ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಲಿಂಗಾಯತ ಧರ್ಮಗುರು ಶಿವಮೂರ್ತಿ ಮುರುಘಾ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್‌ನ ಮುಖ್ಯ ವಾರ್ಡನ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಘಾ ಮಠದ ಮುಖ್ಯ ಮಠಾಧೀಶರ ವಿರುದ್ಧ ಪ್ರಕರಣ ದಾಖಲಾದ ನಂತರ ಇದು ಮೊದಲ ಬಂಧನವಾಗಿದೆ. ಮೂಲಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ
ಪೋಕ್ಸೋ ಕಾಯ್ದೆ ಪ್ರಕರಣ ಹಿನ್ನಲೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ.

ಆರೋಪ ಏನು?
ಮುರುಗಾ ಶರಣರಿಗೆ ಪ್ರತಿ ವಾರ ಒಂದು ಹೆಣ್ಣು ಮಗು ಹಣ್ಣು ಹಂಪಲು ನೀಡಲು ಅವರ ಕೋಣೆಗೆ ಕಳಿಸಲಾಗುತ್ತಿತ್ತು. ಅಲ್ಲಿ ಶರಣರು ಇಷ್ಟವಿಲ್ಲ ಎಂದು ಹೇಳಿದರೂ ಹುಡುಗಿಯರ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದರು. ಅದಾದ ನಂತರ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದರು. ಅದಾದ ನಂತರ ಸ್ವಚ್ಚಗೊಳಿಸಲು ಟಿಶ್ಯೂ ಬಳಸುತ್ತಿದ್ದರು. ವಿದ್ಯಾರ್ಥಿನಿಯರಿಗೆ ಸ್ನಾನದ ಕೋಣೆಗೆ ಹೋಗಿ ಸ್ನಾನ ಮಾಡಿ ಹೋಗುವಂತೆ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಪ್ರತಿನಿತ್ಯ ಒಂದು ಹುಡುಗಿಯನ್ನು ಆಪ್ತ ಸಹಾಯಕರು ಕರೆದುಕೊಂಡು ಹೋಗಿ ಶರಣರ ಜೊತೆ ಕೋಣೆಯಲ್ಲಿ ಕೂಡಿಹಾಕುತ್ತಿದ್ದರು. ಹಲವಾರು ಬಾರಿ ಈ ರೀತಿ ನಡೆದ ನಂತರ ಅದರ ವಿಡಿಯೋಗಳನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಶರಣರು ಅವರ ವಿರುದ್ಧದ ಯಾವುದೇ ವರದಿಯನ್ನು ಬಿತ್ತರಿಸದಂತೆ ಕೋರ್ಟ್‌ನಿಂದ ಆದೇಶ ಪಡೆದಿದ್ದಾರೆ.