ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೀಣ್ಯ ಮೇಲ್ಸೇತುವೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ರವರೆಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಈ ನಿರ್ಬಂಧವು ಮುಖ್ಯವಾಗಿ ತುಮಕೂರು, ನೆಲಮಂಗಲ ಕಡೆಯಿಂದ ಬೆಂಗಳೂರಿನತ್ತ ಬರುವ ವಾಹನಗಳಿಗೆ ಅನ್ವಯವಾಗಲಿದೆ. ಹಗಲಿನ ವೇಳೆಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿಯಲಿದ್ದು, ರಾತ್ರಿ ವೇಳೆ ಮಾತ್ರ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯವರೆಗೆ, ಶನಿವಾರ ಹಾಗೂ ಭಾನುವಾರ ಮಧ್ಯರಾತ್ರಿ 12:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯವರೆಗೆ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ತುಮಕೂರು ಹಾಗೂ ನೆಲಮಂಗಲದಿಂದ ಬೆಂಗಳೂರಿನತ್ತ ಬರುವ ವಾಹನಗಳು ಎಸ್‌ಆರ್‌ಎಸ್ ಅಪ್ಪರ್ ರಾಂಪ್ ಮೂಲಕ ಕೆಳಗಿಳಿದು, ಎನ್‌ಎಚ್-4 ಸರ್ವೀಸ್ ರಸ್ತೆ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮಾರ್ಗದ ಮೂಲಕ ತೆರಳಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ಈ ಮಾರ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಹೆಚ್ಚುವರಿ ಸಮಯವನ್ನು ಮೀಸಲಿಡುವಂತೆ ಮನವಿ ಮಾಡಲಾಗಿದೆ.







