ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ನಡುವಿನ ಹೋಲಿಕೆಯನ್ನು ತೆರೆದಿಟ್ಟಿದ್ದಾರೆ. ಜನರು ಹೇಗೆ ಇಂದಿರಾ ಗಾಂಧಿಯನ್ನು ಕ್ಷಮಿಸಿರಲಿಲ್ಲವೋ, ಅದೇ ರೀತಿ ಪ್ರಧಾನಿ ಮೋದಿಯನ್ನೂ ಕ್ಷಮಿಸುವುದಿಲ್ಲ ಎಂದು ಹೇಳಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ನಂತರ ಪ್ರಧಾನಿ ಮೋದಿ ಕ್ಷಮೆ ಕೇಳಿದ್ದರು. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ 1977ರಲ್ಲಿ ಇಂದಿರಾ ಗಾಂಧಿಯವರೂ ಬಹಿರಂಗ ಕ್ಷಮೆ ಕೇಳಿದ್ದರು. ಆದರೆ, ಜನ ಅವರನ್ನು ಕ್ಷಮಿಸಿರಲಿಲ್ಲ. ಇಂದಿರಾ ಗಾಂಧಿ ತುಂಬಾ ಶಕ್ತಿಶಾಲಿ ನಾಯಕಿಯಾಗಿದ್ದರೂ, ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದು ತುರ್ತು ಪರಿಸ್ಥಿತಿಯ ಕರಾಳ ನೆನಪು ಮಾತ್ರ. ಅದೇ ರೀತಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ನಂತರ ಅದನ್ನು ವಾಪಸ್ ಪಡೆಯುವ ವೇಳೆ ಪ್ರಧಾನಿ ಮೋದಿ ಕ್ಷಮೆ ಕೇಳಿದ್ದರೂ, ದೇಶದ ಜನ ಅವರನ್ನು ಕ್ಷಮಿಸುವುದಿಲ್ಲ, ಎಂದು ಬ್ಯಾನರ್ಜಿ ಹೇಳಿದ್ದಾರೆ.
ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ದೇಶದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಅಸ್ಥಿತ್ವಕ್ಕೆ ತರುವ ಬೃಹತ್ ಯೋಜನೆಯನ್ನು ದೀದಿ ಹಮ್ಮಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಮುಂಬೈನಲ್ಲಿ ಸಭೆ ನಡೆಸಿದ್ದಾರೆ
.
ಈ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಸಿಎಂ ಮಮತಾ,
“ಯಾವುದೇ ಚರ್ಚೆಯಿಲ್ಲದೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಇದಕ್ಕೆ ಕಾರಣ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿಯಲ್ಲಿ ಭಯ ಸೃಷ್ಟಿಯಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಆಲೋಚಿಸುತ್ತಿಲ್ಲ. ದೇಶವನ್ನು ಬದುಕಿಸಬೇಕಾಗಿದೆ. ಚಿಂತಿಸಬೇಡಿ, ಎಲ್ಲವು ಸರಿಯಾಗುತ್ತೆ,” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ನಿಷ್ಕ್ರೀಯತೆಯನ್ನು ದೂಷಿಸಿರುವ ಮಮತಾ ಬ್ಯಾನರ್ಜಿ, ಯುಪಿಎ ಮೈತ್ರಿಕೂಟ ಬಿಜೆಪಿಯ ಫ್ಯಾಸಿಸಂ ವಿರುದ್ದ ಹೋರಾಡದೇ ಇದ್ದದ್ದು ಬಿಜೆಪಿಗೆ ವರದಾನವಾಯಿತು, ಎಂದಿದ್ದಾರೆ.
“ಯಾವ ಯುಪಿಎ? ಈಗ ಯುಪಿಎ ಎಂಬುದು ಅಸ್ಥಿತ್ವದಲ್ಲಿ ಇಲ್ಲ. ಯುಪಿಎ ಮತ್ತು ಎನ್ ಡಿ ಎ ಹೊರತಾಗಿ ಒಂದು ದೃಢವಾದ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾದ ಅಗತ್ಯತೆಯಿದೆ,” ಎಂದು ಅವರು ಹೇಳಿದ್ದಾರೆ.
ಯುಪಿಎ ಮೈತ್ರಿಕೂಟದ ಪ್ರಮುಖ ಭಾಗವಾಗಿದ್ದ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಮಮತಾ ಬ್ಯಾನರ್ಜಿ ಈ ಮಾತುಗಳನ್ನಾಡಿರುವುದು ತೃತೀಯ ರಂಗ ರಚನೆಯ ಮುನ್ಸೂಚನೆ ಲಭಿಸಿದಂತಿದೆ.