ನವದೆಹಲಿ: ಯೆಮೆನ್ ಕರಾವಳಿಯ ಸಮೀಪದ ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜ ಹೊಂದಿದ್ದ ವಾಣಿಜ್ಯ ಹಡಗು ಎಂಎಸ್‌ವಿ ಫೈಜ್ ನೂರ್ ಒಲಿಯಾ (MSV Faize Noore Oliya) ಮೇಲೆ ಮಂಗಳವಾರ ದಾಳಿ ನಡೆದಿದ್ದು, ಸ್ಫೋಟಕಗಳಿಂದ ತುಂಬಿದ್ದ ದೋಣಿಯೊಂದು ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿ ಹಡಗು ಮುಳುಗಿದೆ.

ಘಟನೆಯ ವೇಳೆ ಹಡಗಿನಲ್ಲಿ ಇದ್ದ 13 ಭಾರತೀಯ ನಾಗರಿಕರು ಸೇರಿದಂತೆ ಒಟ್ಟು 14 ಸಿಬ್ಬಂದಿಯನ್ನು ಯೆಮೆನ್ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದು, ಅವರನ್ನು ಮೊಖಾ ಬಂದರಿಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯ (MEA) ಪ್ರಕಟಣೆ ಹೊರಡಿಸಿ, ಭಾರತೀಯ ನಾಗರಿಕರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದ ಯೆಮೆನ್ ಅಧಿಕಾರಿಗಳಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ.

ಕೇಂದ್ರ ಸಮುದ್ರ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್, “ನಿರಾಯುಧ ವಾಣಿಜ್ಯ ಹಡಗಿನ ಮೇಲೆ ನಡೆದ ಈ ಅಪ್ರಚೋದಿತ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಎಲ್ಲಾ ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿರುವುದು ಸಮಾಧಾನದ ಸಂಗತಿ” ಎಂದು ಹೇಳಿದ್ದಾರೆ. ಜೊತೆಗೆ, ಭಾರತೀಯ ನಾವಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡೈರೆಕ್ಟರ್ ಜನರಲ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್‌ಗೆ ಸೂಚನೆ ನೀಡಿದ್ದಾರೆ.
ವಿದೇಶಾಂಗ ಸಚಿವಾಲಯವು ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ತಕ್ಷಣ ನಿಲ್ಲಬೇಕು ಹಾಗೂ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಮುಕ್ತ ಮತ್ತು ಸುರಕ್ಷಿತ ನಾವಿಕ ಸಂಚಾರವನ್ನು ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿದೆ.ಸದ್ಯಕ್ಕೆ ಈ ದಾಳಿಯ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ಭಾರತೀಯ ಧ್ವಜ ಹೊಂದಿದ ಹಡಗಿನ ಮೇಲೆ ನಡೆದ ಮೊದಲ ಪ್ರಮುಖ ದಾಳಿಯೆಂದು ಈ ಘಟನೆಯನ್ನು ಪರಿಗಣಿಸಲಾಗುತ್ತಿದ್ದು, ಭಾರತೀಯ ನಾವಿಕರ ಭದ್ರತೆ ಕುರಿತು ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಿದೆ.






