ಬೆಂಗಳೂರು:
ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಅವರ ಹೆಸರು, ಹುದ್ದೆ ಹಾಗೂ ಭಾವಚಿತ್ರವನ್ನು ದುರುಪಯೋಗಪಡಿಸಿಕೊಂಡು ಅಪರಿಚಿತರು ವಾಟ್ಸ್‌ಆಪ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಿರುವುದು ಪತ್ತೆಯಾಗಿದೆ. ಅಂತರಾಷ್ಟ್ರೀಯ ಸಂಖ್ಯೆಯಿಂದ ಅಪರ ಆಯುಕ್ತರು (ಕಂದಾಯ) ಹಾಗೂ ಜಂಟಿ ಆಯುಕ್ತರಿಗೆ ಸಂದೇಶಗಳು ಬಂದಿರುವುದಾಗಿ ತಿಳಿದುಬಂದಿದ್ದು, ಆಯುಕ್ತರ ಹೆಸರಿನಲ್ಲಿ ಹಣಕಾಸು ಸಹಾಯ ಕೇಳಿ ವಂಚನೆ ಮಾಡುವ ಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಇದೇ ರೀತಿಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಹೆಸರನ್ನೂ ದುರುಪಯೋಗಪಡಿಸಿಕೊಂಡು ವಾಟ್ಸ್‌ಆಪ್ ಮೂಲಕ ಸಂಪರ್ಕಿಸಿ ಹಣ ಕೇಳುವ ಪ್ರಯತ್ನ ನಡೆದಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗೂ ವಿದೇಶಿ ಸಂಖ್ಯೆಯಿಂದ ಸಂದೇಶ ಕಳುಹಿಸಿರುವ ಮಾಹಿತಿ ಲಭ್ಯವಾಗಿದೆ.
ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ, ಯಾವುದೇ ಆಯುಕ್ತರು ಅಥವಾ ನಗರ ಪಾಲಿಕೆಯ ಅಧಿಕಾರಿಗಳು ವೈಯಕ್ತಿಕವಾಗಿ ವಾಟ್ಸ್‌ಆಪ್ ಮೂಲಕ ಹಣಕಾಸು ಸಹಾಯ ಕೇಳುವುದಿಲ್ಲ. ಹೀಗಾಗಿ ಇಂತಹ ಸಂದೇಶಗಳನ್ನು ನಂಬಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಮ ಆರಂಭಿಸಲಾಗಿದೆ.ಸಾರ್ವಜನಿಕರು ಅಪರಿಚಿತ ಸಂಖ್ಯೆಯಿಂದ ಬರುವ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದೆ, ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪಾಲಿಕೆ ಪ್ರಕಟಣೆಗಳಲ್ಲಿ ತಿಳಿಸಲಾಗಿದೆ.






