ಮುಂದಿನ ತಿಂಗಳಿಂದ ಏಳು ಹಂತಗಳಲ್ಲಿ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಆಡಳಿತರೂಢ ಬಿಜೆಪಿ ತನ್ನ ಸಾಂಪ್ರಾದಾಯಿಕ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳಲು ಹೊಸ ಯೋಜನೆಯಲಿದೆ. ದೇಶಾದ್ಯಂತ ಬಿಜೆಪಿ ಹಾಗೂ ಹಿಂದೂ ಧರ್ಮದ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದ ಯೋಗಿ ಆದಿತ್ಯನಾಥ್ ಅವರನ್ನು ಈ ಸಲ ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಹಾಗೂ ಯೋಗಿ ಆಶಯ ಕೂಡ ಇದಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯು ಹಿಂದೂಗಳು ಹೆಚ್ಚು ನೆಲೆಸಿರುವ ಪ್ರದೇಶದಲ್ಲಿ ತನ್ನ ಸಾಂಪ್ರಾದಾಯಿಕ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದೆ. ಈವರೆಗೂ ಇಲ್ಲಿ ಸ್ಪರ್ಧಿಸಿರುವ ಕೇಸರಿ ನಾಯಕರು ಈವರೆಗೂ ಸೋಲು ಕಂಡಿಲ್ಲ. ಹಾಗಾಗಿ ಯೋಗಿಯನ್ನು ಅಯೋಧ್ಯೆಯಿಂದ ಕಣಕ್ಕಿಳಿಸಬೇಕೆಂದು ಚಿಂತನೆ ನಡೆದಿದೆ.
ಈ ಬಗ್ಗೆ ಯೋಗಿ ಆದಿತ್ಯನಾಥ್ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಈ ಕುರಿತು ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ನೇತೃತ್ವದ ಕೇಂದ್ರ ಚುನಾವಣ ಸಮಿತಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಆದರೆ, ಯೋಗಿ ಸ್ಪರ್ಧೆಗೆ ಈ ನಾಯಕರೇ ಹೆಚ್ಚು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಆದರೆ, ಬಿಜೆಪಿ ಮೂಲಗಳು ಹೇಳುವ ಪ್ರಕಾರ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸಲು ಈಗಾಗಲೇ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಯೋಜನೆಗಳ ಘೋಷಣೆ, ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡದೆ ದೇಶದಲ್ಲಿಯೇ ಕುಖ್ಯಾತಿ ಪಡೆದಿರುವ ಏಕೈಕ ಸರ್ಕಾರ ಎಂದರೆ ಯೋಗಿ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಎಂದೇ ಕುಖ್ಯಾತಿ ಪಡೆದಿದೆ. ಆದರೆ, ಚುನಾವಣೆ ಬಂದರೆ ಪ್ರಚಾರದ ಸಮಯದಲ್ಲಿ ತಮ್ಮ ಎಂದಿನ ಅಜೆಂಡಾವನ್ನು ಮುನ್ನೆಲೆಗೆ ತಂದು ಪ್ರಚಾರದ ಕೇಂದ್ರ ಬಿಂದುವಾಗಿಸುವ ಸಾಧ್ಯತೆಯೇ ಹೆಚ್ಚು.
ಒಂದೆಡೆ ಬಿಜೆಪಿಯ ಬದ್ಧ ವೈರಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಯಾದವೇತರ ಹಿಂದುಳಿದ ವರ್ಗಗಳ ಮತಗಳನ್ನು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದು, ಮತ್ತೆ ಅಧಿಕಾರ ಹಿಡಿಯುವ ಕಸರತ್ತು ಮಾಡುತ್ತಿದ್ದಾರೆ. ಆದರೆ, ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ ಬಿಜೆಪಿ ಏನಾದರೂ ಹಿಂದೂಗಳ ಓಲೈಕೆಯಲ್ಲಿ ಯಶಸ್ವಿಯಾದರೆ ಮತ್ತೆ ಅಧಿಕಾರಕ್ಕೆ ಮರಳುವುದು ಖಚಿತ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಯೋಗಿ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದರೆ ಸದ್ಯ ಮೇಲ್ಮನೆ ಸದಸ್ಯ 2014ರ ನಂತರ ಗೋರಖ್ ಪುರದಿಂದ ಸತತ 5 ಭಾರೀ ಗೆಲವು ಸಾಧಿಸಿದ್ದ ಯೋಗಿ ಮೊದಲ ಭಾರಿಗೆ ತಮ್ಮ ತವರು ಕ್ಷೇತ್ರದಿಂದ ಹೊರಗೆ ಸ್ಪರ್ಧಿಸಿದಂತಾಗುತ್ತದೆ. ಅಯೋದ್ಯೆ ವಿಧಾನಸಭೆ ಕ್ಷೇತ್ರವನ್ನು ಹಾಲಿ ಫೈಜಾಬಾದ್ನ ಸಂಸದ ಲಲ್ಲು ಸಿಂಗ್ ಈ ಹಿಂದೆ ಪ್ರತಿನಿಧಿಸುತ್ತಿದ್ದರು, ಹಾಲಿ ಶಾಸಕಾರಗಿ ವೇದ್ ಪ್ರಕಾಶ್ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ.
ಅಯೋಧ್ಯದಲ್ಲಿ ಯೋಗಿ ಸ್ಪರ್ಧೆಗೆ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೆಚ್ಚು ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಮಧ್ಯೆಯೇ ಬಿಜೆಪಿಯ ರಾಜ್ಯಸಭಾ ಸದಸ್ಯ ಹರಿನಾಥ್ ಸಿಂಗ್ ಅವರು ತಮ್ಮ ಅಂಧ ಭಕ್ತಿ ತೋರಿಸುವ ಮೂಲಕ ಭಾರೀ ಸುದ್ದಿಯಾಗಿದ್ದನ್ನು ಗಮನಿಸಬಹುದು.
“ಪರಮಾತ್ಮ ಶ್ರೀಕೃಷ್ಣನು ತಮ್ಮ ಕನಸಿನಲ್ಲಿ ಬಂದು ಮಥುರಾದಿಂದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸಬೇಕು ಎಂದು ಆಜ್ಞೆ ನೀಡಿ ಹೋಗಿದ್ದಾರೆ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾಗೆ ಪತ್ರ ಸಹ ಬರೆದಿದ್ದಾರೆ.
ಪತ್ರದಲ್ಲಿ ತಿಳಿಸಿರುವಂತೆ ಯೋಗಿ ಅವರನ್ನು ಮಥುರಾದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಲು ದೇವರೇ ತಮ್ಮ ಕನಸಿನಲ್ಲಿ ಬಂದು ಆಜ್ಞೆ ನೀಡಿದ್ದಾರೆ. ಮಥುರಾದಿಂದ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ಈ ಬಗ್ಗೆ ಸ್ವತಃ ದೇವರೆ ನನ್ನ ಕನಸಿನಲ್ಲಿ ಬಂದು ಹೇಳಿದ್ದಾರೆ,” ಎಂದು ಉಲ್ಲೇಖಿಸಿದ್ದಾರೆ.
ಮಥುರಾದಲ್ಲಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡದೇ ಯೋಗಿ ನುಣುಚಿಕೊಂಡಿದ್ದಾರೆ. ಇತ್ತ ಯೋಗಿ ಸ್ಪರ್ಧೆ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನದ ಬೇಗುದಿ ಒಂದು ಕಡೆ ಹೊಗೆಯಾಡುತ್ತಿದೆ. ಪಕ್ಷದ ಒಂದು ವರ್ಗ ಯೋಗಿ ಸ್ಪರ್ಧೆ ಬಗ್ಗೆ ಒಲವು ತೋರಿದ್ದರೆ, ಇನ್ನೊಂದು ವರ್ಗ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಂತೂ ಸತ್ಯ.