ಪ್ರತಿಧ್ವನಿ ವಿಶೇಷ ವರದಿ..
ಬೆಂಗಳೂರು : ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸಿರುವ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯು ನಾನಾ ವಿವಾದಗಳನ್ನು ಹಾಗೂ ಸಮಸ್ಯೆಗಳಿಗೆ ಕಾರಣವಾಗಿದೆ. ಸದ್ಯ ಚುನಾವಣೆಯ ಹೊಸ್ತಿಲಲ್ಲಿರುವ ದೇಶದ ಗಡಿ ರಾಜ್ಯ ಪಶ್ಚಿಮ ಬಂಗಾಳದಲ್ಲಿಯೂ ಇದರ ಬಿಸಿ ತಟ್ಟಿದೆ.

ಈ ವಿಚಾರವಾಗಿ ಇದೀಗ ಒಂದೊಂದಾಗಿ ಆತಂಕಕಾರಿ ವಿಚಾರಗಳು ಬಯಲಿಗೆ ಬರುತ್ತಿವೆ. ಅದರಲ್ಲಿಯೇ ಭಾರತೀಯ ಸೇನೆಯ ಮಾಜಿ ತಂತ್ರಜ್ಞ ಮುಹಮ್ಮದ್ ದೌದ್ ಅಲಿ ಎನ್ನುವವರು ಇತ್ತೀಚೆಗೆ ತಮ್ಮ ತವರು ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಮತಚಲಾವಣೆಯ ಹಕ್ಕಿನಿಂದ ವಂಚಿತರಾಗಿದ್ದಾರೆಂಬ ಮಾಹಿತಿಯಿಂದ ಶಾಕ್ ಆಗಿದ್ದಾರೆ.
ಅವರ ಪಾಸ್‌ಪೋರ್ಟ್ ಮತ್ತು ಸೇವಾ ದಾಖಲೆಗಳು ಸೇರಿದಂತೆ ಇತರ ದಾಖಲೆಗಳು ಅದೇ ರಾಜ್ಯದಲ್ಲಿದ್ದರೂ ಸಹ, ಅವರ ಮತ್ತು ಅವರ ಮೂವರು ಮಕ್ಕಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಅಲ್ಲದೆ ಅವರ ಪತ್ನಿ ಮಾತ್ರ ಪಟ್ಟಿಯಲ್ಲಿ ಉಳಿದಿರುವ ಬಗ್ಗೆ ಮಾಹಿತಿ ತಿಳಿದಿದೆ.

ಪ್ರಮುಖವಾಗಿ ಪಶ್ಚಿಮ ಬಂಗಾಳದ 7 ಕೋಟಿ 60 ಲಕ್ಷದಷ್ಟು ಮತದಾರರಲ್ಲಿ ಸುಮಾರು ಶೇ.12 ರಷ್ಟು ಅಂದರೆ 90 ಲಕ್ಷ ಮತದಾರರಲ್ಲಿ 65 ವರ್ಷದ ಮುಹಮ್ಮದ್ ದೌದ್ ಅಲಿ ಮತ್ತು ಅವರ ಮಕ್ಕಳು ಸೇರಿದ್ದಾರೆ. ಈ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ 2026ರ ನೂತನ ಮತ ಪಟ್ಟಿಯಿಂದ ಇವರನ್ನು ಕೈ ಬಿಡಲಾಗಿದೆ. ಇನ್ನೂ ಈ ತಿಂಗಳ ಕೊನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನೂತನ ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಲು ಮತದಾನ ನಡೆಯಲಿದೆ.
ಈ 90 ಲಕ್ಷ ಮತದಾರರಲ್ಲಿ, 60 ಲಕ್ಷಗಳಿಗಿಂತಲೂ ಅಧಿಕ ಹೆಸರುಗಳನ್ನು ಗೈರುಹಾಜರಿ ಅಥವಾ ಮೃತ ಮತದಾರರೆಂದು ಗುರುತಿಸಿ ತೆಗೆದುಹಾಕಲಾಗಿದೆ. ಆದರೆ ಜೀವಂತವಾಗಿರುವ ಈ ಅಲಿಯವರಂತಹ ಕುಟುಂಬಗಳು ಸೇರಿದಂತೆ ಇನ್ನೂ 27 ಲಕ್ಷ ಮತದಾರರ ಭವಿಷ್ಯದ ಬಗ್ಗೆ ತೀರ್ಮಾನವಾಗಿಲ್ಲ, ಅಲ್ಲದೆ ಇದು ಕಾನೂನು ಪ್ರಕ್ರಿಯೆಗಳನ್ನು ಒಳಗೊಂಡಿರುವ ವಿಚಾರವೂ ಆಗಿದೆ.
ಇದನ್ನೂ ಓದಿ : ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ
ಮುಖ್ಯವಾಗಿ ಇಲ್ಲಿಯವರೆಗೆ ಹದಿಮೂರು ರಾಜ್ಯಗಳು ಮತ್ತು ಫೆಡರಲ್ ಆಡಳಿತದ ಪ್ರದೇಶಗಳು ವಿಶೇಷ ತೀವ್ರ ಪರಿಷ್ಕರಣಾ (SIR) ಪ್ರಕ್ರಿಯೆಗೆ ಒಳಗಾಗಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಇದರ ಬಗ್ಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರತದ ಚುನಾವಣಾ ಆಯೋಗವು, ನಕಲಿ ಅಥವಾ ಹಳೆಯ ದಾಖಲೆಗಳನ್ನು ತೆಗೆದುಹಾಕಿ ನಿಜವಾದ ಮತದಾರರನ್ನು ಗುರುತಿಸುವ ಉದ್ದೇಶವನ್ನು ಈ ವಿಶೇಷ ತೀವ್ರ ಪರಿಷ್ಕರಣೆಯು ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ. ಆದರೆ ಕಳೆದ ವರ್ಷವಷ್ಟೇ ಬಿಹಾರ ರಾಜ್ಯದಲ್ಲಿ ಮೊದಲ ಬಾರಿಗೆ ಈ ಪ್ರಕ್ರಿಯೆ ನಡೆದಾಗಿನಿಂದ ಇದು ವಿವಾದದಲ್ಲಿ ಸಿಲುಕಿಕೊಂಡಿದ್ದು, ಅಲ್ಲದೆ ಕಾನೂನು ಸವಾಲುಗಳನ್ನು ಎದುರಿಸುತ್ತಿದೆ.

ಸದ್ಯ ಟಿಎಂಸಿ ಆಡಳಿತದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಇದು ವಿಶೇಷವಾಗಿ ವಿವಾದಾಸ್ಪದವಾಗಿದೆ, ಇಲ್ಲಿನ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಹಾಗೂ ಚುನಾವಣಾ ಆಯೋಗದ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ.
ಯಾವುದೇ ಅರ್ಹ ಮತದಾರರನ್ನು ಹೊರಗಿಡದೆ, ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರಿಸದೆ ಶುದ್ಧ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವುದು ಪರಿಷ್ಕರಣಾ ಕಾರ್ಯದ ಉದ್ದೇಶವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಪಟ್ಟಿ ಪರಿಷ್ಕರಣೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಾಂಗ್ಲಾ ನುಸುಳುಕೋರರೇ ಟಾರ್ಗೆಟ್ ಆಗಿದ್ರೂ ಉದ್ದೇಶ ಬೇರೆಯಾಯಿತೆ..?
ಖುದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಈ ಮತದಾರರ ಪಟ್ಟಿ ಸ್ವಚ್ಛತಾ ಕಾರ್ಯವು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಗಡಿ ರಾಜ್ಯದಲ್ಲಿ ಅತ್ಯಧಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ. ಇನ್ನೂ ಮುಸ್ಲಿಮರನ್ನು ವಿರೋಧಿಸಿ ಈ ಪದವನ್ನು ಬಳಸಲಾಗುತ್ತಿದೆ ಎಂದು ಟಿಎಂಸಿ ತಿರುಗೇಟು ನೀಡಿದೆ. ಆದರೂ ಸಹ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅನೇಕ ಹಿಂದೂ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಭಾರತವು ಬಾಂಗ್ಲಾದೇಶದೊಂದಿಗೆ 4,096 ಕಿ.ಮೀ (2,545-ಮೈಲಿ) ಉದ್ದದ ಬಹುಭಾಗವನ್ನು ಹೊಂದಿದೆ. ಭಾಗಶಃ ತೀರ ಪಾತ್ರದ ಗಡಿಯನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಇದರ ಹೆಚ್ಚಿನ ಭಾಗವು ಪಶ್ಚಿಮ ಬಂಗಾಳದ ಮೂಲಕ ಹಾದುಹೋಗುತ್ತದೆ. ಇದು ರಾಜ್ಯದಲ್ಲಿ ವಲಸೆ ಮತ್ತು ಮತದಾರರ ಪಟ್ಟಿಯ ಕುರಿತಾದ ಚರ್ಚೆಗಳಿಗೆ ಒಂದು ಬಿರುಸಿನ ರಾಜಕೀಯ ತಿರುವನ್ನು ನೀಡಿದೆ.

2011 ರ ಜನಗಣತಿಯ ಪ್ರಕಾರ, ಪಶ್ಚಿಮ ಬಂಗಾಳವು ಭಾರತದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಗೆ ನೆಲೆಯಾಗಿರುವ ರಾಜ್ಯವಾಗಿದೆ. ಇದು ದೇಶದ ಸುಮಾರು 17 ಕೋಟಿ 20 ಲಕ್ಷ ಮುಸ್ಲಿಮರಲ್ಲಿ ಸರಿಸುಮಾರು ಶೇ.14 ರಷ್ಟಿದೆ. 7 ಕೋಟಿಗೂ ಹೆಚ್ಚು ಮತದಾರರಿರುವ ಈ ರಾಜ್ಯವನ್ನು 2011 ರಿಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಆಳುತ್ತಿದೆ. ಈ ಬಾರಿ ದೀದಿಯನ್ನು ಮನೆಗೆ ಕಳುಹಿಸಿ ಅಧಿಕಾರ ಹಿಡಿಯುವ ತವಕದಲ್ಲಿ ಮೋದಿ ನಾಯಕತ್ವದ ಭಾರತೀಯ ಜನತಾ ಪಕ್ಷವಿದೆ.
ಈ ನಡುವೆ ಭಾರತದ ನಾಲ್ಕನೇ ಅತಿ ಹೆಚ್ಚು ಸಂಸತ್ ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳ, ಬಿಜೆಪಿ ಪಾಲಿಗೆ ಇನ್ನೂ ಅಧಿಕಾರದ ಕನಸನ್ನೇ ಹುಟ್ಟಿಸಿದೆ. ಆದರೆ ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ, ರಾಜ್ಯದ 294 ವಿಧಾನಸಭಾ ಸ್ಥಾನಗಳ ಪೈಕಿ ಸ್ವಲ್ಪ ಭಾಗವನ್ನು ಗೆದ್ದಿರುವ ತೃಪ್ತಿಯಲ್ಲಿದೆ.

ಬಹು ಮುಖ್ಯವಾಗಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯು ಈ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡಲು ನಡೆಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ಲಕ್ಷಾಂತರ ಜನರನ್ನು, ವಿಶೇಷವಾಗಿ ಮುಸ್ಲಿಮರನ್ನು ಮತದಾನದ ಹಕ್ಕುಗಳಿಂದ ವಂಚಿತಗೊಳಿಸಿದೆ ಎಂದು ಆಡಳಿತಾರೂಢ ಟಿಎಂಸಿ ಗಂಭೀರವಾದ ಆರೋಪಗಳನ್ನು ಮಾಡಿದೆ. ಆದರೆ ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗ ಎರಡೂ ಈ ಆರೋಪಗಳನ್ನು ಅಲ್ಲಗಳೆದಿವೆ.
ಪದೇ ಪದೇ ಕಾನೂನು ಸವಾಲುಗಳನ್ನು ಎದುರಿಸಿದ ನಂತರ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸದೆ ಏಪ್ರಿಲ್ 23 ಹಾಗೂ 29ರಂದು ನಡೆಯಲಿರುವ ಚುನಾವಣೆಗಳನ್ನು ಯಥಾವತ್ತಾಗಿ ನಡೆಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಅವಕಾಶ ನೀಡಿದೆ. ಆದರೆ ಇದರ ಪರಿಣಾಮವಾಗಿ, 27 ಲಕ್ಷ ಮತದಾರರ ಭವಿಷ್ಯವು ಅತಂತ್ರವಾಗಿದೆ.
ಈ ಮತದಾರರು 2002ರ ಮತದಾರರ ಪಟ್ಟಿಗೆ ಲಿಂಕ್ ಮಾಡುವ ದಾಖಲೆಗಳನ್ನು ಸಲ್ಲಿಸಿದ್ದರು. ಹೀಗಾಗಿ ಈಗಿನ ಎಸ್‌ಐಆರ್ ಪ್ರಕ್ರಿಯೆಯು ಸ್ವಚ್ಛತಾ ಪಟ್ಟಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಆದರೂ ಚುನಾವಣಾ ಆಯೋಗವು ಅವರ ದಾಖಲೆಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಗುರುತಿಸಲು ಹೊಸ, ಎಐ (AI) ಚಾಲಿತ ಪ್ರಕ್ರಿಯೆಯನ್ನು ಬಳಸಿಕೊಂಡಿದೆ. ಈ ಮೂಲಕ ಅವರನ್ನು ಅನುಮಾನಾಸ್ಪದ ಮತದಾರರೆಂದು ಪರಿಗಣಿಸಿದೆ.

ಪ್ರಮುಖವಾಗಿರುವ ಈ ಬೆಳವಣಿಗೆಯಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಕ್ಷೇತ್ರವಾರು ದತ್ತಾಂಶವು, 27 ಲಕ್ಷ ನಿರುದ್ಯೋಗಿಗಳಲ್ಲಿ ಸುಮಾರು ಶೇ. 65ರಷ್ಟು ಮುಸ್ಲಿಮರೇ ಇದ್ದಾರೆ ಎಂಬುವುದನ್ನು ಸೂಚಿಸುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ತೆಗೆದುಹಾಕಲಾದ 90 ಲಕ್ಷ ಜನರಲ್ಲಿ, 31 ಲಕ್ಷದ 10 ಸಾವಿರದಷ್ಟು ಅಂದರೆ ಸುಮಾರು ಶೇ. 34 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇದು 2011ರ ಜನಗಣತಿಯ ಪ್ರಕಾರ ಪಶ್ಚಿಮ ಬಂಗಾಳದ ಜನಸಂಖ್ಯೆಯಲ್ಲಿ ಅವರ ಶೇ. 27ರಷ್ಟರ ಪಾಲಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಇನ್ನೂ ಈ ವಿಶೇಷ ತೀವ್ರ ಪರಷ್ಕರಣೆಯು ಸದ್ಯ ದೇಶದ ರಾಜಕೀಯದಲ್ಲಿ ಅತ್ಯಂತ ಕಾವೇರಿದ ಚರ್ಚೆಯಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಅಶಾಂತಿಗೂ ಕಾರಣವಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಗುದ್ದಾಟಕ್ಕೂ ಈ ಪ್ರಕ್ರಿಯೆ ಎಡೆ ಮಾಡಿಕೊಟ್ಟಿದೆ. ಮುಖ್ಯವಾಗಿ ಚುನಾವಣಾ ಆಯೋಗದ ನಡೆಯ ಮೇಲೆ ಅನುಮಾನ ಹುಟ್ಟುವಂತೆ ಮಾಡಿದೆ.
ಈ ಅಲಿಯವರಂತಹ ಅದೆಷ್ಟೋ ಜನರು ತಮ್ಮ ಸಂವಿಧಾನಾತ್ಮಕ ಹಕ್ಕಿನಿಂದ ದೂರ ಉಳಿಯುವಂತಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ತಮಗೆ ಬೇಕಾದ ನಾಯಕನನ್ನು, ಸೇವಕನನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವಿದೆ. ಮತದಾನವೆಂಬ ಬಲವಾದ ಅಸ್ತ್ರವೂ ಇದೆ, ಆದರೆ ಎಸ್‌ಐಆರ್ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳಿಂದ ಅಲಿಯವರಂತಹ ನೈಜ ಮತದಾರರು ಅನ್ಯಾಯಕ್ಕೆ ಒಳಗಾಗುವ ಸನ್ನಿವೇಶ ಬಂದಿರುವುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡುತ್ತದೆ.






