ಇವತ್ತು ಜೆಡಿಎಸ್ನ ಮೊದಲ ಪಟ್ಟಿ ಹೊರ ಬೀಳಲಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಧಿಕೃತವಾಗಿ ಅವರ ಹುಟ್ಟು ಹಬ್ಬದ ದಿನ ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಬೇಕಿತ್ತು. ದೇವರ ಪೂಜೆ ಬಳಿಕ ಅಲ್ಲೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಕಾರ್ಯಕ್ರಮ ಇತ್ತು. ಆದರೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ಯೋಜನೆ ಬದಲಾವಣೆ ಮಾಡಲಾಯ್ತು. ಅದಕ್ಕೆ ಕಾರಣ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಸಾಮಾನ್ಯ ಪಟ್ಟಿಯಲ್ಲಿ ರಿಲೀಸ್ ಮಾಡಬಾರದು. ಅಥವಾ ರಾಮನಗರದ ಅಭ್ಯರ್ಥಿ ಹೆಸರನ್ನು ಖಾಲಿ ಬಿಟ್ಟು ಘೋಷಣೆ ಮಾಡಿದರೆ ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ ಎನ್ನುವ ಕಾರಣಕ್ಕೆ ಪಟ್ಟಿ ಬಿಡುಗಡೆಯನ್ನು ಸೋಮವಾರ ಮಾಡಲಾಗುತ್ತದೆ ಎಂದು ತಿಳಿಸಿದ್ದರು.
ನಿಖಿಲ್ ಕುಮಾರಸ್ವಾಮಿ ಹೆಸರು ಭಿನ್ನವಾಗಿ ಘೋಷಣೆ ಯಾಕೆ ?
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಎದುರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆಗಿದ್ದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಮಾಡಿದ ಕುತಂತ್ರದಿಂದ ಸೋಲು ಅನುಭವಿಸಬೇಕಾಯ್ತು. ಅಷ್ಟೇ ಅಲ್ಲದೆ ನಿಖಿಲ್ ಕುಮಾರಸ್ವಾಮಿ ಕಳೆದ ಒಂದೆರಡು ವರ್ಷಗಳಿಂದ ರಾಮನಗರದಲ್ಲಿ ಸಾಕಷ್ಟು ಓಡಾಟ ಮಾಡಿದ್ದು, ಮುಂದಿನ ಅಬ್ಯರ್ಥಿ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಆದರೆ ಸ್ಪರ್ಧೆ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿರಲಿಲ್ಲ. ಈಗ ಒಂದೇ ಸಲ ಸಾಮಾನ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಡುಗಡೆ ಆಗುವುದಕ್ಕಿಂತ ಹಾಲಿ ಶಾಸಕಿ ಹಾಗು ನಿಖಿಲ್ ಕುಮಾರಸ್ವಾಮಿ ಅವತ ತಾಯಿಯೂ ಆಗಿರುವ ಅನಿತಾ ಕುಮಾರಸ್ವಾಮಿ ಅವರಿಂದಲೇ ನಿಖಿಲ್ ಹೆಸರನ್ನು ಘೋಷಣೆ ಮಾಡಿಸೋಣ, ಮಗನಿಗಾಗಿ ತಾಯಿ ಕ್ಷೇತ್ರವನ್ನೇ ತ್ಯಾಗ ಮಾಡ್ತಿದ್ದಾರೆ ಎನ್ನುವಂತಾಗುತ್ತದೆ. ಇಲ್ಲದಿದ್ದರೆ ತಾಯಿ ಇದ್ದ ಜಾಗಕ್ಕೆ ಮಗನೇ ಬಂದ, ಎನ್ನುವ ಸಂದೇಶ ರವಾನೆ ಆಗುತ್ತದೆ ಎನ್ನುವ ಕಾರಣಕ್ಕೆ ಅನಿತಾ ಅವರಿಂದಲೇ ಘೋಷಣೆ ಮಾಡಿಸಲಾಯ್ತು.

ಮದ್ದೂರು ಬಿಟ್ಟು ರಾಮನಗರಕ್ಕೆ ಬಂದಿದ್ಯಾಕೆ ನಿಖಿಲ್..!
ಮಂಡ್ಯ ಜಿಲ್ಲೆ ಮದ್ದೂರಿನಿಂದ ಡಿಸಿ ತಮ್ಮಣ್ಣ ಬದಲಿಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆ ಬಳಿಕ ಮದ್ದೂರು ಕ್ಷೇತ್ರದಿಂದಲೇ ದಿವಂಗತ ನಟ ಕಂ ರಾಜಕಾರಣಿ ಅಂಬರೀಷ್ ಪುತ್ರ ಅಭಿಷೇಕ್ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರಲು ಶುರುವಾದವು. ಹೀಗಾಗಿ ನಿಖಿಲ್ ಮದ್ದೂರು ಆಯ್ಕೆಯನ್ನು ತಡೆಯಲಾಯ್ತು. ಕಳೆದ ಬಾರಿ ಒಮ್ಮೆ ಈಗಾಗಲೇ ಮುಖಭಂಗ ಅನುಭವಿಸಿ ಆಗಿದೆ. ಇದೀಗ ಮತ್ತೆ ನಿಖಿಲ್ ಹಾಗು ಅಭಿಶೇಕ್ ಸ್ಪರ್ಧೆ ಎದುರಾದರೆ ಮತ್ತೆ ಪ್ರಬಲ ಸ್ಪರ್ಧೆ ಮೂಲಕ ಸೋಲು ಗೆಲುವಿನ ಲೆಕ್ಕಾಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಅದರ ಜೊತೆಗೆ ರಾಮನಗರ, ಚನ್ನಪಟ್ಟಣ, ಮದ್ದೂರು ಹೀಗೆ ಒಂದೇ ಕುಟುಂಬದವು 3 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದಾರೆ ಎನ್ನುವ ಕೆಟ್ಟ ಸಂದೇಶ ರಾಜ್ಯಾದ್ಯಂತ ಹರಡಿದ್ರೆ ಪಕ್ಷದ ಮೇಲೆ ಜನರಿಗಿರುವ ಪ್ರೀತಿ ಮತ ಆಗುವುದನ್ನು ತಡೆಯುತ್ತದೆ ಎನ್ನುವ ಏಕೈಕ ಕಾರಣಕ್ಕೆ ಅನಿತಾ ಅವರನ್ನೇ ಕಣದಿಂದ ಹಿಂದೆ ಸರಿಸಿ, ರಾಮನಗರ ನಿಖಿಲ್ ಗೆಲ್ಲಬಹುದಾದ ಉತ್ತಮ ಕ್ಷೇತ್ರ ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಪಟ್ಟಿ ಬಿಡುಗಡೆ, ಪಕ್ಷ ಸಂಘಟನೆಯಲ್ಲಿ ಜೆಡಿಎಸ್ ಮುಂದು..!
ಕಾಂಗ್ರೆಸ್, ಬಿಜೆಪಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಪ್ರಚಾರ, ಟಿಕೆಟ್ ಹಂಚಿಕೆ ಸೇರಿದಂತೆ ಹತ್ತಾರು ಚರ್ಚೆಗಳು ನಡೆಯುತ್ತಿವೆ. ಆದರೆ ಜೆಡಿಎಸ್ ಈಗಾಗಲೇ ಪಂಚರತ್ನ ರಥಯಾತ್ರೆ ಶುರು ಮಾಡಿದ್ದು, ಬಹುತೇಕ ಇಂದು ಮಂಡ್ಯ ಜಿಲ್ಲೆ ಕಡೆಗೆ ರಥಯಾತ್ರೆ ಸಾಗಲಿದೆ. ಈ ನಡುವೆ ಕುಮಾರಸ್ವಾಮಿ ಹೋದ ಕಡೆಯಲ್ಲಿ ಜನಸಾಗರವೇ ಹರಿದು ಬರುತ್ತಿದೆ. ಎಲ್ಲರಿಗಿಂತಲೂ ಮೊದಲು ಟಿಕೆಟ್ ಘೋಷಣೆ ಮಾಡುತ್ತಿರುವುದು ಜೆಡಿಎಸ್ಗೆ ವರವಾಗುವ ಎಲ್ಲಾ ಲಕ್ಷಗಳೂ ಕಾಣಿಸುತ್ತಿವೆ. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿ ಆದವರು ಒಂದು ಸುತ್ತು ಇಡೀ ಕ್ಷೇತ್ರವನ್ನು ಸುತ್ತಾಡಿ, ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿ ಮತಯಾಚನೆ ಮಾಡಬಹುದು. ಎದುರಾಳಿಗಳು ಪ್ರಚಾರಕ್ಕೆ ಬರುವ ಮುನ್ನವೇ ಜನರ ವಿಶ್ವಾಸ ಗಳಿಸಬಹುದು. ಇವತ್ತು ಜೆಡಿಎಸ್ನ ಟಾರ್ಗೆಟ್ 123 ಕ್ಷೇತ್ರಗಳ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದೆ. ಅಥವಾ ಕನಿಷ್ಠ ಪಕ್ಷ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎನ್ನುವುದು ಜೆಡಿಎಸ್ ಮೂಲಗಳ ಮಾಹಿತಿ.






