ಕಳೆದ ಒಂದು ವಾರದಿಂದ ನಿರಂತರ ವಾಗ್ವಾದಕ್ಕೆ ಕಾರಣವಾಗಿದ್ದ ಮೇಕೆದಾಟು ಪಾದಯಾತ್ರೆಯನ್ನು ಕೊನೆಗೂ ಕಾಂಗ್ರೆಸ್ ಮೊಟಕುಗೊಳಿಸಿದೆ.
ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಿ, ಪ್ರಮುಖವಾಗಿ ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮೇಕೆದಾಟು ಯೋಜನೆಯ ಉದ್ದೇಶ. ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಯ ಡಿಪಿಆರ್(ವಿಸ್ತೃತ ಯೋಜನಾ ವರದಿ) ತಯಾರಿಸಿ ಕೇಂದ್ರದ ಅನುಮೋದನೆಗೆ ಕಳಿಸಿದ್ದರೂ ಬಿಜೆಪಿ ಕೇಂದ್ರ ಸರ್ಕಾರ ಅನುಮೋದನೆ ನೀಡಲು ವಿಳಂಬ ಮಾಡಿದೆ. ಈ ನಡುವೆ ಕಳೆದ ಎರಡೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೂಡ ಬೆಂಗಳೂರು ಮತ್ತು ಹಳೇ ಮೈಸೂರು ಜನರ ಕುಡಿಯುವ ನೀರೊದಗಿಸುವ ಯೋಜನೆ ಬಗ್ಗೆ ನಿರ್ಲಕ್ಷ್ಯ ತಾಳಿದೆ. ಹಾಗಾಗಿ ಸರ್ಕಾರಗಳ ಮೇಲೆ ಒತ್ತಡ ಹೇರಲು ಮೇಕೆದಾಟು ಪಾದಯಾತ್ರೆ ಎಂಬುದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(ಕೆಪಿಸಿಸಿ) ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಾದ.
ಜನವರಿ ೯ರಂದು ಮೇಕೆದಾಟುವಿನಲ್ಲಿ ಆರಂಭವಾಗಿದ್ದ ಪಾದಯಾತ್ರೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜಂಟಿ ನಾಯಕತ್ವದಲ್ಲಿ ನಾಲ್ಕು ದಿನಗಳ ಕಾಲ ಸಂಗಮ, ಕನಕಪುರ ಮೂಲಕ ಬುಧವಾರ ರಾಮನಗರಕ್ಕೆ ತಲುಪಿತ್ತು. ಈ ನಡುವೆ, ಮಾಧ್ಯಮಗಳಲ್ಲಿ ಮೇಕೆದಾಟು ಯೋಜನೆಯ ವಿಷಯದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸರಣಿ ಜಾಹೀರಾತು ಸಮರ ಕೂಡ ನಡೆದಿತ್ತು. ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೋವಿಡ್ ಮೂರನೇ ಅಲೆಯ ನಡುವೆಯೂ ಕೋವಿಡ್ ಮಾನದಂಡಗಳನ್ನು ಗಾಳಿಗೆ ತೂರಿ ಹತ್ತಾರು ಸಾವಿರಾರು ಜನರನ್ನು ಸೇರಿಸಿ ಯಾತ್ರೆ ಮಾಡುತ್ತಿರುವ ಬಗ್ಗೆ, ಇದೇನು ಮೇಕೆದಾಟು ಪಾದಯಾತ್ರೆಯೋ, ಕರೋನಾ ಪಾದಯಾತ್ರೆಯೋ ಎಂಬ ಆತಂಕ ಮತ್ತು ಕುಹಕದ ಟೀಕೆಗಳನ್ನು ಮಾಡಿದ್ದರು.
ಯಾತ್ರೆಯ ಕುರಿತ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮೇಕೆದಾಟು ಯೋಜನೆಯ ಸಾಧಕ ಬಾಧಕ, ಯೋಜನೆಯ ಜಾರಿಯ ವಿಳಂಬದಂತಹ ವಿಷಯಗಳನ್ನು ಬದಿಗೆ ಸರಿಸಿ, ಕ್ರಮೇಣ ಕರೋನಾ ಕೇಂದ್ರಿತ ವಾಗ್ವಾದವಾಗಿ ಬದಲಾಗಿತ್ತು. ಜನಜಾತ್ರೆ ಮಾಡುವ ಮೂಲಕ ʼಕಾಂಗ್ರೆಸ್ ಕರೋನಾ ಹರಡುವ ತಬ್ಲೀಘಿʼ ಎಂಬ ತೀವ್ರ ಟೀಕೆಯೂ ಬಿಜೆಪಿ ನಾಯಕರಿಂದ ಕೇಳಿಬಂದಿತ್ತು. ಈ ನಡುವೆ, ಕರೋನಾ ಏರುಗತಿಯಲ್ಲಿರುವಾಗ ಸರ್ಕಾರದ ಸೂಚನೆಗಳನ್ನು ಗಾಳಿಗೆ ತೂರಿ ಪಾದಯಾತ್ರೆ ನಡೆಸುವುದು ಸರಿಯಲ್ಲ. ಕೂಡಲೇ ಪಾದಯಾತ್ರೆ ನಿಲ್ಲಿಸಿ ಎಂದು ಡಿ ಕೆ ಶಿವಕುಮಾರ್ ಅವರ ಒಂದು ಕಾಲದ ರಾಜಕೀಯ ಗುರು ಹಾಗೂ ಹಿರಿಯ ಬಿಜೆಪಿ ನಾಯಕರ ಎಸ್ ಎಂ ಕೃಷ್ಣ ಪತ್ರವನ್ನೂ ಬರೆದಿದ್ದರು. ಜೊತೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪತ್ರಬರೆದು ಪಾದಯಾತ್ರೆ ಸ್ಥಗಿತಗೊಳಿಸುವಂತೆ ಕೋರಿದ್ದರು.
ಹೀಗೆ ಕರೋನಾ ಹರಡುತ್ತಿರುವ ಗಂಭೀರ ಆರೋಪ, ಜಾಹೀರಾತು ಸಮರ, ಪತ್ರ ಚಳವಳಿಗಳ ನಡುವೆ, ಬುಧವಾರ ರಾಜ್ಯ ಹೈಕೋರ್ಟ್ ಕೂಡ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರಕ್ಕೆ ಪಾದಯಾತ್ರೆಯ ವಿಷಯದಲ್ಲಿ ಚಾಟಿ ಬೀಸಿತ್ತು. ಕರೋನಾ ತೀವ್ರತೆಯ ನಡುವೆಯೂ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ತರುತ್ತಿರುವ ಪಾದಯಾತ್ರೆಯನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಕೋವಿಡ್ ತೀವ್ರತೆಯ ನಡುವೆ ಪಾದಯಾತ್ರೆ ನಡೆಸುತ್ತಿರುವುದು ಸರಿಯೇ? ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ಯಾತ್ರೆಗೆ ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾನಗಿ ಪಡೆಯಲಾಗಿದೆಯೇ ಎಂಬುದೂ ಸೇರಿದಂತೆ ಕಾಂಗ್ರೆಸ್ಸಿಗೆ ಸರಣಿ ಪ್ರಶ್ನೆ ಕೇಳಿ, ಉತ್ತರ ನೀಡುವಂತೆ ಸೂಚಿಸಿತ್ತು. ಹಾಗೇ ಯಾತ್ರೆ ತಡೆಯಲು ಏನು ಕ್ರಮಕೈಗೊಳ್ಳಲಾಗಿದೆ ಎಂಬ ವಿವರ ನೀಡುವಂತೆ ಸರ್ಕಾರಕ್ಕೂ ನೋಟೀಸ್ ನೀಡಿತ್ತು.

ಸಹಜವಾಗೇ ಹೈಕೋರ್ಟಿನ ಈ ಚಾಟಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸಿತ್ತು. ಆ ಹಿನ್ನೆಲೆಯಲ್ಲಿ ಪಾದಯಾತ್ರೆ ಸಮರ್ಥನೆಯ ಕಾನೂನು ಅವಕಾಶಗಳನ್ನು ಕೆಪಿಸಿಸಿ ನಾಯಕರು ಚರ್ಚಿಸಿದ್ದರೆ, ಮತ್ತೊಂದು ಕಡೆ ಸರ್ಕಾರ ಕೂಡ ಹಿರಿಯ ಅಧಿಕಾರಿಗಳ ಸರಣಿ ಸಭೆ ನಡೆಸಿ ಯಾತ್ರೆ ತಡೆಗೆ ಇರುವ ಸಾಧ್ಯತೆಗಳು ಮತ್ತು ಅದರ ಪರಿಣಾಮಗಳು ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ವಿವರಗಳ ಕುರಿತು ಚರ್ಚೆ ನಡೆಸಿತ್ತು. ಅದಾದ ಬೆನ್ನಲ್ಲೇ ಬುಧವಾರ ರಾತ್ರಿಯೇ ಪಾದಯಾತ್ರೆ ನಿಷೇಧಿಸಿ ಸರ್ಕಾರ ಸುತ್ತೋಲೆಯನ್ನೂ ಹೊರಡಿಸಿತ್ತು. ಆ ಎಲ್ಲಾ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ರಾಮನಗರದಲ್ಲಿ ಸಮಾಲೋಚನಾ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯಕ್ಕೆ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಿ, ಕೋವಿಡ್ ಅಲೆ ತಗ್ಗಿದ ಬಳಿಕ ಮತ್ತೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಈ ನಡುವೆ ಪಾದಯಾತ್ರೆ ಸ್ಥಗಿತಗೊಳಿಸಲು ಪ್ರಮುಖವಾಗಿ ರಾಜ್ಯ ಹೈಕೋರ್ಟ್ ಗರಂ ಆದ ಸಂಗತಿ ಮತ್ತು ಶುಕ್ರವಾರದ ಮುಂದುವರಿದ ವಿಚಾರಣೆ ವೇಳೆ ನ್ಯಾಯಾಲಯ ಕಠಿಣ ನಿರ್ಧಾರ ಕೈಗೊಳ್ಳಬಹುದು ಎಂಬ ಆತಂಕ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಗತಿ. ಜೊತೆಗೆ ಈ ನಡುವೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮತ್ತು ಸ್ವತಃ ರಾಹುಲ್ ಗಾಂಧಿಯವರು ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ಚರ್ಚಿಸಿ ಯಾತ್ರೆ ನಿಲ್ಲಿಸಲು ತಿಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ ಎನ್ನಲಾಗುತ್ತಿದೆ.
ವಾಸ್ತವವಾಗಿ ತಮಗೆ ರಾಜಕೀಯ ಶಕ್ತಿ ತಂದಿರುವ ಮತ್ತು ಹಳೇ ಮೈಸೂರು ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸ್ವತಃ ತಮ್ಮ ವರ್ಚಸ್ಸಿಗೆ ಮತ್ತು ಪಕ್ಷದ ಸಂಘಟನೆಗೆ ದೊಡ್ಡ ಬಲ ತುಂಬಿರುವ ಯಾತ್ರೆಯನ್ನು ಮುಂದುವರಿಸುವುದು, ಒಂದು ವೇಳೆ ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ತಮ್ಮನ್ನು ಬಂಧಿಸಿದರೆ ಅದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುವುದು ಡಿ ಕೆ ಶಿವಕುಮಾರ್ ಯೋಜನೆಯಾಗಿತ್ತು. ಆದರೆ, ಸಿದ್ದರಾಮಯ್ಯ ಅಂತಹ ಪ್ರಯತ್ನಗಳು ಬೇಡ. ಹೈಕೋರ್ಟ್ ಸೂಚನೆ ಮತ್ತು ಹೈಕಮಾಂಡ್ ಸಲಹೆಗೆ ಬೆಲೆ ಕೊಟ್ಟು ಕೂಡಲೇ ಯಾತ್ರೆ ಸ್ಥಗಿತಗೊಳಿಸಿದರೆ, ವೈಯಕ್ತಿಕವಾಗಿ ಡಿ ಕೆ ಶಿವಕುಮಾರ್ ಅವರಿಗೆ ನಷ್ಟವಾದರೂ, ಅದು ಜನರ ಹಿತಾಸಕ್ತಿಯಿಂದ ಕಾಂಗ್ರೆಸ್ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದೆ ಎಂಬ ಗುಡ್ ವಿಲ್ ಪಕ್ಷಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂಬುದು ಕಾಂಗ್ರೆಸ್ ಆಂತರಿಕ ವಲಯದ ಮಾತು.
ಹಾಗಾಗಿ ಯಾತ್ರೆಯ ಲಾಭನಷ್ಟದ ವಿಷಯ ಈಗ ಚರ್ಚೆಯ ವಸ್ತುವಾಗಿದೆ. ಮುಖ್ಯವಾಗಿ ಯಾತ್ರೆ ಸ್ಥಗಿತಗೊಳಿಸುವ ಮೂಲಕ ಬೆಂಗಳೂರು ನಗರದಲ್ಲಿ ನಿಧಾನಕ್ಕೆ ಎದ್ದಿದ್ದ ತನ್ನ ವಿರುದ್ಧದ ಜನಸಾಮಾನ್ಯರ ಅಸಮಾಧಾನದ ಅಲೆಯನ್ನು ಮಣಿಸುವಲ್ಲಿ ತಾನು ಯಶಸ್ವಿಯಾಗಿರುವುದಾಗಿ ಬಿಜೆಪಿ ವಲಯದಲ್ಲಿ ಸಮಾಧಾನದ ನಿಟ್ಟುಸಿರು ಬರುತ್ತಿದೆ. ಅದರಲ್ಲೂ ಯಾತ್ರೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಬೊಮ್ಮಾಯಿ, ಬೆಂಗಳೂರು ನಗರ ಮತ್ತು ಹಳೇ ಮೈಸೂರು ಭಾಗದ ಬಿಜೆಪಿ ಪ್ರಮುಖರಿಗೆ ಪಾದಯಾತ್ರೆ ಸ್ಥಗಿತದ ಬೆಳವಣಿಗೆ ನಿರಾಳ ಎನಿಸಿದೆ. ಆದರೆ, ಈಗಾಗಲೇ ಕಾಂಗ್ರೆಸ್ ಕನಕಪುರ, ರಾಮನಗರ ಭಾಗದಲ್ಲಿ ಈ ಯಾತ್ರೆಯ ಮೂಲಕ ಕ್ರೋಡೀಕರಿಸಿರುವ ಜನಬೆಂಬಲ ಮತ್ತು ವೃದ್ಧಿಸಿಕೊಂಡಿರುವ ಸಂಘಟನೆಯ ಬಲ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಾಲಿಗೆ ದುಬಾರಿಯಾಗಲಿದೆ ಎಂಬುದನ್ನಂತೂ ತಳ್ಳಿಹಾಕುವಂತಿಲ್ಲ.
ಅದೇ ಹೊತ್ತಿಗೆ, ಕಾಂಗ್ರೆಸ್ಸಿನ ಒಳಗೇ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ತೂಕದ ವಿಷಯದಲ್ಲಿ ಕೂಡ ಈ ಪಾದಯಾತ್ರೆ ಬಹಳಷ್ಟು ಪರಿಣಾಮ ಬೀರಲಿದೆ. ಈಗಾಗಲೇ ಈ ನಾಯಕದ್ವಯರ ನಡುವೆ ಯಾತ್ರೆಯ ವಿಷಯದಲ್ಲಿ ಸಾಕಷ್ಟು ಬಣ ಸಂಘರ್ಷ ನಡೆದಿತ್ತು. ಇದೀಗ ಪಾದಯಾತ್ರೆಯ ಆರಂಭ ದಿನಗಳಲ್ಲೇ ನಿರೀಕ್ಷೆಗೂ ಮೀರಿ ಜನಬೆಂಬಲ ಪಡೆದ ಹಿನ್ನೆಲೆಯಲ್ಲಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಲಾಭನಷ್ಟದ ವಿಷಯ ಕೂಡ ಚರ್ಚೆಯ ಮುಂಚೂಣಿಗೆ ಬಂದಿದೆ.