ಬೆಂಗಳೂರು : ಸುಮಾರು ಎರಡು ದಶಕಗಳ ಕಾಲ 10 ಬಾರಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಹಾರದ (Bihar CM) ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ (Nitish Kumar) ಅವರು ರಾಜೀನಾಮೆ ನೀಡಿದ್ದಾರೆ.

ಸುಮಾರು ಎರಡು ದಶಕಗಳ ಕಾಲ 10 ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರ ಯುಗಾಂತ್ಯವಾಗಿದೆ. ಇತ್ತೀಚಿಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿತೀಶ್ ಕುಮಾರ್ ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ಲೋಕ ಭವನಕ್ಕೆ ತೆರಳಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್(ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಸುದೀರ್ಘ ವರ್ಷಗಳ ಕಾಲ ಬಿಹಾರವನ್ನು ಆಳಿದ್ದ ಹಿರಿಯ ನಾಯಕನ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!
ಇನ್ನೂ ನಿತೀಶ್ ರಾಜೀನಾಮೆ ಬೆನ್ನಲ್ಲೇ ಬಿಹಾರದ ಪಾಟ್ನಾದಲ್ಲಿ ಎನ್ಡಿಎ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣ ವಚನಕ್ಕೆ ಕ್ಷಣಗಣನೆ ಶುರುವಾಗಿದೆ.
ಪ್ರಸ್ತುತ ಚೌಧರಿ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ಬಿಹಾರದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಹೀಗಾಗಿ, ಇದು ಬಿಜೆಪಿ ಪಾಲಿಗೆ ಮಹತ್ವದ ಕ್ಷಣವಾಗಿದೆ. ಈ ದಿನಕ್ಕಾಗಿಯೇ ಬಿಜೆಪಿಯ ಘಟಾನುಘಟಿ ನಾಯಕರು ಕಾಯುತ್ತಿದ್ದರು. ಕೊನೆಗೂ ಆ ದಿನ ಸನೀಹದಲ್ಲಿದೆ. ಬಿಜೆಪಿ ಹೈಕಮಾಂಡ್ ನಾಯಕರು ಹೆಣೆದಿರುವ ರಾಜಕೀಯ ಬಲೆ ಹಾಗೂ ತಂತ್ರಗಾರಿಕೆಯಿಂದ ದೇಶದ ರಾಜಕೀಯದ ದಿಕ್ಸೂಚಿಯಾಗಿರುವ ಬಿಹಾರದಲ್ಲಿ ಕಮಲದ ಆಳ್ವಿಕೆಗೆ ವೇದಿಕೆ ಸಜ್ಜಾಗುತ್ತಿದೆ.






