ಮೂಲ : ಶಶಾಂಕ್ ಪಾಂಡೆ
ಕನ್ನಡಕ್ಕೆ : ನಾ ದಿವಾಕರ
(ಮೂಲ ಲೇಖನ : The state against itş students lessons to remember –ಶಶಾಂಕ್ ಪಾಂಡೆ .
ದ ಹಿಂದೂ 3 ಆಗಸ್ಟ್ 2026)
150 ವರ್ಷಗಳ ಮುನ್ನ, 1876ರ ಜುಲೈ 26ರಂದು ಸುರೇಂದ್ರನಾಥ ಬ್ಯಾನರ್ಜಿ ಕಲ್ಕತ್ತಾದಲ್ಲಿ ಇಂಡಿಯನ್ ಅಸೋಸಿಯೇಷನ್ (ಭಾರತೀಯ ಸಂಘ) ಸ್ಥಾಪಿಸಿದ್ದರು. ಈ ಸಂಘಟನೆಯ ಮೊಟ್ಟಮೊದಲ ಹೋರಾಟ ವಿದ್ಯಾರ್ಥಿ ಸಮುದಾಯದ ಸಮಸ್ಯೆಯನ್ನೇ ಆಧರಿಸಿತ್ತು. ವಸಾಹತು ಸರ್ಕಾರ ಭಾರತೀಯ ನಾಗರಿಕ ಸೇವೆಯ (Indian Civil Service) ಪರೀಕ್ಷೆಗಳಿಗೆ ಅರ್ಹತೆಯ ಗರಿಷ್ಟ ವಯೋಮಿತಿಯನ್ನು 21 ರಿಂದ 19 ವರ್ಷಗಳಿಗೆ ಇಳಿಸಿತ್ತು. ಇದರ ಪರಿಣಾಮ, ಈ ಉನ್ನತ ಹುದ್ದೆಯನ್ನು ಗಳಿಸಲು ಅಪೇಕ್ಷಿಸುವ ಬಹುತೇಕ ಭಾರತೀಯ ಯುವಜನರಿಗೆ ಪ್ರವೇಶ ದ್ವಾರ ಮುಚ್ಚಿದಂತಾಗಿತ್ತು. ವಿದ್ಯಾರ್ಥಿಗಳ ದೂರನ್ನು ಪ್ರಭುತ್ವವು ಕೇವಲ ಆಡಳಿತಾತ್ಮಕ ಅಡಿಟಿಪ್ಪಣಿಯ ರೀತಿ ಪರಿಗಣಿಸಿತ್ತು. ಬ್ಯಾನರ್ಜಿ ಅವರು ಇದನ್ನು ಸಾಂವಿಧಾನಿಕ ಪ್ರಶ್ನೆ ಎಂದೇ ಪರಿಗಣಿಸಿ, ದೇಶ ಪರ್ಯಟನ ನಡೆಸಿ , ಪರೀಕ್ಷಾ ಆಕಾಂಕ್ಷಿ ಯುವ ಜನರನ್ನು ಸಂಪರ್ಕಿಸಿ, ಅವರಲ್ಲಿದ್ದ ಆಕ್ರೋಶವನ್ನು ಬಳಸಿಕೊಂಡು, ಮೊಟ್ಟಮೊದಲ ಅಖಿಲ ಭಾರತ ಮಟ್ಟದ ರಾಜಕೀಯ ಕ್ರೋಢೀಕರಣವನ್ನಾಗಿ ಪರಿವರ್ತಿಸಿದ್ದರು. ತದನಂತರ ಬ್ರಿಟೀಷ್ ಆಳ್ವಿಕೆಯು ತಿರಸ್ಕರಿಸಿದ್ದ ಒಂದು ಪೀಳಿಗೆಯ ನಿಷ್ಠೆಯನ್ನು ಮರಳಿ ಗಳಿಸಲು ಸಾಧ್ಯವಾಗಲೇ ಇಲ್ಲ.

50 ವರ್ಷಗಳ ಹಿಂದೆ 1976ರ ಮುಂಗಾರು-ಚಳಿಗಾಲದ ಸಮಯದಲ್ಲಿ ಎರಡು ಭೂ ಖಂಡಗಳ ಎರಡು ಪ್ರಭುತ್ವಗಳು, ತದ್ವಿರುದ್ಧವಾದ ಪಾಠವನ್ನು ಕಲಿಸಲು ಮುಂದಾಗಿದ್ದವು. ಜೂನ್ 16 1976ರಂದು ದಕ್ಷಿಣ ಆಫ್ರಿಕಾದ ಸೊವೆಟೋ ಪ್ರಾಂತ್ಯದ ಶಾಲಾ ಮಕ್ಕಳು , ಆಫ್ರಿಕಾನಾ ಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ವಿಧಿಸಿದ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ಈ ಪ್ರತಿಭಟನೆ ಪ್ರಭುತ್ವದ ಶಸ್ತ್ರಪ್ರಯೋಗವನ್ನು ಎದುರಿಸಬೇಕಾಯಿತು, ಮುಂದಿನ ಕೆಲವೇ ದಿನಗಳಲ್ಲಿ ನೂರಾರು ಸಾವುಗಳು ಸಂಭವಿಸಿದ್ದವು. ಭಾರತದಲ್ಲಿ ತುರ್ತುಪರಿಸ್ಥಿತಿಯು ಬೇರೊಂದು ರೀತಿಯಲ್ಲಿ ಕಾಲೇಜು ಕ್ಯಾಂಪಸ್ಗಳನ್ನು ಖಾಲಿ ಮಾಡಿಸಿತ್ತು. ವಿದ್ಯಾರ್ಥಿ ಸಂಘಗಳನ್ನು ಅಮಾನತು ಮಾಡಲಾಗಿತ್ತು. ಆಂತರಿಕ ಭದ್ರತೆ ನಿರ್ವಹಣಾ ಕಾಯ್ದೆ (MISA) ಕಾಯ್ದೆಯಡಿ ಎಲ್ಲ ಮಾದರಿಯ ಕಾರ್ಯಕರ್ತರನ್ನೂ ಸೆರೆಮನೆಯಲ್ಲಿರಿಸಲಾಗಿತ್ತು.

ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ) ಬಂದೂಕುಗಳನ್ನು ಬಳಸಿತ್ತು, ನವದೆಹಲಿ (ಭಾರತ) ಪ್ರತಿಬಂಧಕ ಬಂಧನದ (Preventive Detention) ಅಸ್ತ್ರವನ್ನು ಬಳಸಿತ್ತು. ಎರಡೂ ಪ್ರಭುತ್ವಗಳಿಗೆ ಸಹಜ ಸ್ಥಿತಿಯನ್ನು ಸ್ಥಾಪಿಸಲಾಗಿದೆ ಎಂಬ ವಿಶ್ವಾಸ ಇತ್ತು. ಆದರೆ 15 ವರ್ಷಗಳ ಒಳಗೆ ಸೊವೇಟೋ ಪ್ರಾಂತ್ಯದ ಯುವ ಪೀಳಿಗೆಯು ವರ್ಣಭೇದ ನೀತಿಯ ನಿರ್ವಹಣೆ-ಮುಂದುವರಿಕೆ ಅಸಾಧ್ಯವಾಗುವಂತೆ ಮಾಡಿತ್ತು, ತುರ್ತುಪರಿಸ್ಥಿತಿಯ ಪೀಳಿಗೆಯು 1977ರ ನಂತರದ ಭಾರತಕ್ಕೆ ರಾಜಕೀಯ ನಾಯಕತ್ವವನ್ನು ಸೃಷ್ಟಿಸಿತ್ತು. ಯುವ ಜನಾಂಗವನ್ನು ದಮನಿಸುವ ಮೂಲಕ ಪಡೆದುಕೊಂಡ ಸಹಜ ಸ್ಥಿತಿ ಎರಡೂ ಪ್ರಭುತ್ವಗಳಿಗೆ ಬಹಳ ದುಬಾರಿಯಾಗಿತ್ತು.

ಮರುಕಳಿಸಿದ ಹಳೆಯ ಮಾದರಿ
ಇದೇ ಜುಲೈ ಮಾಸದಲ್ಲಿ ಭಾರತದ ಸಂಸತ್ತಿನ ಸುತ್ತಮುತ್ತಲ ರಸ್ತೆಗಳು ಮತ್ತು ಜಂತರ್ ಮಂತರ್ ಈ ವಿದ್ಯಮಾನದ ಮೂರನೆಯ ಆಯಾಮವನ್ನು ಎದುರಿಸಬೇಕಾಯಿತು. ಆನ್ ಲೈನ್ ವಿಡಂಬನೆಯಾಗಿ ಆರಂಭವಾದ ಒಂದು ಪ್ರಕ್ರಿಯೆ ಶೀಘ್ರದಲ್ಲೇ, ಇತ್ತೀಚೆಗೆ ಕಂಡಿರದಂತಹ ವಿದ್ಯಾರ್ಥಿ ಸಮೂಹದ ಅತಿದೊಡ್ಡ ಕ್ರೋಢೀಕರಣವಾಗಿ ಪರಿಣಮಿಸಿತ್ತು. ಇದಕ್ಕೆ ಆಧಾರವಾದ ಕುಂದುಕೊರತೆಗಳು ಅಮೂರ್ತವೂ ಆಗಿರಲಿಲ್ಲ, ಉತ್ಪಾದಿತವೂ ಆಗಿರಲಿಲ್ಲ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET-UG) ಪ್ರಶ್ನೆಪತ್ರಿಕೆಯ ಸೋರಿಕೆಯ ಪರಿಣಾಮ, 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಬರೆದಿದ್ದ ವೈದ್ಯಕೀಯ ಪದವಿಪೂರ್ವ (Under graduate) ಪರೀಕ್ಷೆಗಳನ್ನು ರದ್ದುಪಡಿಸಬೇಕಾಯಿತು. ಇದು ಲಕ್ಷಾಂತರ ಶಾಲಾ ಮಕ್ಕಳನ್ನು ಗೊಂದಲಕ್ಕೀಡುಮಾಡಿತ್ತು. ಈವರೆಗೂ ಸರ್ಕಾರದ ಪ್ರತಿಕ್ರಿಯೆ ಪರಿಚಿತ ಮಾದರಿಯನ್ನೇ ಅವಲಂಬಿಸಿದ್ದು ಬ್ಯಾರಿಕೇಡ್, ಅಶ್ರುವಾಯು, ಲಾಠಿ ಚಾರ್ಜ್ ಪರಿಣಾಮವಾಗಿ ಸಂಸತ್ ಜಾಥಾ ಸಮಯದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಾಯಗೊಂಡರು. ಉನ್ನತ ಮಟ್ಟದ ಸಂಸ್ಥೆಗಳ ಮಾತುಗಳಲ್ಲಿ ಪ್ರತಿಭಟನಾಕಾರರನ್ನು ಕ್ರಿಮಿಕೀಟಗಳಿಗೆ ಹೋಲಿಸಿದ್ದೂ ಆಯಿತು.
ಈ ಮಾದರಿ ಸ್ಥಾಪಿತ ರೂಪ ಪಡೆಯುವ ಮುನ್ನ ಪ್ರಭುತ್ವವು ಇತಿಹಾಸದಿಂದ ಮೂರು ಪಾಠಗಳನ್ನು ಕಲಿಯಬೇಕಿದೆ.

ಮೊದಲನೆಯ ಪಾಠ ಎಂದರೆ, ಬಲಪ್ರಯೋಗವು ನೈಜ ಕುಂದು ಕೊರತೆಗಳನ್ನು ಹೋಗಲಾಡಿಸುವುದಿಲ್ಲ ಬದಲಾಗಿ ಅದನ್ನು ಸಂಘಟಿಸುತ್ತದೆ. ಸೊವೇಟೋ ದಂಗೆಯು ಕ್ರಾಂತಿಯ ರೂಪದಲ್ಲಿ ಆರಂಭವಾಗಲಿಲ್ಲ. ಬೋಧನಾ ಮಾಧ್ಯಮ ಭಾಷೆಯ ವಿರುದ್ಧ ಶಾಲಾ ಮಕ್ಕಳ ಜಾಥಾ ರೂಪದಲ್ಲಿ ಆರಂಭವಾಗಿತ್ತು. ಗುಂಡಿನ ದಾಳಿ ಅದನ್ನು ಕ್ರಾಂತಿಯಾಗಿ ಪರಿವರ್ತಿಸಿತು. ಬಲಿಯಾದ ಪ್ರತಿಯೊಬ್ಬ ವಿದ್ಯಾರ್ಥಿಯ ಚಿತ್ರವೂ ನೇಮಕಾತಿಯ ಪೋಸ್ಟರ್ ಆಗಿ ಪರಿಣಮಿಸಿತು. ಜೂನ್ 1976ರ ಒಂದು ತಿಂಗಳ ನಂತರ ಗಡೀಪಾರು ಶಿಬಿರಗಳು ಹದಿ ಹರೆಯದವರಿಂದ ತುಂಬಿದ್ದವು. ತದನಂತರ ಆಳ್ವಿಕೆಯೇ ಸ್ಥಾಪಿಸಿದ ಆಯೋಗವು , ವಿದ್ಯಾರ್ಥಿಗಳ ಮೂಲ ಕುಂದುಕೊರತೆಗಳಿಗಿಂತಲೂ ಹೆಚ್ಚಾಗಿ ಪೊಲೀಸರ ಪ್ರತಿಕ್ರಿಯೆಯೇ ಪ್ರತಿಭಟನೆಯೊಂದನ್ನು ದಂಗೆಯಾಗಿ ಪರಿವರ್ತಿಸಿತ್ತು ಎಂದು ದೃಢೀಕರಿಸಿತ್ತು.
ಈ ತಂತ್ರಗಾರಿಕೆ ದಕ್ಷಿಣ ಆಫ್ರಿಕಾದ ಉತ್ಪನ್ನವಲ್ಲ, ಇದು ಸಾರ್ವತ್ರಿಕವಾದದ್ದು. ಪ್ರಭುತ್ವವು ಒಂದು ನಿರ್ದಿಷ್ಟ, ಸೀಮಿತ ಬೇಡಿಕೆಗೆ ಸಾಮಾನ್ಯೀಕೃತ ಹಿಂಸೆಯ (Generalised Violence) ಮೂಲಕ ಪ್ರತಿಕ್ರಿಯಿಸಿದರೆ ಅಗ ನೀತಿಯನ್ನು ಕುರಿತ ವಿವಾದವು ಘನತೆಯ ಪ್ರಶ್ನೆಯಾಗುತ್ತದೆ. ಘನತೆಯ ಸುತ್ತಲಿನ ವಿವಾದಗಳು ಸುಲಭವಾಗಿ ಇತ್ಯರ್ಥವಾಗುವುದಿಲ್ಲ. ಲಾಠಿ ಚಾರ್ಜ್ ಆದ ಮರುದಿನ ಜಂತರ್ ಮಂತರ್ಗೆ ಹಿಂದಿರುಗಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮನ್ನು ಸಂದರ್ಶಿಸಿದ ಪ್ರತಿಯೊಂದು ದೃಶ್ಯ ಮಾಧ್ಯಮಗಳಿಗೂ ಇದನ್ನೇ ಹೇಳಿದ್ದರು. ಸೊವೇಟೋ ಮತ್ತು ಆನಂತರದ ನೂರಾರು ಪ್ರದೇಶಗಳಲ್ಲಿ ದಾಖಲಾದ ಮಾದರಿಯನ್ನೇ ಇವರೂ ಅನುಸರಿಸಿದ್ದರು. ಸರ್ಕಾರವು ಅವರ ಹಿಂದಿರುವಿಕೆಯನ್ನು ಭಂಜಿಸಬೇಕಾದ ಪ್ರತಿರೋಧ (Defiance) ಎಂದು ಭಾವಿಸಿತ್ತೇ ಹೊರತು, ಈಗಾಗಲೇ ವಿಫಲವಾಗಿರುವ ಬಲಪ್ರಯೋಗದ ವೈಫಲ್ಯದ ಫಲ ಎಂದು ಭಾವಿಸಲಿಲ್ಲ ಹಾಗಾಗಿ ತನ್ನದೇ ಆದ ಪೂರ್ವಮಾದರಿಯನ್ನು ಅನುಸರಿಸುತ್ತಿದೆ.

ಅಗೌರವದ ರಾಜಕೀಯ
ಎರಡನೆಯ ಪಾಠ ಎಂದರೆ, ತಿರಸ್ಕಾರ ಮನೋಭಾವವು ಪ್ರಭುತ್ವವನ್ನು ಅತಿಶೀಘ್ರವಾಗಿ ಅಗೌರವಕ್ಕೆ ಪಾತ್ರವಾಗಿಸುತ್ತದೆಯೇ ಹೊರತು ವಿದ್ಯಾರ್ಥಿ ಸಮೂಹವನ್ನಲ್ಲ. 1876ರಲ್ಲಿ ವಸಾಹತು ಸರ್ಕಾರದ ಪ್ರಮಾದ ಮೂಲತಃ ಆಡಳಿತ ನೀತಿಗೆ ಸಂಬಂಧಿಸಿರಲಿಲ್ಲ. ಅದು ದಾಖಲಾತಿಗೆ ಸಂಬಂಧಿಸಿತ್ತು. ನಾಗರಿಕ ಸೇವೆಯ ಗರಿಷ್ಠ ವಯೋಮಿತಿಯನ್ನು ಗಂಭೀರವಾದ ವಿಷಯ ಎಂದು ಪರಿಗಣಿಸುವ ಬದಲು ನಗಣ್ಯ ಎಂದು ಭಾವಿಸಿ, ವಸಾಹತು ಆಳ್ವಿಕೆಯು ಇಡೀ ಸುಶಿಕ್ಷಿತ ಪೀಳಿಗೆಗೆ ಅವರ ಆಕಾಂಕ್ಷೆಗಳು ಪ್ರಭುತ್ವದ ಗಣನೆಗೆ ಬರುವುದಿಲ್ಲ ಎಂಬ ಸಂದೇಶ ರವಾನಿಸಿತ್ತು. ಕ್ರೋಢೀಕರಣದ ದೃಷ್ಟಿಯಿಂದ ಈ ಅಪಮಾನವು ಸಂಭವಿಸಿದ ಘಾಸಿಗಿಂತಲೂ ಹೆಚ್ಚು ನಿರ್ಣಾಯಕ ಎನ್ನುವುದನ್ನು ಬ್ಯಾನರ್ಜಿ ಗ್ರಹಿಸಿದ್ದರು. ಈ ಗ್ರಹಿಕೆಯನ್ನು ಆಧರಿಸಿಯೇ ಭಾರತೀಯ ಸಂಘ (Indian Association) ಸ್ಥಾಪಿಸಲಾಗಿತ್ತು.

ಹೀಗೆ ಕೀಳಾಗಿ ಕಾಣುವ ಪ್ರವೃತ್ತಿ ಇಂದಿಗೂ ಜೀವಂತವಾಗಿದೆ. ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಭಾರತದ ಮುಖ್ಯ ನ್ಯಾಯಾಧೀಶರು ಯುವ ಜನಾಂಗದ ಒಂದು ವರ್ಗವನ್ನು ಕೀಟನಾಶಕ ಪರಿಭಾಷೆಯಲ್ಲಿ ಬಣ್ಣಿಸಿದಾಗ ಅದೇ ಬ್ರಿಟೀಷ್ ರಾಜ್ನ ಪ್ರಮಾದವನ್ನೇ ಪುನಃ ಮಾಡುತ್ತಾರೆ. ಆದರೆ ಇದಕ್ಕೇನು ಕಡಿಮೆ ವಿನಾಯಿತಿ ಇರುವುದಿಲ್ಲ. ಯುವ ಜನಾಂಗವನ್ನು ಉದ್ದೇಶಿಸಿ ಬಳಸುವ ಅಮಾನವೀಯಗೊಳಿಸುವ (Dehumanising) ಭಾಷೆ ಒಂದು ಚಳುವಳಿಯನ್ನು ಶಿಥಿಲಗೊಳಿಸುವುದಿಲ್ಲ ಬದಲಾಗಿ ಇಡೀ ಚಳುವಳಿಗೆ ಒಂದು ಅಸ್ಮಿತೆಯನ್ನು ಕಲ್ಪಿಸುತ್ತದೆ. ಒಂದೇ ಏಟಿನಲ್ಲಿ ಅದಕ್ಕೊಂದು ಲಾಂಛನ, ನೈತಿಕ ಉನ್ನತಿಯನ್ನು ಕಲ್ಪಿಸುತ್ತದೆ ಸಂಸತ್ತಿನ ಹೊರಗೆ ಪ್ರತಿಭಟನಾಕಾರರು , ಪ್ರಭುತ್ವ ತಮ್ಮನ್ನು ತಿರಸ್ಕಾರದಿಂದ ನೋಡುತ್ತಿದೆ ಎಂಬ ಆರೋಪವನ್ನು ಪ್ರತ್ಯೇಕವಾಗಿ ಸೃಷ್ಟಿಸಬೇಕಿರಲಿಲ್ಲ. ಪ್ರಭುತ್ವವು ಅದನ್ನು ಸ್ಪಷ್ಟವಾಗಿ ದಾಖಲಿಸಿತ್ತು. ಹೋರಾಟವನ್ನು ತಿಳಿಗೊಳಿಸುವ ಇಚ್ಛೆ ಇರುವ ಸರ್ಕಾರ ರಿಯಾಯಿತಿ ನೀಡುವ ಮಾತುಕತೆಗಳಿಂದ ಆರಂಭಿಸುವುದಿಲ್ಲ, ಬದಲಾಗಿ ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ , ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಪ್ರಜೆಯ ನ್ಯಾಯೋಚಿತ ಸಾಂವಿಧಾನಿಕ ಕಾಳಜಿಯಾಗಿರುತ್ತದೆ ಹಾಗೂ ಈ ಕಾಳಜಿಯನ್ನು ವ್ಯಕ್ತಪಡಿಸುವವರು ಭಾಗಿದಾರರಾಗಿರುತ್ತಾರೆಯೇ ಹೊರತು ಶತ್ರುಗಳಾಗಿರುವುದಿಲ್ಲ ಎಂದು ಸಾರ್ವಜನಿಕವಾಗಿ ನೇರ ನುಡಿಗಳಲ್ಲಿ ದೃಢೀಕರಿಸುತ್ತದೆ.

ಮೂರನೆಯ ಪಾಠ ಎಂದರೆ , ಪ್ರತಿಭಟನೆ ಒಂದು ಪೂರ್ವ ಲಕ್ಷಣ (symptom) ಮಾತ್ರ. ನಿರ್ಬಂಧಿತ ಉತ್ತರದಾಯಿತ್ವ (Blocked Accountability) ಒಂದು ವ್ಯಾಧಿ. ವಿದ್ಯಾರ್ಥಿ ಸಮೂಹವು ರಸ್ತೆ ಬದಿಗಳಲ್ಲಿ ಕೂರುವುದು ಅಶ್ರುವಾಯು ಆಸ್ವಾದಿಸುವುದಕ್ಕಲ್ಲ. ಅವರ ಕುಂದುಕೊರತೆಗಳ ಪರಿಹಾರಕ್ಕಾಗಿ. ಎಲ್ಲಾ ಸಾಂಸ್ಥಿಕ ಮಾರ್ಗಗಳನ್ನೂ ಪ್ರಯತ್ನಿಸಿ ಎಲ್ಲವೂ ಮುಚ್ಚಿದೆ ಎಂದು ಖಚಿತವಾದಾಗ ರಸ್ತೆ ಹೋರಾಟಕ್ಕೆ ಧುಮುಕುತ್ತಾರೆ. 1876ರ ಪ್ರತಿಭಟನೆ ಆರಂಭವಾಗಲು ಕಾರಣ ಎಂದರೆ ನಾಗರಿಕ ಸೇವಾ ನಿಯಮಗಳನ್ನು ಚರ್ಚೆ ಮಾಡಲು ಭಾರತೀಯರಿಗೆ ಒಂದು ವೇದಿಕೆ ಇರಲಿಲ್ಲ ಹಾಗಾಗಿ ಸಂವಿಧಾನವು ಒದಗಿಸದಿದ್ದ ವೇದಿಕೆಯನ್ನು ಭಾರತೀಯ ಸಂಘ ಒದಗಿಸಿತ್ತು. ತುರ್ತುಪರಿಸ್ಥಿತಿಯ ಸಮಯದಲ್ಲಿ ಉತ್ತರದಾಯಿತ್ವದ ಸಾಧಾರಣ ಆಡಳಿತ ಯಂತ್ರಗಳು, ನ್ಯಾಯಾಲಯಗಳು, ಪತ್ರಿಕೆಗಳು, ಶಾಸಕಾಂಗ ಎಲ್ಲವೂ ಅಮಾನತ್ತಿಗೊಳಗಾಗಿ ಧ್ವನಿ ಕಳೆದುಕೊಂಡಿದ್ದವು. 1977ರಲ್ಲಿ ಇವೆಲ್ಲವನ್ನೂ ಮರುಸ್ಥಾಪಿಸಿದಾಗ ತೀರ್ಪು ಸುಸ್ಪಷ್ಟವಾಗಿತ್ತು.

ಜೆನ್ ಝೀ ನೇತೃತ್ವದ ಶಿಕ್ಷಣ ವ್ಯವಸ್ಥೆಯ ಸುಧಾರಣಾ ಚಳುವಳಿಯು ಆಶ್ವಾಸನೆಗಳಿಗಿಂತಲೂ, ವಿಶ್ವಾಸಾರ್ಹ ವಿಚಾರಣೆಗಳು, ಪರೀಕ್ಷಾ ಸುಧಾರಣೆಗಳು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಸಾಂಸ್ಥಿಕ ವೈಫಲ್ಯದ ಉತ್ತರದಾಯಿತ್ವ ಮೊದಲಾದ ಕ್ರಿಯೆ ಮುಖ್ಯ ಎಂದು ಸ್ಪಷ್ಟಪಡಿಸಿತ್ತು. ಒಂದು ಕಾರ್ಯೋನ್ಮುಖ ಸಂಸದೀಯ ವ್ಯವಸ್ಥೆ ಮತ್ತು ನಿಯಂತ್ರಕ ಮೇಲ್ವಿಚಾರಣೆ ಇದ್ದುದೇ ಆದಲ್ಲಿ ಈ ಬೇಡಿಕೆಗಳನ್ನು ಯಾವುದೇ ಅಡೆತಡೆಗಳಿಲ್ಲದೆಯೇ ಪರಿಷ್ಕರಿಸಬೇಕಿತ್ತು. ಈ ಪ್ರತಿಭಟನೆಗೆ ಜನಸಂದಣಿಯನ್ನು ನಿಯಂತ್ರಿಸುವ ಕಾರ್ಯತಂತ್ರಗಳು ಉತ್ತರವಾಗುವುದರ ಬದಲು ಬಲವಾದ ಉತ್ತರದಾಯಿತ್ವದ ಸಂರಚನೆಗಳು ಉತ್ತರಿಸಬೇಕಿತ್ತು.

ಈ ಸಂರಚನೆಯಲ್ಲಿ ಪರೀಕ್ಷಾ ಪ್ರಾಧಿಕಾರಗಳಿಗೆ ನೈಜ ಸ್ವಾತಂತ್ರ್ಯ ಇರಬೇಕಾಗುತ್ತದೆ. ಮೌಲ್ಯ ಮಾಪನ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಳು ಶಾಸನಬದ್ಧ ಪಾರದರ್ಶಕತೆಯನ್ನು ಹೊಂದಿರಬೇಕಾಗುತ್ತದೆ. ಸಂಸದೀಯ ಸಮಿತಿಯ ಪರಿಶೀಲನೆ ಸಾರ್ವಜನಿಕವಾಗಿ ಪ್ರಕಟಿತ ಫಲಿತಾಂಶಗಳನ್ನು ಒದಗಿಸಬೇಕಾಗುತ್ತದೆ. ಇದರ ಅಂತಿಮ ಪರಿಣಾಮಗಳನ್ನು ಕೇವಲ ಪರೀಕ್ಷಾ ಮೇಲ್ವಿಚಾರಕರು ಮತ್ತು ಮದ್ಯವರ್ತಿಗಳು ಎದುರಿಸದೆ ಅಧಿಕಾರಿಗಳೂ ಎದುರಿಸುವಂತಾಗಬೇಕು. ಈ ಮಾರ್ಗಗಳನ್ನು ನಿರ್ಮಿಸುವ ಪ್ರಭುತ್ವವು ಬೀದಿ(ಹೋರಾಟ)ಗಳನ್ನು ಅನಗತ್ಯಗೊಳಿಸುತ್ತದೆ. ಈ ಚೌಕಟ್ಟನ್ನು ನಿರ್ಮಿಸಲು ನಿರಾಕರಿಸುವ ಪ್ರಭುತ್ವ ಬೀದಿ ಹೋರಾಟಗಳನ್ನು ಅನಿವಾರ್ಯಗೊಳಿಸುತ್ತದೆ.
ನೈಜ ಉತ್ತರದಾಯಿತ್ವ ಖಚಿತವಾಗಬೇಕು
ಭಾರತೀಯ ಸಂಘದ (Indian Association) ನೂರೈವತ್ತನೆ ವರ್ಷದಲ್ಲಿ ಜುಲೈ 26ರ ಕಠಿಣ ಕ್ರಮಗಳು ಕ್ಯಾಲೆಂಡರ್ನಲ್ಲಿ ಆಕಸ್ಮಿಕ ಕಾಕತಾಳೀಯದಂತೆ ಕಾಣುತ್ತದೆ. 1876ರಲ್ಲಿ ಭಾರತವನ್ನಾಳಿದವರು, ಪರೀಕ್ಷೆಯೊಂದರ ಬಗ್ಗೆ ವಿದ್ಯಾರ್ಥಿ ಸಮೂಹದ ಕುಂದುಕೊರತೆಗಳೇ, ಭವಿಷ್ಯದಲ್ಲಿ ವಸಾಹತು ಆಳ್ವಿಕೆಯನ್ನು ಕೊನೆಗೊಳಿಸುವ ಆಂದೋಲನವಾಗುತ್ತದೆ ಎಂದು ಊಹಿಸಿರಲಿಕ್ಕಿಲ್ಲ. 1976ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಆಳಿದ ಸಾರ್ವಜನಿಕ ಅಧಿಕಾರಿಗಳು, ತಮ್ಮ ಗುಂಡಿನ ದಾಳಿಗೆ ತುತ್ತಾಗಿ ಸೆರೆವಾಸ ಅನುಭವಿಸಿದ ಹದಿಹರೆಯದವರೇ ಆಯಾ ಪ್ರಭುತ್ವಗಳ ಉತ್ತರಾಧಿಕಾರಿಗಳಾಗುತ್ತಾರೆ ಎಂದು ನಿರೀಕ್ಷಿಸಿರಲಿಕ್ಕಿಲ್ಲ. ಯಾವುದೇ ಸರ್ಕಾರವು ಒಂದು ಮಾದರಿ ತನಗೇ ಅನ್ವಯಿಸುತ್ತದೆ ಎಂದು ಭಾವಿಸುವುದಿಲ್ಲ. ಮಾದರಿಗಳು ಬದುಕುಳಿಯುವುದೇ ಹೀಗೆ.
ಜಂತರ್ ಮಂತರ್ನಲ್ಲಿ ನೆರೆದ ಯುವ ಜನರು ಪ್ರಭುತ್ವ/ಸರ್ಕಾರ ಶರಣಾಗಬೇಕು ಎಂದು ಆಗ್ರಹಿಸಲಿಲ್ಲ. ಅದರೆ ಅದು ನಡೆಸುವ ಪರೀಕ್ಷೆಗಳ ನಿರ್ವಹಣೆಗೆ ಅರ್ಹವಾಗಿರುವಂತೆ ಆಗ್ರಹಿಸಿದ್ದರು. ಇಂತಹ ಬೇಡಿಕೆಗಳನ್ನು ಆಲಿಸುವ ಸರ್ಕಾರಗಳು ಮಾತ್ರ ಊರ್ಜಿತವಾಗುತ್ತವೆ ಎನ್ನುವುದನ್ನು ಒಂದೂವರೆ ಶತಮಾನದ ಇತಿಹಾಸ ಸಾಕ್ಷೀಕರಿಸುತ್ತದೆ.
(ಮೂಲ ಲೇಖಕರು : ನವದೆಹಲಿಯಲ್ಲಿರುವ ವಕೀಲರು, ಸಂಸದರ ಮಾಜಿ ಶಾಸಕಾಂಗ ಸಹಾಯಕ ಸಿಬ್ಬಂದಿ (LAMP) )






