(ಡಾ ಬಾಬು ಜಗಜೀವನ್‌ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ದಿನಾಂಕ 06-04-2026ರಂದು ನಡೆದ ಬಾಬೂಜಿ ಅವರ 119ನೆ ಜನ್ಮದಿನದ ಸಂದರ್ಭದಲ್ಲಿ ಮಂಡಿಸಿದ ಉಪನ್ಯಾಸ –ಲೇಖನ ರೂಪ)
ಭಾಗ 2
ಸಾಂವಿಧಾನಿಕ ಹೆಜ್ಜೆಗಳು ಆದರೆ ಅನುಭಾವಿಕ ನೆಲೆಯಲ್ಲಿ ತಳಸಮಾಜ ಎದುರಿಸುತ್ತಿದ್ದ ಶೋಷಣೆ, ದೌರ್ಜನ್ಯ ಅವರನ್ನು ಬಹಳವಾಗಿ ಕಾಡಿತ್ತು. ಸಮಾಜ ಸುಧಾರಣೆಯ ಹಾದಿಯಲ್ಲೇ ಈ ಸಮಸ್ಯೆಗಳನ್ನು ಎದುರಿಸಿದ ಬಾಬೂಜಿ ಹೋರಾಟಗಳ ಹಾದಿ ಕ್ರಮಿಸಲಿಲ್ಲ. ಆಳ್ವಿಕೆಯ ಚೌಕಟ್ಟಿನೊಳಗೇ, ಕಾಯ್ದೆ ಕಾನೂನುಗಳ ಮುಖಾಂತರ ಅಸಮಾತೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅಸ್ಪೃಶ್ಯ ಸಮುದಾಯದ ಅಭ್ಯುದಯಕ್ಕಾಗಿ ಅವಿರತ ಶ್ರಮಿಸಿದ ಬಾಬೂಜಿ 1935ರಲ್ಲೇ ಅಖಿಲ ಭಾರತ ಡಿಪ್ರೆಸ್ಡ್ ಕ್ಲಾಸ್ ಲೀಗ್ ಎಂಬ ಸಂಘಟನೆಯನ್ನು ಕಟ್ಟಿ, ಎಲ್ಲ ದಲಿತ ಜಾತಿಗಳನ್ನೂ ಒಳಗೊಂಡ ಸಮಾಜ ಸುಧಾರಣೆಯ ಸಂಘಟನೆಗೆ ನಾಯಕತ್ವ ಒದಗಿಸಿದ್ದರು. ಈ ಸಂಘಟನೆಯ ಮೂಲಕವೇ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯನ್ನೂ ಪ್ರವೇಶಿಸಿದರು.

ಸ್ವಾತಂತ್ರ್ಯಪೂರ್ವದ ಮಧ್ಯಂತರ ಸರ್ಕಾರ ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಬಾಬೂಜಿ ತಮ್ಮ ಆದರ್ಶಗಳನ್ನು, ಸಾಂವಿಧಾನಿಕ ಆಶಯಗಳ ಅಡಿಪಾಯವಾಗಿ ಪರಿಗಣಿಸಿದ್ದರು. ಸಂವಿಧಾನ ರಚನಾ ಸಭೆಯಲ್ಲಿನ ಹಲವು ಉಪಸಮಿತಿಗಳನ್ನು ಬಾಬೂಜಿ ಪ್ರತಿನಿಧಿಸಿದ್ದರು. ಇವುಗಳಲ್ಲಿ ಮುಖ್ಯವಾಗಿ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಉಪಸಮಿತಿ, ಕಾನೂನು ನಿಯಮಾವಳಿ ಸಮಿತಿ, ಸಂಯುಕ್ತ ರಾಜ್ಯಾಂಗ ಸಮಿತಿ ಉಲ್ಲೇಖನಾರ್ಹ. ತಮ್ಮ ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವುದೇ ಅಲ್ಲದೆ, ಅಲ್ಪಸಂಖ್ಯಾತರ ಮತ್ತು ಪರಿಶಿಷ್ಟರ ಹಕ್ಕುಗಳನ್ನು ರಕ್ಸಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದರು. ಕಟ್ಟಾ ಗಾಂಧಿವಾದಿಯಾಗಿದ್ದ ಬಾಬೂಜಿ ವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಈ ಜನತೆಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ರಕ್ಷಣೆಯನ್ನು ಒದಗಿಸುವಂತೆಯೂ ಶಿಫಾರಸು ಮಾಡಿದ್ದರು.

ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ವ್ಯಕ್ತಿಗತವಾಗಿ ಇರುವ ಅವಕಾಶಗಳು ಹಲವು. ಸಾಮಾಜಿಕ ಸಂಘಟನೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ, ಕೋಮುವಾದ-ಮತಾಂಧತೆಯ ವಿರುದ್ಧ ಚಳುವಳಿಗಳು, ವೈಯುಕ್ತಿಕವಾಗಿ ಸರಳ ಜೀವನ, ಅಧಿಕಾರಯುತ ಹುದ್ದೆಗಳಲ್ಲಿದ್ದರೆ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆ ಮತ್ತು ಜನಕೇಂದ್ರಿತ ಆಡಳಿತ ಧೋರಣೆ ಇವೆಲ್ಲವೂ ಪ್ರಧಾನವಾಗಿ ಕಾಣುವ ಮಾದರಿಗಳು. ಬಾಬೂಜಿ ಅವರಲ್ಲಿ ಇವೆಲ್ಲವನ್ನೂ ಕಾಣಬಹುದು. ಅಂಬೇಡ್ಕರ್ ಹಿಂದೂ ಧರ್ಮದಿಂದ ಹೊರನಡೆದು ಬೌದ್ಧರಾಗುವ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಬಾಬೂಜಿ ಹಿಂದೂ ಧರ್ಮದಲ್ಲಿ ಇದ್ದುಕೊಂಡೇ, ಅದರೊಳಗಿನ ಆಧ್ಯಾತ್ಮಿಕತೆಯ ನೆಲೆಯಲ್ಲಿ ಅಸ್ಪೃಶ್ಯತೆ, ಜಾತೀಯತೆಯ ವಿರುದ್ಧ ಹೋರಾಡಿದರು. ಇಲ್ಲಿ ಅವರಿಗೆ ಆದರ್ಶವಾಗಿ ಕಂಡಿದ್ದು ಗಾಂಧಿ ಮಾರ್ಗ.
ಇದನ್ನೂ ಓದಿ : ಫಾರಿನ್ ಸ್ಟೈಲ್ ಲವ್ & ಮರ್ಡರ್ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..
ಆಡಳಿತ ಮುತ್ಸದ್ದಿಯಾಗಿ ಬಾಬೂಜಿ
ಆದರೆ 40 ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದು ಉತ್ತರ ಭಾರತದಲ್ಲಿ ದಲಿತರಲ್ಲಿ ಎಡಗೈ ಸಮುದಾಯದ ಪ್ರಬಲ ನಾಯಕರಾಗಿದ್ದರೂ, ಬಾಬೂಜಿ ಅಖಿಲ ಭಾರತ ಮಟ್ಟದ ಸಂಘಟನೆಯನ್ನಾಗಲೀ, ಹೋರಾಟವನ್ನಾಗಲೀ ಮುನ್ನಡೆಸಲಿಲ್ಲ. ಅವರೇ ಕಟ್ಟಿದ ಸಂಘಟನೆಗೆ ಅಖಿಲ ಭಾರತೀಯ ರೂಪ (Pan Indian Form) ಕಲ್ಪಿಸಲು ಯತ್ನಿಸಲೂ ಇಲ್ಲ. ಅವರಲ್ಲಿದ್ದ ಈ ತಾತ್ವಿಕ ಮಿತಿಯೇ ಬಾಬೂಜಿ ಅವರನ್ನು ಸೀಮಿತ ವಲಯಕ್ಕೆ ನಿರ್ಬಂಧಿಸಿತ್ತು. ಗಾಂಧಿವಾದದಲ್ಲಿ ಅಪಾರ ನಂಬಿಕೆಯಿಟ್ಟಿದ್ದ ಬಾಬೂಜಿ ಮನಃಪರಿವರ್ತನೆಯ ಮೂಲಕ ಸಮಾಜ ಸುಧಾರಣೆಯ ಕನಸು ಕಂಡಿದ್ದರು. ಅವರಿಗೆ ಇದ್ದಂತಹ ಸಾಮುದಾಯಿಕ ಬೆಂಬಲವನ್ನು ಮನಗಂಡೇ ನೆಹರೂ ನೇತೃತ್ವದ ಕಾಂಗ್ರೆಸ್ ಬಾಬೂಜಿ ಅವರನ್ನು ಅಂಬೇಡ್ಕರ್ ಅವರಿಗೆ ಪರ್ಯಾಯ ನಾಯಕನನ್ನಾಗಿ ಬೆಳೆಸಲು ಎಲ್ಲ ತಂತ್ರಗಳನ್ನೂ ಬಳಸಿದ್ದು ಈಗ ಇತಿಹಾಸ.
![]()
ಆದರೆ ವೈಯುಕ್ತಿಕವಾಗಿ ಅಂಬೇಡ್ಕರ್ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದ ಬಾಬೂಜಿ ತಮ್ಮನ್ನು ಪ್ರತಿರೋಧದ ನೆಲೆಯಲ್ಲಿ ಗುರುತಿಸಿಕೊಳ್ಳದೆ, ಕೇಂದ್ರ ಸಚಿವರಾಗಿ ತಾವು ನಿರ್ವಹಿಸಿದ ಇಲಾಖೆಗಳ ಮೂಲಕ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸಿದ್ದರು. ಸಾಮಾನ್ಯವಾಗಿ ನಾವು ಚಾರಿತ್ರಿಕ ವ್ಯಕ್ತಿಗಳ ಚಿಂತನೆಗಳಿಗೆ ಕಿವಿಗೊಡುವ ಮುನ್ನ ಅವರು ನಿಂತ ನೆಲೆಯನ್ನು ನೋಡುತ್ತೇವೆ. ಅಂದರೆ ಅವರು ಅನುಸರಿಸುವ/ಬೋಧಿಸುವ ತತ್ವ, ಸಿದ್ದಾಂತ, ಪಕ್ಷ, ಸಂಘಟನೆ ಇತ್ಯಾದಿ ಭೂಮಿಕೆಗಳನ್ನು ಗಮನಿಸಿ, ಅವರ ಚಿಂತನೆಗಳೂ ಆ ನೆಲೆಗಳಿಂದಲೇ ಪ್ರಭಾವಿತವಾಗಿರುತ್ತವೆ ಎಂಬ ಪೂರ್ವಗ್ರಹದೊಂದಿಗೆ ನಮ್ಮ ಮನಸ್ಸಿನ ಕದ ತೆರೆಯುತ್ತೇವೆ. ಆದರೆ ವರ್ತಮಾನದ ಸನ್ನಿವೇಶದಲ್ಲಿ ಈ ಮಾದರಿ ನಮ್ಮನ್ನು ದಿಕ್ಕುತಪ್ಪಿಸುತ್ತದೆ.

ಭಾರತದ ಸಂವಿಧಾನ ಈ ಮಾದರಿಯ ಅನುಸರಣೆಗೆ ಅಗತ್ಯವಾದ ವಿಧಿಗಳನ್ನು ರೂಪಿಸಿದೆ. ಬಾಬೂಜಿ ಈ ಸಂವಿಧಾನದ ಚೌಕಟ್ಟಿನೊಳಗೇ ನಿರ್ವಹಿಸಿದ ಸಚಿವ ಹುದ್ದೆಗಳ ಮೂಲಕ ತಮ್ಮ ಪ್ರಾಮಾಣಿಕತೆ, ದಕ್ಷತೆ, ಕರ್ತವ್ಯ ನಿಷ್ಠೆಯನ್ನು ಕಾಪಾಡಿಕೊಂಡು ಒಂದು ಆದರ್ಶಪ್ರಾಯ ಮಾದರಿಯನ್ನು ಬಿಟ್ಟುಹೋಗಿದ್ದಾರೆ. ಅವರು ನಿರ್ವಹಿಸುವ ಇಲಾಖೆಯ ಯಾವುದೇ ವಿಚಾರವಾದರೂ ಅದರ ಸಂಪೂರ್ಣ ವಿವರಗಳನ್ನು, ಮಾಹಿತಿ ದತ್ತಾಂಶಗಳನ್ನು, ಅಂಕಿಸಂಖ್ಯೆಗಳನ್ನು ಮತ್ತು ನೆಲದ ವಾಸ್ತವಗಳನ್ನು (Ground Realities) ಅರಿತು ಕಾರ್ಯನಿರ್ವಹಿಸುವುದು ಬಾಬೂಜಿ ಅವರ ಶೈಲಿಯಾಗಿತ್ತು. ಹಾಗಾಗಿಯೇ ಅವರು ಹಸಿರು ಕ್ರಾಂತಿಯಲ್ಲಿ, 1971ರ ಪಾಕ್ ಯುದ್ಧದಲ್ಲಿ ತಮ್ಮ ಸಚಿವ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ಸಿನ ಶಿಖರ ಮುಟ್ಟಿದ್ದರು.
ದಕ್ಷ ಸಚಿವರಾಗಿ ಬಾಬೂಜಿ
1948ರಲ್ಲಿ ಕಾರ್ಮಿಕ ಸಚಿವರಾಗಿ ನೇಮಿಸಲ್ಪಟ್ಟಾಗ ಸಂತೋಷದಿಂದ ಸ್ವೀಕರಿಸಿದ ಬಾಬೂಜಿ ಕಾರ್ಮಿಕರನ್ನು ದೇಶದ ಬೆನ್ನೆಲುಬು ಎಂದೇ ಪರಿಗಣಿಸಿ, ಅವರ ನಿತ್ಯ ಜೀವನದಲ್ಲಿ ಶಾಶ್ವತವಾದ ಸುಧಾರಣೆಗಳನ್ನು ತರಲು ಹಲವು ಕಾಯ್ದೆಗಳನ್ನು ರೂಪಿಸಿದ್ದರು. ಉದ್ಯೋಗಿಗಳ ವಿಮಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದ ಬಾಬೂಜಿ ಈ ಕಾಯ್ದೆಯನ್ನು ಅಂಗೀಕರಿಸದಿದ್ದರೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದರು. ಸಾರಿಗೆ ಸಂಪರ್ಕ ಸಚಿವರಾಗಿ ದೇಶದ ಅಂಚೆ ಮತ್ತು ತಂತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. 2000 ಜನಸಂಖ್ಯೆ ಇರುವ ಪ್ರತಿಯೊಂದು ಹಳ್ಳಿಗೂ ಒಂದು ಅಂಚೆ ಕಚೇರಿ ಸ್ಥಾಪಿಸುವ ನಿರ್ಧಾರ ಭವಿಷ್ಯ ಭಾರತಕ್ಕೆ ಬುನಾದಿಯಾಗಿತ್ತು.

ಸಾರಿಗೆ ಇಲಾಖೆಯಲ್ಲಿ ಆರು ಪ್ರಮುಖ ವಿಮಾನಯಾನ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವ ಬಾಬೂಜಿ ಅವರ ನಿರ್ಧಾರ ,ಮುಂದಿನ ದಿನಗಳಲ್ಲಿ ಸಾರ್ವಜನಿಕ ಉದ್ದಿಮೆಗಳ ರಾಷ್ಟ್ರೀಕರಣ ನೀತಿಗೆ ಮುನ್ಸೂಚನೆಯಾಗಿತ್ತು . ಕೇಂದ್ರ ರೈಲ್ವೆ ಸಚಿವರಾಗಿ ಉದ್ಯೋಗಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದರು. ನಿಲ್ದಾಣಗಳಲ್ಲಿ ಪರಿಶಿಷ್ಟರಿಗೆ ಮಳಿಗೆ ತೆಗೆಯುವ ಅವಕಾಶ, ನೌಕರಿಯಲ್ಲಿ ದಲಿತರಿಗೆ ಬಡ್ತಿಯ ಅವಕಾಶ, ರೈಲ್ವೆ ಸೇವಾ ಆಯೋಗದಲ್ಲಿ ಪರಿಶಿಷ್ಟ ಸಮುದಾಯದ ಪ್ರಾತಿನಿಧ್ಯ ಇವೆಲ್ಲವೂ ಬಾಬೂಜಿ ಅವರ ಕೊಡುಗೆ. ಎರಡನೆ ಬಾರಿಗೆ ಕಾರ್ಮಿಕ ಸಚಿವರಾದಾಗ ಕಲ್ಲಿದ್ದಲು ಗಣಿ ಕಾರ್ಮಿಕರಿಗೆ ವಸತಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮುಂತಾದ ಪುರೋಗಾಮಿ ಯೋಜನೆಗಳನ್ನು ಜಾರಿಗೆ ತಂದಿದ್ದರು.
1960ರ ದಶಕದಲ್ಲಿ ದೇಶದಲ್ಲಿ ಆಹಾರ ಕ್ಷೋಭೆ ಉಂಟಾದಾಗ ಆಹಾರ ಸಚಿವರಾಗಿದ್ದ ಬಾಬೂಜಿ, ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದರು, ಉಳುವವನಿಗೇ ಭೂಮಿ ಕಲ್ಪನೆಗೆ ರಾಜಕೀಯವಾಗಿ ಚಾಲನೆ ನೀಡಿದ್ದೇ ಬಾಬೂಜಿ ಎನ್ನುವುದು ಗಮನಿಸಬೇಕಾದ ಅಂಶ. ಅಂಬೇಡ್ಕರ್ ಆಶಯದ ಭೂ ರಾಷ್ಟ್ರೀಕರಣ ಸಂವಿಧಾನದಲ್ಲಿ ಸರ್ವ ಸಮ್ಮತಿ ಪಡೆಯದ ಕಾರಣ, ತಳಸಮುದಾಯಗಳಿಗೆ ಭೂಮಿಯ ಹಕ್ಕನ್ನು ಒದಗಿಸುವ ಈ ಕಲ್ಪನೆ ಕ್ರಾಂತಿಕಾರಕ ಪರಿಣಾಮ ಬೀರಿತ್ತು. ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ರಕ್ಷಣಾ ಸಚಿವರಾಗಿ ಬಾಬೂಜಿ ನಿರ್ವಹಿಸಿದ ರೀತಿ ಚಾರಿತ್ರಿಕವಾಗಿ ಸ್ಮರಣಾರ್ಹವಾಗಿ ಉಳಿದಿದೆ. ಈ ವಿಜಯದ ಮಹಾನ್ ಸ್ಫೂರ್ತಿ ಬಾಬೂಜಿ ಅವರೇ ಎನ್ನುವುದು ಜನಜನಿತವಾದ ಅಭಿಪ್ರಾಯ.ಇಂದಿರಾ ಆಳ್ವಿಕೆಯಲ್ಲಿ ಜಾರಿಗೊಳಿಸಿದ್ದ 20 ಅಂಶದ ಕಾರ್ಯಕ್ರಮಗಳ ರೂವಾರಿಯಾಗಿಯೂ ಬಾಬೂಜಿ ಅವರನ್ನು ಸ್ಮರಿಸಲಾಗುತ್ತದೆ.
ತತ್ವ ಬದ್ಧ ರಾಜಕಾರಣಿಯಾಗಿ
ಚಾರಿತ್ರಿಕ ವ್ಯಕ್ತಿಗಳು ಯಾವ ನೆಲೆಯಲ್ಲಿ, ಭೂಮಿಕೆಯಲ್ಲಿ ನಿಂತು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತಲೂ ಅವರು ಏನು ಮಾತನಾಡುತ್ತಿದ್ದಾರೆ, ಆ ಮಾತುಗಳು ವರ್ತಮಾನಕ್ಕೆ ಪ್ರಸ್ತುತವೇ, ಅದು ಭವಿಷ್ಯದ ದಿಕ್ಸೂಚಿಯಾಗುವುದೇ ಎಂಬ ಭಾವದಿಂದ ಆಲಿಸುವುದು ವಿವೇಕಯುತ. ಮಿಲೆನಿಯಂ ಸಮಾಜ ಇದನ್ನು ನೆನಪಿಡಬೇಕು. ಗಾಂಧಿ, ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್, ಮಾವೋ ಅವರ ಸೈದ್ಧಾಂತಿಕ ಪ್ರತಿಪಾದನೆಗಳಾಗಲೀ, ಸಮಾಜವಾದ, ಸಮತಾವಾದದ ಸೈದ್ಧಾಂತಿಕ ಭಿನ್ನತೆಗಳಾಗಲೀ, ವರ್ತಮಾನದ ಭಾರತವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಅಡಿಪಾಯಗಳಷ್ಟೇ. ಅದರ ಮೇಲೆ ಕಟ್ಟಡ ಕಟ್ಟುವ ಜವಾಬ್ದಾರಿ ನಮ್ಮದು. ಈ ದಾರ್ಶನಿಕರ ಹೆಸರಿಗೆ ಅಂಟಿಕೊಂಡಿರುವ ʼ ವಾದ ʼ ಗಳು ನಮ್ಮನ್ನು ಸಂಕುಚಿತ ಮನಸ್ಥಿತಿಯ ʼವಾದಿʼಗಳನ್ನಾಗಿ ಮಾಡಕೂಡದು. ಹಾಗಾದಾಗ ನಮ್ಮ ಅರಿವಿನ ವಿಸ್ತಾರಕ್ಕೆ ನಾವೇ ಕಡಿವಾಣ ಹಾಕಿಕೊಂಡಂತಾಗುತ್ತದೆ. ಉದಾತ್ತ ಚಿಂತನೆಗಳನ್ನು ಎಲ್ಲ ದಿಕ್ಕುಗಳಿಂದಲೂ ಸ್ವೀಕರಿಸುವ ವಿಶಾಲ ಮನೋಭಾವವನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕಿದೆ.
.jpg)
ಕಟ್ಟಾ ಗಾಂಧಿವಾದಿಯಾಗಿದ್ದ ಬಾಬೂಜಿ ಅಷ್ಟೇ ಕಟಿಬದ್ಧ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ತಾವು ನಾಲ್ಕು ದಶಕಗಳ ಕಾಲ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷವನ್ನು ತುರ್ತುಪರಿಸ್ಥಿತಿಯ ಕಾರಣದಿಂದ ತೊರೆಯಲು ಬಾಬೂಜಿ ಹಿಂಜರಿಯಲಿಲ್ಲ. ಇಂದಿರಾಗಾಂಧಿಯ ಆಪ್ತ ಸಚಿವರಲ್ಲೊಬ್ಬರಾಗಿದ್ದರೂ, ಬಾಬೂಜಿ ಪಕ್ಷವನ್ನು ತೊರೆದಿದ್ದು, ಅವರ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸೂಚಿಸುತ್ತದೆ. ಅವರಲ್ಲಿ ಪ್ರಧಾನಮಂತ್ರಿಯಾಗುವ ಹಂಬಲ ಇತ್ತೆಂದು ಆ ದಿನಗಳ ಚರ್ಚೆಗಳಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದರೂ, ಈ ನಿಟ್ಟಿನಲ್ಲಿ ಯಾವುದೇ ರೀತಿಯ ರಾಜಕೀಯ ಪಿತೂರಿ, ಒಳಸಂಚು, ಗುಂಪುಗಾರಿಕೆಗಳು ಬಾಬೂಜಿ ಅವರಿಂದ ನಡೆಯಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಬಾಬೂಜಿ ಅವರ ಹೆಸರು ಪ್ರಸ್ತಾಪವಾಗಿದ್ದೇ, ಜನತಾಪಕ್ಷದಲ್ಲಿ ಅಂತರಿಕ ತಳಮಳಗಳು ಉಂಟಾಗಿ ಪಕ್ಷ ಹೋಳಾಗಿದ್ದು ಚಾರಿತ್ರಿಕ ಸತ್ಯ.
ಹಾಗೆ ನೋಡಿದರೆ ನೆಹರೂ ಯುಗದಿಂದ ಇಂದಿರಾ ಕಾಲದವರೆಗೆ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ ನೂರಾರು ನಾಯಕರ ಪೈಕಿ ಪ್ರಧಾನಮಂತ್ರಿ ಹುದ್ದೆಗೆ ಎಲ್ಲ ರೀತಿಯಲ್ಲೂ ಅರ್ಹತೆ ಪಡೆದಿದ್ದ ವ್ಯಕ್ತಿ ಎಂದರೆ ಬಾಬೂ ಜಗಜೀವನರಾಮ್. ಇದನ್ನು ವ್ಯಕ್ತಿ ವೈಭವೀಕರಣ ಎಂದು ಭಾವಿಸಬೇಕಿಲ್ಲ. ಅವರಲ್ಲಿ ಆ ಕ್ಷಮತೆ, ದಕ್ಷತೆ, ಪ್ರಾಮಾಣಿಕತೆ ಮತ್ತು ಭಾರತೀಯ ಸಮಾಜದ ವಿವಿಧ ಮಜಲುಗಳ ಬಗ್ಗೆ ಅಪಾರ ಪಾಂಡಿತ್ಯ ಇದ್ದುದನ್ನು ಅವರ ಸಮಕಾಲೀನರೆಲ್ಲರೂ ಒಪ್ಪಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದ ಬಾಬೂಜಿ ಅವರ ವಿಷಯ ಗ್ರಹಿಕೆ ಮತ್ತು ಸೂಕ್ಷ್ಮ ಮಾಹಿತಿಗಳನ್ನೂ ಸಂಗ್ರಹಿಸಿ, ದಾಖಲಿಸಿ, ನೆನಪಿಟ್ಟುಕೊಳ್ಳುವ ಕಾರ್ಯಕ್ಷಮತೆ ಅನುಕರಣೀಯವಾದುದು.
ಇಂತಹ ಒಬ್ಬ ರಾಜಕೀಯ ಮುತ್ಸದ್ದಿಯ 119ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ರಾಜಕೀಯ ಪಯಣವನ್ನು ಸಂವಿಧಾನದ ಆಶಯಗಳ ಚೌಕಟ್ಟಿನಲ್ಲಿ ಪರಾಮರ್ಶಿಸುವ ಸದವಕಾಶ ಕಲ್ಪಿಸಿದ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಿಗೂ, ಸಮಸ್ತ ಸಿಬ್ಬಂದಿಗೂ, ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ ವಿದ್ಯಾರ್ಥಿ-ಸಂಶೋಧಕ ಮಿತ್ರರಿಗೂ, ವಿಶ್ವವಿದ್ಯಾಲಯದ ಸಿಬ್ಬಂದಿಗೂ ನನ್ನ ಅನಂತ ವಂದನೆಗಳು.
ಕೊನೆಯ ಹನಿ ವಿದ್ಯಾರ್ಥಿಗಳಿಗಾಗಿ :
ಚರಿತ್ರೆಯ ಕಡೆ ನೋಡುವಾಗ ನಮ್ಮ ಬಣ್ಣಗಳ ಮಸೂರಗಳನ್ನು ಕಳಚಿಡಬೇಕು. ಅದು ನಮ್ಮ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ವರ್ತಮಾನವನ್ನು ನೋಡುವಾಗ ದುರ್ಬೀನು ಹಾಕಿಕೊಂಡು ಸೂಕ್ಷ್ಮಗಳನ್ನು ಗುರುತಿಸಬೇಕು. ಆಗ ಜನರ/ಸಮಾಜದ ಸೂಕ್ಷ್ಮ ನಾಡಿಮಿಡಿತ ಅರ್ಥವಾಗುತ್ತದೆ. ಭವಿಷ್ಯದತ್ತ ಮುಖಮಾಡಿ ನಡೆಯುವಾಗ ತೆರೆದ ಕಣ್ಣು, ತೆರೆದ ಮನಸ್ಸು, ಮುಕ್ತ ಹೃದಯ ಮತ್ತು ಉದಾತ್ತ ಮನೋಭಾವವನ್ನು ಹೊತ್ತು ಮುನ್ನಡೆಯಬೇಕು. ಜ್ಞಾನದ ವಿಸ್ತರಣೆ ರಸ್ತೆಯ ಉಬ್ಬುಗಳಿಲ್ಲದೆ (Road Humps) ಸಾಧ್ಯವಾಗುತ್ತದೆ. ಇದು ಯುವ ತಲೆಮಾರು ನೆನಪಿನಲ್ಲಿಡಬೇಕಾದ ಸೂತ್ರ.
-೦-೦-೦-೦-






