್ಪನೆಯಾಗಿ ಜಾರಿಗೊಳಿಸಲಾಯಿತು. 1933ರಲ್ಲಿ ಮಾಂಟೆಡೇವಿಯೋದಲ್ಲಿ ನಡೆದ ಪ್ರಭುತ್ವದ ಹಕ್ಕು ಮತ್ತು ಕರ್ತವ್ಯಗಳ ಸಮಾವೇಶದಲ್ಲಿ ಪ್ರಭುತ್ವವನ್ನು ಹೀಗೆ ನಿರ್ವಚಿಸಲಾಗಿತ್ತು.
- ನಿರ್ದಿಷ್ಟ ನಿಗದಿತ ಗಡಿಗಳನ್ನು ಹೊಂದಿರುವ ಭೌಗೋಳಿಕ ಪ್ರದೇಶ
- ಶಾಶ್ವತವಾಗಿ ನೆಲೆಸುವಂತಹ ಒಂದು ಜನಸಂಖ್ಯೆ
- ಆಡಳಿತವನ್ನು ನಿರ್ವಹಿಸುವ, ಕಾನೂನುಗಳನ್ನು ಜಾರಿಗೊಳಿಸುವ ಪರಿಣಾಮಕಾರಿ ಸರ್ಕಾರ
- ಸಾರ್ವಭೌಮತ್ವ – ಆಂತರಿಕವಾಗಿ, ಬಾಹ್ಯ ರೂಪದಲ್ಲಿ ಇತರ ಪ್ರಭುತ್ವ-ರಾಜ್ಯಗಳೊಡನೆ, ಸರ್ವೋಚ್ಛ ಶಕ್ತಿಗಳೊಡನೆ ಸಂಬಂಧ ಬೆಳೆಸುವ ಸಾಮರ್ಥ್ಯ.
ಸಾಮಾನ್ಯವಾಗಿ ಪ್ರಭುತ್ವ ಮತ್ತು ಸರ್ಕಾರ ಒಂದೇ ಎಂದು ಭಾವಿಸಲಾಗುತ್ತದೆ. ಆದರೆ ಎರಡರ ನಡುವೆ ವ್ಯತ್ಯಾಸಗಳಿರುತ್ತವೆ.

| ಪ್ರಭುತ್ವ | ಸರ್ಕಾರ |
| ಶಾಶ್ವತ ರಾಜಕೀಯ ಸಂಸ್ಥೆ | ತಾತ್ಕಾಲಿಕ ರಾಜಕೀಯ ಅಧಿಕಾರ |
| ಅಮೂರ್ತ – ಶಾಸನಾತ್ಮಕ ಸಂಸ್ಥೆ | ಮೂರ್ತ-ವಾಸ್ತವಿಕ ಕ್ರಿಯಾತ್ಮಕ ಸಂಸ್ಥೆ |
| ಜನಸಂಖ್ಯೆ, ಭೂಪ್ರದೇಶ, ಸರ್ಕಾರ ಸಾರ್ವಭೌಮತ್ವ | ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ |
| ಸಾರ್ವಭೌಮ ಅಧಿಕಾರ | ಪ್ರಭುತ್ವದ ಪರವಾಗಿ ಅಧಿಕಾರ ನಡೆಸುತ್ತದೆ |
| ಭಾರತ | ಕೇಂದ್ರ ಸರ್ಕಾರ |
ಸ್ವತಂತ್ರ ಭಾರತದ ಪ್ರಭುತ್ವ (State)
ಮಾರಿಸ್-ಜೋನ್ಸ್ ಅವರ ಅಭಿಪ್ರಾಯದಲ್ಲಿ ಭಾರತೀಯ ಪ್ರಭುತ್ವದ ಪ್ರಧಾನ ಸಂಸ್ಥೆಗಳೆಲ್ಲವೂ ಬ್ರಿಟೀಷ್ ಆಳ್ವಿಕೆಯಲ್ಲೇ ಸ್ಥಾಪಿಸಲಾಗಿದ್ದವು. ರುಡೋಲ್ಫ್ ಮತ್ತು ರುಡೋಲ್ಫ್ ಅವರು ಭಾರತದ ಪ್ರಭುತ್ವವನ್ನು ಎರಡು ಆಯಾಮಗಳಲ್ಲಿ ನಿಷ್ಕರ್ಷೆ ಮಾಡುತ್ತಾರೆ. ಮೊದಲನೆಯದು ಬೇಡಿಕೆಯಾಧಾರಿತ ರಾಜಕೀಯ , ಎರಡನೆಯದು ಆಜ್ಞೆಯಾಧಾರಿತ ರಾಜಕೀಯ. ಬೇಡಿಕೆಯಾಧಾರಿತ ಪ್ರಭುತ್ವದಲ್ಲಿ ಸಾಮಾಜಿಕ ಒತ್ತಡಗಳಿಗೆ ಅನುಸಾರವಾಗಿ ಆಡಳಿತ ನಡೆಯುತ್ತದೆ. ಆಜ್ಞಾಧಾರಿತ ಆಳ್ವಿಕೆಯಲ್ಲಿ ಪ್ರಭುತ್ವ ಸಮಾಜದ ಮೇಲೆ ಆಧಿಪತ್ಯ ಸಾಧಿಸುತ್ತದೆ. ಭಾರತ ಆರಂಭದಿಂದಲೂ ಈ ಎರಡೂ ಮಾದರಿಗಳನ್ನು ಅದಲುಬದಲು ಮಾಡುತ್ತಲೇ ಬಂದಿದೆ ಎಂದು ಇವರು ಹೇಳುತ್ತಾರೆ.
ಸ್ವಾತಂತ್ರ್ಯಾನಂತರದಲ್ಲಿ ಭಾರತದ ಪ್ರಭುತ್ವ ಎರಡು ಅಂತರ್ ಸಂಬಂಧಿತ ಸಾಂಸ್ಥಿಕ ಚೌಕಟ್ಟುಗಳ ಮೂಲಕ ಆಳ್ವಿಕೆ ನಡೆಸಿರುವುದನ್ನು ಫ್ರಾನ್ಸೀನ್ ಫ್ರಾಂಕೆಲ್ ಮತ್ತು ಎಮ್ ಎಸ್ ಎ ರಾವ್ ನಿರೂಪಿಸುತ್ತಾರೆ. ಮೊದಲನೆಯದು ಅಧಿಕಾರಾಶಾಹಿ, ನ್ಯಾಯಾಂಗ, ಪೊಲೀಸ್, ಸಾರ್ವಜನಿಕ ಉದ್ದಿಮೆಗಳು, ನೀತಿ ಯೋಜನಾ ಸಂಸ್ಥೆಗಳು (Planning bodies) ಹಾಗೂ ಸಂಘಟಿತ ಕೈಗಾರಿಕೆಗಳನ್ನೊಳಗೊಂಡ ಸಾರ್ವಜನಿಕ ಸಾಂಸ್ಥಿಕ ವಲಯ. ಎರಡನೆಯದು ಶಾಸಕಾಂಗ, ರಾಜಕೀಯ ಪಕ್ಷಗಳು, ಚುನಾವಣಾ ಸಂಸ್ಥೆಗಳ, ಸಚಿವ ಸಂಪುಟ ಮತ್ತು ಶಾಸಕ-ಸಂಸದ-ಸಚಿವರನ್ನೊಳಗೊಂಡ ರಾಜಕೀಯ ಸಾಂಸ್ಥಿಕ ವಲಯ. ಇದು ಭಾರತದಲ್ಲಿ ದ್ವಿ ರಚನೆಯ (Dual Structure) ಪ್ರಭುತ್ವವನ್ನು ರೂಪಿಸಿರುವುದನ್ನು ಆರಂಭದಿಂದಲೂ ಗಮನಿಸಬಹುದು.

ಭಾರತೀಯ ಪ್ರಭುತ್ವ ವಿವಿಧ ಕಾಲಘಟ್ಟಗಳಲ್ಲಿ
ಚಾರಿತ್ರಿಕವಾಗಿ ನೋಡಿದಾಗ ಭಾರತದ ಪ್ರಭುತ್ವವನ್ನು ಒಂದು ಸಂಕೀರ್ಣವಾದ, ಪ್ರವರ್ಧಮಾನಕ್ಕೆ ಬರುತ್ತಿರುವ ರಾಜಕೀಯ ಸಂಸ್ಥೆಯಾಗಿ ಗುರುತಿಸಬಹುದು. ವಸಾಹತು ಯುಗದ ಅಧಿಕಾರಶಾಹಿ ಸಂರಚನೆಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಪ್ರಜಾಪ್ರಭುತ್ವೀಯ ಸಾಂವಿಧಾನಿಕತೆಯನ್ನು (Democratic Consitutionalism) ಅಳವಡಿಸಿಕೊಂಡು, ಬದಲಾಗುತ್ತಿರುವ ಆರ್ಥಿಕ ಶಕ್ತಿ ಕೇಂದ್ರಗಳನ್ನು ಹಾಗೂ ಸಾಮಾಜಿಕ ವೈವಿಧ್ಯತೆಗಳನ್ನು ಸರಿದೂಗಿಸುತ್ತಾ ಬಂದಿರುವ ಒಂದು ಸಂಸ್ಥೆಯಾಗಿ ಭಾರತದ ಪ್ರಭುತ್ವ ಕಾಣುತ್ತದೆ. ನಾಗರಿಕ ಮತ್ತು ರಾಜಕೀಯ ಸಮಾಜಗಳನ್ನು ಸಮಾನಾಂತರವಾಗಿ ನಿರ್ವಹಿಸುವ ಭಾರತೀಯ ಪ್ರಭುತ್ವವು ಆಳ್ವಿಕೆಯ ಚೌಕಟ್ಟಿನಲ್ಲಿ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುತ್ತಲೇ, ಆಜ್ಞಾಪಾಲಕ ಸಮಾಜವನ್ನು ರೂಪಿಸುವುದಕ್ಕೂ ಪ್ರಯತ್ನಿಸುತ್ತಿರುತ್ತದೆ.
ಸಮಕಾಲೀನ ಭಾರತದಲ್ಲಿ ಪ್ರಭುತ್ವವನ್ನು ವ್ಯಾಖ್ಯಾನಿಸುವಾಗ ಮೂರು ಹಂತಗಳನ್ನು ಗುರುತಿಸಬಹುದು. 1947 ರಿಂದ 1991ರವರೆಗಿನ ಅಭಿವೃದ್ಧಿ ಪೂರಕ ಸೆಕ್ಯುಲರ್ ಪ್ರಭುತ್ವ. 1991-2014ರವರೆಗಿನ ಉದಾರವಾದಿ ನೀತಿಯ ಮಾರುಕಟ್ಟೆ ಆಧಾರಿತ ಆಳ್ವಿಕೆ. 2014ರ ನಂತರದಲ್ಲಿ ಬಹುಸಂಖ್ಯಾವಾದದ ಆಳ್ವಿಕೆ (Majoritarian governance)̤
ಮೊದಲ ಹಂತ 1947-91
ಸ್ವಾತಂತ್ರ್ಯಾನಂತರ ಭಾರತ ಎದುರಿಸಿದ ಸವಾಲುಗಳು ಬಹುಆಯಾಮ ಹೊಂದಿದ್ದವು. ವ್ಯಾಪಕವಾಗಿದ್ದ ಬಡತನ, ದಾರಿದ್ರ್ಯತೆ, ಅನಕ್ಷರತೆ, ಕಳಪೆ ಸ್ಥಿತಿಗತಿಗಳ ಬದುಕು,ಅತ್ಯಂತ ಕಡಿಮೆ ಸಾಕ್ಷರತೆ, ಕನಿಷ್ಠ ಮಟ್ಟದ ಕೈಗಾರಿಕೀಕರಣ, ತಳಮಟ್ಟದ ಆರ್ಥಿಕ ಅಭಿವೃದ್ಧಿ ಮತ್ತು ಇವೆಲ್ಲವನ್ನೂ ಮೀರಿದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳು, ಅದರಿಂದಲೇ ಸೃಷ್ಟಿಯಾಗಿದ್ದ ಜಾತಿ ದೌರ್ಜನ್ಯಗಳು, ತಾರತಮ್ಯಗಳು ಇತ್ಯಾದಿ ಮತ್ತೊಂದು ನೆಲೆಯಲ್ಲಿ ಸಾಂಪ್ರದಾಯಿಕ ಸಮಾಜದಲ್ಲಿ ಕರ್ಮಠ ಧರ್ಮಾಂಧತೆ ಮತ್ತು ಮೂಢ ನಂಬಿಕೆಗಳು ಭಾರತದ ಹಳ್ಳಿಗಳನ್ನು ಪಾಪಕೂಪಗಳನ್ನಾಗಿ ಮಾಡಿದ್ದವರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಹಳ್ಳಿಗಳನ್ನು “ಸ್ಥಳೀಯತೆ, ಅಜ್ಞಾನ, ಸಂಕುಚಿತ ಮನೋಭಾವನೆ ಮತ್ತು ಕೋಮುವಾದದ ಕೂಪ” (sink of localism, den of ignorance) ಎಂದು ಕಟುವಾಗಿ ಟೀಕಿಸಿದ್ದರು. ಹಳ್ಳಿಗಳು ಜಾತಿ ಪದ್ಧತಿಯ ಭದ್ರಕೋಟೆಗಳಾಗಿದ್ದು, ದಲಿತರು ಮತ್ತು ಶೋಷಿತರಿಗೆ ಹಕ್ಕುಗಳನ್ನು ನಿರಾಕರಿಸುವ, ಶೋಷಣೆಯ ತಾಣಗಳಾಗಿವೆ ಎಂದು ಅವರು ಪ್ರತಿಪಾದಿಸಿದರು. ಈ ದೃಷ್ಟಿಯಿಂದಲೇ ಅಂಬೇಡ್ಕರ್ ಕ್ಷಿಪ್ರಗತಿಯ ನಗರೀಕರಣ ಮತ್ತು ಆಧುನಿಕ ಕೈಗಾರಿಕೆಗಳ ಅಭಿವೃದ್ಧಿಯನ್ನು ಅಪೇಕ್ಷಿಸಿದ್ದರು.
ಈ ಸಮಯದಲ್ಲೇ ಅಧಿಕಾರ ಬಹುತೇಕವಾಗಿ ಕೆಲವೇ ಜಮೀನ್ದಾರರು, ಭೂಮಾಲೀಕರು, ವಾಣಿಜ್ಯೋದ್ಯಮಿಗಳು ಮತ್ತು ಸಮೂಹಗಳು ಹಾಗೂ ರಾಜಕೀಯ ಬಂಡವಾಳಿಗರಲ್ಲಿ ಕೇಂದ್ರೀಕೃತವಾಗಿತ್ತು. ಹಾಗಾಗಿ ಈ ರಾಚನಿಕ ಸಮಸ್ಯೆಗಳನ್ನು ಸಮರ್ಪಕವಾಗಿ ನಿವಾರಿಸಲು ಹಾಗೂ ದೇಶದ ವಿಭಜನೆಯಿಂದ ಸೃಷ್ಟಿಯಾದ ಕೋಮು ಸೂಕ್ಷ್ಮ ಪರಿಸ್ಥಿತಿಗಳು, ಕೇಂದ್ರೀಕೃತ ಸಾಂಸ್ಥಿಕ ಕಾರ್ಯತಂತ್ರವು ಅತ್ಯವಶ್ಯವಾಗಿತ್ತು. ಮೂಲತಃ ಇದು ಸ್ವತಂತ್ರ ಭಾರತದ ʼ ಪ್ರಭುತ್ವ ʼ ದಲ್ಲಿ ಅಳವಡಿಕೆಯಾಗಿತ್ತು. ಪರಿಸ್ಥಿತಿಗಳಿಗನುಗುಣವಾಗಿ ಭಾರತದ ಪ್ರಭುತ್ವ ವಸಾಹತುಶಾಹಿಯ ಕೆಲವು ಆಡಳಿತಾತ್ಮಕ ಸಾಧನಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕಾಯಿತು. ಭಾರತೀಯ ನಾಗರಿಕ ಸೇವೆ (ICS) , ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೊಳಗೊಂಡ ನ್ಯಾಯಾಂಗ ಮತ್ತು ಭಾರತೀಯ ಸೇನೆಯ ಸಂರಚನೆಯಲ್ಲಿ ವಸಾಹತುಶಾಹಿಯ ಮಾದರಿಯನ್ನೇ ಅನುಸರಿಸಲಾಗಿತ್ತು.
19-20ನೆ ಶತಮಾನದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಪ್ರಭುತ್ವದ ಮಾದರಿಯನ್ನೇ ಭಾರತ ಅನುಸರಿಸಿತ್ತು. ಇದನ್ನು ಪಾಶ್ಚಿಮಾತ್ಯ ಮಾದರಿ (Western Model) ಎಂದೇ ಗುರುತಿಸಲಾಗುತ್ತದೆ. ಅಂತಾರಾಷ್ಟ್ರೀಯ ಒತ್ತಡಗಳು ಮತ್ತು ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಒತ್ತಾಸೆಯಿಂದ ಇದೇ ಮಾದರಿಯ ಪ್ರಭುತ್ವವನ್ನು ಭಾರತ ಸ್ಥಾಪಿಸಿತ್ತು. ಖ್ಯಾತ ರಾಜಶಾಸ್ತ್ರಜ್ಞ Tocqueville ಹೇಳಿದಂತೆ ಭಾರತದ ಬಹುವೈವಿಧ್ಯತೆಯು ಭಾಷಿಕ, ಧಾರ್ಮಿಕ, ಜಾತಿ ಆಧಾರಿತ ಹಾಗೂ ಜನಾಂಗೀಯ ನೆಲೆಗಳಲ್ಲಿ ಬೇರುಬಿಟ್ಟಿತ್ತು. ಪ್ರತಿಯೊಂದು ಜಾತಿಯೂ ತನ್ನದೇ ಸಂಪ್ರದಾಯ, ನೀತಿ ಶಾಸ್ತ್ರ (Ethos) ಮತ್ತು ಆಡಳಿತ ಮಾದರಿಯನ್ನು ಹೊಂದಿದ್ದು, ಸಣ್ಣ ರಾಷ್ಟ್ರಗಳಾಗಿ ಕಾಣುತ್ತಿದ್ದವು. ಇವುಗಳನ್ನು ಒಂದು ಪ್ರಭುತ್ವದ ಆಳ್ವಿಕೆಗೆ ಒಳಪಡಿಸುವ ಸಲುವಾಗಿ ನೆಹರೂ ರಾಷ್ಟ್ರ ಪ್ರಭುತ್ವದ (Nation state) ಮಾರ್ಪಡಿಸಿದ ಮಾದರಿಯನ್ನು ಆಯ್ಕೆ ಮಾಡಬೇಕಾಯಿತು.
ಧಾರ್ಮಿಕ ವೈವಿಧ್ಯತೆಯನ್ನು ಕಾಪಾಡಲು ಜಾತ್ಯತೀತತೆ (Secularism), ತಳಸ್ತರದ ಜಾತಿಗಳ ಅಸಮಾನತೆಗಳನ್ನು ಹೋಗಲಾಡಿಸಲು ಮೀಸಲಾತಿ ಮೊದಲಾದ ಸಾಂವಿಧಾನಿಕ ಉಪಕ್ರಮಗಳು, ಪ್ರಾದೇಶಿಕ ವೈವಿಧ್ಯತೆಯನ್ನು ಕಾಪಾಡಲು ಸಂಯುಕ್ತ ರಾಷ್ಟ್ರಗಳ ಕಲ್ಪನೆಯನ್ನು ಅಳವಡಿಸಬೇಕಾಯಿತು. ಒಕ್ಕೂಟ ವ್ಯವಸ್ಥೆ ಎಂದೇ ಗುರುತಿಸಲಾಗುವ ಈ ಮಾದರಿಯಲ್ಲಿ ರಾಜ್ಯಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಒದಗಿಸದೆ, ಪ್ರಭುತ್ವದ ಹಾಗೂ ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ಚೌಕಟ್ಟಿನೊಳಗೇ ಕೆಲವು ನಿಬಂಧನೆಗಳಿಗೆ ಒಳಪಟ್ಟ ನೀತಿ ನಿರೂಪಣೆಯ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯಗಳ ನಡುವೆ ಯಾವುದೇ ಒಪ್ಪಂದಗಳಿಲ್ಲದ ಈ ಮಾದರಿಯಲ್ಲಿ ರಾಜ್ಯದ ಚುನಾಯಿತ ಸರ್ಕಾರಗಳು ಸ್ವತಂತ್ರ ಆಡಳಿತ ನಡೆಸಬಹುದಾಗಿದ್ದರೂ ದೇಶದ ಅಖಂಡತೆಯ ದೃಷ್ಟಿಯಿಂದ ಕೇಂದ್ರ ಪ್ರಭುತ್ವದ ನಿರ್ಬಂಧಗಳಿಗೆ ಒಳಪಟ್ಟಿದ್ದವು. ಹಾಗಾಗಿ ಪ್ರತ್ಯೇಕವಾಗುವ (Secession) ಅವಕಾಶಗಳನ್ನು ನೀಡಿರಲಿಲ್ಲ.
ಸಾಮಾಜಿಕವಾಗಿ ಹಾಗೂ ಸಾಂವಿಧಾನಿಕವಾಗಿ ಸೆಕ್ಯುಲರ್ ನೀತಿಗಳನ್ನು ಅಳವಡಿಸಿದ ಭಾರತೀಯ ಪ್ರಭುತ್ವ ಪಶ್ಚಿಮದ ಸೆಕ್ಯುಲರ್ ಮಾದರಿಯನ್ನು ಅನುಸರಿಸಲಿಲ್ಲ. ಮತ-ಧರ್ಮಗಳನ್ನು ಪ್ರಭುತ್ವದಿಂದ ಸಂಪೂರ್ಣವಾಗಿ ಪ್ರತ್ಯೇಕಿಸುವ ಬದಲು ಎಲ್ಲ ಧರ್ಮಗಳನ್ನೂ ಸಮಾನವಾಗಿ ಪರಿಗಣಿಸುವ ಸರ್ವಧರ್ಮ ಸಮಭಾವ ನೀತಿಯನ್ನು ಅಳವಡಿಸಲಾಯಿತು. ಭಾರತೀಯ ಸೆಕ್ಯುಲರಿಸಂನ ಮೂಲ ತತ್ವವನ್ನು ಮೂರು ಭಿನ್ನ ಆಯಾಮಗಳಿಂದ ನೋಡಬಹುದು. ಧಾರ್ಮಿಕ ಸಹಬಾಳ್ವೆ, ಅಂತರ್‌ಧರ್ಮೀಯ ಸಹಿಷ್ಣುತೆ ಮತ್ತು ಎಲ್ಲ ಧರ್ಮಗಳಿಗೂ ಸಮಾನ ಗೌರವ. ಇದು ಆಧಾರವಾಗಿತ್ತು. ನ್ಯಾಯಾಂಗ, ಶಾಸಕಾಂಗ ಮತ್ತು ಪ್ರಭುತ್ವವೂ ಸಹ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಬೇಕಿತ್ತು. ಪರಸ್ಪರ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಮುಖ್ಯ ನ್ಯಾಯಾಧೀಶರು ಯಾವುದೇ ಸರ್ಕಾರಿ ಕಾರ್ಯಗಳಲ್ಲಿ ಭಾಗವಹಿಸುವುದು ಸಾಧ್ಯವಿರಲಿಲ್ಲ.

ಈ ಅವಧಿಯಲ್ಲೇ ಭಾರತದ ಪ್ರಭುತ್ವದ ಕೆಲವು ನೀತಿಗಳು ವಿವಾದಾಸ್ಪದವಾದಷ್ಟೇ ಸಮಾಜ ಸುಧಾರಣೆಯ ದೃಷ್ಟಿಯಿಂದ ಕ್ರಾಂತಿಕಾರಿ ಎಂದೂ ಪರಿಗಣಿಸಲ್ಪಟ್ಟಿದ್ದವು. ನೆಹರೂ ಆಡಳಿತದಲ್ಲೇ ಕೇರಳದ ಪ್ರಥಮ ಕಮ್ಯುನಿಸ್ಟ್ ಸರ್ಕಾರವನ್ನು ವಜಾ ಮಾಡಿದ ಪ್ರಕರಣವು, ಮುಂದಿನ ದಿನಗಳಲ್ಲಿ ರಾಜ್ಯಪಾಲರನ್ನು ಕೇಂದ್ರ ಸರ್ಕಾರಗಳ ಕೈಬೊಂಬೆಯಾಗಿ ಬಳಸುವ ಪರಂಪರೆಗೆ ನಾಂದಿ ಹಾಡಿದ್ದು, ಇದು ಪ್ರಭುತ್ವ ನೀತಿಯಾಗಿಯೇ ಈವರೆಗೂ ಮುಂದುವರೆದಿದೆ. ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಒಂದು ಪರಂಪರೆಯೂ ಇದೇ ಅವಧಿಯಲ್ಲಿ ಆರಂಭವಾಗಿದ್ದು, ಇದು 1975ರ ತುರ್ತುಪರಿಸ್ಥಿತಿಯಲ್ಲಿ ಪರ್ಯವಸಾನಗೊಂಡಿತ್ತು. 1966-67ರಿಂದಲೇ ಜನಾಂದೋಲನಗಳನ್ನು ದಮನಿಸುವ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಲಾರಂಭಿಸಿದ್ದನ್ನು ಈಗಿನ ಯುಎಪಿಎ ಕಾಯ್ದೆಯಲ್ಲಿ ಗುರುತಿಸಬಹುದು.
ಪ್ರಜಾದನಿಯನ್ನು ಹತ್ತಿಕ್ಕಲು ಕಠೋರ ಕಾನೂನುಗಳನ್ನು ಪ್ರಯೋಗಿಸುವ ರಾಜಕೀಯ ಪ್ರಯತ್ನಗಳು ತುರ್ತುಪರಿಸ್ಥಿತಿಯ ನಂತರದಲ್ಲಿ ಪ್ರಭುತ್ವ ನೀತಿಯಾಗಿಯೇ ಪರಿವರ್ತನೆಯಾಗಿದ್ದನ್ನು, ಕಳೆದ ಐದು ದಶಕಗಳ ರಾಜಕೀಯ ಬೆಳವಣಿಗೆಗಳಲ್ಲಿ ಕಾಣಬಹುದು. ತುರ್ತುಪರಿಸ್ಥಿತಿಯ ವಿರುದ್ದ ಹೋರಾಡಿದ ರಾಜಕೀಯ ನಾಯಕರೇ ಇಂದು ಪ್ರಭುತ್ವವನ್ನು ಪ್ರತಿನಿಧಿಸುವ ಸರ್ಕಾರಗಳನ್ನು ನಡೆಸುತ್ತಿದ್ದು, ದಮನಕಾರಿ ಕಾನೂನುಗಳನ್ನು ರೂಪಾಂತರಿಸಿ ಬಳಸುತ್ತಿವೆ. ಅಭಿವೃದ್ಧಿಯ ಮಾದರಿಯಲ್ಲಿ ಪ್ರಭುತ್ವ ಸಮಾಜವಾದ (State Socialism) ಅವಕಾಶವಂಚಿತ, ಶೋಷಿತ ಸಮುದಾಯಗಳಿಗೆ ಹೊಸ ಬದುಕನ್ನು ರೂಪಿಸಲು ನೆರವಾದರೂ ಸಹ, 1980ರ ನಂತರದಲ್ಲಿ ಪ್ರವೇಶಿಸಿದ ಉದಾರವಾದಿ ಆರ್ಥಿಕ ನೀತಿಗಳು, ಜನರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಆಳ್ವಿಕೆಯ ಸಾಧನಗಳಾಗಿ ಪರಿಣಮಿಸಿದ್ದನ್ನು ಗಮನಿಸಬಹುದು. ಇದರ ರೂಪಾಂತರವನ್ನು ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯಲ್ಲಿ 2014ರ ನಂತರ ಕಾಣುತ್ತಿದ್ದೇವೆ.

ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಬಲೀಕರಣ ಮತ್ತು ಪ್ರಾತಿನಿಧ್ಯದ ಪ್ರಬಲ ಪ್ರತಿಪಾದಕರಾಗಿದ್ದರೂ ಸಹ, ಸಂವಿಧಾನವು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದರೂ ಸಹ, ಆಡಳಿತದಲ್ಲಿ ಮಹಿಳೆಯರ ಸಮಾನ ಪ್ರಾತಿನಿಧ್ಯ ಭಾರತದಲ್ಲಿ ಪ್ರಭುತ್ವ ನೀತಿಯಾಗಿ (State policy) ಸ್ಥಾಪಿತವಾಗಲು ಸಾಧ್ಯವಾಗಿಲ್ಲ. ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲೂ ಸಹ ಹೋರಾಟವೊಂದೇ ಮಹಿಳೆಯರ ಮುಂದಿರುವ ಆಯ್ಕೆಯಾಗಿರುವುದು ವರ್ತಮಾನದ ವಾಸ್ತವ. 1974ರಲ್ಲಿ ವೀಣಾ ಮಜುಂದಾರ್ ಮತ್ತು ಲೋತಿಕಾ ಸರ್ಕಾರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮಂಡಿಸಿದ “ ಸಮಾನತೆಯೆಡೆಗೆ ” ವರದಿ ಮಹಿಳೆಯರ ಹಕ್ಕುಗಳಿಗೆ ಮತ್ತು ಸಬಲೀಕರಣದ ಉಪಕ್ರಮಗಳಿಗೆ ನಾಂದಿ ಹಾಡಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ತದನಂತರವೇ ಚುನಾಯಿತ ಆಳ್ವಿಕೆಯ ಕೇಂದ್ರಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿತ್ತು. 1992ರಲ್ಲಿ ಜಾರಿಗೊಳಿಸಿದ ಪಂಚಾಯತ್ ರಾಜ್ ಕಾಯ್ದೆಯ ನಂತರದಲ್ಲೇ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಲು ನೆರವಾಗಿತ್ತು. ಈ ಸಂದರ್ಭದಲ್ಲೇ ಮಹಿಳಾ ಹೋರಾಟಗಳು,ಸ್ವಾಯತ್ತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಹೋರಾಡಲಾರಂಭಿಸಿದ್ದರಿಂದ ಈಗ ಮಹಿಳಾ ಮೀಸಲಾತಿ ಜಾರಿಯಾಗುವ ಹಂತದಲ್ಲಿದೆ. ಈಗಲೂ ಸಹ ಈ ಪ್ರಾತಿನಿಧಿಕ ವ್ಯವಸ್ಥೆ ಚುನಾಯಿತ ಸರ್ಕಾರಗಳ ಆಡಳಿತ ನೀತಿ, ಕಾಯ್ದೆಗಳ ರೂಪದಲ್ಲಿ ಸಾಕಾರಗೊಳ್ಳುತ್ತಿದೆ. ಸ್ವಾತಂತ್ರ್ಯಾನಂತರ ಮೊದಲ ನಾಲ್ಕು ದಶಕಗಳಲ್ಲಿ ಮಹಿಳಾ ಪ್ರಾತಿನಿಧ್ಯನ್ನು ಒಂದು ಪ್ರಭುತ್ವ ನೀತಿಯನ್ನಾಗಿ ಪರಿಗಣಿಸುವ ಪ್ರಯತ್ನವೇ ನಡೆಯದೆ ಇದ್ದುದು, ದೇಶದ ಆಡಳಿತ ವ್ಯವಸ್ಥೆಯ ಮೇಲೆ ಪಿತೃಪ್ರಧಾನತೆಯ ಪ್ರಭಾವವನ್ನು ಸೂಚಿಸುತ್ತದೆ.
ಮುಂದುವರೆಯುತ್ತದೆ
-೦-೦-೦-೦-






