ಬೆಂಗಳೂರು: ಬೆಂಗಳೂರು ನಗರದ ಹೊರವಲಯದಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (ಬಿಡದಿ ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಯೋಜನೆಗಾಗಿ ಸುಮಾರು 516 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೊಸೂರು ಗ್ರಾಮದ 14 ರೈತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರ ರೈತರ ಭೂಮಿಯನ್ನು ಸದ್ಯಕ್ಕೆ ಸ್ವಾಧೀನಪಡಿಸಿಕೊಳ್ಳದಂತೆ ಸೂಚಿಸಿದೆ.

ಸರ್ಕಾರ ಬಿಡದಿಯ ಮಂಡಲಹಳ್ಳಿ, ವಡೇರಹಳ್ಳಿ ಹಾಗೂ ಕೆಂಪಯ್ಯನಪಾಳ್ಯ ಗ್ರಾಮಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ವೇಳೆ ರೈತರ ಪರ ವಕೀಲ ಎಂ.ಎಚ್. ಪ್ರಕಾಶ್, 2013ರ ಭೂಸ್ವಾಧೀನ ಕಾಯ್ದೆಯ ಕಾನೂನು ಪ್ರಕ್ರಿಯೆ ಪಾಲಿಸದೆ ಭೂಸ್ವಾಧೀನಕ್ಕೆ ಮುಂದಾಗಲಾಗಿದೆ ಎಂದು ವಾದ ಮಂಡಿಸಿದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠ, ಯೋಜನೆ ಜಾರಿಗೂ ಮುನ್ನ 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಸರ್ಕಾರ ಸಮರ್ಪಕವಾಗಿ ಅನುಸರಿಸಿದ್ದೇ ಎಂಬ ಕುರಿತು ಪ್ರಶ್ನಿಸಿತು. ಇದಕ್ಕೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಇತರೆ ರೈತರು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದು, ಸೆಕ್ಷನ್ 10ಎ ಅಡಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.ಆದರೆ, ಈ ಯೋಜನೆ ನಿಜವಾಗಿಯೂ ಗ್ರಾಮೀಣ ವಸತಿ ಯೋಜನೆಯ ವ್ಯಾಪ್ತಿಗೆ ಬರುತ್ತದೆಯೇ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತು.

ಅಲ್ಲದೆ, ಪರಿಹಾರ ಮೊತ್ತ ನಿಗದಿಯಾಗುವವರೆಗೆ ಅರ್ಜಿದಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸರ್ಕಾರದಿಂದ ಭರವಸೆ ಪಡೆದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಮೂರು ವಾರಗಳಿಗೆ ಮುಂದೂಡಿತು.
ಈ ಮಧ್ಯಂತರ ಆದೇಶವು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ರೈತರಿಗೆ ತಾತ್ಕಾಲಿಕ ನೆಮ್ಮದಿ ತಂದಿದ್ದು, ಭೂಸ್ವಾಧೀನ ಹೋರಾಟದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.






