2023ರ ಚುನಾವಣೆಗೆ ಜೆಡಿಎಸ್ ಎಲ್ಲ ಪಕ್ಷಗಳಿಗಿಂತ ಮೊದಲೇ ಅಖಾಡ ಸಿದ್ಧ ಮಾಡಿಕೊಳ್ಳುತ್ತಿದೆ. ಇದರ ಅಂಗವಾಗಿ ಪಕ್ಷದ 93 ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ರಾಜ್ಯದ 93 ಕ್ಷೇತ್ರಗಳಲ್ಲಿ ಕೆಲವು ಬದಲಾವಣೆ ಆಗಿದೆ. ಎಲ್ಲ ಕಡೆಯಲ್ಲಿಯೂ ಹಾಲಿ ಶಾಸಕರಿಗೆ ಮಣೆ ಹಾಕಲಾಗಿದೆ. ಆದರೆ ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಬದಲಿಗೆ ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.ಇನ್ನು 11 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಮೈಸೂರಿನಲ್ಲಿ 7 ಕ್ಷೇತ್ರಗಳಿಗೆ ಅಂತಿಮ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.
ಪಿರಿಯಾಪಟ್ಟಣ, ಕೆ.ಆರ್.ನಗರ, ಚಾಮುಂಡೇಶ್ವರಿ, ಟಿ.ನರಸೀಪುರದಲ್ಲಿ ಹಾಲಿ ಶಾಸಕರಾದ ಕೆ. ಮಹದೇವು, ಸಾ.ರಾ. ಮಹೇಶ್. ಜಿ.ಟಿ. ದೇವೇಗೌಡ, ಆರ್. ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಹುಣಸೂರಿನಲ್ಲಿ ಜಿ.ಡಿ. ಹರೀಶ್ ಗೌಡ, ವರುಣದಲ್ಲಿ ಅಭಿಷೇಕ್, ಕೃಷ್ಣರಾಜದಲ್ಲಿ ಕೆ.ವಿ. ಮಲ್ಲೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಕುತೂಹಲ ಕೆರಳಸಿದ್ದ ಎಚ್.ಡಿ. ಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಅಂತಿಮವಾಗಿಲ್ಲ. ನರಸಿಂಹರಾಜ, ಚಾಮರಾಜ, ನಂಜನಗೂಡು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯಾಗಬೇಕಿದ್ದು, ಇಲ್ಲಿ ಇರುವ ಅಸಮಾಧಾನ, ಬಂಡಾಯದ ಸಾಧ್ಯತೆ, ಬೇರೆ ಪಕ್ಷಗಳ ಅಸಮಧಾನಿತರ ನಿರ್ಧಾರಗಳ ಮೇಲೆ ಟಿಕೆಟ್ ಅಂತಿಮವಾಗಲಿದೆ ಎನ್ನಲಾಗುತ್ತಿದೆ.






