ಇದೀಗ ರಾಜ್ಯದ ಎಲ್ಲರ ಚಿತ್ತ ಭದ್ರಾ ಡ್ಯಾಂನತ್ತ ನೆಟ್ಟಿದೆ. ಯಾಕೆಂದರೆ ಭದ್ರಾ ಜಲಾಶಯದಿಂದ ಆಗಸ್ಟ್ 10ರಿಂದ ನೀರು ಹರಿಸಲಾಗುತ್ತಿದೆ. ಇದು ಈಗ ಪರ -ವಿರೋಧಕ್ಕೂ ಕಾರಣವಾಗಿದೆ. ಈ ಬೆಳವಣಿಗೆ ನಡುವೆಯೇ ಸೆಪ್ಟಂಬರ್ 6 ರಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾಡ ಸಭೆ ಕರೆದಿದ್ದು, ನೀರು ನಿರ್ವಹಣಾ ಸಮಿತಿಯು ಯಾವ ನಿರ್ಧಾರಕ್ಕೆ ಬರುತ್ತದೆ ಎಂಬ ಕುತೂಹಲವೂ ಎಲ್ಲರಲ್ಲೂ ಸಾಕಷ್ಟು ಮನೆ ಮಾಡಿದೆ. ಹೀಗಾಗಿ ಯಾವ ರೀತಿಯಾದಂತಹ ನಿರ್ಧಾರಗಳು ಹೊರ ಬೀಳುತ್ತವೆ ಅನ್ನೋದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಜಿಲ್ಲೆಗಳಾದಂತಹ ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಹಲವೆಡೆ ಈಗಾಗಲೇ ಭದ್ರಾ ಡ್ಯಾಂನಿಂದ ನೀರು ಹರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಪ್ರತಿಭಟನೆಗಳೂ ನಡೆಯುತ್ತಿವೆ. ಇನ್ನು ದಾವಣಗೆರೆಯಲ್ಲಿ ನೀರು ಹರಿಸುತ್ತಿರುವ ಕ್ರಮ ಸರಿಯಾಗಿಯೇ ಇದೆ. ಇದನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಪುನರ್ ಪರಿಶೀಲನೆ ಮಾಡಬಾರದು. ಈಗ ತೆಗೆದುಕೊಂಡಿರುವ ನಿರ್ಧಾರವೇ ಮುಂದುವರೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ನಡುವೆ ಭಾರತೀಯ ರೈತ ಒಕ್ಕೂಟವು ಸೆಪ್ಟೆಂಬರ್ 5ಕ್ಕೆ ಸಭೆ ಕರೆದಿದೆ.

ಕಬ್ಬು ಇತರೆ ಬೆಳೆಗಳನ್ನು ನೀರಿಗೆ ತಕ್ಕಂತೆ ಬೆಳೆಯಲಾಗುತ್ತಿದೆ. ಆದರೆ ಸೆಪ್ಟೆಂಬರ್ 6ಕ್ಕೆ ಕಾಡಾ ಸಭೆಯನ್ನು ಕರೆದು ಮರು ತೀರ್ಮಾನಕ್ಕೆ ಸಜ್ಜಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮರು ತೀರ್ಮಾನವಾಗದಂತೆ ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಕ್ಷಾತೀತವಾಗಿ ಆಗಮಿಸುವಂತೆ ಒಕ್ಕೂಟದ ಅಧ್ಯಕ್ಷ ಹೆಚ್.ಆರ್.ಲಿಂಗರಾಜ ಮನವಿ ಮಾಡಿದ್ದಾರೆ.
ನೀರಾವರಿ ಇಲಾಖೆಯು ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ ಆನವೇರಿ ಶಾಖಾನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾನಾಲೆ ಹರಿಹರ ಮತ್ತು ಗೋಂದಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.

ಇನ್ನೊಂದೆಡೆ ಸಭೆ ರದ್ದುಪಡಿಸಲು ಒತ್ತಾಯ
ಭದ್ರಾ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲು ಸೆಪ್ಟೆಂಬರ್ 6ರಂದು ಐಸಿಸಿ ಸಭೆಯನ್ನು ಕರೆಯಲಾಗಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ಸಭೆ ರದ್ದುಪಡಿಸಲು ಒತ್ತಾಯಿಸಬೇಕು. ಶಿವಮೊಗ್ಗದ ಮಲವಗೊಪ್ಪದಲ್ಲಿನ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸಭೆ ಕರೆದಿದ್ದು, ಈ ಸಭೆ ನಡೆಸದಂತೆ ಸೂಚಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ಓಟ್ಟಾರೆಯಾಗಿ ಭದ್ರಾ ಡ್ಯಾಂನಿಂದ ಎಷ್ಟು ಟಿಎಂಸಿ ನೀರು ಹೊರಬರಲಿದೆ..? ಮತ್ತು ಅಚ್ಚುಕಟ್ಟು ಪ್ರದೇಶಗಳಿಗೆ ಯಾವ ಪ್ರಮಾಣದಲ್ಲಿ ನೀರು ಸಿಗಲಿದೆ ಮತ್ತು ಈ ಸಭೆ ಏನಾದ್ರೂ ರದ್ದುಗೊಳ್ಳುವ ಸಾಧ್ಯತೆಗಳಿವೆಯಾ ಅಂತಾ ಪ್ರಶ್ನೆಗಳು ಮನೆ ಮಾಡಿವೆ.